ಸಮಸ್ಯೆಗಳ ಆಗರ ಜನತಾನಗರ

7
ಮೂಲಸೌಕರ್ಯ ಒದಗಿಸಲು ಜನತಾನಗರ ನಿವಾಸಿಗಳ ಒತ್ತಾಯ

ಸಮಸ್ಯೆಗಳ ಆಗರ ಜನತಾನಗರ

Published:
Updated:
ಸಮಸ್ಯೆಗಳ ಆಗರ ಜನತಾನಗರ

ಹುಮನಾಬಾದ್: ತಾಲ್ಲೂಕಿನ ಹುಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತಾನಗರ ನಿವಾಸಿಗಳು ರಸ್ತೆ ಮತ್ತು ಚರಂಡಿ ಸೌಲಭ್ಯವಿಲ್ಲದೇ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಜನತಾನಗರ 450ಕ್ಕೂ ಅಧಿಕ ಮನೆ, 2,500ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮ. ರಾಷ್ಟ್ರೀಯ ಹೆದ್ದಾರಿ 65ರ ಹುಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಇಲ್ಲಿಂದ ಬಸವರಾಜ ಹೆಳೂರ, ಹಣಮಂತ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲಾ ಇದೇ ಗ್ರಾಮದಿಂದ ಆಯ್ಕೆಗೊಂಡ ಸದಸ್ಯರು. ಗ್ರಾಮದಲ್ಲಿ ಕಾರಂಜಾ ಜಲಾಶಯದಿಂದ ಸಮರ್ಪಕ ನೀರು ಪೂರೈಕೆ ಆಗುತ್ತಿರುವುದರಿಂದ ನೀರಿನ ಅಭಾವ ಇಲ್ಲ.

‘ಆದರೆ ಜನ ಆರೋಗ್ಯವಂತನಾಗಿ ಇರಬೇಕಾದರೇ ಅತ್ಯಂತ ಅವಶ್ಯ ಸ್ವಚ್ಛತೆ. ಗ್ರಾಮದಲ್ಲಿ ಸಮರ್ಪಕ ಚರಂಡಿ ನಿರ್ಮಾಣವಾಗದ ಕಾರಣ ಬೇಸಿಗೆ ಇದ್ದರೂ ಸೊಳ್ಳೆಕಾಟ ಇದೆ. ಇನ್ನು ಮಳೆಗಾಲದಲ್ಲಿ ದೇವರೆ ನಮ್ಮನ್ನು ಕಾಪಾಡಬೇಕು. ಈ ಕುರಿತು ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ತಂದರೂ ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಓಣಿಯ ನಿವಾಸಿ ಕಮಲಾಬಾಯಿ ಪದ್ಮಾನೋರ್‌ ನೋವು ತೋಡಿಕೊಂಡರು.

‘ಬೇಸಿಗೆಯಲ್ಲೇ ಈ ಸ್ಥಿತಿ ಆದರೆ,ಮಳೆಗಾಲದಲ್ಲಿ ಮತ್ತಷ್ಟು ಸಾರ್ವಜನಿಕ ತ್ಯಾಜ್ಯ ಸಂಗ್ರಹಗೊಂಡು ರೋಗ ಭೀತಿ ಎದುರಾಗುತ್ತದೆ. ಮಲೇರಿಯಾ, ವಾಂತಿಬೇಧಿ ಆರಂಭಗೊಳ್ಳುವುದಕ್ಕೂ ಮುನ್ನ ಸಂಬಂಧಪಟ್ಟ ಚುನಾಯಿತ ಪ್ರತಿನಿಧಿ ಮತ್ತು ಅಧಿಕಾರಿಗಳು  ಕ್ರಮ ಕೈಗೊಳ್ಳುವ ಮೂಲಕ ಜನರ ನೆಮ್ಮದಿ ಕಾಪಾಡಬೇಕು’ ಎಂದು ಅಮೀನಾಬಿ ಒತ್ತಾಯಿಸಿದರು.

ಗ್ರಾಮದಲ್ಲಿ ಸರ್ಕಾರದಿಂದ ಸಹಾಯಧನ ನೀಡಿ, ಶೌಚಾಲಯ ನಿರ್ಮಾಣ. ವಿವಿಧ ವಸತಿ ಯೋಜನೆ ಅಡಿಯಲ್ಲಿ ಮನೆಗಾಗಿ ಪ್ರತೀ ಮನೆಗೆ ₹20ರಿಂದ ₹30ಸಾವಿರ ಲಂಚ ಪಡೆಯುತ್ತಿದ್ದಾರೆ ಎಂದು ಜನತಾನಗರ ನಿವಾಸಿ ಎಂ.ಡಿ.ಸಿದ್ದಿಕಿ ಗಂಭೀರವಾಗಿ ಆರೋಪಿಸಿದರು.

ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಇದೆ. ಆದರೇ ಖಾಸಗಿ ಶಿಕ್ಷಣ ಸಂಸ್ಥೆಗಳು ಕಲ್ಪಿಸುವ ಶಾಲಾ ಬಸ್ ಮೊದಲಾದ ಸೌಲಭ್ಯ ಸಿಗದ ಕಾರಣ ಪಾಲಕರು ತಮ್ಮ ಮಕ್ಕಳಿಗೆ ಅನಿವಾರ್ಯವಾಗಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಕೊಡಿಸುತ್ತಿದ್ದಾರೆ ಎಂದು ಜನರು ತಿಳಿಸಿದರು.

ಒಟ್ಟಾರೆ ಗ್ರಾಮಸ್ಥರ ಆರೋಗ್ಯದ ಹಿತದೃಷ್ಟಿಯಿಂದ ಮಳೆಗಾಲ ಆರಂಭಕ್ಕೂ ಮುನ್ನ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಗ್ರಾಮಸ್ಥರ ಹಿತ ಕಾಪಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ಶಶಿಕಾಂತ ಭಗೋಜಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry