ಸಾಲಮುಕ್ತ ಸಮಾಜ: ಸ್ವಾಭಿಮಾನ ಸಮಾಜ

7

ಸಾಲಮುಕ್ತ ಸಮಾಜ: ಸ್ವಾಭಿಮಾನ ಸಮಾಜ

Published:
Updated:

ಕಾಶ್ಮೀರ ನಾಡಿನ ಅರಸ ಮಹದೇವ ಭೂಪಾಲನು 12ನೇ ಶತಮಾನದಲ್ಲಿ ಬಸವಣ್ಣನ ನೇತೃತ್ವದಲ್ಲಿ ನಡೆದ ಕಲ್ಯಾಣರಾಜ್ಯದ ಪರಿಕಲ್ಪನೆಯನ್ನು ಅರಿತು, ಇಲ್ಲಿಗೆ ಬಂದು ಬಸವಣ್ಣನ ಆದರ್ಶದ ಮಾರ್ಗವನ್ನು ಅನುಸರಿಸಿದ್ದು ಒಂದು ಐತಿಹಾಸಿಕ ತೀರ್ಮಾನ.

ಆತ ಕಲ್ಯಾಣಕ್ಕೆ ಬಂದು ಆಯ್ದುಕೊಂಡ ಕಾಯಕವೆಂದರೆ ಕಾಡಿಗೆ ಹೋಗಿ ಕಟ್ಟಿಗೆ ಕಡಿದು ತಂದು ಮಾರುವುದು. ಕಾಯಕದಿಂದ ಬರುವ ಕಾಂಚಾಣದಿಂದ ದಾಸೋಹ ನಡೆಸುವುದೇ ಅವರ ಬದುಕಿನ ಮಹಾ ಉದ್ದೇಶವಾಗಿತ್ತು. ಶರಣ ಚಳವಳಿಯ ಮಹತ್ವದ ನಿರ್ಣಯವೆಂದರೆ ‘ಉತ್ಪಾದನೆ’. ಉತ್ಪಾದಿಸುವುದೆಂದರೆ, ದುಡಿಯುವುದು. ಉತ್ಪಾದನೆಯ ಮತ್ತೊಂದು ಮುಖವೆಂದರೆ ವಿತರಣೆ. ಅಸಹಾಯಕರಿಗೆ ನೀಡುವುದು ವಿತರಣೆಯ ಉದ್ದೇಶ. ಸಾಮಾಜಿಕ ನ್ಯಾಯದ ತಕ್ಕಡಿಯ ಎರಡು ಪರಡೆಗಳೆಂದರೆ ಉತ್ಪಾದನೆ ಮತ್ತು ವಿತರಣೆ.

ಭಾರತದಂಥ ರಾಷ್ಟ್ರದಲ್ಲಿ ಬಡತನ ಅಧಿಕವಾಗಲು ಕಾರಣವೇನೆಂದರೆ, ಹಣವು ಕೆಲವರ ಬಳಿ ಮಾತ್ರ ಕೇಂದ್ರಿತವಾಗಿರುವುದು. ಅರ್ಥವು ಸಮಾನವಾಗಿ ಹಂಚಿಕೆಯಾದರೆ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ.

ಸರ್ಕಾರಗಳು ಕೃಷಿಕರಿಗೆ ಸಾಲ ಕೊಡುತ್ತೇವೆಂದು ಹೇಳುತ್ತಾ ಅವರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿವೆ. ಅಸಹಾಯಕ ಸ್ಥಿತಿಯಲ್ಲಿ ಸರ್ಕಾರವು ಸಹಾಯಕ್ಕೆ ಬರಬೇಕಾಗುತ್ತದೆ ನಿಜ. ಆದರೆ ಸಾಲಮನ್ನಾದಂಥ ನಿರ್ಣಯಗಳಿಂದ ರೈತರು ಸರ್ಕಾರಗಳಿಗೆ ದುಂಬಾಲು ಬೀಳುವಂತಹ ಸ್ಥಿತಿ ನಿರ್ಮಾಣ ಆಗುತ್ತದೆ. ಜನರು ಯಾವತ್ತೂ ತಮ್ಮಲ್ಲಿ ಬೇಡುತ್ತಿರಬೇಕೆಂಬುದು ರಾಜಕೀಯ ಪಕ್ಷಗಳ ಅನಿಸಿಕೆ.

ಸಾಲ ನೀಡುವ ಅಥವಾ ಸಾಲಮನ್ನಾ ಮಾಡುವ ಕ್ರಮಗಳಿಗಿಂತ ರೈತ ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆಯನ್ನು ನಿಗದಿಪಡಿಸಿದರೆ ರೈತ ಸಮುದಾಯಕ್ಕೆ ಹೆಚ್ಚಿನ ಸಹಾಯ ಮಾಡಿದಂತಾಗುತ್ತದೆ.

ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ, ಹೊಲಗಳಿಗೆ ನೀರು ಹರಿಸಿದರೆ ಅದರಿಂದಲೇ ರೈತರು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಈ ದಿಕ್ಕಿನಲ್ಲಿ ಆಲೋಚನೆ ಮಾಡುವುದರಿಂದ ಕೃಷಿ ಸಮಾಜದ ಸಮಸ್ಯೆಗಳನ್ನು ಇತ್ಯರ್ಥಪಡಿಸಬಹುದು. ಕೃಷಿಕರಷ್ಟೇ ಸಮಸ್ಯೆಯನ್ನು ಇತರ ಕ್ಷೇತ್ರಗಳ ಕಾರ್ಮಿಕರು ಸಹ ಅನುಭವಿಸುತ್ತಿದ್ದಾರೆ. ಈ ಕಾರಣಕ್ಕೆ ಅಗ್ಗದ ಯೋಜನೆಗಳನ್ನು ಸ್ಥಗಿತಗೊಳಿಸಿ ಕಾರ್ಮಿಕರ ಬದುಕಿಗೆ ಕಾಯಕಲ್ಪ ಕೊಡುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕು.

ಬಸವಣ್ಣನವರ ಕಾಯಕ ಸಮಾಜದ ಪರಿಕಲ್ಪನೆಯಲ್ಲಿ ಶರಣರು ಕಾಯಕವನ್ನು ಪೂಜೆಗಿಂತಲೂ ಅಧಿಕವೆಂದು ಭಾವಿಸಿ ನಿರ್ವಹಿಸುತ್ತಿದ್ದರು. ಕಾರಣ, ಅಲ್ಲಿ ನೀಡುವವರಿದ್ದರು; ಬೇಡುವವರಿರಲಿಲ್ಲ.

ಈ ಮಾತಿಗೆ ಒಂದು ಉದಾಹರಣೆಯೆಂದರೆ ಮೋಳಿಗೆ ಮಾರಯ್ಯ. ಆತ ಕಾಶ್ಮೀರದಿಂದ ತನ್ನ ಹೆಂಡತಿ ಮಹದೇವಿಯೊಂದಿಗೆ ಕಲ್ಯಾಣಕ್ಕೆ ಬಂದು, ಕಟ್ಟಿಗೆ ಕಾಯಕವನ್ನು ನಿರ್ವಹಿಸುತ್ತಾನೆ. ಒಮ್ಮೆ ಮಾರಯ್ಯನು ಕಟ್ಟಿಗೆ ಕಡಿಯಲೆಂದು ಕಾಡಿಗೆಹೋಗಿದ್ದ ಸಮಯವನ್ನು ನೋಡಿಕೊಂಡು ಒಬ್ಬ ವೇಷಧಾರಿ ಜಂಗಮನು ಅವರ ಮನೆಗೆ ಬರುತ್ತಾನೆ.

ಅಂದಿನ ದಿನಗಳಲ್ಲಿ ಜಂಗಮನನ್ನು ಸಾಕ್ಷಾತ್ ದೈವವೆಂದು ಭಾವಿಸಲಾಗುತ್ತಿತ್ತು. ಮಹದೇವಿಯೂ ಮನೆಗೆ ಬಂದ ಜಂಗಮರೂಪಿ ಅತಿಥಿಯನ್ನು ಉಪಚರಿಸುತ್ತಾಳೆ. ಕಾಡಿಗೆ ಹೋಗಿದ್ದ ಮಾರಯ್ಯ ಕಟ್ಟಿಗೆ ಹೊರೆಯೊಂದಿಗೆ ಮನೆಗೆ ಮರಳುತ್ತಲೇ, ‘ಮಹದೇವಿ, ಮನೆಗೆ ಯಾರಾದರೂ ಬಂದಿದ್ದರೇ’ ಎಂದು ಪ್ರಶ್ನಿಸುತ್ತಾನೆ. ‘ಹೌದು, ಒಬ್ಬ ಜಂಗಮರೂಪಿ ಅತಿಥಿ ಬಂದಿದ್ದ’ ಎಂದು ಆಕೆ ಉತ್ತರಿಸುತ್ತಾಳೆ.

ಜನನಾಯಕ ಅಥವಾ ಸಾಧಕನಿಗೆ ಸೂಕ್ಷ್ಮದೃಷ್ಟಿ ಇರಬೇಕಾಗುತ್ತದೆ. ಮೋಳಿಗೆ ಮಾರಯ್ಯನಲ್ಲಿ ಅಂಥ ದೃಷ್ಟಿಯಿತ್ತು. ಅದರ ಬಲದಿಂದ ಆತ ‘ಮನೆಯಿಂದ ಏನೋ ದುರ್ನಾತ ಬರುತ್ತಿದೆ’ ಎಂದು ಕೇಳುತ್ತಾನೆ. ಮಡದಿ ಮಹದೇವಿಗೆ ಅರ್ಥ ಆಗುವುದಿಲ್ಲ. ಆ ದುರ್ನಾತಕ್ಕೆ ಕಾರಣವೇನೆಂದರೆ ಜಂಗಮರೂಪಿಯಾಗಿ ಬಂದವನು ಪೂಜೆಯ ನೆಪದಲ್ಲಿ ಹೊನ್ನಿನ ಜಾಳಿಗೆಯನ್ನು ಬಿಟ್ಟು ಹೋಗಿರುತ್ತಾನೆ.

‘ನೋಡು, ಆ ಮಜ್ಜನಸಾಲೆಯಲ್ಲಿ ಏನಾದರು ಇದೆಯಾ?’ ಎಂದು ಹೇಳುತ್ತಾನೆ. ಮಡದಿಯು ಅಲ್ಲಿ ಹೋಗಿ ನೋಡಲಾಗಿ ನಿರೀಕ್ಷೆಯಂತೆ ಹೊನ್ನಿನ ಜಾಳಿಗೆ ಇರುತ್ತದೆ. ಅದನ್ನು ಮುಟ್ಟಲಾರದೆ ಒಂದು ಕೋಲಿನ ತುದಿಯಲ್ಲಿ ಹಿಡಿದು- ‘ಇದು ಆ ಬಸವಣ್ಣ ಮಾಡಿದ ಆಟವೇ ಆಗಿದೆ. ನಾವು ಬಡವರೆಂದು ಕನಿಕರ ಬಂದು ಅವರು ಹೀಗೆ ಮಾಡಿದ್ದಾರೆ’ ಎಂದು ತನ್ನ ಮಡದಿಗೆ ತಿಳಿಸುತ್ತಾನೆ. ಹೊನ್ನಿನ ಜಾಳಿಗೆಯನ್ನು ಕೋಲಿನಲ್ಲಿ ಹಿಡಿದುಕೊಂಡೇ ಮಹಾಮನೆಗೆ ಬರುತ್ತಾನೆ.

‘ಬಸವಣ್ಣಾ, ನೀನು ಮಾತ್ರ ನೀಡುವವನು; ನಾವು ಬೇಡುವವರು ಎಂದು ತಿಳಿದುಕೊಂಡಿದ್ದೀಯಾ? ನಿನ್ನ ಹೊನ್ನಿನ ಜಾಳಿಗೆಯನ್ನು ನೀನೇ ಇಟ್ಟುಕೊ’ ಎಂದು ಬಿಸುಟುಬರುತ್ತಾನೆ. ಈ ಒಂದೇ ಸಂದರ್ಭವು ಮೋಳಿಗೆ ಮಾರಯ್ಯನವರ ಸ್ವಾಭಿಮಾನ ಮತ್ತು ಬಸವಣ್ಣನವರ ಅಂತಃಕರಣಗಳಿಗೆ ಸಾಕ್ಷಿ ಆಗುತ್ತದೆ.

ಪರಿಶ್ರಮವಿಲ್ಲದೆ ಬಂದದ್ದು ಪಾಷಾಣಕ್ಕೆ ಸಮಾನ ಎಂಬ ಭಾವನೆ ಕಲ್ಯಾಣ ನಾಡಿನ ಶರಣರಲ್ಲಿತ್ತು. ಶರಣರು ನೀಡುವವರು; ಬೇಡುವವರಲ್ಲ ಎಂಬ ಸ್ಥಿತಿಯು ಅಲ್ಲಿ ನಿರ್ಮಾಣವಾಗಿತ್ತು. ಸ್ವಾವಲಂಬನೆಯೇ ಸ್ವಾಭಿಮಾನದ ಬದುಕು ಎಂಬುದನ್ನು ಶಿವಶರಣರು ಆಚರಿಸಿ ತೋರಿದರು. ಸ್ವಾಭಿಮಾನವು ಸ್ವಾವಲಂಬನೆಯ ಬದುಕಿನತ್ತ ಕರೆದೊಯ್ಯುತ್ತದೆ. ಸ್ವಾವಲಂಬನೆಯು ಸ್ವಾಭಿಮಾನಕ್ಕೆ ಸಾಕ್ಷಿ ಆಗುತ್ತದೆ. ತನ್ಮೂಲಕ ಬದುಕಿಗೆ ಉತ್ತರದಾಯಿತ್ವ.

ಬಸವಣ್ಣ ಕೊಟ್ಟಂತಹ ಹೊನ್ನಿನ ಜಾಳಿಗೆಯನ್ನು ಮೋಳಿಗೆ ಮಾರಯ್ಯನು ಹೇಗೆ ಮಹಾಮನೆಯ ಬಾಗಿಲಿಗೆ ಎಸೆದು ಬರುತ್ತಾನೋ, ಹಾಗೇ ಸ್ವಾಭಿಮಾನಿಗಳಾದ ಕೃಷಿಕರು ಸಾಲಬಾಧೆ ಇಲ್ಲದೆ ಬದುಕು ಕಟ್ಟಿಕೊಂಡು, ಸಾಲಮನ್ನಾದ ಹಣವನ್ನು ವಿಧಾನಸೌಧಕ್ಕೆ ಎಸೆದುಬರುವ ಧೈರ್ಯವನ್ನು ತೋರಿಸಬೇಕಾಗುತ್ತದೆ. ಸರ್ಕಾರಗಳು ಒಡ್ಡುವ ಆಮಿಷಗಳಿಗೆ ಜೋತುಬಿದ್ದರೆ, ಕೊನೆಯವರೆಗೂ ಅಡಿಯಾಳಾಗಿ ಇರಬೇಕಾಗುತ್ತದೆ.

ಜಮೀನಿನಲ್ಲಿ ಶ್ರಮದಿಂದ ದುಡಿಯಬೇಕಾದ ಕೃಷಿಕರು ಸರ್ಕಾರಕ್ಕೆ ದುಂಬಾಲು ಬೀಳುವಂತಹ ಅಸಹಾಯಕತೆ ನಿರ್ಮಾಣ ಆಗುತ್ತದೆ. ಹೀಗಾಗುವುದು ಬೇಡ. ರೈತ ಯಾವಾಗಲೂ ದೇಶಕ್ಕೆ ಅನ್ನ ನೀಡುವವನು. ಅವನ ಕೈ ‘ಮಾಡುವ- ನೀಡುವ’ ಕೈ. ಬೇಡುವ ಕೈ ಎಂದಿಗೂ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅತಿವೃಷ್ಟಿ ಅಥವಾ ಅನಾವೃಷ್ಟಿ ಸಂಭವಿಸಿ ಬೆಳೆಗಳು ಹಾಳಾದಾಗ, ಮಳೆ ಬರದೆ ತೊಂದರೆಯಾದಾಗ ರೈತರ ವಿಷಮ ಪರಿಸ್ಥಿತಿಯನ್ನು ಸರ್ಕಾರವು ಅಧ್ಯಯನ ಮಾಡಿ, ಪರಿಹಾರ ಪ್ರಕಟಿಸಲು ಮುಂದಾಗಬೇಕು. ನಾವು ತಕ್ಕಮಟ್ಟಿಗೆ ಹಸಿವು ಮುಕ್ತ ಸಮಾಜದ ಉದ್ದೇಶ ಸಾಧಿಸಿದ್ದೇವೆ. ಅದರಂತೆ ಸ್ವಾಭಿಮಾನಪೂರ್ಣ ಸಮಾಜ ನಿರ್ಮಾಣದ ದೃಷ್ಟಿಯಿಂದ ‘ಸಾಲಮುಕ್ತ ಸಮಾಜ’ ನಿರ್ಮಾಣದ ಕಡೆಗೆ ಒತ್ತು ನೀಡಬೇಕಾಗಿದೆ. ಸಾಲಮುಕ್ತ ಸಮಾಜದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry