ರೆಡ್‌ಕ್ರಾಸ್‌ ಸಂಸ್ಥೆಗೆ ಪ್ರಶಸ್ತಿ ಸಂಭ್ರಮ

7
‘ಉತ್ತಮ ಕಾರ್ಯನಿರ್ವಹಣೆ ಘಟಕ’ ಪ್ರಶಸ್ತಿ ಪ್ರದಾನ ಬೆಂಗಳೂರಿನಲ್ಲಿ ಇಂದು

ರೆಡ್‌ಕ್ರಾಸ್‌ ಸಂಸ್ಥೆಗೆ ಪ್ರಶಸ್ತಿ ಸಂಭ್ರಮ

Published:
Updated:
ರೆಡ್‌ಕ್ರಾಸ್‌ ಸಂಸ್ಥೆಗೆ ಪ್ರಶಸ್ತಿ ಸಂಭ್ರಮ

ಬಳ್ಳಾರಿ: ಮಾನವೀಯತೆಯ ಸಂದೇಶ ಸಾರುತ್ತಾ, ಮಾನವ ಸಮುದಾಯದ ಶಾಂತಿಯುತ ಬದುಕಿಗಾಗಿ ಸದ್ದಿಲ್ಲದೆ ಸೇವೆ ಸಲ್ಲಿಸುವ ಆಶಯದ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಜಿಲ್ಲಾ ಘಟಕಕ್ಕೆ ಮಂಗಳವಾರ ಸಂಭ್ರಮದ ದಿನ.

ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲಾ ಘಟಕ ಉತ್ತಮ ಕಾರ್ಯನಿರ್ವಹಣೆ ಪ್ರಶಸ್ತಿಗೆ ಪಾತ್ರವಾಗಿದೆ. ಈ ಪ್ರಶಸ್ತಿ ಯನ್ನು ಸಂಸ್ಥೆಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಡಾ.ವಿ.ರಾಮ್‌ಪ್ರಸಾದ್‌ ಮನೋಹರ್‌ ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಸ್ವೀಕರಿಸಲಿದ್ದಾರೆ.

2016–17ನೇ ಸಾಲಿನಲ್ಲಿ ಸಂಸ್ಥೆ ಹಮ್ಮಿಕೊಂಡ ಕಾರ್ಯಕ್ರಮಗಳಿಗಾಗಿ ಈ ಪ್ರಶಸ್ತಿ ದೊರಕಿರುವುದು ವಿಶೇಷ.

ನಗರ, ಗ್ರಾಮೀಣ ಪ್ರದೇಶವೆನ್ನದೆ ಸೌಕರ್ಯ ವಂಚಿತವಾದ ಎಲ್ಲ ಪ್ರದೇಶಗಳಿಗೂ ಸಂಸ್ಥೆಯು ತನ್ನ ಸೇವೆಯನ್ನು ವಿಸ್ತರಿಸಿದೆ.

‘ಸಂಸ್ಥೆಯ ಕಾರ್ಯಕ್ರಮಗಳ ಪೈಕಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಅತ್ಯಧಿಕ ಸಂಖ್ಯೆಯಲ್ಲಿ ಏರ್ಪಾಡಾಗಿದ್ದವು. ಅದರೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮತ್ತು ಪ್ರಥಮ ಚಿಕಿತ್ಸೆ ತರಬೇತಿ ಶಿಬಿರಗಳನ್ನೂ ಸಂಸ್ಥೆ ಹಮ್ಮಿಕೊಂಡಿತ್ತು’ ಎಂದು ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್‌ ‘ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು.

‘ರಕ್ತದಾನ ಶಿಬಿರಗಳು ಯುವ ಜನರಲ್ಲಿ ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿದರೆ, ಪ್ರಥಮ ಚಿಕಿತ್ಸೆ ಶಿಬಿರಗಳು, ತುರ್ತು ಸಂದರ್ಭಗಳಲ್ಲಿ ಪ್ರಾಣ ಉಳಿಸುವ ಸರಳ ಉಪಾಯಗಳ ಕುರಿತು ಜಾಗೃತಿ ಮೂಡಿಸಿದವು. ಹೀಗಾಗಿಯೇ ಸಂಸ್ಥೆಯು ಹೆಚ್ಚು ಶಿಬಿರಗಳನ್ನು ಆಯೋಜಿಸಿತು’ ಎಂದರು.

‘ವಿಪತ್ತು ನಿರ್ವಹಣೆ, ಅಗ್ನಿಶಾಮಕ ಅಣುಕು ಪ್ರದರ್ಶನದೊಂದಿಗೆ ಹಲವು ಅಂತರರಾಷ್ಟ್ರೀಯ ದಿನಾಚರಣೆ ಗಳನ್ನೂ ಘಟಕ ಹಮ್ಮಿಕೊಂಡಿತ್ತು. ಜೋಳದರಾಶಿ, ಜಾಲಿಬೆಂಚಿ, ಸಿಡಿ ಗಿನಮೊಳ, ಶಾಂತಿಧಾಮ, ಜಿಲ್ಲೆಯ ಎಲ್ಲ ಬಾಲಕಾರ್ಮಿಕರ ವಸತಿ ಶಾಲೆ, ರೈಲು ನಿಲ್ದಾಣ, ವಿಮ್ಸ್‌ ಆವರಣ, ಎನ್‌ಸಿಸಿ ಶಿಬಿರಗಳು, ಅಗ್ನಿಶಾಮಕ ತರಬೇತಿ ಕೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಸಂಸ್ಥೆಯು ಜನ ಸಮುದಾಯವನ್ನು ಮುಟ್ಟಿದೆ’ ಎಂದರು.

ಎರಡು ಜೀವ ಉಳಿದವು: ರಕ್ತ ಅಗತ್ಯವುಳ್ಳವರಿಗೆ ದಾನಿಗಳಿಂದ ರಕ್ತ ಕೊಡಿಸಿ ಜೀವ ಉಳಿಸುವ ವಿಷಯ ದಲ್ಲಿ ರೆಡ್‌ ಕ್ರಾಸ್‌ಸಂಸ್ಥೆ ಮಾದರಿಯಾಗಿದೆ.

ಇತ್ತೀಚೆಗೆ ನಗರದ ಗರ್ಭಿಣಿಯೊಬ್ಬ ರಿಗೆ ಅಪರೂಪದ ‘ಒ–ಪಾಸಿಟಿವ್‌’ (ಬಾಂಬೆ ಗ್ರೂಪ್) ರಕ್ತ ಬೇಕಾಗಿತ್ತು. ದಿನಗಳು ತುಂಬಿದ್ದರೂ, ರಕ್ತ ದೊರಕದೆ ಹೆರಿಗೆಯನ್ನು ಮುಂದೂ ಡಬೇಕಾದ ಸನ್ನಿವೇಶದಲ್ಲಿ ಮಾಹಿತಿ ದೊರೆತ ‘ಪ್ರಜಾವಾಣಿ’ ಸಂಸ್ಥೆಯ ಎಂ.ಎ.ಷಾಕಿಬ್‌ ಅವರನ್ನು ಸಂಪರ್ಕಿ ಸುವಂತೆ ಗರ್ಭಿಣಿಯ ಸಂಬಂಧಿಕರಿಗೆ ಸಲಹೆ ನೀಡಿತ್ತು.

‘ಬಳ್ಳಾರಿಯಲ್ಲಿ, ಬೆಂಗಳೂರಿನಲ್ಲಿ ಆ ಗುಂಪಿನ ರಕ್ತ ಲಭ್ಯವಿಲ್ಲದ ಪರಿಸ್ಥಿತಿಯಲ್ಲಿ, ಚಿಕ್ಕಬಳ್ಳಾಪುರದ ರೆಡ್‌ಕ್ರಾಸ್‌ ಘಟಕದಿಂದ ರಕ್ತ ದೊರಕಿದ ಪರಿಣಾಮ ಸಮಯಕ್ಕೆ ಸರಿಯಾಗಿ ಹೆರಿಗೆ ಸುಸೂತ್ರವಾಗಿ ನಡೆದು ಬಾಣಂತಿ–ಮಗು ಅಪಾಯದಿಂದ ಹೊರಬಂದರು. ಸಂಸ್ಥೆಯ ಜಿಲ್ಲಾ ಘಟಕ ನೆರವಿಗೆ ಬಾರದೆ ಇದ್ದಿದ್ದರೆ ಹೆಚ್ಚು ತೊಂದರೆಯಾಗುತ್ತಿತ್ತು’ ಎಂಬುದು ಮಹಿಳೆಯ ಸಂಬಂಧಿ ವಿರೂಪಾಕ್ಷಗೌಡ ಅವರ ನುಡಿ.

**

ಸಮುದಾಯ ಸೇವೆ ಮತ್ತು ಶಾಂತಿ ಸಂದೇಶ ಸಾರುವ ವಿಷಯದಲ್ಲಿ ಜಿಲ್ಲಾ ಘಟಕದ ಎಲ್ಲರೂ ಶ್ಲಾಘನೀಯ ಕಾರ್ಯ ಮಾಡಿದ್ದಾರೆ

–ಎಂ.ಎ.ಷಕೀಬ್‌, ರೆಡ್‌ಕ್ರಾಸ್‌ ಸಂಸ್ಥೆ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry