ಉಪಯೋಗವಿಲ್ಲದ ಆಸ್ಪತ್ರೆ ಕಟ್ಟಡ ಉದ್ಘಾಟನೆ!

7
ತಾಲ್ಲೂಕು ಕೇಂದ್ರ ಹುಲಸೂರನಲ್ಲಿನ ಸಮಸ್ಯೆ

ಉಪಯೋಗವಿಲ್ಲದ ಆಸ್ಪತ್ರೆ ಕಟ್ಟಡ ಉದ್ಘಾಟನೆ!

Published:
Updated:
ಉಪಯೋಗವಿಲ್ಲದ ಆಸ್ಪತ್ರೆ ಕಟ್ಟಡ ಉದ್ಘಾಟನೆ!

ಬಸವಕಲ್ಯಾಣ: ಹೊಸ ತಾಲ್ಲೂಕು ಕೇಂದ್ರ ಹುಲಸೂರನಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಹೊಸ ಕಟ್ಟಡ ಉದ್ಘಾಟಿಸಿ ಎರಡು ತಿಂಗಳಾದರೂ ಇನ್ನು ಕಾರ್ಯಾರಂಭಿಸದೆ ಬೀಗ ಹಾಕಲಾಗಿದೆ.

ಮಾರ್ಚ್ 15 ರಂದು ಹುಲಸೂರ ತಾಲ್ಲೂಕು ಪಟ್ಟ ಸಿಕ್ಕಿತು. ಅಂದೇ ಆಸ್ಪತ್ರೆ ಹೊಸ ಕಟ್ಟಡವನ್ನುಸಹ ಉದ್ಘಾಟಿಸಲಾಯಿತು. ಹಳೆಯ ಕಟ್ಟಡ 30 ವರ್ಷಗಳ ಹಿಂದೆ ನಿರ್ಮಿಸಿದ್ದು, ಶಿಥಿಲಗೊಂಡಿತ್ತು. ಮಳೆಗಾಲದಲ್ಲಿ ಒಳಗೆ ನೀರು ಸೋರುತ್ತಿತ್ತು. ಕೊಠಡಿಗಳು ಕೂಡ ಚಿಕ್ಕದಾಗಿದ್ದವು ಮತ್ತು ಕೆಲ ಸೌಲಭ್ಯಗಳು ಇರಲಿಲ್ಲ.

ಒಂದು ಅಂತಸ್ತಿನ ದೊಡ್ಡದಾದ ಹೊಸ ಕಟ್ಟಡದಲ್ಲಿ 30 ಹಾಸಿಗೆಯ ಆಸ್ಪತ್ರೆಗೆ ಬೇಕಾಗುವ ಎಲ್ಲ ಸೌಲಭ್ಯಗಳಿವೆ. ಎಕ್ಸರೇ ಕೋಣೆ, ಶಸ್ತ್ರಚಿಕಿತ್ಸೆ ಕೋಣೆ, ಹೆರಿಗೆ ಕೋಣೆ, ತುರ್ತು ಚಿಕಿತ್ಸಾ ಕೇಂದ್ರ, ತಜ್ಞ ವೈದ್ಯರ ಪ್ರತ್ಯೇಕ ಕೊಠಡಿಗಳಿವೆ. ವಿದ್ಯುತ್ ವ್ಯವಸ್ಥೆ ಸಹ ಕಲ್ಪಿಸಲಾಗಿದೆ. ಆದರೂ, ಇಲ್ಲಿಯವರೆಗೆ ಇದನ್ನು ಉಪಯೋಗಿಸಲಾಗಿಲ್ಲ.

ಹಳೆಯ ಕಟ್ಟಡದ ಗೋಡೆಗಳಲ್ಲಿ ಬಿರುಕುಗಳು ಬಿದ್ದಿದ್ದರಿಂದ ರೋಗಿಗಳು ಅಲ್ಲಿಗೆ ಹೋಗಲು ಹೆದರುತ್ತಿದ್ದಾರೆ. ಆದ್ದರಿಂದ ಹೊಸ ಕಟ್ಟಡದಲ್ಲಿ ಚಿಕಿತ್ಸೆ ನೀಡಲು ಆರಂಭಿಸಬೇಕು. ಇಲ್ಲಿನ ಆಯುರ್ವೇದ ಆಸ್ಪತ್ರೆ ಸಹ ಉದ್ಘಾಟಿಸಬೇಕು ಎಂದು

ಸ್ಥಳೀಯರಾದ ಬಸವರಾಜ ಕವಟೆ ಆಗ್ರಹಿಸಿದ್ದಾರೆ.

‘ಎಕ್ಸರೇ ಯಂತ್ರ ಇದೆಯಾದರೂ, ಅದನ್ನು ನಡೆಸುವ ತಂತ್ರಜ್ಞರಿಲ್ಲ. ಪ್ರಸೂತಿತಜ್ಞೆ, ಶಸ್ತ್ರಚಿಕಿತ್ಸಕ ಒಳಗೊಂಡು ಕೆಲ ಹುದ್ದೆಗಳು ಖಾಲಿ ಇರುವುದರಿಂದ ರೋಗಿಗಳು ಮಹಾರಾಷ್ಟ್ರದ ಲಾತೂರ ಇಲ್ಲವೆ ಉಮರ್ಗಾ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ. ಗ್ರಾಮದಲ್ಲಿ ಆಸ್ಪತ್ರೆ ಇದ್ದರೂ ಉಪಯೋಗಕ್ಕೆ ಬರುತ್ತಿಲ್ಲ. ಆದ್ದರಿಂದ ಈ ಹುದ್ದೆಗಳನ್ನು  ಭರ್ತಿ ಮಾಡಬೇಕು' ಎಂದು ದೇವೇಂದ್ರ ಭೋಪಳೆ ಮತ್ತು ಲೋಕೇಶ ಧರ್ಮಣೆ ಆಗ್ರಹಿಸಿದ್ದಾರೆ.

`ಆಸ್ಪತ್ರೆಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿತರಿಗೆ ಪ್ರಸ್ತಾವ ಕಳುಹಿಸಲಾಗಿದೆ. ರೋಗಿಗಳು ಚಿಕಿತ್ಸೆ ನೀಡಲಾಗುತ್ತಿದೆ' ಎಂದು ಆಸ್ಪತ್ರೆ ಮುಖ್ಯ ವೈದ್ಯ ಡಾ.ಅರಿಫೊದ್ದೀನ್ ತಿಳಿಸಿದ್ದಾರೆ.

ಹೊಸ ಕಟ್ಟಡದಲ್ಲಿ ಎಲ್ಲ ಸೌಲಭ್ಯಗಳಿವೆ. ಆದರೂ, ಕೆಲ ತಾಂತ್ರಿಕ ತೊಂದರೆಗಳ ಕಾರಣ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿಲ್ಲ. ಒಂದು ವಾರದಲ್ಲಿ ಹಳೆಯ ಕಟ್ಟಡದಲ್ಲಿ ಎಲ್ಲ ಯಂತ್ರಗಳನ್ನು ಮತ್ತಿತರ ಸಾಮಗ್ರಿಯನ್ನು ಸ್ಥಳಾಂತರಿಸಿ ಅದನ್ನು ಉಪಯೋಗಿಸಲು ಪ್ರಯತ್ನಿಸಲಾಗುವುದು ಎಂದು ನಾಗಪ್ಪ ಫಾರ್ಮಾಸಿಸ್ಟ್ ಹೇಳಿದ್ದಾರೆ.

**

ಇಲ್ಲಿ ಆಯುರ್ವೇದ ಆಸ್ಪತ್ರೆಗಾಗಿ ಪ್ರತ್ಯೇಕವಾಗಿ ನಾಲ್ಕು ಕೋಠಡಿಗಳ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದ್ದು ಅದನ್ನು ಕೂಡ ಶೀಘ್ರದಲ್ಲಿ ಉದ್ಘಾಟಿಸಿ ಉಪಯೋಗಿಸಬೇಕು

– ಬಸವರಾಜ ಕವಟೆ, ಗ್ರಾಮಸ್ಥ

ಮಾಣಿಕ್‌ ಭುರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry