ಭಾವಿ ಸಿ.ಎಂ ದೇಗುಲ ಪ್ರದಕ್ಷಿಣೆ

7
ಕುಲದೇವರ ದರ್ಶನ ಪಡೆದ ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ದಂಪತಿ

ಭಾವಿ ಸಿ.ಎಂ ದೇಗುಲ ಪ್ರದಕ್ಷಿಣೆ

Published:
Updated:
ಭಾವಿ ಸಿ.ಎಂ ದೇಗುಲ ಪ್ರದಕ್ಷಿಣೆ

ಹಾಸನ: ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಲಿರುವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹುಟ್ಟೂರು ಹರದನಹಳ್ಳಿಯಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.

ಪತ್ನಿ ಅನಿತಾ ಜತೆ ಹೆಲಿಕಾಪ್ಟರ್‌ನಲ್ಲಿ ಹೊಳೆನರಸೀಪುರಕ್ಕೆ ಬೆಳಿಗ್ಗೆ ಬಂದಿಳಿದ ಅವರನ್ನು ಸಹೋದರ, ಶಾಸಕ ಎಚ್‌.ಡಿ.ರೇವಣ್ಣ ಹಾರ ಹಾಕಿ ಸ್ವಾಗತಿಸಿದರು.

ಈ ವೇಳೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಸೇರಿದ್ದರು. ಪೊಲೀಸರು ಜನರನ್ನು ನಿಯಂತ್ರಿ

ಸಲು ಹರಸಾಹಸ ಪಡಬೇಕಾಯಿತು. ‘ಕುಮಾರಣ್ಣನಿಗೆ ಜೈ, ದೇವೇಗೌಡರಿಗೆ ಜೈ’ ಘೋಷಣೆಗಳು ಕೇಳಿಬಂದವು. .

ಬಳಿಕ ಅಲ್ಲಿಂದ ಪಟ್ಟಣದ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ, ಆಂಜನೇಯ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಬಳಿಕ ಮನೆ ದೇವರಾದ ಹಳೇಕೋಟೆ ಹೋಬಳಿಯ ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ, ಹರದನಹಳ್ಳಿಯ ಈಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಅಲ್ಲಿಂದ ಚನ್ನರಾಯಪಟ್ಟಣ ತಾಲ್ಲೂಕಿನ ಹುಲಿಯಮ್ಮ ದೇವಿಗೆ ಈಡುಗಾಯಿ ಹಾಕಿದರು.  ಈ ವೇಳೆ ಸಹೋದರ ಎಚ್‌.ಡಿ.ರೇವಣ್ಣ, ಅವರ ಮಕ್ಕಳಾದ ಡಾ.ಸೂರಜ್‌, ಪ್ರಜ್ವಲ್‌ ರೇವಣ್ಣ ಹಾಜರಿದ್ದರು.

ನೆಚ್ಚಿನ ನಾಯಕನನ್ನು ನೋಡಲು ಪಟ್ಟಣ ಹಾಗೂ ಹಳ್ಳಿಗಳಲ್ಲಿ ರಸ್ತೆ ಪಕ್ಕ ನೂರಾರು ಜನರು ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವೆಡೆ ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಹಲವೆಡೆ ಹಸಿರು ತೋರಣ ಕಟ್ಟಿ ಸ್ವಾಗತ ನೀಡಿದರು.

ಚುನಾವಣಾ ಪ್ರಚಾರ ‘ಕುಮಾರ ಪರ್ವ’ ಆರಂಭಿಸುವ ಮುನ್ನ ಹರದನಹಳ್ಳಿ ಹಾಗೂ ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿಗೆ ದೇವೇಗೌಡರ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದ್ದನ್ನು ಸ್ಮರಿಸಬಹುದು.

ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ‘ದೇವರ ಅನುಗ್ರಹ ಮತ್ತು ಹೆತ್ತವರ ಆಶೀರ್ವಾದದಿಂದ ನನಗೆ 2 ನೇ ಬಾರಿಗೆ ನಾಡಿನ ಜನರ ಸೇವೆ ಮಾಡುವ ಅವಕಾಶ ಸಿಗುತ್ತಿದೆ.

ಆ ಕಾರಣಕ್ಕಾಗಿ ನಾನು ಹುಟ್ಟಿ, ಆಡಿ ಬೆಳೆದ ಊರಿನ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದೇನೆ’ ಎಂದರು. ಮಧ್ಯಾಹ್ನದ ವೇಳೆಗೆ ಜಿಲ್ಲೆಯ 5 ಕಡೆ ಶರವೇಗದಲ್ಲಿ ಓಡಾಡಿದ ಕುಮಾರಸ್ವಾಮಿ, 1 ಗಂಟೆ ಸುಮಾರಿಗೆ ಹಾಸನದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry