ದಿ ಸ್ಕ್ವೇರ್‌

7

ದಿ ಸ್ಕ್ವೇರ್‌

Published:
Updated:
ದಿ ಸ್ಕ್ವೇರ್‌

ಅದೊಂದು ಚೌಕ. ಅದರ ಮುಂದೆ ಹೀಗೆ ಬರೆದಿದೆ. ‘ಈ ಚೌಕ ನಂಬಿಕೆ ಮತ್ತು ಕಾಳಜಿಯ ಪವಿತ್ರಸ್ಥಳ. ಇದರೊಳಗೆ ನಾವೆಲ್ಲರೂ ಹಕ್ಕು ಮತ್ತು ಬಾಧ್ಯತೆಗಳನ್ನು ಸಮನಾಗಿ ಹಂಚಿಕೊಳ್ಳೋಣ’. ಅದು ‘ಎಕ್ಸ್‌– ರಾಯಲ್‌’ ಎಂಬ ಮ್ಯೂಸಿಯಮ್‌ನ ಮಹತ್ವಾಕಾಂಕ್ಷೆಯ ಕಲಾಕೃತಿ. ಆದರೆ ಪ್ರಚಾರಕರ್ತರ ಪ್ರಕಾರ ಈ ಆಶಯ ಪ್ರಚಾರದ ದೃಷ್ಟಿಯಿಂದ ತೀರಾ ಸರಳವಾದದ್ದು. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಜನರ ಗಮನ ಸೆಳೆಯುವಂಥ ಸುದ್ದಿಯಾಗಬೇಕು ಎಂದರೆ ಏನಾದರೂ ವಿವಾದ ಸೃಷ್ಟಿಯಾಗಬೇಕು. ಹಾಗೊಂದು  ವಿವಾದ ಸೃಷ್ಟಿಸಿಯೇ ಆ ಕಲಾಕೃತಿಯನ್ನು ಬಿಡುಗಡೆ ಮಾಡಬೇಕು ಎನ್ನುವುವು ಪ್ರಚಾರಕರ್ತರ ಸಲಹೆ.

ಜೀವ ಉಳಿಸುವಂತೆ ಬೇಡಿಕೊಂಡು ಬಂದ ಹುಡುಗಿಗೆ ಸಹಾಯ ಮಾಡಲು ಹೋಗಿ ಎಕ್ಸ್‌ – ರಾಯಲ್‌ ಮ್ಯೂಸಿಯಮ್‌ನ ಮುಖ್ಯ ಕ್ಯುರೇಟರ್‌ ಕ್ರಿಸ್ಟಿಯನ್‌ನ ಮೊಬೈಲ್‌ ಮತ್ತು ಪರ್ಸ್‌ ಕಳುವಾಗುತ್ತದೆ. ಅದನ್ನು ಹುಡುಕಲು ಅಪಾರ್ಟ್‌ಮೆಂಟೊಂದರ ಎಲ್ಲ ಮನೆಗಳ ಬಾಗಿಲಿಗೂ ಪರ್ಸ್‌ ಮರಳಿಸುವಂತೆ ಚೀಟಿ ಬರೆದು ಹಾಕಿ ಬರುತ್ತಾನೆ. ಅದರಿಂದ ಅವನ ಪರ್ಸ್‌ ಮರಳಿ ಸಿಗುತ್ತದೆ. ಜತೆಗೆ ಕೆಲವು ದಿನಗಳ ನಂತರ ಒಬ್ಬ ಹುಡುಗನ ಪತ್ರವೂ ಬರುತ್ತದೆ. ಆ ಪತ್ರದಲ್ಲಿ ‘ನೀನು ಬರೆದು ಅಂಟಿಸಿದ ಚೀಟಿಯಿಂದ ನನ್ನ ಮನೆಯಲ್ಲಿ ನನ್ನನ್ನು ಕಳ್ಳ ಎಂದು ಅಂದುಕೊಂಡಿದ್ದಾರೆ. ಆದ್ದರಿಂದ ನೀನು ನನ್ನ ಮತ್ತು ನನ್ನ ಕುಟುಂಬದ ಕ್ಷಮೆ ಕೋರಬೇಕು’ ಎಂದು ಬರೆದಿರುತ್ತಾನೆ.

ತನ್ನನ್ನು ಸಂದರ್ಶಿಸಲು ಬಂದ ಪತ್ರಕರ್ತೆ ಆ್ಯನೆ ಮತ್ತೊಂದು ಪಾರ್ಟಿಯಲ್ಲಿ ಸಿಕ್ಕು ಅವಳ ಜತೆಗೆ ಕ್ರಿಸ್ಟಿಯನ್‌ಗೆ ದೈಹಿಕ ಸಂಪರ್ಕವೂ ಆಗುತ್ತದೆ.

ಹೀಗೆ ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವೇ ಇಲ್ಲದಂಥ ಹಲವು ಎಳೆಗಳನ್ನು ನೋಡುಗರ ಮನಸ್ಸಿನಲ್ಲಿ ಜೋಡಿಸುತ್ತಲೇ ಸಂಕೀರ್ಣವಾದ ಚೌಕವೊಂದನ್ನು ಕಟ್ಟುಲು ಪ್ರಯತ್ನಿಸುತ್ತದೆ ‘ದಿ ಸ್ಕ್ವೇರ್‌’ ಚಿತ್ರ.

ಸ್ವೀಡನ್‌, ಜರ್ಮನಿ, ಫ್ರಾನ್ಸ್‌ ಮತ್ತು ಡೆನ್ಮಾರ್ಕ್‌ ದೇಶಗಳ ಸಹನಿರ್ಮಾಣದಲ್ಲಿ ರೂಪುಗೊಂಡಿರುವ ಈ ಚಿತ್ರವನ್ನು ನಿರ್ದೇಶಿಸಿರುವುದು ರೂಬನ್‌ ಓಸ್ಟ್‌ಲುಂಡ್‌. 2017ರಲ್ಲಿ ರೂಪುಗೊಂಡ ಈ ಸಿನಿಮಾ ಕಾನ್ಸ್‌, ಟೊರೆಂಟೊ ಸೇರಿದಂತೆ ಜಗತ್ತಿನ ಹಲವು ಪ್ರಮುಖ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಕಂಡು ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದೆ.

ಕಲೆ, ಬಂಡವಾಳಶಾಹಿ ಪ್ರಭಾವ, ಸುದ್ದಿಯ ಹಪಹಪಿ, ಮೌಲ್ಯ– ಅಪಮೌಲ್ಯಗಳ ನಡುವಿನ ಸಂಘರ್ಷ, ಕಲೆಯ ಉದ್ದೇಶ ಮತ್ತು ಬದುಕಿನ ಉದ್ದೇಶಗಳ ಸಂಕೀರ್ಣ ಸಂಬಂಧಗಳನ್ನು ಸೂಕ್ಷ್ಮವಾಗಿ ಹೆಣೆದಿರುವ ಸಿನಿಮಾ ಇದು. ಕೊಂಚ ಅಸಂಗತ ಮಾದರಿಯಲ್ಲಿಯೇ ಇರುವ ‘ಸ್ಕ್ವೇರ್‌’ ಪ್ರೇಕ್ಷಕನ ತಾಳ್ಮೆಯನ್ನೂ ಬೇಡುತ್ತದೆ.

ಫೆಡ್ರಿಕ್‌ ವೆಂಜೆಜ್‌ ಅವರ ಕ್ಯಾಮೆರಾ ಪ್ರೇಕ್ಷಕನ ದೃಷ್ಟಿಯೊಟ್ಟಿಗೆ ದೃಷ್ಟಿಕೋನವನ್ನೂ ನಿರ್ದೇಶಿಸುವಷ್ಟು ಸಶಕ್ತವಾಗಿದೆ. ಮ್ಯೂಸಿಯಮ್‌ನ ಕ್ಯೂರೇಟರ್‌ ಪಾತ್ರದಲ್ಲಿ ಕ್ಲೇಸ್‌ ಬ್ಯಾಂಗ್‌ ಅವರ ಅಭಿನಯ ಪಾತ್ರದ ಸತ್ವವನ್ನೂ ಸಂಕೀರ್ಣತೆಯನ್ನು ಹೆಚ್ಚಿಸುವಂತಿದೆ.

ಎರಡೂವರೆ ಗಂಟೆ ಅವಧಿಯ ಈ ಚಿತ್ರವನ್ನು ಅಂತರ್ಜಾಲದಲ್ಲಿ https://bit.ly/2FLLLrB ಕೊಂಡಿ ಬಳಸಿ ವೀಕ್ಷಿಸಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry