ಚಿತ್ರಮಂದಿರದ ಸಿಂಹಾವಲೋಕನ!

7
ಸಿಂಹ ಮೂವಿ ಪ್ಯಾರಡೈಸ್‌ನ 15ನೇ ವಾರ್ಷಿಕೋತ್ಸವ ಇಂದು

ಚಿತ್ರಮಂದಿರದ ಸಿಂಹಾವಲೋಕನ!

Published:
Updated:
ಚಿತ್ರಮಂದಿರದ ಸಿಂಹಾವಲೋಕನ!

ಚಾಮರಾಜನಗರ: ಕನ್ನಡ ಚಿತ್ರರಂಗಕ್ಕೂ ಚಾಮರಾಜನಗರಕ್ಕೂ ಬಿಡಿಸಲಾರದ ನಂಟು. ನಟ ಸಾರ್ವಭೌಮ ಡಾ.ರಾಜಕುಮಾರ್, ಪ್ರಖ್ಯಾತ ನಟ ಸುಂದರಕೃಷ್ಣ ಅರಸ್, ನಿರ್ದೇಶಕ ಎಸ್.ಮಹೇಂದರ್... ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಇಂತಹ ಪಟ್ಟಿಯಲ್ಲಿ ನಗರದ ಸಿಂಹ ಮೂವಿ ಪ್ಯಾರಡೈಸ್ ಸಹ ಸ್ಥಾನ ಪಡೆದಿದೆ.

ಹೌದು, ಸಿಂಹ ಟಾಕೀಸ್ ಎಂದೇ ಜನಪ್ರಿಯಗೊಂಡಿರುವ ಈ ಚಿತ್ರಮಂದಿರ ಕೇವಲ ಜಿಲ್ಲೆ ಯಲ್ಲಿ ಮಾತ್ರವಲ್ಲ ರಾಜ್ಯದಲ್ಲಿ ಅತ್ಯುತ್ತಮ ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಉಳಿದ ಚಿತ್ರಮಂದಿರಗಳಂತೆ ಕೇವಲ ಚಿತ್ರಪ್ರದರ್ಶನಕ್ಕೆ ಮಾತ್ರ ಸೀಮಿತವಾಗದೇ ಕನ್ನಡ ಚಿತ್ರರಂಗದ ಉಳಿವಿಗೆ ಹಾಗೂ ಅದರ ಬೆಳವಣಿಗೆಗೆ ತನ್ನದೇ ಕಾಣಿಕೆ ನೀಡುತ್ತಿರುವುದರಿಂದಲೇ ಚಿತ್ರರಂಗದ ಇತಿಹಾಸದಲ್ಲಿ ಈ ಚಿತ್ರಮಂದಿರವನ್ನು ಸಿಂಹದ ಹಾಗೆಯೇ ಗುರುತಿಸಲಾಗುತ್ತಿದೆ.

ಏನಿದರ ಕಾಣಿಕೆ?: 1950ರಲ್ಲೇ ಎನ್.ಅಶ್ವಥ ನಾರಾಯಣ ಅವರು ಚಾಮರಾಜನಗರದಲ್ಲಿ ಚಿತ್ರಮಂದಿರ ವನ್ನು ಆರಂಭಿಸಿ ಈ ಭಾಗದ ಜನರು ಸಿನಿಮಾ ವೀಕ್ಷಣೆಗಾಗಿ ಮೈಸೂರಿಗೆ ಹೋಗುವುದನ್ನು ತಪ್ಪಿಸಿದರು. ಇವರ ಪುತ್ರ ಎ.ಜಯಸಿಂಹ ಅವರು 2003ರಲ್ಲಿ ನಗರದ ನಂಜನಗೂಡು ರಸ್ತೆಯಲ್ಲಿ ಸಿಂಹ ಮೂವಿ ಪ್ಯಾರಡೈಸ್‌ನ್ನು ಆರಂಭಿಸುವ ಮೂಲಕ ಜಿಲ್ಲೆಯ ಚಿತ್ರಮಂದಿರಗಳ ಇತಿಹಾಸದಲ್ಲಿ ಸುವರ್ಣ ಪುಟವೊಂದನ್ನು ತೆರೆದರು. ಅಲ್ಲಿಯವರೆಗೂ ಜಿಲ್ಲೆಯಲ್ಲಿ ರಾಜಧಾನಿ ಬೆಂಗಳೂರಿಗೆ ಸರಿಸಮನಾದ ಚಿತ್ರಮಂದಿರಗಳು ಇದ್ದಿರಲಿಲ್ಲ. ಇಂತಹ ಕೊರತೆಯನ್ನು ನೀಗಿಸಿದ ಕೀರ್ತಿ ಜಯಸಿಂಹ ಅವರಿಗೆ ಸಲ್ಲುತ್ತದೆ.

ಸಿಂಹಾವಲೋಕನಗಳು!: ನಂತರ ಈ ಚಿತ್ರಮಂದಿರ ತನ್ನ ಪಾಡಿಗೆ ತಾನು ಕೇವಲ ಸಿನಿಮಾ ಪ್ರದರ್ಶನಕ್ಕಷ್ಟೇ ಸೀಮಿತವಾಗಿ ಉಳಿಯಲಿಲ್ಲ. ಬದಲಿಗೆ, ಪ್ರತಿವರ್ಷ ವಾರ್ಷಿಕೋತ್ಸವಗಳನ್ನು ನಡೆಸುವ ಮೂಲಕ ಸಿಂಹ ನಡೆಯುವಾಗ ಹೇಗೆ ತನ್ನ ಹಿಂದಣ ಹೆಜ್ಜೆಗಳನ್ನು ಗಂಭೀರವಾಗಿ ವೀಕ್ಷಿಸುತ್ತದೆಯೋ ಅದೇ ಸಿಂಹಾವಲೋಕನ ಕ್ರಮವನ್ನು ಜಯಸಿಂಹ ಇಲ್ಲಿ ಅಳವಡಿಸಿಕೊಂಡರು. ಪ್ರತಿ ವಾರ್ಷಿಕೋತ್ಸವದಲ್ಲೂ ಸಮಾಜದಲ್ಲಿ ಸಾಧನೆಗೈದವರಿಗೆ ಸನ್ಮಾನ ಮಾಡಿ ಅವರ ಸೇವೆ ಗುರುತಿಸುವ ಗುರುತರವಾದ ಕೆಲಸವನ್ನು ಇವರು ಮಾಡಿದರು. ಜತೆಗೆ, ಚಿತ್ರೋದ್ಯಮದ ಉಳಿವಿಗೆ ವಿಚಾರಗೋಷ್ಠಿಗಳನ್ನು ಏರ್ಪಡಿಸತೊಡಗಿದರು. ಇವುಗಳಲ್ಲಿ 2005ರಲ್ಲಿ ನಡೆದ ‘ಕನ್ನಡ ಚಿತ್ರರಂಗ ಅಂದು ಇಂದು ಮುಂದು’ ಎಂಬ ವಿಚಾರಗೋಷ್ಠಿ ಮಹತ್ವದ್ದು. ಇದರಲ್ಲಿ ಕನ್ನಡ ಚಿತ್ರರಂಗದ ಘಟಾನುಘಟಿಗಳು ಭಾಗವಹಿಸಿದ್ದರು. ಚಿತ್ರೋತ್ಸವಗಳನ್ನು ಆಗಾಗ ಏರ್ಪಡಿಸಿ ನಗರದ ಜನತೆಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚಿತ್ರಗಳನ್ನು ಪ್ರದರ್ಶಿಸಿದ್ದು ಇವರ ಮತ್ತೊಂದು ಹೆಗ್ಗಳಿಕೆ. 2014ರಲ್ಲಿ ನಟ ಶಂಕರನಾಗ್ ಅವರ ಸ್ಮರಣಾರ್ಥ ಆಟೊ ಚಾಲಕರಿಗೆ ಸನ್ಮಾನ ಮಾಡಿದರು.

ತಂತ್ರಜ್ಞಾನದಲ್ಲೂ ಹಿಂದೆ ಬೀಳದ ಈ ಚಿತ್ರಮಂದಿರ ತೀರಾ ಇತ್ತೀಚಿನ ತಂತ್ರಜ್ಞಾನಗಳನ್ನೂ ಅಳವಡಿಸಿಕೊಂಡಿದೆ. 4 ವೇ ಸೌಂಡ್ ಸಿಸ್ಟಮ್ ಅಳವಡಿಸಿರುವ ಏಕೈಕ ಚಿತ್ರಮಂದಿರ ಎಂಬ ಶ್ರೇಯವೂ ಇದಕ್ಕಿದೆ. ಶುಚಿತ್ವಕ್ಕೆ ಮೊದಲ ಆದ್ಯತೆ, ವಾಹನ ನಿಲುಗಡೆಗೆ ವಿಶಾಲವಾದ ಆವರಣ, ಸುಂದರವಾದ ವಿನ್ಯಾಸ ಇವೆಲ್ಲವೂ ಇದರ ವಿಶೇಷಗಳಲ್ಲಿ ಒಂದಾಗಿದೆ.

ನೇಕ ಸಿನಿಮಾಗಳಿಗೆ ಮುಂಗಡ ಬುಕ್ಕಿಂಗ್ ನೀಡಿದ ಖ್ಯಾತಿಯೂ ಇದಕ್ಕಿದೆ. ಚಿತ್ರಮಂದಿರಗಳು ಮುಚ್ಚಿ ಕಾಂಪ್ಲೆಕ್ಸ್‌, ಕಲ್ಯಾಣ ಮಂಟಪಗಳು ಆಗುತ್ತಿರುವ ಈ ಹೊತ್ತಿನಲ್ಲಿ ಚಿತ್ರಮಂದಿರವೊಂದು ವಾರ್ಷಿಕೋತ್ಸವದ ಮೂಲಕ ಸಂಭ್ರಮಿಸುತ್ತಿರುವುದು ಮಹತ್ವದ ಸಂಗತಿ.

ವಾರ್ಷಿಕೋತ್ಸವದ ನೆಪದಲ್ಲಿ ಜಯಸಿಂಹ ಅವರ ಸೋದರ ಹಾಗೂ ಮೈಸೂರಿನ ಸಿಂಹ ಹಾರ್ಟ್ ಫೌಂಡೇಷನ್‌ನ ನಿರ್ದೇಶಕ ಡಾ.ಎ.ರಾಜಸಿಂಹ ಅವರು ಉಚಿತ ಹೃದ್ರೋಗ ತಪಾಸಣಾ ಶಿಬಿರ ನಡೆಸಿ, ಸುಮಾರು 250 ಜನರಿಗೆ ಸೇವೆ ಒದಗಿಸಿದ ಕೀರ್ತಿಯೂ ಈ ವಾರ್ಷಿಕೋತ್ಸವದ ಹಿಂದಿನ ಸರಣಿಗೆ ಸೇರಿದೆ.

ನಟ ಸಾರ್ವಭೌಮ ಡಾ.ರಾಜಕುಮಾರ್ ಹಾಗೂ ಪಾರ್ವತಮ್ಮ ಅವರೊಂದಿಗೆ ಜಯಸಿಂಹ ನಿಕಟ ಒಡನಾಟ ಹೊಂದಿದ್ದರು. ರಾಜ್‌ಕುಮಾರ್ ದಂಪತಿ ಗಾಜನೂರಿಗೆ ಬಂದಾಗಲೆಲ್ಲಾ ಜಯಸಿಂಹ ಅವರನ್ನು ಭೇಟಿ ಮಾಡುತ್ತಿದ್ದರಂತೆ ಎಂದು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ.

‘ರಾಜಕುಮಾರ’ ಚಿತ್ರ ಪ್ರದರ್ಶನ ಇಂದು

ಸಿಂಹ ಮೂವಿ ಪ್ಯಾರಡೈಸ್‌ನ 15ನೇ ವಾರ್ಷಿಕೋತ್ಸವ ಮೇ 22ರಂದು ನಡೆಯಲಿದೆ. ಇದರ ಪ್ರಯುಕ್ತ ಪುನೀತ್‌ ರಾಜಕುಮಾರ್ ಅಭಿನಯದ ‘ರಾಜಕುಮಾರ್’ ಸಿನಿಮಾ ಪ್ರದರ್ಶನವಿದ್ದು, ಉಚಿತ ಪ್ರವೇಶ ಇದೆ. ಜತೆಗೆ, ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಲಿದೆ.

ಬೆಳಿಗ್ಗೆ ಸಿನಿಮಾ ಮಂದಿರದ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯಳಂದೂರು ತಾಲ್ಲೂಕಿನ ಮದ್ದೂರಿನ ಪ್ರಖ್ಯಾತ ಪ್ರಸೂತಿ ತಜ್ಞರಾದ ಲಕ್ಷ್ಮಮ್ಮ ಸಂಜೀವಯ್ಯ ಹಾಗೂ ಅಖಿಲ ಕರ್ನಾಟಕ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ರಾಮೇಗೌಡ ಅವರನ್ನು ಸನ್ಮಾನಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry