ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂಗೆಡ್ಡೆ ಬಿತ್ತನೆ ಚಟುವಟಿಕೆ ಬಿರುಸು

ಈ ಬಾರಿ ಕೇವಲ 1,300 ಮೆಟ್ರಿಕ್‌ ಟನ್‌ ಆಲೂ ಖರೀದಿ
Last Updated 22 ಮೇ 2018, 11:30 IST
ಅಕ್ಷರ ಗಾತ್ರ

ಹಾಸನ: ಕೆಲ ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಪ್ರಮುಖ ವಾಣಿಜ್ಯ ಬೆಳೆ ಆಲೂಗೆಡ್ಡೆ ಬಿತ್ತನೆ ಕಾರ್ಯ ಬಿರುಸುಗೊಂಡಿದೆ.

ಈ ಬಾರಿ ಜಿಲ್ಲೆಯ 25 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಆಲೂ ಬೆಳೆಯುವ ನಿರೀಕ್ಷೆ ಇದ್ದು, ನೋಂದಣಿ ಮಾಡಿಕೊಂಡಿರುವ ರೈತರಿಗೆ ಬಿತ್ತನೆ ಆಲೂಗೆಡ್ಡೆ ಪೂರೈಸಲಾಗುತ್ತಿದೆ.

ಜಿಲ್ಲೆಯ ವಿವಿಧೆಡೆ ಭೂಮಿ ಹದಗೊಳಿಸಿ, ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಪಂಜಾಬ್‌ನ ಜಲಂಧರ್‌ನಿಂದ 5 ಲಕ್ಷ ಚೀಲ (2.5 ಲಕ್ಷ ಕ್ವಿಂಟಲ್‌) ಆಲೂಗೆಡ್ಡೆ ಖರೀದಿಸಿದ್ದು, ಈಗಾಗಲೇ 3.5 ಲಕ್ಷ ಮಾರಾಟವಾಗಿದೆ.

ಹಾಸನ ತಾಲ್ಲೂಕಿನಲ್ಲಿ (ದುದ್ದ, ಶಾಂತಿಗ್ರಾಮ) ಶೇ 60, ಅರಕಲಗೂಡು ಶೇ 25, ಬೇಲೂರು ಶೇ 25, ಆಲೂರು, ಚನ್ನರಾಯಪಟ್ಟಣದ ಬಾಗೂರು ಹೋಬಳಿ, ಅರಸೀಕೆರೆಯ ಗಂಡಸಿ ಹೋಬಳಿಯಲ್ಲಿ ಆಲೂ ಬೆಳೆಯಲಾಗುತ್ತದೆ.

ಕನ್ನಿಕಾ, ಎಂಆರ್‌ಎಫ್‌ ಸೇರಿ 25 ತಳಿಗಳಿದ್ದು, ಪ್ರತಿ ಕ್ವಿಂಟಲ್‌ಗೆ ₹ 1600 ರಿಂದ 1700 ಕ್ಕೆ ಮಾರಾಟ ಮಾಡಲಾಗುತ್ತಿದೆ. ಅತ್ಯುತ್ತಮ ಗುಣಮಟ್ಟದ ಸಾಂಗಾ–18 ಮತ್ತು ಸುಬ್ಜಿತ್‌ ತಳಿಗೆ ₹ 1800 ದರ ನಿಗದಿ ಮಾಡಲಾಗಿದೆ.

ಕಳೆದ ಬಾರಿ 2500 ಮೆಟ್ರಿಕ್‌ ಟನ್‌ ಆಲೂ ಖರೀದಿಸಲಾಗಿತ್ತು. ಆಗ 1600 ರೈತರು ನೋಂದಣಿ ಮಾಡಿಕೊಂಡಿದ್ದರು. ಈ ಬಾರಿ 1, 300 ರೈತರು ನೋಂದಣಿ ಮಾಡಿಕೊಂಡಿದ್ದರಿಂದ 1300 ಮೆಟ್ರಿಕ್‌ ಟನ್‌ ಮಾತ್ರ ಖರೀದಿಸಲಾಗಿದೆ. ಕಳೆದ ವರ್ಷ 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಆಲೂಗೆಡ್ಡೆ ಬಿತ್ತನೆ ಮಾಡಲಾಗಿತ್ತು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂಜಯ್, ‘ಒಬ್ಬರಿಗೆ ಐದು ಎಕರೆವರೆಗೂ ಬಿತ್ತನೆ ಆಲೂಗೆಡ್ಡೆ ನೀಡಲಾಗುತ್ತಿದೆ. ಈ ಬಾರಿ ಮಳೆ ಬೇಗ ಬಂದಿದೆ. ರೈತರಿಗೂ ನಿರೀಕ್ಷೆ ಇರಲಿಲ್ಲ. ಟೆಂಡರ್‌ ಕರೆದು ದರ ನಿಗದಿ ಮಾಡಿ ಬೇಡಿಕೆ ತಕ್ಕಂತೆ ಆಲೂ ಖರೀದಿಸಲಾಗಿದೆ. ಬಿತ್ತನೆ ಆಲೂ ಕೊರತೆ ಇಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳಗಾವಿ ಜಿಲ್ಲೆಗೂ ಹಾಸನದಿಂದಲೇ ಬಿತ್ತನೆ ಆಲೂಗೆಡ್ಡೆ ಪೂರೈಕೆ ಮಾಡಬೇಕು. ಮೊದಲು ಜಿಲ್ಲೆಯ ರೈತರಿಗೆ ವಿತರಿಸಿ, ನಂತರ ಹೆಚ್ಚುವರಿಯಾಗಿ 3 ಲಕ್ಷ ಕ್ವಿಂಟಲ್‌ ಆಲೂಗೆಡ್ಡೆ ಖರೀದಿಸಿ ಇತರೆ ಜಿಲ್ಲೆಗೆ ಪೂರೈಸಲಾಗುವುದು’ ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಗೋಪಾಲ ತಿಳಿಸಿದರು.

ಹವಾಮಾನ ವೈಪರೀತ್ಯ, ದರ ಕುಸಿತ, ಅಂಗಮಾರಿ ರೋಗದ ಹಿನ್ನಲೆಯಲ್ಲಿ ವರ್ಷದಿಂದ ವರ್ಷಕ್ಕೆ ಆಲೂಗೆಡ್ಡೆ ಬೆಳೆಯುವ ಪ್ರದೇಶ ಕಡಿಮೆ ಆಗುತ್ತಿದೆ. ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಯೂ ಇದೆ.

ಈ ವಿಷಯ ಮನಗಂಡು ಜಿಲ್ಲಾಡಳಿತ ಪ್ರತಿ ಬಾರಿ ರೈತರು ಹಾಗೂ ವರ್ತಕರ ಸಮ್ಮುಖದಲ್ಲಿ ಬೆಲೆ ನಿಗದಿ ಮಾಡುತ್ತಿತ್ತು. ಈ ಬಾರಿ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕ, ವಿಧಾನಸಭೆ ಚುನಾವಣೆಯ ಕಾರಣ ಅಧಿಕಾರಿಗಳು ಗಮನ ಹರಿಸಲು ಆಗಲಿಲ್ಲ.

‘ಈ ಬಾರಿ ಮುಂಗಾರು ಉತ್ತಮ ವಾಗಿದ್ದು, ಭೂಮಿ ಹದಗೊಳಿಸಲಾಗಿದೆ. ಆಲೂ ಬಿತ್ತನೆಗೆ ವಾತಾವರಣ ಸೂಕ್ತವಾಗಿದೆ’ ಎಂದು ಶಾಂತಿಗ್ರಾಮ ರೈತ ಸೋಮಣ್ಣ ತಿಳಿಸಿದರು.

ಹಾಸನಕ್ಕೆ ಪಂಜಾಬ್‌ ಆಲೂ

ಉತ್ತರಪ್ರದೇಶ, ಪಂಜಾಬ್‌ನ ಜಲಂಧರ್‌ನಿಂದ ಬಿತ್ತನೆ ಆಲೂಗೆಡ್ಡೆಯನ್ನು ಜಿಲ್ಲೆಗೆ ತರಿಸಿಕೊಳ್ಳಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಹವಾಮಾನ ವೈಪರೀತ್ಯದಿಂದ ನಿರೀಕ್ಷಿತ ಮಟ್ಟದ ಬೆಳೆ ಲಭ್ಯವಾಗಿಲ್ಲ. ಹಾಗಾಗಿ ಜಿಲ್ಲೆಯ ವರ್ತಕರು ಜಲಂಧರ್‌ನ ಆಲೂಗೆಡ್ಡೆ ಅವಲಂಬಿಸಿದ್ದಾರೆ. ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೂನ್‌ ಮೊದಲ ವಾರ ಬಿತ್ತನೆ ಮಾಡಲಾಗುತ್ತದೆ.

ಆಲೂಗೆಡ್ಡೆ ಬೆಳೆಗಾರರಿಗೆ ತೋಟಗಾರಿಕೆ ಇಲಾಖೆ ಅಧಿಕಾರಿ ಗಳು ಕೆಲ ಸಲಹೆ ನೀಡಿದ್ದಾರೆ.

ಬಿತ್ತನೆ ಬೀಜ ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋದ ನಂತರ ನೆರಳಿನ ಗೆಡ್ಡೆಗಳನ್ನು ಮಂದ ಬೆಳಕಿನಲ್ಲಿ ಕನಿಷ್ಟ 10 ರಿಂದ 15 ದಿವಸ ತೆಳುವಾಗಿ ಹರಡಿ ಹಾಗೂ ಗಾಳಿಯಾಡುವ ಕೊಠಡಿಯಲ್ಲಿ ಇಡಬೇಕು. ಬಿತ್ತನೆ ಗೆಡ್ಡೆಗಳಲ್ಲಿ ದಪ್ಪದಾದ ಕಣ್ಣುಗಳು ಚೆನ್ನಾಗಿ ಮೂಡಿದಾಗ ಮತ್ತು ಗೆಡ್ಡೆಗಳು ಸ್ವಲ್ಪ ಸುಕ್ಕುಗಟ್ಟಿ ಮೃದುವಾದಾಗ ಮಾತ್ರ ಬಿತ್ತನಗೆ ಸೂಕ್ತ. ಪ್ರತಿ ಬಿತ್ತನೆ ಗೆಡ್ಡೆ ಬೀಜ 35 ರಿಂದ 40 ಗ್ರಾಂ ತೂಕ ಇರಬೇಕು. ಗೆಡ್ಡೆಗಳ ಗಾತ್ರ ದೊಡ್ಡದಾಗಿದ್ದಲ್ಲಿ ಉದ್ದವಾಗಿ ಕತ್ತರಿಸಬೇಕು ಮತ್ತು ಪ್ರತಿ ಹೋಳಿನಲ್ಲಿ ಕನಿಷ್ಠ 2 ರಿಂದ 3 ಕಣ್ಣು ಇರಬೇಕು. 3-4 ಬಾರಿ ಮಳೆ ಬಂದ ನಂತರ ಭೂಮಿ ಉಳುಮೆ ಮಾಡಿ, ಭೂಮಿಯ ಉಷ್ಣಾಂಶ ಕಡಿಮೆಯಾದ ನಂತರ ಬಿತ್ತನೆ ಮಾಡಬೇಕು. ಪ್ರತಿ ಟನ್ ಕೊಟ್ಟಿಗೆ ಗೊಬ್ಬರಕ್ಕೆ 10 ಕಿ.ಗ್ರಾಂ. ಟ್ರೈಕೋಡರ್ಮ ಜೈವಿಕ ಶೀಲಿಂದ್ರ ಬೆರಸಿ 15 ರಿಂದ 20 ದಿನ ನೆರಳಿನಡಿಯಲ್ಲಿ ತೇವಾಂಶದಲ್ಲಿರಿಸಿ ಬಿತ್ತನೆ ಮಾಡುವ ವಾರದ ಮುಂಚೆ ಮಣ್ಣಿಗೆ ಸೇರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT