ಅಪ್ಪನ ಆರೈಕೆಯಲ್ಲಿ ಬೆಳೆದ ಕ್ರಿಕೆಟ್ ಗಿಡ

7

ಅಪ್ಪನ ಆರೈಕೆಯಲ್ಲಿ ಬೆಳೆದ ಕ್ರಿಕೆಟ್ ಗಿಡ

Published:
Updated:
ಅಪ್ಪನ ಆರೈಕೆಯಲ್ಲಿ ಬೆಳೆದ ಕ್ರಿಕೆಟ್ ಗಿಡ

ನ್ಯೂಜಿಲೆಂಡ್‌ನ ಬೇ ಆಫ್ ಪ್ಲೇ ಪ್ರದೇಶದ ದೊಡ್ಡ ನಗರಿ ಟೌರಂಗ. ದಿವಿನಾದ ಸೋಫಾ ಮೇಲೆ ಕೂತಿದ್ದ ಮೂರು ವರ್ಷದ ಬಾಲಕನ ಕೈಲಿ ಪುಟ್ಟ ಬ್ಯಾಟ್. ಟಿ.ವಿ.ಯಲ್ಲಿ ರಗ್ಬಿ ಬರುತ್ತಿದ್ದರೆ, ಚಾನೆಲ್ ಬದಲಿಸಿ ಅವನು ಕ್ರಿಕೆಟ್ ನೋಡುತ್ತಿದ್ದ. ಸೋಫಾದಿಂದ ನೆಲಕ್ಕೆ ಜಿಗಿದು ನಿಂತು, ‘ಬೌಲಿಂಗ್ ಮಾಡಪ್ಪಾ’ ಎನ್ನುತ್ತಿದ್ದ.

ಮಗನಿಗೆ ಬೌಲಿಂಗ್ ಮಾಡುವುದೆಂದರೆ ಅಪ್ಪ ಬ್ರೆಟ್ ವಿಲಿಯಮ್ಸನ್ಸ್‌ಗೆ ಖುಷಿಯೋ ಖುಷಿ. ಮನೆಯಲ್ಲಿ ಆ ಬಾಲಕನ ಅವಳಿ ಸಹೋದರ ಲೊಗಾನ್ ಇದ್ದ. ಮೂವರು ಅಕ್ಕಂದಿರು. ಅವರೆಲ್ಲರಿಗೆ ಕ್ರಿಕೆಟ್ ಕಂಡರೆ ವಾಕರಿಕೆ. ಆದರೆ, ಅವರಪ್ಪ 17 ವರ್ಷದೊಳಗಿನವರ ತಂಡದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದವರು.

ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್ ಬ್ಯಾಟಿಂಗ್ ಶೈಲಿ ಅನುಕರಿಸಲು ಹೋಗುತ್ತಿದ್ದ ಆ ಪುಟ್ಟ ಬಾಲಕನ ಹೆಸರು ಕೇನ್ ವಿಲಿಯಮ್ಸನ್. ಈಗ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡುತ್ತಿರುವ ಅವರು ವಿದೇಶಿ ಆಟಗಾರರಲ್ಲೇ ಹೆಚ್ಚು ಗಮನ ಸೆಳೆದಿದ್ದಾರೆ.

ಕೇನ್‌ಗೆ ಅಪ್ಪ ಬೌಲ್ ಮಾಡುತ್ತಿದ್ದುದು 1993ರಲ್ಲಿ. ಮಾರಾಟ ಪ್ರತಿನಿಧಿಯಾಗಿದ್ದ ಅಪ್ಪ ಮನೆಗೆ ಹೊಂದಿಕೊಂಡಂತೆ ಚೆಂದದ ಉದ್ಯಾನ ನಿರ್ಮಿಸಿದ್ದರು. ಆದರೆ, ಮೈದಾನ ಇರಲಿಲ್ಲ. ನಾಲ್ಕೈದು ವರ್ಷದ ಆಗುವವರೆಗೆ ಅಲ್ಲಿಯೇ ಕ್ರಿಕೆಟ್ ಆಡಿ ಸಮಾಧಾನ ಪಡುತ್ತಿದ್ದ ಬಾಲಕ ಕೇನ್, ಆಮೇಲೆ ಮೈದಾನ ಇರುವ ಕಡೆ ಕರೆದುಕೊಂಡು ಹೋಗುವಂತೆ ದುಂಬಾಲು ಬೀಳುತ್ತಿದ್ದ.

ಮಗನ ಬಯಕೆ ಈಡೇರಿಸಲೆಂದೇ ಅಪ್ಪ ಒಂದಿಷ್ಟು ಹುಡುಗರನ್ನು ಸೇರಿಸಿಕೊಂಡು ತಂಡ ಕಟ್ಟಿದರು. ಎಲ್ಲರೂ ಹಣ ಹಾಕಿ, ನೆಟ್ಸ್ ತಂದರು. ತಾತನ ಗಾಲ್ಫ್ ಬಾಲಿಗೆ ತೂತು ಕೊರೆದು, ಅದಕ್ಕೆ ದಾರ ಹಾಕಿ ಕೇನ್ ಮನೆಯ ಗ್ಯಾರೇಜ್‌ನಲ್ಲಿ ಇಳಿಬಿಟ್ಟ. ಗಾಲ್ಫ್ ಶಾಫ್ಟ್ ಅನ್ನೇ ಕತ್ತರಿಸಿ, ಕ್ರಿಕೆಟ್ ಬ್ಯಾಟ್ ಮಾಡಿಕೊಂಡ.

ಮೈದಾನದಲ್ಲಿ ಆಡಿ ದಣಿದು ಬಂದಮೇಲೆ ಆ ಚೆಂಡಿಗೆ ಹೊಡೆಯುತ್ತಾ ಅಭ್ಯಾಸ ಮಾಡುವುದು ದಿನಚರಿಯ ಭಾಗ. ಕೇನ್ ಅಮ್ಮ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ ಆಗಿದ್ದವರು. ಅಕ್ಕಂದಿರು ವಾಲಿಬಾಲ್‌ನಲ್ಲಿ ಕೈಪಳಗಿಸಿಕೊಂಡಿದ್ದರು. ಹೀಗಾಗಿ ಕ್ರೀಡಾಪ್ರೀತಿ ಕುಟುಂಬದಲ್ಲೇ ಹಾಸುಹೊಕ್ಕು.

ಕ್ರಿಕೆಟ್ ಕ್ಲಬ್ ಸೇರಿದ ಮೇಲೆ ಕೇನ್ ತನ್ನನ್ನು ತಾನು ಗುರುವಿಗೆ ಒಪ್ಪಿಸಿಕೊಂಡ. ಡೇವಿಡ್ ಜಾನ್ಸನ್ ಕೋಚ್ ಆಗಿ ಸಿಕ್ಕರು. ಕಾಲೇಜು ಟೂರ್ನಿಗಳಲ್ಲಿ ಒಂದು ಶತಕ ಹೊಡೆದರೆ ಕ್ರೀಡಾ ಮಳಿಗೆಯಲ್ಲಿ ಪರಿಕರಗಳನ್ನು ಖರೀದಿ ಮಾಡಬಹುದಾದ ಗಿಫ್ಟ್ ವೋಚರ್‌ಗಳು ಸಿಗುತ್ತವೆ ಎಂಬ ಆಮಿಷವಿತ್ತು. ಅಂಥ ಒಂದು ಟೂರ್ನಿಯ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಶತಕ ಗಳಿಸಿದ ಕೇನ್‌ಗೆ ಆ ಆಮಿಷ ಬರೀ ಬೂಸಿ ಎಂದು ಆಮೇಲೆ ಗೊತ್ತಾಯಿತು.

ಸಂಯಮದ ಬ್ಯಾಟಿಂಗ್ ಶೈಲಿಯಿಂದಲೇ ಗುರುತು ಮೂಡಿಸುತ್ತಾ ಬಂದ ವಿಲಿಯಮ್ಸನ್ 20ನೇ ವಯಸ್ಸಿಗೆ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲೆ ಶತಕ ಗಳಿಸಿದ ಸಾಧನೆ ಮಾಡಿದ್ದು ವಿಶೇಷ. ಟೆಸ್ಟ್ ಮಾದರಿಯಲ್ಲಿ 3,000ರನ್ ಗಡಿ ದಾಟಿದಾಗ ಅವರಿಗೆ 24 ವರ್ಷ 151 ದಿನ. ಅಷ್ಟು ಚಿಕ್ಕ ಪ್ರಾಯದಲ್ಲಿ ಆ ಮೈಲುಗಲ್ಲನ್ನು ನ್ಯೂಜಿಲೆಂಡ್‌ನ ಬೇರೆ ಯಾವ ಬ್ಯಾಟ್ಸ್‌ಮನ್ ಕೂಡ ದಾಟಿರಲಿಲ್ಲ.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅವರು ಕಾಲಿಟ್ಟು ಎಂಟು ವರ್ಷಗಳಾದವು. 2015ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಎದುರು ಸಿಕ್ಸರ್ ಹೊಡೆದು ಗೆಲುವು ತಂದುಕೊಟ್ಟಾಗ ಅವರ ಮುಖದಲ್ಲಿ ಮಂದಹಾಸ ಮೂಡಿತ್ತಷ್ಟೆ. ಸಂಭ್ರಮ ತೋರಿಸುವುದರಲ್ಲೂ ತಣ್ಣಗಿನ ದಾರಿಯನ್ನೇ ಆರಿಸಿಕೊಂಡಿರುವ ಅವರು ಆಗೀಗ ಆಫ್ ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ.

2014ರ ಜೂನ್ ನಲ್ಲಿ ನಿಯಮಬಾಹಿರ ಬೌಲಿಂಗ್ ಶೈಲಿಯ ಕಾರಣಕ್ಕೆ ಅವರ ಮೇಲೆ ನಿಷೇಧ ಹೇರಲಾಗಿತ್ತು. ಫೀಲ್ಡಿಂಗ್‌ನಲ್ಲೂ ಚುರುಕಾಗಿರುವ ಈ ಗಡ್ಡಧಾರಿ ಬಲಗೈ ಬ್ಯಾಟ್ಸ್‌ಮನ್ ವಾರಗೆಯ ಕ್ರಿಕೆಟಿಗರಾದ ಇಂಗ್ಲೆಂಡ್‌ನ ಜೋ ರೂಟ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಜೊತೆಗೆ ತುಲನೆಗೆ ಒಳಗಾಗುತ್ತಾ ಬಂದಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ 50ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಗಳಿಸಿರುವ ಅವರ ಆಟದ ಸೊಗಸುಗಾರಿಕೆ ಚುಟುಕು ಕ್ರಿಕೆಟ್‌ನಲ್ಲೂ ಅನಾವರಣಗೊಳ್ಳುತ್ತಿದೆ. ಬಿಡುವಿದ್ದಾಗ ದಕ್ಷಿಣ ಆಫ್ರಿಕಾದ ಆಟಗಾರ ಜಾಕ್ ಕಾಲಿಸ್ ಆಟದ ವಿಡಿಯೊಗಳನ್ನು ನೋಡುವ ಅಭ್ಯಾಸ ಇಟ್ಟುಕೊಂಡಿರುವ ಅವರು ಪದೇ ಪದೇ ಕ್ರಿಕೆಟ್ ಪ್ರೀತಿ ಹುಟ್ಟಿಸಿದ ಅಪ್ಪನ ಬಗೆಗೆ ಮಾತನಾಡುತ್ತಿರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry