ಹತೋಟಿಗೆ ಬಾರದ ‘ನಿಫಾ’: 10ಕ್ಕೆ ಏರಿದ ಸಾವಿನ ಸಂಖ್ಯೆ

7
ಚಿಕಿತ್ಸೆ ಪಡೆಯುತ್ತಿರುವ ಇಬ್ಬರ ಸ್ಥಿತಿ ಗಂಭೀರ: ನೆರೆಯ ರಾಜ್ಯಗಳಲ್ಲಿ ಕಟ್ಟೆಚ್ಚರ

ಹತೋಟಿಗೆ ಬಾರದ ‘ನಿಫಾ’: 10ಕ್ಕೆ ಏರಿದ ಸಾವಿನ ಸಂಖ್ಯೆ

Published:
Updated:
ಹತೋಟಿಗೆ ಬಾರದ ‘ನಿಫಾ’: 10ಕ್ಕೆ ಏರಿದ ಸಾವಿನ ಸಂಖ್ಯೆ

ಕೋಯಿಕ್ಕೋಡ್: ಕೇರಳದಲ್ಲಿ ನಿಫಾ ವೈರಾಣು ಹತೋಟಿಗೆ ಸರ್ಕಾರ ಪ್ರಯತ್ನಗಳ ಹೊರತಾಗಿಯೂ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಮಂಗಳವಾರ 10ಕ್ಕೆ ತಲುಪಿದೆ.

ಕೋಯಿಕ್ಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಸೋಂಕಿಗೆ ಗುರಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರ ಸ್ಥಿತಿ ಗಂಭೀರವಾಗಿದೆ.

‘ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳಿಸಿದ್ದ 18 ಜನರ ಮಾದರಿಗಳಲ್ಲಿ 12 ಮಾದರಿಗಳಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಇವರಲ್ಲಿ ಈಗಾಗಲೇ 10 ಮಂದಿ ಮೃತಪಟ್ಟಿದ್ದಾರೆ. ಈ ವೈರಾಣು ಸೋಂಕು ಹರಡಿರುವ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಲಾಗಿದೆ’ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.

ಭಾನುವಾರ ಮೃತಪಟ್ಟಿದ್ದ ಮಲಪ್ಪುರಂನ ಸಿಂಧು ಹಾಗೂ ಸಿಜಿತಾ ಚಿಕಿತ್ಸೆಗೆಂದು ಕೋಯಿಕ್ಕೋಡ್‌ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ಮೊದಲು ಸೋಂಕಿನಿಂದ ಮೃತಪಟ್ಟ ವ್ಯಕ್ತಿಯೊಬ್ಬರಿಂದ ಇವರಿಗೆ ಸೋಂಕು ತಗುಲಿತ್ತು ಎಂದು ಸಚಿವರು ತಿಳಿಸಿದ್ದಾರೆ.

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (ಎನ್‌ಸಿಡಿಸಿ) ನಿರ್ದೇಶಕ ಡಾ. ಸುಜೀತ್ ಕುಮಾರ್ ಸಿಂಗ್ ಸೇರಿದಂತೆ ತಜ್ಞವೈದ್ಯರ ತಂಡ ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದು, ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸುತ್ತಿದೆ. ಕೇರಳ ಗಡಿಗೆ ಹೊಂದಿಕೊಂಡಿರುವ ನೆರೆಯ ರಾಜ್ಯಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ.

ಭೀತಿ ಬೇಡ (ಪಣಜಿ ವರದಿ): ‘ಕೇರಳದ ಕೋಯಿಕ್ಕೋಡ್‌ನ ನಿರ್ದಿಷ್ಟ ಭಾಗದಲ್ಲಿ ಮಾತ್ರ ನಿಫಾ ವೈರಾಣು ಸೋಂಕು ಹರಡಿದೆ. ಆದ್ದರಿಂದ ಸೋಂಕು ಹರಡುವ ಕುರಿತು ಜನರು ಭಯಪಡುವ ಅವಶ್ಯಕತೆ ಇಲ್ಲ’ ಎಂದು ಗೋವಾ ಆರೋಗ್ಯ ಸೇವೆಗಳ ಇಲಾಖೆಯ ಸರ್ವೇಕ್ಷಣಾ ಅಧಿಕಾರಿ ‌ಡಾ ಉತ್ಕರ್ಷ್ ಬೆತೋಡ್ಕರ್ ತಿಳಿಸಿದ್ದಾರೆ.

‘‍ಪ್ರಸ್ತುತ ಗೋವಾದಲ್ಲಿ ಸೋಂಕಿನ ಕುರಿತು ಯಾವುದೇ ಎಚ್ಚರಿಕೆ ನೀಡಲಾಗಿಲ್ಲ. ಕೇರಳದಿಂದ ಬರುವ ಪ್ರವಾಸಿಗರನ್ನು ಪರೀಕ್ಷೆಗೆ ಒಳಪಡಿಸುತ್ತಿಲ್ಲ. ಕೇಂದ್ರ ಸರ್ಕಾರದಿಂದ ನಿರ್ದಿಷ್ಟ ಆದೇಶ ಜಾರಿಯಾದಾಗ ಮಾತ್ರ ಈ ರೀತಿ ಪರೀಕ್ಷೆ ನಡೆಸಬಹುದು’ ಎಂದು ಅವರು ಹೇಳಿದ್ದಾರೆ.

ಆದರೆ ಈಗಾಗಲೇ ಪರಿಸ್ಥಿತಿಯ ತೀವ್ರತೆ ತಿಳಿಯಲು ಮಣಿಪಾಲದ ವೈರಾಣು ಸಂಶೋಧನಾ ಕೇಂದ್ರವನ್ನು ಸಂ‍ಪರ್ಕಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

**

‘ಸಾವಿನ ಹಾದಿಯಲ್ಲಿದ್ದೇನೆ..ಮಕ್ಕಳ ಕಾಳಜಿ ಮಾಡಿ’

‘ನಾನು ಬಹುತೇಕ ಸಾವಿನ ಹಾದಿಯಲ್ಲಿದ್ದೇನೆ... ನಿಮ್ಮನ್ನು ಭೇಟಿ ಮಾಡಲು ಆಗದೆ ಇರಬಹುದು. ಕ್ಷಮಿಸಿ. ನಮ್ಮ ಮಕ್ಕಳ ಕಾಳಜಿ ಮಾಡಿ. ಅವರು ನಮ್ಮ ತಂದೆಯಂತೆ ಏಕಾಂಗಿಯಾಗಬಾರದು. ಅವರನ್ನು ಗಲ್ಫ್‌ಗೆ ಕರೆದೊಯ್ಯಿರಿ’– ಎನ್ನುವ ಮನಕಲಕುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಿಫಾ ವೈರಾಣು ಸೋಂಕಿನಿಂದ ಪೆರಂಬರದ ತಾಲ್ಲೂಕು ಆಸ್ಪತ್ರೆಯಲ್ಲಿ ಸಾವಿಗೀಡಾಗುವ ಕೆಲವೇ ನಿಮಿಷಗಳ ಮೊದಲು ದಾದಿ ಲಿನಿ (28) ತಮ್ಮ ಪತಿಗೆ ಬರೆದ ಪತ್ರದ ಸಾರವಿದು.

(ಲಿನಿ)

‍ಜಿಲ್ಲೆಯಲ್ಲಿ ಸೋಂಕು ತಗುಲಿದ್ದ ಮೊದಲ ವ್ಯಕ್ತಿಗೆ ಚಿಕಿತ್ಸೆ ನೀಡಿದ ತಂಡದಲ್ಲಿದ್ದ ಲಿನಿ, ಸೋಂಕು ತಗುಲಿದವರಿಗೆ ಇರುವ ಪ್ರತ್ಯೇಕ ವಾರ್ಡ್‌ನಲ್ಲಿದ್ದರು.

ಲಿನಿ ಅವರ ಪತಿ ಸಜೀಶ್ ಬಹ್ರೇನ್‌ನಲ್ಲಿ ಉದ್ಯೋಗದಲ್ಲಿದ್ದು, ಅವರಿಗೆ 5 ಹಾಗೂ 3 ವರ್ಷದ ಇಬ್ಬರು ಮಕ್ಕಳಿದ್ದಾರೆ. ಪತ್ನಿಯ ಅನಾರೋಗ್ಯ ಕುರಿತು ತಿಳಿದ ಸಜೀಶ್ ಎರಡು ದಿನಗಳ ಹಿಂದೆ ಮನೆಗೆ ಬಂದಿದ್ದರು.

ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಆಸ್ಪತ್ರೆಯ ಅಧಿಕಾರಿಗಳು ತಕ್ಷಣವೇ ಅಂತ್ಯಸಂಸ್ಕಾರ ಮಾಡಿದ್ದರಿಂದ, ಸಂಬಂಧಿಕರಿಗೆ ಕೊನೆಯ ಬಾರಿಗೆ ಲಿನಿ ಅವರನ್ನು ನೋಡಲೂ ಸಾಧ್ಯವಾಗಿಲ್ಲ.

‘ಲಿನಿ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸಲಾಗುವುದು’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

**

ಜೀವ ತ್ಯಾಗಕ್ಕೂ ಸಿದ್ಧ: ವೈದ್ಯ ಕಫೀಲ್ ಖಾನ್

ತಿರುವನಂತಪುರ: ದೂರದ ಉತ್ತರ ಪ್ರದೇಶದ ವೈದ್ಯ ಕಫೀಲ್ ಖಾನ್ ಅವರು ಕೇರಳದ ಸೋಂಕಿತರ ಚಿಕಿತ್ಸೆಗೆ ನೆರವಿನ ಹಸ್ತ ಚಾಚಿದ್ದಾರೆ.

‘ಸೋಂಕಿತರಿಗೆ ಚಿಕಿತ್ಸೆ ನೀಡುವ ವೇಳೆ ಸೋಂಕಿಗೆ ಗುರಿಯಾಗಿ ಮೃತಪಟ್ಟ ದಾದಿ ಲಿನಿ ಸ್ಫೂರ್ತಿಯಾಗಿದ್ದಾರೆ. ಜೀವ ತ್ಯಾಗ ಮಾಡಲು ಸಹ ಸಿದ್ಧನಿದ್ದೇನೆ’ ಎಂದು ಕಫೀಲ್ ಹೇಳಿದ್ದಾರೆ.

‘ಅಮಾಯಕ ಜನರ ಜೀವ ಉಳಿಸಲು ಕೋಯಿಕ್ಕೋಡ್‌ ವೈದ್ಯಕೀಯ ಕಾಲೇಜಿನಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕೋರುತ್ತೇನೆ’ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಅವರು ಹೇಳಿದ್ದಾರೆ.

ಗೋರಖಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 60 ಮಕ್ಕಳು ಸಾವನ್ನಪ್ಪಿದ ವೇಳೆ, ಕಫೀಲ್‌ ಅಲ್ಲಿನ ಮಕ್ಕಳ ವೈದ್ಯಕೀಯ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಮಕ್ಕಳ ಸರಣಿ ಸಾವು ಸಂಭವಿಸುತ್ತಿದ್ದ ವೇಳೆ ನೆರವಿಗೆ ಧಾವಿಸಿದ್ದ ಕಫೀಲ್‌ ಖಾನ್‌ ಅವರನ್ನು ಹೀರೊ ರೀತಿ ಭಾವಿಸಲಾಗಿತ್ತು. ಆದರೆ ಬಳಿಕ ಅವರನ್ನು ಅಮಾನತುಗೊಳಿಸಲಾಗಿತ್ತು.

ಸ್ವಾಗತ: ಕಫೀಲ್ ಖಾನ್‌ ಮನವಿಗೆ ಪ್ರತಿಕ್ರಿಯಿಸಿರುವ ಪಿಣರಾಯಿ, ಅವರ ರೀತಿಯಲ್ಲಿ ನೆರವಿಗೆ ಬರುವ ವೈದ್ಯರನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.

ಕೋಯಿಕ್ಕೋಡ್‌ ವೈದ್ಯಕೀಯ ಕಾಲೇಜಿನ ಸೂಪರಿಂಟೆಂಡೆಂಟ್ ಅವರನ್ನು ಸಂಪರ್ಕಿಸುವಂತೆ ಪಿಣರಾಯಿ ತಿಳಿಸಿದ್ದಾರೆ.

**

*ಯಾರಿಗೆಲ್ಲ ಅಪಾಯ?

–ಹಂದಿಗಳ ಜತೆ ಸಂಪರ್ಕ ಹೊಂದಿರುವವರು ಹಾಗೂ ಹಂದಿಮಾಂಸ ಸೇವಿಸುವವರು

–ಬಾವಲಿಗಳ ಸಂಪರ್ಕಕ್ಕೆ ಬರುವ ರೈತರು

–ಬಾವಲಿಗಳು ಈಗಾಗಲೇ ರುಚಿ ನೋಡಿರುವ ಹಣ್ಣುಗಳನ್ನು ಸೇವಿಸುವವರು

–ಈಗಾಗಲೇ ಸೋಂಕು ಹೊಂದಿರುವವ ಜತೆ ಸಂಪರ್ಕದಲ್ಲಿರುವವರು

–ಸೋಂಕಿತರಿಗೆ ಚಿಕಿತ್ಸೆ ನೀಡುವವರು

*

ಮುನ್ನೆಚ್ಚರಿಕೆ ಏನು?

–ಹಂದಿಗಳು ಮತ್ತು ಹಂದಿ ಸಾಕಾಣಿಕೆದಾರರ ಜತೆ ಸಂಪರ್ಕ ತಡೆಗಟ್ಟುವುದು

–ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿನ ತೆರೆದ ಬಾವಿಯ ನೀರನ್ನು ಶುದ್ಧೀಕರಿಸಿ ಸೇವಿಸುವುದು, ಬಲೆಗಳಿಂದ ಬಾವಿಗಳನ್ನು ಮುಚ್ಚಿ ಬಾವಲಿಗಳು ಒಳಪ್ರವೇಶಿಸದಂತೆ ತಡೆಯುವುದು

–ಕಚ್ಚಾ ಖರ್ಜೂರ, ಸಂಸ್ಕರಿಸದ ಒಣಹಣ್ಣುಗಳ ಸೇವನೆ ಬೇಡ. ಸೋಂಕು ಹರಡುವುದು ನಿಲ್ಲುವ ತನಕ, ಸ್ವಚ್ಛವಾದ, ಬೇಯಿಸಿದ, ಮನೆಯಲ್ಲಿ ಸಿದ್ಧಪಡಿಸಿದ ಆಹಾರ ಸೇವನೆ ಉತ್ತಮ

–ಸೋಂಕು ಹರಡುವ ಲಕ್ಷಣಗಳ ಕುರಿತು ಎಚ್ಚರಿಕೆಯಿಂದಿರಿ ಹಾಗೂ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ

–ಸೋಂಕಿತರಿಗೆ ಚಿಕಿತ್ಸೆ ನೀಡುವವರು ಮುಖಗವಸು, ಕೈಗವಸುಗಳನ್ನು ಧರಿಸಿ ವೈಯಕ್ತಿಕ ಸುರಕ್ಷತೆಗೆ ಗಮನ ನೀಡುವುದು

**

ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು,  ಸೋಂಕು ಎಲ್ಲೆಡೆ ಹರಡುವ ಸಾಧ್ಯತೆ ಕಡಿಮೆ. ಭಯ ಬೇಡ.

–ಜೆ.‍‍ಪಿ. ನಡ್ಡಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry