ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

81 ಸಾವಿರ ಹೆಕ್ಟೇರ್ ಬಿತ್ತನೆ ಗುರಿ

ಒಂದು ವಾರದಿಂದ ಜಿಲ್ಲೆಯಲ್ಲಿ ಉತ್ತಮ ಮಳೆ l ಗರಿಗೆದರಿದ ಕೃಷಿ ಚಟುವಟಿಕೆ
Last Updated 22 ಮೇ 2018, 12:11 IST
ಅಕ್ಷರ ಗಾತ್ರ

ಕಾರವಾರ: ಕಳೆದ ವಾರದಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರುತ್ತಿವೆ. ಹೊಲಗಳನ್ನು ಹಸನು ಮಾಡಿಕೊಳ್ಳುತ್ತಿರುವ ರೈತರು, ಬಿತ್ತನೆಗೆ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾದ ಸೌಲಭ್ಯಗಳನ್ನು ನೀಡಲು ಕೃಷಿ ಇಲಾಖೆಯೂ ಸಜ್ಜಾಗಿದೆ.

‘ಈ ಬಾರಿ ಜಿಲ್ಲೆಯಲ್ಲಿ 81 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯಿದೆ. ಕಳೆದ ವರ್ಷವೂ ಇಷ್ಟೇ ಗುರಿ
ಯಿತ್ತು. ಅದನ್ನು ತಲುಪಲು ಬಹುತೇಕ ಸಾಧ್ಯವಾಗಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಸ್.ಜಿ. ರಾಧಾಕೃಷ್ಣ ತಿಳಿಸಿದ್ದಾರೆ.

‘ಹಳಿಯಾಳ, ಮುಂಡಗೋಡ, ಯಲ್ಲಾಪುರ ಮತ್ತು ಶಿರಸಿ ತಾಲ್ಲೂಕಿನ ಬನವಾಸಿ ಭಾಗದಲ್ಲಿ ಮೆಕ್ಕೆಜೋಳ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಈ ಬಾರಿ ರೈತರಿಂದ ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆ ಬಂದಿದ್ದು, ಈಗಾಗಲೇ 500 ಕ್ವಿಂಟಲ್ ಪೂರೈಕೆ ಮಾಡಲಾಗಿದೆ. ಕಳೆದ ಬಾರಿ ಜಿಲ್ಲೆಯಲ್ಲಿ 63 ಸಾವಿರ ಹೆಕ್ಟೇರ್ ಬಿತ್ತನೆ ಮಾಡಲಾಗಿತ್ತು. ಈ ಬಾರಿ 22 ಸಾವಿರ ಹೆಕ್ಟೇರ್‌ಗಳಷ್ಟು ಹೆಚ್ಚು ಬಿತ್ತನೆಯ ಗುರಿ ಹೊಂದಲಾಗಿದೆ’ ಎಂದು ಅವರು ವಿವರಿಸಿದರು.

ಹತ್ತಿ ಬಿತ್ತನೆ ಇಳಿಕೆ: ಜಿಲ್ಲೆಯಲ್ಲಿ ಹತ್ತಿ ಬಿತ್ತನೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಬದಲಾಗುತ್ತಿರುವ ಹವಾಗುಣ, ಅಕಾಲಿಕ ಮಳೆಯಿಂದಾಗಿ ರೈತರು ಹತ್ತಿ ಕೃಷಿಗೆ ಅಷ್ಟಾಗಿ ಮನಸ್ಸು ಮಾಡುತ್ತಿಲ್ಲ. ಕಳೆದ ವರ್ಷ ಇದ್ದ 1,500 ಹೆಕ್ಟೇರ್ ಗುರಿಯಲ್ಲಿ 1,200 ಹೆಕ್ಟೇರ್ ಮಾತ್ರ ಬಿತ್ತನೆ ಮಾಡಲಾಗಿತ್ತು.

ಭತ್ತಕ್ಕೆ ಬೇಡಿಕೆ: ಕರಾವಳಿ ತಾಲ್ಲೂಕುಗಳಲ್ಲಿ ಭತ್ತದ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಯಾ, ಇಂಟಾಲ್ ಮುಂತಾದ ತಳಿಗಳ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡುವಂತೆ ರೈತರಿಂದ ಬೇಡಿಕೆಗಳು ಬಂದಿವೆ. ಅವರಿಗೆ ಇಲಾಖೆ
ಯಿಂದ ಅಗತ್ಯ ಸಹಾಯ ನೀಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಗಡಿಗಳಲ್ಲಿ ಕಬ್ಬು ಬೆಳೆಗಾರರಿದ್ದು, ಅವರಿಂದ ಉತ್ತಮ ಬೇಡಿಕೆಯಿದೆ ಎಂದು ಅವರು ಹೇಳಿದರು.

ವಾಡಿಕೆಗಿಂತ ಹೆಚ್ಚು ಮಳೆ

‘ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ’ ಎಂದು ರಾಧಾಕೃಷ್ಣ ಹೇಳಿದ್ದಾರೆ.

‘ಪ್ರತಿ ವರ್ಷ ಜನವರಿಯಿಂದ ಮೇ 20ರವರೆಗೆ ಸರಾಸರಿ 72 ಮಿ.ಮೀ ಮಳೆಯಾಗುತ್ತಿತ್ತು. ಆದರೆ, ಈ ವರ್ಷ 129 ಮಿ.ಮೀ ಮಳೆಯಾಗಿದೆ. ಇನ್ನು, ಮೇ ತಿಂಗಳಿನಲ್ಲಿ ಮಾತ್ರ ನೋಡುವುದಾದರೆ 46 ಮಿ.ಮೀ ವಾಡಿಕೆಯಾದರೆ, ಈ ಬಾರಿ 92 ಮಿ.ಮೀ ಮಳೆಯಾಗಿದೆ. ಪ್ರತಿಬಾರಿ ಕಡಿಮೆ ಮಳೆಯಾಗುವ ಹಳಿಯಾಳ ತಾಲ್ಲೂಕಿನಲ್ಲಿ ಈ ಬಾರಿ 172 ಮಿ.ಮೀ ಮಳೆಯಾಗಿದೆ. ಅಲ್ಲಿ 99 ಮಿ.ಮೀ ವಾಡಿಕೆ’ ಎಂದು ಅವರು ವಿವರಿಸಿದರು.

**
ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆಯಾಗುವುದಿಲ್ಲ. ರೈತರು ಆಧಾರ್ ಸಂಖ್ಯೆ ತಿಳಿಸಿ ಗೊಬ್ಬರ ಪಡೆದುಕೊಳ್ಳಬಹುದು
– ಡಾ.ಎಸ್.ಜಿ.ರಾಧಾಕೃಷ್ಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಬಿತ್ತನೆ ಬೀಜ: ಅಂಕಿ– ಅಂಶ (ಹೆಕ್ಟೇರ್‌ಗಳಲ್ಲಿ)

ಭತ್ತ;65,000

ಮೆಕ್ಕೆಜೋಳ;85,000

ಕಬ್ಬು;6,500

ಹತ್ತಿ;1,500

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT