ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀ ಮತ್ತು ಅಧ್ಯಾತ್ಮ

Last Updated 22 ಮೇ 2018, 19:30 IST
ಅಕ್ಷರ ಗಾತ್ರ

ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಸವಾಲಾಗಿರುವ ಸ್ತ್ರೀ-ಪುರುಷ ಸಮಾನತೆಯನ್ನು ಸಾಧಿಸಿ ತೋರಿಸಿದವರು ಹನ್ನೆರಡನೆಯ ಶತಮಾನದ ಶಿವಶರಣರು. ಪರಮಾತ್ಮನ ಸೃಷ್ಟಿಯಾಗಿರುವ ಸ್ತ್ರೀ-ಪುರುಷರಲ್ಲಿ ಯಾವುದೇ ರೀತಿಯ ಭೇದ-ಭಾವ ಮಾಡಬಾರದು. ದೈಹಿಕ ವ್ಯತ್ಯಾಸಗಳನ್ನೇ ಕಾರಣ ವಾಗಿಸಿಕೊಂಡು ಮಾಡುವ ಲಿಂಗಭೇದ ಅರ್ಥಹೀನವಾದುದು.

ಮೊಲೆ ಮೂಡಿ ಬಂದರೆ ಹೆಣ್ಣೆಂಬರು, ಮೀಸೆ-ಕಾಸೆ ಬಂದಡೆ ಗಂಡೆಂಬರು, ಈ ಉಭಯದ ಜ್ಞಾನ ಹೆಣ್ಣೊ ಗಂಡೋ ನಾಸ್ತಿನಾಥ ಎಂದು ಪ್ರಶ್ನಿಸುವ ಶರಣೆ ಗೊಗ್ಗವ್ವೆ ಸ್ತ್ರೀ ಪುರುಷರಲ್ಲಿರುವ ಆತ್ಮ, ಅರಿವು, ಜ್ಞಾನ ಮತ್ತು ಚೈತನ್ಯಕ್ಕೆ ಯಾವ ಲಿಂಗವೆಂದು ಹೆಸರಿಸುವಿರಿ ಎನ್ನುತ್ತಾಳೆ. ಒಳಗೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ ಎಂಬ ಸ್ಪಷ್ಟ ಸಂದೇಶ ನೀಡಿ ಹೆಣ್ಣು ಗಂಡುಗಳ ತಾರತಮ್ಯವನ್ನು ನಿರಾಕರಿಸಿದವರು ಶಿವಶರಣರು.

ಹೆಣ್ಣನ್ನು ಹೆರುವ ಯಂತ್ರ, ಹೆಣ್ಣು ಪುರುಷನ ಒಡವೆ ಎಂದು ಭಾವಿಸುವ ಜನರಿಗೇನೂ ಇಂದು ಕೊರತೆ ಇಲ್ಲ. ಸಮಾಜದ ಇಂಥ ಸ್ಥಾಪಿತ ಮೌಲ್ಯವನ್ನು ಖಂಡಿಸಿ, ಮಾನವ ಸಂಬಂಧಗಳು ವ್ಯಕ್ತಿ ಹಾಗೂ ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಅಭಿಪ್ರಾಯಿಸುವ ಶರಣೆ ಗೊಗ್ಗವ್ವೆ, ಗಂಡು ಮೋಹಿಸಿ ಹೆಣ್ಣ ಹಿಡಿದಡೆ ಅದು ಒಬ್ಬರ ಒಡವೆ ಎಂದು ಅರಿಯಬೇಕು. ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು. ಈ ಎರಡರ ಉಭಯವ ಕಳೆದು, ಸುಖಿ ತಾನಾಗಬಲ್ಲಡೆ ನಾಸ್ತಿನಾಥನು ಪರಿಪೂರ್ಣನೆಂಬೆ ಎಂದು ಸಮಾಜದ ತಳಬುಡವಿಲ್ಲದ ನಂಬಿಕೆಗಳನ್ನು ನಿರಾಕರಿಸಿದ್ದಾಳೆ.

ಯಾರಿಗೆ ಯಾರೂ ಭೋಗದ ವಸ್ತುವಲ್ಲ; ಒಡವೆಯಲ್ಲ. ಪುರುಷರಂತೆ ಸ್ತ್ರೀಯರಲ್ಲಿಯೂ ಸ್ವಾಭಿಮಾನವಿದೆ. ಆದ್ದರಿಂದ ಸ್ತ್ರೀ-ಪುರುಷರೀರ್ವರನ್ನು ಸಮಾನವಾಗಿ ಕಾಣುವುದು ಪರಿಪೂರ್ಣ ಬದುಕಿನ ಲಕ್ಷಣವೆನ್ನುತ್ತಾಳೆ ಗೊಗ್ಗವ್ವೆ. ಶಿವಶರಣರು ಸ್ತ್ರೀಯರಿಗೂ ಸಾಮಾಜಿಕ ಸಮಾನತೆಯ ಜೊತೆಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿರುವುದು ಜಾಗತಿಕ ಇತಿಹಾಸದಲ್ಲಿಯೇ ಅತ್ಯಪೂರ್ವವಾದುದು.

ಕಣ್ಣುಗಳೆರಡಾದರೂ ದೃಷ್ಟಿ ಒಂದಾಗಿರುವಂತೆ ಹೆಣ್ಣು-ಗಂಡು ಸಾಧನೆಯಲ್ಲಿಯೂ ಸಮಾನವಾಗಿರಬೇಕು. ಸತಿ-ಪತಿಗಳು ಏಕ ಭಾವವಾಗಿ ಸಾಮರಸ್ಯದಿಂದ ಅರಿತು ನಡೆದರೆ ಭಕ್ತಿಯ ಮಾರ್ಗದಲ್ಲಿ ಶ್ರೇಯಸ್ಸು ಖಚಿತ, ಭಗವಂತನಿಗೂ ಪ್ರಿಯ. ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುತ್ತಾರೆ ದಾಸಿಮಯ್ಯನವರು. ಸತಿ-ಪತಿಗಳು ಸಮಾನತೆಯನ್ನು ಕಾಯ್ದುಕೊಂಡು ಬದುಕು ಸಾಗಿಸುವುದಲ್ಲದೆ ಅಧ್ಯಾತ್ಮ ಸಾಧನೆಯನ್ನು ಕೈಗೊಳ್ಳಬೇಕು.

ಸಾಧನೆಯ ಮಾರ್ಗದಲ್ಲಿ ಜಾತಿಭೇದ-ಸೂತಕಗಳನ್ನಾಚರಿಸಬಾರದು. ಅಲ್ಲಮ ಪ್ರಭುಗಳು-ಸತಿಭಕ್ತೆಯಾದಡೆ ಹೊಲೆಗಂಜಲಾಗದು ಪತಿಭಕ್ತನಾದಡೆ ಕುಲಕಂಜಲಾಗದು. ಸತಿ-ಪತಿ ಎಂಬ ಅಂಗ ಸುಖ ಹಿಂಗಿ, ಲಿಂಗವೇ ಪತಿಯಾದ ಬಳಿಕ ಸತಿಗೆ ಪತಿಯುಂಟೆ? ಪತಿಗೆ ಸತಿಯುಂಟೆ? ಹಾಲುಂಡು ಮೇಲುಂಬರೆ ಗುಹೇಶ್ವರಾ? ಎಂದು ಹೇಳುವ ಮೂಲಕ ಸತಿ-ಪತಿಗಳಿಬ್ಬರೂ ಜಾತಿ ಸೂತಕಗಳನ್ನು ಕಡೆಗಣಿಸಿ, ವಿಷಯ ಸುಖವನ್ನು ಮೀರಿ, ಭಗವಂತನನ್ನೇ ಪತಿಯನ್ನಾಗಿಸಿಕೊಂಡಾಗ ಅಲ್ಲಿ ಸತಿ-ಪತಿ ಎಂಬ ಭಾವವಿರದು ಎನ್ನುತ್ತಾರೆ. ಆ ಅವಸ್ಥೆಯಲ್ಲಿ ಅವಳು ಭಗವಂತನೊಡನೆ ಅನುಭವಿಸುವ ಸಾಮರಸ್ಯದ ಸುಖ ಲೌಕಿಕ ವಿಷಯ ಸುಖಕ್ಕಿಂತಲೂ ಮಿಗಿಲಾದುದು. ಅದನ್ನೇ ಹಾಲುಂಡು ಮೇಲುಂಬರೆ? ಎಂಬ ಅನುಭವದ ಮಾತಿನ ಮೂಲಕ ಅವರು ಸ್ಪಷ್ಟ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT