ನಿಫಾ: ಸಾರ್ವಜನಿಕ ಭೀತಿ ನಿರ್ವಹಣೆಗೆ ಜಾಗೃತಿ ಮೂಡಿಸಿ

7

ನಿಫಾ: ಸಾರ್ವಜನಿಕ ಭೀತಿ ನಿರ್ವಹಣೆಗೆ ಜಾಗೃತಿ ಮೂಡಿಸಿ

Published:
Updated:
ನಿಫಾ: ಸಾರ್ವಜನಿಕ ಭೀತಿ ನಿರ್ವಹಣೆಗೆ ಜಾಗೃತಿ ಮೂಡಿಸಿ

ನಿಫಾ ವೈರಾಣು ಸೋಂಕಿಗೆ ಕೇರಳದಲ್ಲಿ ಅನೇಕ ಜನರು ಬಲಿಯಾಗಿದ್ದಾರೆ ಎಂಬುದನ್ನು ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ವೈರಾಣುವಿಗೆ ಬಲಿಯಾದ ಹೆಚ್ಚಿನವರು ಕೋಯಿಕ್ಕೋಡ್ ಜಿಲ್ಲೆಗೆ ಸೇರಿದವರು ಎಂದೂ ಆರೋಗ್ಯ ಇಲಾಖೆ ಹೇಳಿದೆ. ಬಾವಲಿ, ಹಂದಿ ಮತ್ತಿತರ ಪ್ರಾಣಿಗಳ ಮೂಲಕ ಹರಡುವ ಈ ಸೋಂಕು ದಕ್ಷಿಣದ ಈ ರಾಜ್ಯದಲ್ಲಿ ಹಿಂದೆಂದೂ ವರದಿಯಾಗಿರಲಿಲ್ಲ.

ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ಎರಡು ಬಾರಿ ನಿಫಾ ಸೋಂಕು ಹರಡಿತ್ತು. ಈ ವೈರಾಣು ಸೋಂಕು ಪತ್ತೆ ಹಚ್ಚುವುದು ಕಷ್ಟ ಎಂಬುದೇ ಈ ಸೋಂಕು ನಿರ್ವಹಣೆಯ ಕುರಿತಾದ ಸವಾಲುಗಳನ್ನು ಎತ್ತಿ ಹೇಳುತ್ತದೆ. ನಿಫಾ ವೈರಾಣು ಸೋಂಕಿನಲ್ಲಿ ಮರಣ ಪ್ರಮಾಣವೂ ಹೆಚ್ಚು. ಸೋಂಕಿಗೆ ಒಳಗಾದ ಶೇ 70ರಷ್ಟು ಜನ ಸಾವಿಗೀಡಾಗುತ್ತಾರೆ. ಈ ಸೋಂಕಿನ ವಿರುದ್ಧ ಸೆಣಸಲು ಲಸಿಕೆ ಇಲ್ಲ.

ಭವಿಷ್ಯದಲ್ಲಿ  ಮನುಕುಲವನ್ನು ಕಾಡಬಹುದಾದ ತೀವ್ರ ಪ್ರಮಾಣದ 10 ಸೋಂಕು ಕಾಯಿಲೆಗಳಲ್ಲಿ ನಿಫಾ ವೈರಾಣು ಸೋಂಕಿನ ಕಾಯಿಲೆಯನ್ನೂ ವಿಶ್ವ ಆರೋಗ್ಯ ಸಂಸ್ಥೆ ಪಟ್ಟಿ ಮಾಡಿದೆ. ಇಂತಹ ಸೋಂಕಿನ ವಿರುದ್ಧ ಸೆಣಸಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಂಡಿರುವುದಾಗಿ ಕೇರಳ ಸರ್ಕಾರ ಹೇಳಿದೆ. ಪರಿಸ್ಥಿತಿಯನ್ನು ನಿರ್ವಹಿಸಲು ಕೇಂದ್ರ ಸರ್ಕಾರವೂ ಕೈಜೋಡಿಸಿದೆ. ರಾಷ್ಟ್ರೀಯ ಕಾಯಿಲೆ ನಿಯಂತ್ರಣ ಕೇಂದ್ರದ (ಎನ್‌ಸಿಡಿಸಿ) ನಿರ್ದೇಶಕರು, ಸೋಂಕು ಇರುವ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.

ಸೋಂಕು ಹರಡುವುದನ್ನು ತಡೆಯುವುದಕ್ಕಾಗಿ ಮುಂಜಾಗ್ರತಾ ವ್ಯವಸ್ಥೆಯನ್ನು ಬಲಪಡಿಸುವುದರತ್ತ ಈಗ ಗಮನವನ್ನು ಕೇಂದ್ರೀಕರಿಸಲಾಗಿದೆ. ಈ ಸೋಂಕು ಕುರಿತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅನಗತ್ಯ ಭೀತಿ ಬಿತ್ತುವುದರ ವಿರುದ್ಧ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸೋಂಕು ಇರುವುದು ಕಂಡುಬಂದಲ್ಲಿ ಅಂತಹವರನ್ನು ಪ್ರತ್ಯೇಕಿಸಿ ಆರೋಗ್ಯ ಇಲಾಖೆ ಕಣ್ಗಾವಲಿನಲ್ಲಿ ಚಿಕಿತ್ಸೆ ನೀಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ.

ರೋಗಿಗಳನ್ನು ನಿರ್ವಹಿಸುವಲ್ಲಿ ಹೆಚ್ಚಿನ ಮಟ್ಟದ ಸುರಕ್ಷತಾ ಕ್ರಮಗಳನ್ನು ಸ್ವತಃ ಆರೋಗ್ಯ ಸಿಬ್ಬಂದಿಯೂ ಅನುಸರಿಸಬೇಕಾಗಿದೆ. ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಕೇರಳದ ನರ್ಸ್, ಇದೇ ವೈರಾಣು ಸೋಂಕಿನಿಂದ ಸಾವನ್ನಪ್ಪಿರುವ ದುರಂತ ಈಗಾಗಲೇ ಘಟಿಸಿರುವುದು ಎಚ್ಚರಿಕೆ ಗಂಟೆಯಾಗಬೇಕು.

ಎಬೋಲಾ, ಝಿಕಾ ವೈರಾಣು, ಎಚ್1 ಎನ್‍1 ಜ್ವರ… ಹೀಗೆ ಹಲವು ಬಗೆಯ ಸೋಂಕು ಜ್ವರಗಳು ಜಗತ್ತನ್ನು ಕಾಡಿವೆ. ಸಾರ್ವಜನಿಕ ಆರೋಗ್ಯಕ್ಕೆ ಬೆದರಿಕೆ ಒಡ್ಡುವ ಇಂತಹ ಕಾಯಿಲೆಗಳ ಬಗ್ಗೆ ಎಷ್ಟು ಮುಂಜಾಗ್ರತೆ ವಹಿಸಿದರೂ ಸಾಲದು. ಈ ಕಾಯಿಲೆಗಳು ಸಾಂಕ್ರಾಮಿಕವಾಗಿ ವ್ಯಾಪಕವಾಗಿ ಹರಡಬಹುದು ಎಂಬ ಭೀತಿ, ಮುಂಜಾಗ್ರತೆಯ ತೀವ್ರ ಅಗತ್ಯವನ್ನು ಎತ್ತಿ ಹೇಳುತ್ತದೆ.

ಜೊತೆಗೆ ಕಾಯಿಲೆಗಳ ಚಿಕಿತ್ಸೆ ಹಾಗೂ ತಡೆಗೆ ಪರಿಣಾಮಕಾರಿ ಔಷಧಗಳು ಹಾಗೂ ಲಸಿಕೆ ಇಲ್ಲದಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸುತ್ತದೆ. 2014ರಲ್ಲಿ ಆಫ್ರಿಕಾದಿಂದ ಎಬೋಲಾ ಸೋಂಕು ಹರಡಿದ ರೀತಿ, ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಎದುರಿಸುವಲ್ಲಿ ಜಗತ್ತು ಇನ್ನೂ ಸನ್ನದ್ಧವಾಗಿಲ್ಲ ಎಂಬುದನ್ನು ತೋರಿಸಿಕೊಟ್ಟಿತ್ತು. ಎಬೋಲಾದಿಂದಾಗಿ 10 ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದರು.

ಈ ಕಾಯಿಲೆ ಹರಡುವಿಕೆಯ ಬಗ್ಗೆ ತ್ವರಿತವಾಗಿ ಸ್ಪಂದಿಸದ ವಿಶ್ವ ಆರೋಗ್ಯ ಸಂಸ್ಥೆಯೂ ವ್ಯಾಪಕ ಟೀಕೆಗಳಿಗೆ ಒಳಗಾಗಿತ್ತು. ಸೋಂಕು ಹರಡುವ ಕಾಯಿಲೆಗಳ ಲಕ್ಷಣಗಳನ್ನು ಆದಷ್ಟು ಬೇಗ ಗುರುತಿಸಿ ಸಂಬಂಧಪಟ್ಟವರಿಗೆ ತಕ್ಷಣ ವರದಿ ಮಾಡುವುದು ಇಲ್ಲಿ ಮುಖ್ಯ. ಇದಕ್ಕಾಗಿ ನಮ್ಮ ಆರೋಗ್ಯ ವ್ಯವಸ್ಥೆಯನ್ನು ಸದೃಢಗೊಳಿಸಬೇಕು. ಮೂಲಸೌಕರ್ಯಗಳು ಹೆಚ್ಚಬೇಕು. ಕಾಯಿಲೆಗಳನ್ನು ಪತ್ತೆ ಹಚ್ಚಲು ಹೆಚ್ಚಿನ ಪ್ರಯೋಗಾಲಯಗಳು ಬೇಕು.

ಜೊತೆಗೆ ತರಬೇತಿ ಪಡೆದ ಆರೋಗ್ಯ ಸಿಬ್ಬಂದಿಯೂ ಬೇಕು. ತಂತ್ರಜ್ಞಾನದ ಉತ್ತಮ ಬಳಕೆಯೂ ಸಾಧ್ಯವಾಗಬೇಕು. ವಿವಿಧ ನೆಲೆಗಳಲ್ಲಿ ಸಾರ್ವಜನಿಕರ ಕಾಳಜಿಗಳನ್ನು ನಿರ್ವಹಿಸಲು ಸನ್ನದ್ಧ ವ್ಯವಸ್ಥೆ ಸದಾ ಜಾಗೃತವಾಗಿರಬೇಕು.‌‌‌‌‌ ಸಾರ್ವಜನಿಕರೂ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಕಾಯಿಲೆ ಹರಡುವುದನ್ನು ತಡೆಯಬಹುದು.

ಈ ಬಗ್ಗೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ನಮ್ಮ ರಾಜ್ಯದಲ್ಲೂ ಮಂಗಳೂರಿನಲ್ಲಿ ಎರಡು ಶಂಕಿತ ಪ್ರಕರಣಗಳು ವರದಿಯಾಗಿವೆ. ಆದರೆ ಆತಂಕಪಡುವುದು ಸಲ್ಲದು. ರಾಜ್ಯದಲ್ಲಿ ಸೋಂಕು ಹರಡದಿರಲು ಕಟ್ಟೆಚ್ಚರದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವೈರಸ್‌ ಹರಡಲು ಕಾರಣ ಏನು,  ಹೇಗೆ ಮುನ್ನೆಚ್ಚರಿಕೆ ವಹಿಸಬೇಕು, ಇದು ಹೇಗೆ ಬರುತ್ತದೆ, ಇದಕ್ಕೆ ಚಿಕಿತ್ಸೆ ಏನು, ಹೇಗೆ ಉಪಚರಿಸಬೇಕು ಎಂಬುದರ ಬಗ್ಗೆ ನಿಖರ ಮಾಹಿತಿಗಳ ಅರಿವು ಜನರಲ್ಲಿ ಇರುವುದು ಅವಶ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry