ಪ್ರಶ್ನೋತ್ತರ

6

ಪ್ರಶ್ನೋತ್ತರ

Published:
Updated:
ಪ್ರಶ್ನೋತ್ತರ

ಮಹಮ್ಮದ್ ಇಫ್ರಾನ್, ಊರುಬೇಡ

ನನಗೆ ಸರ್ಕಾರಿ ಕೆಲಸ ಸಿಕ್ಕಿದೆ. ಸಂಬಳ ₹35,000. ನಾನು ನನ್ನ ಉತ್ತಮ ಭವಿಷ್ಯಕ್ಕಾಗಿ ಹಣ ಉಳಿಸಲು ಸಲಹೆ ನೀಡಿ.

ಉತ್ತರ: ನೀವು ತಿಂಗಳಿಗೆ ಈ ಕೆಳಗಿನಂತೆ ಉಳಿತಾಯ ಮಾಡಿ.

1) LIC ಜೀವನ ಆನಂದ ₹ 5,000 (2) PPF ₹ 7,500. ಇವೆರಡರಿಂದ ನೀವು ವಾರ್ಷಿಕ ಗರಿಷ್ಠ ₹ 1.50 ಲಕ್ಷ ತುಂಬುವುದರಿಂದ, ಸೆಕ್ಷನ್ 80C ಆಧಾರದ ಮೇಲೆ ಸಂಪೂರ್ಣ ವಿನಾಯಿತಿ ಪಡೆಯಬಹುದು. (3) ಸೆಕ್ಷನ್ 80CCD (1B) ಆಧಾರದ ಮೇಲೆ ವಾರ್ಷಿಕ ಗರಿಷ್ಠ ₹ 50,000 ಉಳಿಸಿ, ಹೀಗೆ ಮಾಡಿದಲ್ಲಿ ಒಟ್ಟು ಸಂಬಳದಿಂದ ₹ 2 ಲಕ್ಷ ಕಳೆದು ತೆರಿಗೆ ಉಳಿಸಬಹುದು. ನೀವು ಅವಿವಾಹಿತರೆಂದು ತಿಳಿಯುತ್ತೇನೆ. ಮದುವೆಗೋಸ್ಕರ ತಿಂಗಳಿಗೆ ₹ 10,000 ಆರ್.ಡಿ. ಮಾಡಿ. ಅಷ್ಟರಲ್ಲಿ ನಿಮಗೆ ಮದುವೆ ಆಗಬಹುದು.

ಶಿವಾನಂದ. ಎಚ್.ಜಿ., ಬೆಂಗಳೂರು

ನನ್ನೊಡನೆ ₹ 5 ಲಕ್ಷ ಬೆಲೆಯ ಕಂಪನಿ ಷೇರುಗಳಿವೆ. ಅಲ್ಪಸ್ಪಲ್ಪ ಕೊಟ್ಟು ತೆಗೆದುಕೊಳ್ಳುತ್ತೇನೆ. ಹೀಗೆ ಕೊಂಡು ಮಾರಾಟ ಮಾಡುವಾಗ ತೆರಿಗೆ ಮುರಿಯುವುದರಿಂದ, ನಾನು ಇಲ್ಲಿ ಬಂದ ಲಾಭಕ್ಕೆ ಆದಾಯ ತೆರಿಗೆ ಕೊಡಬೇಕೇ?

ಉತ್ತರ: ನೀವು ಮಾಡುತ್ತಿರುವ ಷೇರು ಮಾರುಕಟ್ಟೆ ವ್ಯವಹಾರದಲ್ಲಿ ತಕ್ಷಣ ವಿಧಿಸುವ ತೆರಿಗೆಯನ್ನು Transaction Tax ಎನ್ನುತ್ತಾರೆ. ಇದನ್ನು ಕಳೆದು ಬರುವ ಲಾಭಕ್ಕೆ ಆದಾಯ ತೆರಿಗೆ ಕೊಡಬೇಕಾಗುತ್ತದೆ. ಇಂತಹ ತೆರಿಗೆಯನ್ನು ಮೂರು ತಿಂಗಳಿಗೊಮ್ಮೆ Advance Tax ರೂಪದಲ್ಲಿ ಅಂದರೆ ಜೂನ್, ಸೆಪ್ಟೆಂಬರ್, ಡಿಸೆಂಬರ್, ಮಾರ್ಚ್‌ನಲ್ಲಿ ಕಟ್ಟಬೇಕು. ಈ ವರ್ಷದ ಏಪ್ರಿಲ್‌ನಿಂದ ದೀರ್ಘಾವಧಿ ಬಂಡವಾಳ ವೃದ್ಧಿಗೂ ಅಂದರೆ ಆದಾಯ ಒಂದು ವರ್ಷ ದಾಟಿ, ಷೇರು ವಹಿವಾಟಿನಲ್ಲಿ ಬರುವ ಲಾಭಕ್ಕೆ ಶೇ 10 ತೆರಿಗೆ ಕೊಡಬೇಕಾಗುತ್ತದೆ.

ಚಂದ್ರಶೇಖರ್, ಬೆಂಗಳೂರು

ನನ್ನ ಮೂಲ ವೇತನ 22,200, HRA 6,660, DA 9324,  CCA ಎಲ್ಲಾ ಸೇರಿ ₹ 41,140 ತಿಂಗಳಿಗೆ ಬರುತ್ತದೆ. ಕಡಿತ ಎನ್.ಪಿ.ಎಸ್. ₹ 2,886, KGID ₹ 1,800, Prof Tax ₹ 200. ತೆರಿಗೆ ವಿಚಾರದಲ್ಲಿ ಹಾಗೂ ವಿನಾಯ್ತಿ ವಿಚಾರದಲ್ಲಿ ಸವಿಸ್ತಾರವಾಗಿ ತಿಳಿಸಿರಿ.

ಉತ್ತರ: ಸೆಕ್ಷನ್ 80C ಆಧಾರದ ಮೇಲೆ NPS-KGID ತುಂಬುವ ಹಣ ಹಾಗೂ ಮಕ್ಕಳು ಓದುತ್ತಿದ್ದಲ್ಲಿ ಗರಿಷ್ಠ ಎರಡು ಮಕ್ಕಳ ತನಕ School Fees ಇವೆಲ್ಲಾ ಸೇರಿ ಗರಿಷ್ಠ ₹ 1.50 ಲಕ್ಷ ಒಟ್ಟು ಆದಾಯದಿಂದ (Basic+D.A.) ಕಳೆಯಬಹುದು. HRAಯಲ್ಲಿ ನೀವು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರೆ, ಸೆಕ್ಷನ್ 10 (13A) ಆಧಾರದ ಮೇಲೆ

1. HRA ಯಿಂದ ಬಂದ ಹಣ

2. ಶೇ 10ಕ್ಕಿಂತ ಸಂಬಳದ ಮೊತ್ತ ಬಾಡಿಗೆ ಕೊಟ್ಟಲ್ಲಿ (salary means Basic+DA)

3. ಸಂಬಳದ ಶೇ 40 ರಷ್ಟು.

ಮೇಲಿನವುಗಳಲ್ಲಿ ಯಾವುದು ಕಡಿಮೆಯೋ ಅದಕ್ಕೆ ವಿನಾಯ್ತಿ ಪಡೆಯಬಹುದು. ವೃತ್ತಿ ತೆರಿಗೆ ₹ 200 ಸಂಪೂರ್ಣ ಕಳೆಯಬಹುದು. ಇವೆಲ್ಲಾ ವಿನಾಯ್ತಿ ಪಡೆದು ಬರುವ ಮೊತ್ತ ವಾರ್ಷಿಕ ₹ 2.50 ದಾಟುವಲ್ಲಿ ಆ ಮೊತ್ತಕ್ಕೆ ತೆರಿಗೆ ಇದೆ ಹಾಗೂ ತೆರಿಗೆ ಮೇಲೆ ಶೇ 3 ರಷ್ಟು Education Cess  ಇದೆ.

ಮಂಜುನಾಥ್, ವಾಟೀಲ್, ಬೆಂಗಳೂರು

ನಾನು Staff Nurse ಆಗಿ ಕೆಲಸ ಮಾಡುತ್ತೇನೆ. ಸಂಬಳ ತಿಂಗಳಿಗೆ  ₹ 10,000. ತಮ್ಮ ಚಾಲಕನಾಗಿದ್ದಾನೆ. ಆತನ ಸಂಬಳ ₹ 8,000,  ನನ್ನ ತಂದೆ Helper ಆಗಿ ಕೆಲಸ ಮಾಡುತ್ತಾರೆ. ಅವರ ಸಂಬಳ ₹ 5000. ಮನೆ ಬಾಡಿಗೆ ₹ 5000. ಉಳಿತಾಯದ ಬಗ್ಗೆ ತಿಳಿಸಿ.

ಉತ್ತರ: ನಿಮ್ಮ ಕುಟುಂಬದ ಒಟ್ಟು ಆದಾಯ ₹23,000. ಬಾಡಿಗೆ ಹೋಗಿ ₹ 18,000 ಉಳಿಯುತ್ತದೆ. ನಿಮ್ಮ ಮೂವರ ವೈಯಕ್ತಿಕ ಖರ್ಚು ಹಾಗೂ ಮನೆ ಖರ್ಚು ₹ 15,000 ಬರಬಹುದು. ನನ್ನ ಪ್ರಕಾರ ಎಲ್ಲರೂ ಸೇರಿ ಗರಿಷ್ಠ ₹ 3000 ತಿಂಗಳಿಗೆ ಉಳಿಸಬಹುದು. ಅದನ್ನು ತಂದೆಯವರ ಹೆಸರಿನಲ್ಲಿ 5 ವರ್ಷಗಳ ಆರ್.ಡಿ. ಮಾಡಿ. ಸಾಧ್ಯವಾದರೆ LIC Agency ಪಡೆದು ಪಾಲಿಸಿ ಮಾಡಲು ಪ್ರಾರಂಭಿಸಿ. ಇದು ಸುಲಭದ ಕೆಲಸವಲ್ಲ. ಸ್ವಲ್ಪ ಕಷ್ಟಪಡಬೇಕು.

ಮಂಜುನಾಥ, ಮೈಸೂರು

ನಿಮ್ಮ ಅಂಕಣದ ಪ್ರಭಾವದಿಂದ ಸಣ್ಣ ಮೊತ್ತದ ಎರಡು ಆರ್.ಡಿ. ಮಾಡಿಸಿದ್ದೆ. ಖಾಸಗಿ ಸಂಸ್ಥೆಯಲ್ಲಿ ನೌಕರಿ ಸಂಬಳ, ಭತ್ಯೆ ಸೇರಿ ₹ 29,300 ತಿಂಗಳಿಗೆ ಬರುತ್ತದೆ. ಕಡಿತ ಪಿ.ಎಫ್. ₹ 1200, ಎಲ್‌ಐಸಿ ₹1025, ಮ್ಯೂಚುವಲ್ ಫಂಡ್ ₹ 1000. ಸುಕನ್ಯಾ ಖಾತೆ ಕೂಡ ಇದೆ. ಆದರೆ ಸರಿಯಾಗಿ ತುಂಬುತ್ತಿಲ್ಲ. ಕಚೇರಿಯಲ್ಲಿ ತಲಾ ₹ 1 ಲಕ್ಷದ ಚೀಟಿಗಳಿದೆ. 6 ಲಕ್ಷದ ಭೋಗ್ಯದ ಮನೆಯಲ್ಲಿದ್ದೇನೆ. ಕುಟುಂಬದಲ್ಲಿ ನನ್ನ ಹೆಂಡತಿ ಹಾಗೂ 5 ವರ್ಷದ ಮಗಳಿದ್ದಾಳೆ. ನಮಗೆ ಉಳಿತಾಯದ ವಿಚಾರದಲ್ಲಿ ಸಲಹೆ ನೀಡಿ.

ಉತ್ತರ: ನೀವು ಕಟ್ಟಿದ ಚಿಟ್‌ಫಂಡ್‌ನ ವಿಚಾರದ ವಿವರಣೆ ನೀಡಿಲ್ಲ. ಭೋಗ್ಯಕ್ಕೆ ಮನೆ ಪಡೆದಿರುವ ನಿಮಗೆ ಮನೆ ಬಾಡಿಗೆ ಇರುವುದಿಲ್ಲ. ನಿಮ್ಮ ಹೆಂಡತಿ ಮತ್ತು ಮಗಳ ತಿಂಗಳ ಖರ್ಚಿಗೆ ₹10,000 ಮಾತ್ರ ಮೀಸಲಾಗಿಡಿ. ಸುಕನ್ಯಾ ಸಮೃದ್ಧಿ ಯೋಜನೆ ಮಧ್ಯದಲ್ಲಿ ಕೈಬಿಡಬೇಡಿ. ಖರ್ಚು ಕಡಿತ ಬಿಟ್ಟು ಕನಿಷ್ಠ ₹10,000 ತಿಂಗಳಿಗೆ ನೀವು ನಿಮ್ಮ ಭವಿಷ್ಯಕ್ಕಾಗಿ ಉಳಿಸಲೇಬೇಕು. ಚಿಟ್‌ ಫಂಡ್‌ನ ವ್ಯವಹಾರದಲ್ಲಿ ಕಂಟಕ ಇರುತ್ತದೆ. ಉಳಿಸಬಹುದಾದ ₹ 10,000, 10 ವರ್ಷಗಳ ಆರ್.ಡಿ. ಪಡೆಯುವ ಬ್ಯಾಂಕಿನಲ್ಲಿ ಮಾಡಿ ನಿಶ್ಚಿಂತೆಯಿಂದ ಬಾಳಿ.

ವಿಶ್ವನಾಥ.ಡಿ.ಎನ್., ಹಾಸನ

ನಾನು  ಒಂದು ನಿವೇಶನ ₹ 70 ಲಕ್ಷಕ್ಕೆ ಮಾರಾಟ ಮಾಡಿ, ಇನ್ನೊಂದು ನಿವೇಶನ ಮನೆಗೆ ಸಮೀಪದಲ್ಲಿ ₹ 48 ಲಕ್ಷಕ್ಕೆ ಖರೀದಿಸಬೇಕು ಎಂದುಕೊಂಡಿದ್ದೇನೆ. ನಾನು ನಿವೃತ್ತ ಆಗ್ರಿಕಲ್ಚರಲ್ ಆಫೀಸರ್ ಹಾಗೂ ಪ್ರತಿವರ್ಷ ರಿಟರ್ನ್ ತುಂಬುತ್ತಿದ್ದೇನೆ. ಈ ವಿಚಾರದಲ್ಲಿ ತೆರಿಗೆ ಬರುತ್ತದೆಯೇ?

ಉತ್ತರ: ನೀವು ಮಾರಾಟ ಮಾಡುವ ನಿವೇಶನದಿಂದ ಬರುವ ಲಾಭಕ್ಕೆ ಅಂದರೆ ಕೊಂಡುಕೊಳ್ಳುವಾಗ ಕೊಟ್ಟ ಹಣ ಹಾಗೂ ಮಾರಾಟ ಮಾಡಿದ್ದರಿಂದ ಬಂದ ಹಣ ಇವುಗಳ ಅಂತರಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕೊಡಬೇಕಾಗುತ್ತದೆ. ಇದೇ ವೇಳೆ ನೀವು ಇನ್ನೊಂದು ನಿವೇಶನ ಕೊಂಡು ಆ ನಿವೇಶನದಲ್ಲಿ ಮನೆ ಕಟ್ಟುವುದಾದಲ್ಲಿ ತೆರಿಗೆ ವಿನಾಯಿತಿ ಇರುತ್ತದೆ. ಲಾಭದ ಹಣ National High way authority  of India ಅಥವಾ Rural electrification  Bonds ಗಳಲ್ಲಿ ಗರಿಷ್ಠ ₹ 50 ಲಕ್ಷ ತನಕ ಹೂಡಿ ಕೂಡಾ ತೆರಿಗೆ ವಿನಾಯ್ತಿ ಪಡೆಯಬಹುದು. ಕ್ಯಾಪಿಟಲ್ ಗೇನ್ ತೆರಿಗೆ ಶೇ 20. ಇದನ್ನು ನಿಮ್ಮ ಆದಾಯಕ್ಕೆ ಸೇರಿಸದೆ ಪ್ರತ್ಯೇಕವಾಗಿ ಕಟ್ಟಬೇಕು.

ಪ್ರವೀಣ್ ಪಟ್ಟಣಶೆಟ್ಟಿ, ಹುಬ್ಬಳ್ಳಿ

ನಾವು ಮೂವರು ಸೇರಿ ಒಂದು Solar production  Designing and electrical contract work ಪ್ರಾರಂಭಿಸಬೇಕೆಂದಿದ್ದೇವೆ. ಇದಕ್ಕೆ KLE Tech college ತಂತ್ರಜ್ಞಾನ ಕೊಡುತ್ತದೆ. 1) ನಾವು Private Ltd ಅಥವಾ ಪಾರ್ಟನರ್‌ ಶಿಪ್‌ನಲ್ಲಿ ಮಾಡುವುದಾರೆ ಯಾವುದು ಒಳ್ಳೆಯದು. 2) ಸರ್ಕಾರದಿಂದ ವಾಪಸು ಕೊಡದಂತಹ ಹಣ (non refundable funds) ಸಿಗಬಹುದೇ 3) ಲಾಭ–ನಷ್ಟ ಹಂಚಿಕೊಳ್ಳುವ ಬಗೆ ಹೇಗೆ. 4) ಇನ್ನೇನಾದರೂ ಮಾಡಬೇಕಾದಲ್ಲಿ ತಿಳಿಸಿ?

ಉತ್ತರ: ನೀವು ಸ್ವಂತ ಉದ್ಯೋಗ ಮಾಡುವುದು ತುಂಬಾ ಖುಷಿಯಾಗಿದೆ. ಮೂವರೂ ಸೇರಿ  Partnership ನಲ್ಲಿ ಮಾಡಿ, Partnership deed ನೋಂದಾಯಿಸಿ.  Private Ltd co ಮಾಡುವುದು ಇದರಷ್ಟು ಸುಲಭವಲ್ಲ. ಸರ್ಕಾರದಿಂದ ಅನುದಾನ ಸಿಗಬಹುದು. Non Refundable Fund ಅಂತ ಸಿಗಲಾರದು. ಹುಬ್ಬಳ್ಳಿಯ District Industrial centerನಲ್ಲಿ ಈ ವಿಚಾರ ಸವಿಸ್ತಾರವಾಗಿ ತಿಳಿಯಬಹುದು. ಬ್ಯಾಂಕಿನಲ್ಲಿ ಮುದ್ರಾ ಯೋಜನೆಯಲ್ಲಿ ಸಾಲ ಸಿಗುತ್ತದೆ. ನೀವು ಮೂವರಲ್ಲಿ ಲಾಭ, ನಷ್ಟಗಳನ್ನು ನೀವುಗಳು ಹೂಡುವ ಮೊತ್ತದ ಮೇಲೆ ನಿರ್ಧರಿಸಿರಿ. ನಿಮ್ಮ ಹೊಸ ಸಾಹಸ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ.

ರಾಮಕೃಷ್ಣ ರಾಥೋಡ್, ಊರು ಬೇಡ

ನಾನು ಸರ್ಕಾರಿ ನೌಕರ. ತಿಂಗಳ ಸಂಬಳ 18,000. ನನ್ನೊಡನೆ ₹ 1 ಲಕ್ಷ ಹಣವಿದೆ. ನಾನು RD-IRD ಯಾವುದು ಮಾಡಲಿ. ನನಗೆ 35 ವರ್ಷ. 6 ತಿಂಗಳ ಹೆಣ್ಣು ಮಗು ಇದೆ?

ಉತ್ತರ: ನಿಮ್ಮೊಡನೆ ಇರುವ ₹ 1 ಲಕ್ಷ, 10 ವರ್ಷಗಳ ಅವಧಿಗೆ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇಡಿರಿ. (Re investment Deposit) 10 ವರ್ಷ ಮುಗಿಯುತ್ತಲೇ ಅಸಲು ಬಡ್ಡಿ ಬಂದು ಅದನ್ನು ಪುನಃ 10 ವರ್ಷಗಳ ಅದೇ ಠೇವಣಿಯಲ್ಲಿ ಇಡಿ. 20 ವರ್ಷಗಳಲ್ಲಿ ಈ ಹಣ ಬೆಳೆದು ನಿಮ್ಮ ಮಗಳ ವಿದ್ಯಾಭ್ಯಾಸ ಮತ್ತು ಮದುವೆಗೆ ನೆರವಾಗುತ್ತದೆ. ಆರ್.ಡಿ. ಪ್ರತೀ ತಿಂಗಳು ತುಂಬುವ ಯೋಜನೆ. ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮೊಡನಿರುವ ₹ 1 ಲಕ್ಷ ಆರ್.ಡಿ. ಯೋಜನೆಗೆ ಬರುವುದಿಲ್ಲ. ನಿಮ್ಮ ಚಿಕ್ಕ ಕಂದನ ಸಲುವಾಗಿ ಸುಕನ್ಯಾ ಸಮೃದ್ಧಿ ಯೋಜನೆ ಮಾಡಿ ಪ್ರತೀ ತಿಂಗಳೂ ₹ 2,000 ತುಂಬಿರಿ. ಈ ಮೊತ್ತ ಕೂಡಾ ಮಗಳು ಪ್ರಾಪ್ತ ವಯಸ್ಸಿಗೆ ಬಂದಾಗ ತುಂಬಾ ಅನುಕೂಲವಾಗುತ್ತದೆ. ಈ ಎರಡೂ ಯೋಜನೆ ತಡ ಮಾಡದೆ ತಕ್ಷಣ ಪ್ರಾರಂಭಿಸಿ.

ರಾಧಾಕೃಷ್ಣ. ಕೆ.ಎಸ್., ಬೆಂಗಳೂರು

ನಿವೃತ್ತ ಖಾಸಗಿ ಕಂಪನಿ ನೌಕರ.20–2–2018 ರಲ್ಲಿ ನಿವೃತ್ತಿಯಾದೆ. ವಯಸ್ಸು 60. ನಿವೃತ್ತಿಯಿಂದ ಬಂದ ಹಣ ₹ 15 ಲಕ್ಷ. ಎಸ್.ಬಿ.ಐ.ನಲ್ಲಿ ಠೇವಣಿಯಾಗಿರಿಸಿದ್ದೇನೆ. ಬ್ಯಾಂಕುಗಳಲ್ಲಿ ದಿನೇ ದಿನೇ ಬಡ್ಡಿದರ ಕಡಿಮೆಯಾಗುತ್ತಿದ್ದು, ಉತ್ತಮ ಭದ್ರತೆಯ ಮಾಸಿಕ, 3 ತಿಂಗಳ ಬಡ್ಡಿ ಬರುವ ಉಳಿತಾಯ ಯೋಜನೆ ತಿಳಿಸಿ?

ಉತ್ತರ: ನೀವು ತಿಳಿಸಿದಂತೆ ಕಳೆದೊಂದು ವರ್ಷದಿಂದ ಸರ್ಕಾರದ ಧೋರಣೆ ಬದಲಾಗಿದ್ದು, ಠೇವಣಿ ಹಾಗೂ ಸಾಲದ ಮೇಲಿನ ಬಡ್ಡಿ ಬಹಳ ಕಡಿಮೆಯಾಗಿರುವುದು ನಿಜ. ಸದ್ಯ ಅಂಚೆ ಕಚೇರಿ ಸೀನಿಯರ್ ಸಿಟಿಜನ್ ಠೇವಣಿಗೆ ಶೇ. 8.3 ಬಡ್ಡಿ ಬರುತ್ತಿದ್ದು (ಇದು ಕೂಡಾ ಬದಲಾಗುವ ಸಾಧ್ಯತೆ ಇದೆ). ಅಲ್ಲಿ  ₹ 15 ಲಕ್ಷ ತೊಡಗಿಸಿ ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯಿರಿ. ಇಲ್ಲಿ ಉಳಿತಾಯ ಖಾತೆ ಪ್ರಾರಂಭಿಸಿ ಮೂರು ತಿಂಗಳಿಗೊಮ್ಮೆ ಬಡ್ಡಿ ಜಮಾ ಮಾಡುವಂತೆ ಸ್ಟ್ಯಾಂಡಿಂಗ್‌ ಇನ್‌ಸ್ಟ್ರಕ್ಷನ್‌ ಕೊಡಿ. ಬೇಕಾದಾಗ ಬೇಕಾದಷ್ಟೇ ಪಡೆಯಿರಿ. ₹ 500 ಉಳಿತಾಯ ಖಾತೆಯಲ್ಲಿ ಇರಿಸಿ ಚೆಕ್ ಬುಕ್ ಕೂಡಾ ಪಡೆಯಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry