ಹಳ್ಳಿಗಟ್ಟಿನಲ್ಲಿ ಬೇಡು ಹಬ್ಬದ ಸಂಭ್ರಮ

7
ಕೆಸರು ಎರಚಾಡಿ ಸಡಗರ ಪಟ್ಟರು

ಹಳ್ಳಿಗಟ್ಟಿನಲ್ಲಿ ಬೇಡು ಹಬ್ಬದ ಸಂಭ್ರಮ

Published:
Updated:
ಹಳ್ಳಿಗಟ್ಟಿನಲ್ಲಿ ಬೇಡು ಹಬ್ಬದ ಸಂಭ್ರಮ

ಗೋಣಿಕೊಪ್ಪಲು: ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ಬೇಡು ಹಬ್ಬ ವಾರ್ಷಿಕ ಉತ್ಸವ ಈಚೆಗೆ ವಿಜೃಂಭಣೆಯಿಂದ ಜರುಗಿತು.

ಗುಂಡಿಯತ್ ಅಯ್ಯಪ್ಪ ದೇವರ ಅವುಲ್, ಪೊಲವಪ್ಪ ದೇವರ ವಿಶೇಷ ತೆರೆಯಾದ ಮನೆಮನೆ ಕಳಿ (ಆಟ) ಶನಿವಾರ ವಿಶೇಷವಾಗಿತ್ತು. ಜೋಡುಬೀಟಿಯಿಂದ ಹಳ್ಳಿಗಟ್ಟು ಕುಂದಾಕ್ಕೆ ತೆರಳುವ ಬೈಪಾಸ್ ರಸ್ತೆಯಲ್ಲಿರುವ ಮೂಕಳೇರ ಬಲ್ಯಮನೆ ಹತ್ತಿರ ಪೊಲವಂಡ ದೇವಸ್ಥಾನದಲ್ಲಿ ವಿಶೇಷ ಪೂಜಾ ಪುನಸ್ಕಾರಗಳು ನಡೆದವು. ಭಕ್ತರು ಹರಕೆ ಮತ್ತಿತರ ಕಾಣಿಕೆಗಳನ್ನು ಅರ್ಪಿಸಿದರು.

‘ಗುಂಡಿಯತ್ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷಿದ್ಧವಿದ್ದು ಶನಿವಾರ ಸಂಜೆ 5 ಗಂಟೆ ವೇಳೆಗೆ ಅವುಲ್ ಎಂಬ ಪೂಜೆ ನಡೆಯಿತು.

ಈ ದೇವಸ್ಥಾನದಲ್ಲಿ ಕೊಡವ ಜನಾಂಗದವರೇ ಅರ್ಚಕರಾಗಿರುವುದು ವಿಶೇಷ. ದೇವಸ್ಥಾನಕ್ಕೆ ಬರುವವರು ಶುಚಿತ್ವ ಮತ್ತು ಕಟ್ಟುನಿಟ್ಟಿನ ವ್ರತ ನಿಯಮಗಳನ್ನು ಪಾಲಿಸಬೇಕಾಗುತ್ತದೆ’ ಎಂದು ಅರ್ಚಕರು ಹೇಳಿದರು.

ರಾತ್ರಿ 10 ಗಂಟೆಯ ಬಳಿಕ ಊರು ತಕ್ಕರಾದ ಚಮ್ಮಟೀರ ಮನೆಯಿಂದ ಮನೆ ಕಳಿ ಹೊರಟು 20ರಂದು ಮುಂಜಾನೆ 7 ಗಂಟೆ ವೇಳೆಗೆ ಅಂತ್ಯಗೊಂಡಿತು.

ಭಾನುವಾರ ಚಮ್ಮಟೀರ ಹಾಗೂ ಮೂಕಳೇರ ಮನೆಯಿಂದ ತಲಾ ಒಂದೊಂದು ಕುದುರೆ ಹೊರಟವು. ಇವು ದೇವರ ಮುಖ ಹೊತ್ತು ಹಳ್ಳಿಗಟ್ಟುವಿನಲ್ಲಿರುವ ಭದ್ರಕಾಳಿ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಎರಡು ಕುದುರೆಗಳು ಮುಖಾಮುಖಿಯಾದವು.

ಕುದುರೆ ಜತೆ ಊರಿನವರು ಸೇರಿ ಕುಣಿಯುತ್ತಾ ಸಂಭ್ರಮಿಸಿದರು. ಬಳಿಕ ಹಳ್ಳಿಗಟ್ಟು ಗದ್ದೆ ಬಯಲಿನ ದೇವರ ಕೆರೆಯಲ್ಲಿ ಕೆಸರು ಮಣ್ಣು ತಂದು ನೆರೆದಿದ್ದ ಸಾವಿರಾರು ಜನರು ಒಬ್ಬೊಬ್ಬರಿಗೊಬ್ಬರು ಮುಖ ಮೈಗಳಿಗೆಲ್ಲ ಕೆಸರು ಎರಚಾಡಿ ಕೊಂಡರು. ಕೆಲವರು ಕೆಳಕ್ಕೆ ಬಿದ್ದರೂ ಬಿಡದೇ ಅವರ ಮೈಮೇಲೆಲ್ಲ ಕೆಸರು ಎರಚಿ ಸಂಭ್ರಮಿಸಿದರು. ಹಬ್ಬಕ್ಕೆ ಬಂದ ನೆಂಟರ ಮುಖ ಬಟ್ಟೆ ಬರೆಗಳೆಲ್ಲ ಕೆಸರುಮಯವಾಗಿತ್ತು.

ಹಬ್ಬದ ಸಡಗರವನ್ನು ನೋಡುತ್ತಾ ನಿಂತವರು ಕೂಡ ಕೆಸರಿನಿಂದ ಮುಕ್ತವಾಗಲಿಲ್ಲ. ಯುವಕ ಯುವತಿ ಯರೆಲ್ಲ ಕೆಸರಿನ ಓಕುಳಿಯಲ್ಲಿ ಮಿಂದೆ ದ್ದರು. ಮಹಿಳೆಯರು, ಮಕ್ಕಳು ಹಬ್ಬದ ವಿಶೇಷ ವೇಷ ಧರಿಸಿ ಸಂಭ್ರಮಿಸಿದರು. ಕುದುರೆ ಹೊತ್ತವರು ಸಂಜೆ ಭದ್ರಕಾಳಿ ದೇವಸ್ಥಾನದ ಸುತ್ತ ಮೂರು ಸುತ್ತು ಓಡಿ ಹರಕೆ ಒಪ್ಪಿಸುವ ಮೂಲಕ ಉತ್ಸವಕ್ಕೆ ತೆರೆ ಎಳೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry