7
2019ರ ಲೋಕಸಭೆ ಚುನಾವಣೆಗೆ ಮೋದಿ ವಿರುದ್ಧ ಬಿಜೆಪಿಯೇತರ ಪಕ್ಷಗಳಿಂದ ಪಾಂಚಜನ್ಯ

‘ಕುಮಾರ ಪರ್ವ’ದಲ್ಲಿ ‘ಮಹಾ ಮೈತ್ರಿ’ಯ ಮಂತ್ರ

Published:
Updated:
‘ಕುಮಾರ ಪರ್ವ’ದಲ್ಲಿ ‘ಮಹಾ ಮೈತ್ರಿ’ಯ ಮಂತ್ರ

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ‘ಅಧಿಕಾರ ಸೂತ್ರ’ ಕೈಗೆತ್ತಿಗೊಳ್ಳುವ ಸಂಭ್ರಮವನ್ನು ಬಳಸಿಕೊಂಡು ‘ಮಹಾ ಮೈತ್ರಿ’ (ಮಹಾ ಘಟ್ ಬಂಧನ್) ಗಟ್ಟಿಗೊಳಿಸಲು ಮತ್ತು ಆ ಮೂಲಕ, 2019ರ ಲೋಕಸಭೆ ಚುನಾವಣೆಗೆ ಈಗಿಂದಲೇ ಪಾಂಚಜನ್ಯ ಮೊಳಗಿಸಲು ಬಿಜೆಪಿಯೇತರ ಪಕ್ಷಗಳು ಸಜ್ಜಾಗಿವೆ.

ವಿಧಾನಸೌಧದ ಮುಂಭಾಗದಲ್ಲಿ ಬುಧವಾರ ಸಂಜೆ ಎಚ್‌.ಡಿ. ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದಾರೆ. ಆ ಕ್ಷಣಕ್ಕೆ ಸಾಕ್ಷಿಯಾಗುವ ಮೂಲಕ, ಮುಂದಿನ ದಿನಗಳಲ್ಲಿ ದೇಶದಲ್ಲಿ ನಡೆಯುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಸಂಘಟಿತ ಸಮರ ಸಾರಲು ಈ ಪಕ್ಷಗಳ ನಾಯಕರು ತೀರ್ಮಾನಿಸಿದ್ದಾರೆ. ಬಿಜೆಪಿಯೇತರ ಪಕ್ಷಗಳು ಒಗ್ಗೂಡಿದರೆ ಕೇಂದ್ರದಲ್ಲಿ ‘ಕಮಲ’ ಪಕ್ಷ ಮತ್ತೆ ಅಧಿಕಾರಕ್ಕೆ ಏರದಂತೆ ತಡೆಯಬಹುದು ಎಂಬ ವಿಶ್ವಾಸ ಅವರದ್ದು.

ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳ ಮಹಾ ಮೈತ್ರಿ ಬಗ್ಗೆ ಭಾರಿ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ, ಈ ಎಲ್ಲ ನಾಯಕರ ಒಟ್ಟುಗೂಡಿಸುವಿಕೆಗೆ ಕರ್ನಾಟಕ ವೇದಿಕೆಯಾಗುತ್ತಿದೆ. ಒಂದೇ ಕಡೆ ಸೇರುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಹೊಸ ರಾಜಕೀಯ ಸಾಧ್ಯತೆಗಳ ಆಶಾವಾದವನ್ನು ಹುಟ್ಟುಹಾಕಲು ಈ ನಾಯಕರು ಉದ್ದೇಶಿಸಿದ್ದಾರೆ ಎಂದೇ ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ.

ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಇಡೀ ದೇಶದಲ್ಲಿ ಮಹಾ ಮೈತ್ರಿ ರೂಪಿಸಲು ಉದ್ದೇಶಿಸಲಾಗಿದೆ. ಈ ಹೊಂದಾಣಿಕೆಯಲ್ಲಿ ಯಾರೂ ಸ್ವಾರ್ಥ ಬಯಸಬಾರದು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು, ನರೇಂದ್ರ ಮೋದಿ ಮತ್ತೆ ಪ್ರಧಾನಿ ಪಟ್ಟ ಅಲಂಕರಿಸಬಾರದು ಎಂಬ ಒಂದೇ ಧ್ಯೇಯದಲ್ಲಿ ಒಟ್ಟಾಗಲು ಈ ನಾಯಕರು ತೀರ್ಮಾನಿಸಿದ್ದಾರೆ.

ಬಿಜೆಪಿಯನ್ನು ಕಟ್ಟಿ ಹಾಕಲು ಒಟ್ಟಾಗಬೇಕಾದ ಅಗತ್ಯ ಮತ್ತು ಅಪೇಕ್ಷೆಯನ್ನು ಈಗಾಗಲೇ ಎಲ್ಲ ಸಮಾನ ಮನಸ್ಕ ಪಕ್ಷಗಳು ವ್ಯಕ್ತಪಡಿಸಿವೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೂಡಾ, ಇಂತಹ ಮೈತ್ರಿಗೆ ಸಿದ್ಧರಾಗಿರುವಂತೆ ಬಿಜೆಪಿಯೇತರ ಪಕ್ಷಗಳ ನಾಯಕರಿಗೆ ಕರೆ ನೀಡಿದ್ದಾರೆ. ಈ ಮಧ್ಯೆ, ಈ ರೀತಿಯ ಒಗ್ಗಟ್ಟಿನಿಂದ 2019ರ ಲೋಕಸಭಾ ಚುನಾವಣೆಯಲ್ಲಿ ‘ಮಹಾ ಮೈತ್ರಿ’ ಕೂಟ ಗೆಲ್ಲಬಹುದಾದ ಕ್ಷೇತ್ರಗಳ ಲೆಕ್ಕಾಚಾರಗಳೂ ನಡೆಯುತ್ತಿದೆ. ‘ಈ ಮೈತ್ರಿಯಲ್ಲಿ ಕಾಂಗ್ರೆಸ್‌ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದರೆ, ನಾನೇ ಪ್ರಧಾನಿ’ ಎಂದೂ ರಾಹುಲ್‌ ಇತ್ತೀಚೆಗೆ ಹೇಳಿದ್ದರು.

ಕೇಸರಿ ಪಡೆಯನ್ನು ಕಟ್ಟಿಹಾಕುವುದಕ್ಕಾಗಿ ‘ಮಹಾ ಮೈತ್ರಿ’ ರಚನೆಯ ಅಭಿಲಾಷೆಯನ್ನು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕೂಡಾ ಪ್ರಕಟಿಸಿದ್ದಾರೆ. ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು ಕೋಮುವಾದಿಗಳ ವಿರುದ್ಧ ಒಂದಾದರೇ ಗೆಲುವು ಖಚಿತ ಎಂದೂ ಇತ್ತೀಚೆಗೆ ಹೇಳಿದ್ದಾರೆ.

ಬಿಜೆಪಿಯೇತರ ಪಕ್ಷಗಳ ಒಗ್ಗಟ್ಟು ಪ್ರದರ್ಶನ

ಕಮಲ ಪಕ್ಷ ಕಟ್ಟಿ ಹಾಕಲು ತಂತ್ರ

ಗೆಲ್ಲಬಹುದಾದ ಕ್ಷೇತ್ರಗಳ ಲೆಕ್ಕಾಚಾರ ಆರಂಭ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry