ಮರವಂತೆ ರಸ್ತೆಯಲ್ಲಿ ಕಾರು ಓಡಿಸಲು ಇಷ್ಟ...

7

ಮರವಂತೆ ರಸ್ತೆಯಲ್ಲಿ ಕಾರು ಓಡಿಸಲು ಇಷ್ಟ...

Published:
Updated:
ಮರವಂತೆ ರಸ್ತೆಯಲ್ಲಿ ಕಾರು ಓಡಿಸಲು ಇಷ್ಟ...

ನನ್ನ ಊರು ದಾವಣಗೆರೆ. ನಾನು ಮೊದಲ ಬಾರಿ ಡ್ರೈವಿಂಗ್ ಕಲಿತದ್ದು ಬೆಂಗಳೂರಿನ ಜಯನಗರದ ಮಣಿ ಡ್ರೈವಿಂಗ್ ಸ್ಕೂಲ್‌ನಲ್ಲಿ. ಸ್ನಾತಕೋತ್ತರ ಪದವಿ ಮುಗಿಸಿ, ಯುಜಿಸಿ ಹಾಗೂ ಯುಪಿಎಸ್‌ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ಸಮಯದಲ್ಲಿ ಡ್ರೈವಿಂಗ್ ಕಲಿಯಲು ಮುಂದಾಗಿದ್ದು. ಆಗ ಡ್ರೈವಿಂಗ್ ಅನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

ನಾನು ಐಪಿಎಸ್‌ ಆಗಿ ಆಯ್ಕೆಯಾದ ಬಳಿಕ ಪೊಲೀಸ್‌ ಅಕಾಡೆಮಿಯಲ್ಲಿ ಡ್ರೈವಿಂಗ್ ಕುರಿತು ಒಂದು ವಿಷಯ ಇತ್ತು. ಅಲ್ಲಿ ಚಾಲನೆ ಕುರಿತು ತಿಳಿಯಬೇಕಾದ್ದು ಕಡ್ಡಾಯವಾಗಿತ್ತು. ಆಗ ಮತ್ತೆ ಡ್ರೈವಿಂಗ್‌ ಕಲಿಯಬೇಕಾಯಿತು. ಕಾರು ಚಾಲನೆ ಆಗ ಇನ್ನಷ್ಟು ಸುಧಾರಣೆಯಾಯಿತು.

ಕಾರು ಓಡಿಸುವ ಮೊದಲು ಸೈಕಲ್ ಹಾಗೂ ಲೂನಾ ಓಡಿಸುತ್ತಿದ್ದೆ. ಹೈಸ್ಕೂಲ್ ಓದುತ್ತಿದ್ದಾಗ ಸೈಕಲ್ ಓಡಿಸುತ್ತಿದ್ದೆ. ಕಾಲೇಜಿಗೆ ಬಂದಾಗ ನಮ್ಮ ತಂದೆಯವರ ಬಳಿ ಇದ್ದ ಲೂನಾವನ್ನು ನನಗೆ ಕೊಟ್ಟಿದ್ದರು. ಅದಕ್ಕೂ ಮೊದಲು ತಂದೆಯ ಬಳಿ ಇದ್ದ ಹೀರೋ ಮೆಜೆಸ್ಟಿಕ್ ಓಡಿಸುತ್ತಿದ್ದೆ. ಕಾಲೇಜಿನ ಕೊನೆಯ ವರ್ಷದಲ್ಲಿ ಕೈನೆಟಿಕ್ ಹೋಂಡಾ ಓಡಿಸಲು ಆರಂಭಿಸಿದ್ದೆ. ಆಗೆಲ್ಲಾ ಈಗಿನಂತೆ ಸ್ಕೂಟಿ–ಗೀಟಿ ಏನು ಇರಲಿಲ್ಲ. ನಂತರದ್ದೇ ಕಾರು...

ಮೊದಲ ಬಾರಿ ಕಾರು ಓಡಿಸಲು ಕಲಿತಾಗ ನನಗೆ ಸುಮಾರು 22ರಿಂದ 23 ವರ್ಷ ವಯಸ್ಸಿರಬಹುದು. ಮುಂದೊಂದು ದಿನ ನಾನು ಕಾರು ತೆಗೆದುಕೊಳ್ಳುತ್ತೇನೆ, ಡ್ರೈವಿಂಗ್ ಮಾಡಬೇಕಾದ ಸಂದರ್ಭ ಬರಬಹುದು ಎಂಬ ಮುಂದಾಲೋಚನೆಯೇ ನನ್ನನ್ನು ಡ್ರೈವಿಂಗ್‌ ಕಲಿಯಲು ಪ್ರೇರೇಪಿಸಿದ್ದು ಅನ್ನಿಸುತ್ತದೆ. ಅದೂ ಅಲ್ಲದೇ ಕಾರು ಚಾಲನೆ ಕಲಿಯುವುದೂ ಒಂದು ಕಲೆ. ಅದನ್ನು ಕಲಿತುಕೊಳ್ಳುವ ಪ್ರಕ್ರಿಯೆಯೇ ಸಂತೋಷ ಕೊಡುತ್ತದೆ.

ನನಗೆ ‘ಡ್ರೀಮ್ ಕಾರು’ ಎಂದೇನೂ ಇಲ್ಲ. ಹಾಗೆ ನೋಡಿದರೆ ನನ್ನ ಮಕ್ಕಳಿಗೆ, ಅದರಲ್ಲೂ ನನ್ನ ಸಣ್ಣ ಮಗನಿಗೆ ಕಾರಿನ ಬಗ್ಗೆ ಪ್ರೀತಿ ಜಾಸ್ತಿ. ಅವನಿಗೆ ನಾಲ್ಕು ವರ್ಷವಿದ್ದಾಗಲೇ ಎಲ್ಲಾ ಕಾರಿನ ಮಾಡೆಲ್‌ಗಳು, ಬೇರೆ ಬೇರೆ ಕಾರು ಕಂಪನಿಗಳ ಹೆಸರು ಎಲ್ಲವನ್ನೂ ಹೇಳುತ್ತಿದ್ದ. ಆದರೆ ನನಗೆ ಕಾರಿನ ಬಗ್ಗೆ ಏನೂ ತಿಳಿಯುವುದಿಲ್ಲ. ಯಾವ ಕಾರು ತಂದು ನಿಲ್ಲಿಸಿದರೂ ಅದರಲ್ಲಿ ಅನೇಕ ಬಾರಿ ಓಡಾಡಿದ್ದರೂ ನನಗೆ ಅದರ ಬಗ್ಗೆ ಏನೂ ತಿಳಿಯುವುದಿಲ್ಲ. ಬರೀ ಓಡಿಸೋದಷ್ಟೇ ಚೆನ್ನ ಅನ್ನಿಸುತ್ತದೆ. ಕಾರಿನ ಬಗ್ಗೆ ಈ ರೀತಿಯ ಮಾಡೆಲ್‌, ಅದರ ತಾಂತ್ರಿಕತೆ, ವೈಶಿಷ್ಟ್ಯ ಇದೇ ಎಂದು ವಿವರಿಸುವಷ್ಟು ತಿಳಿಯುವುದಿಲ್ಲ. ನನಗೆ ಅಂತಹ ಕ್ರೇಜ್‌ ಕಡಿಮೆಯೇ ಎನ್ನಬಹುದು. ಆದರೆ ಅದು ಅನಿವಾರ್ಯವಂತೂ ಹೌದಲ್ಲವೇ?

ಕಾರು ಓಡಿಸಿಕೊಂಡು ಇಂಥಲ್ಲಿಗೆ ಒಬ್ಬಳೇ ಹೋಗಬೇಕು ಎನ್ನಿಸುವಂತಹ ಯಾವುದೇ ನಿರ್ದಿಷ್ಟ ಜಾಗವಿಲ್ಲ. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಓಡಿಸಲು ಇಷ್ಟವಾಗುತ್ತದೆ. ಕಾರಣ, ಅಲ್ಲಿ ಟ್ರಾಫಿಕ್ ಕಡಿಮೆ ಇರುತ್ತದೆ. ನಿರಂತರವಾಗಿ, ಒಂದೇ ವೇಗದಲ್ಲಿ ಸಂಗೀತದ ಜೊತೆ ಜೊತೆಗೆ ಕಾರು ಓಡಿಸಿಕೊಂಡು ಹೋಗುವುದೇ ಖುಷಿ.

ಹಾಗೆಯೇ, ನಾನು ಅನೇಕ ಬಾರಿ ಲಾಂಗ್ ಡ್ರೈವ್ ಹೋಗಿದ್ದೇನೆ. ನನ್ನ ಮೊದಲ ಪೋಸ್ಟಿಂಗ್ ಉಡುಪಿಗೆ ಆಗಿತ್ತು. ಹಾಗಾಗಿ ಅನೇಕ ಬಾರಿ ಉಡುಪಿಯಿಂದ ಕುಂದಾಪುರಕ್ಕೆ ನನ್ನ ಡ್ರೈವರ್ ಇದ್ದರೂ ನಾನೇ ಜಿಪ್ಸಿ ಓಡಿಸಿಕೊಂಡು ಹೋಗಿಬಿಡುತ್ತಿದ್ದೆ. ಬೈಂದೂರಿನಿಂದ ಉಡುಪಿಗೂ ಜಿಪ್ಸಿ ಓಡಿಸುತ್ತಿದ್ದೆ. ಆ ಡ್ರೈವ್ ತುಂಬಾ ಇಷ್ಟವಾಗುತ್ತಿತ್ತು. ಯಾಕೆಂದರೆ ಅಲ್ಲೆಲ್ಲ ಒಂದು ಕಡೆ ಸಮುದ್ರ, ಇನ್ನೊಂದು ಕಡೆ ಊರು... ಸಾಲು–ಸಾಲು ತೆಂಗಿನಮರಗಳು, ಇನ್ನು ಮರವಂತೆಯಲ್ಲಿ ಒಂದು ಕಡೆ ಬೀಚ್ ಇನ್ನೊಂದು ಕಡೆ ಹಿನ್ನೀರು. ನೀರಿನ ಮಧ್ಯೆ ರಸ್ತೆ. ಅಲ್ಲಿ ಗಾಡಿ ಓಡಿಸುವುದು ತುಂಬಾ ಇಷ್ಟವಾಗುತ್ತಿತ್ತು. 

ನಾನು ಯಾದಗಿರಿಯಲ್ಲಿದ್ದಾಗ ಕಾರು ಓಡಿಸಿದ್ದು ಹೆಚ್ಚು. ಕಾರಣ, ನನಗೆ ಅಲ್ಲಿ ತುಂಬಾ ಸಮಯ ಸಿಗುತ್ತಿತ್ತು. ಆದರೆ ಅದು ತುಂಬಾ ಚಿಕ್ಕ ಊರು. ನಾನು ಇದ್ದಿದ್ದು ಭೀಮರಾಯನ ಗುಡಿ ಎಂಬ ಊರಿನಲ್ಲಿ. ಅಲ್ಲಿಂದ ಶಹಾಪುರಕ್ಕೆ ಐದಾರು ಕಿ.ಮೀ. ದೂರ. ಅಲ್ಲಿಗೆ ಸುಮ್ಮನೆ ಮಕ್ಕಳನ್ನು ಕರೆದುಕೊಂಡು ಬಂದು ಹೋಗುತ್ತಿದ್ದೆ. ಅದು ಕಿಷ್ಕಿಂಧೆಯಂತಹ ಪಟ್ಟಣ. ಕಿಕ್ಕಿರಿದ ಪ್ರದೇಶ. ರಸ್ತೆ ಕೂಡ ಚಿಕ್ಕದು. ರಸ್ತೆ ಯಾವುದು, ಫುಟ್‌ಪಾತ್‌ ಯಾವುದು ಎಂದೇ ಗೊತ್ತಾಗುವುದಿಲ್ಲ. ಜನ ರಸ್ತೆ ಮಧ್ಯೆಯೇ ಓಡಾಡುತ್ತಿರುತ್ತಾರೆ. ಅಂಥ ಜನನಿಬಿಢ ಪ್ರದೇಶದಲ್ಲೂ ನಾನು ಡ್ರೈವ್ ಮಾಡಿದ್ದೇನೆ ಎನ್ನುವುದೇ ಅಚ್ಚರಿ.

ಕಾರಷ್ಟೇ ಅಲ್ಲ, ಕೆಲವೊಮ್ಮೆ ನದಿ, ಸಮುದ್ರ ಇರುವ ಕಡೆ ಪ್ರವಾಸಕ್ಕೆ ಹೋದ ಸಮಯ ಬೋಟಿಂಗ್‌ ಮಾಡುವಾಗ ನಾನೂ ಸ್ವಲ್ಪ ಕೈಯಾಡಿಸುತ್ತೇನೆ. ನನಗೆ ಗೋ ಕಾರ್ಟಿಂಗ್ ಎಂದರೆ ಇಷ್ಟ. ಗೋ ಕಾರ್ಟಿಂಗ್‌ನಲ್ಲಿ ತುಂಬಾ ವೇಗವಾಗಿ ಹೋಗುತ್ತೇನೆ ಕೂಡ.

ಈಗಲೂ ನನ್ನ ಬಳಿ ಸ್ವಂತ ಕಾರಿಲ್ಲ. ನಮ್ಮ ಮನೆಯವರ ಬಳಿಯೂ ಕಾರಿಲ್ಲ. ನಮ್ಮ ಬಳಿ ಇರುವುದು ಆಫೀಸಿನ ಗಾಡಿ. ಅದು ಹೇಗೆಂದರೆ, ಬೇರೆ ಬೇರೆ ಇಲಾಖೆಗೆ ಹೋದಾಗ ಬೇರೆ ಬೇರೆ ರೀತಿಯ ಕಾರು ಕೊಡುತ್ತಾರೆ. ಹಾಗಾಗಿ ನಮ್ಮ ಮನೆಯವರು ಬೇರೆ ಬೇರೆ ಇಲಾಖೆಗೆ ಹೋದಾಗ ಭಿನ್ನ ರೀತಿಯ ಕಾರುಗಳನ್ನು ಬಳಸುತ್ತಾರೆ. ನನಗೆ ಕಾರಿನ ಮೇಲೆ ವ್ಯಾಮೋಹ ಕಮ್ಮಿ. ಆದರೂ ಕಾರಿನಲ್ಲಿ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದಾಗ, ಸಂಗೀತ, ಸಾಗುವ ದಾರಿ, ನಮ್ಮೊಂದಿಗಿರುವ ಜನರ ಒಡನಾಟ ಇವೆಲ್ಲವೂ ನೆನಪಿನಲ್ಲುಳಿಯುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry