ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ ಹೇಳ್ತೀನಿ ಬನ್ನಿ!

Last Updated 23 ಮೇ 2018, 19:30 IST
ಅಕ್ಷರ ಗಾತ್ರ

ಜಗತ್ತು ಮೂಕಿ ಚಿತ್ರಗಳನ್ನು ದಾಟಿ ‘ಟಾಕಿ’ ಚಲನಚಿತ್ರಗಳನ್ನು ಅಪ್ಪಿಕೊಳ್ಳುತ್ತಿತ್ತು. ಆದರೆ, ಹಲವು ದೇಶಗಳಲ್ಲಿ ತನ್ನ ಮೂಕಾಭಿನಯದಿಂದಲ್ಲೇ ಮನ್ನಣೆಗಳಿಸಿದ್ದ ಚಾರ್ಲಿ ಚಾಪ್ಲಿನ್‌‌ ಮಾತಿನ ಚಿತ್ರಗಳಲ್ಲಿ ಅಭಿನಯಿಸಲಿಲ್ಲ. ಅದಕ್ಕೆ ಆತ ನೀಡಿದ ಸಮರ್ಥನೆ ಭಾಷೆ ಒಂದು ಪ್ರದೇಶವನ್ನು ಮಾತ್ರ ತಲುಪುತ್ತದೆ. ಆದರೆ, ಮೂಕಾಭಿನಯಕ್ಕೆ ಆ ಮಿತಿಯಿಲ್ಲ ಎಂದು. ಆತ ಕೊನೆಯವರೆಗೂ ಒಂದೇ ಒಂದೂ ಚಿತ್ರಕ್ಕೂ ಧ್ವನಿ ನೀಡಲಿಲ್ಲ. ಇಂದಿಗೂ ಆತನ ಚಿತ್ರಗಳೆಂದರೆ ಎಲ್ಲರೂ ಇಷ್ಟಪಡುತ್ತಾರೆ. ಹೀಗೆ ತಮ್ಮದೇ ವಿಭಿನ್ನ ನಿಲುವು, ಸಿದ್ಧಾಂತಗಳಿಂದ ಒಂದೊಂದು ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿರುವವರು ಹಲವರಿದ್ದಾರೆ. ಅವರ ಸಾಲಿನಲ್ಲಿ ತಮಿಳುನಾಡು ರಾಜ್ಯದ ಸಿಗಡಿಕೂಟ್‌ನ ಕುಮಾರ್‌ ಶಾ ಸಹ ಒಬ್ಬರು.

ಸೈಕಲ್‌ನ ಮೂಲಕ ತಮಿಳುನಾಡಿನಿಂದ ದೆಹಲಿಯವರೆಗೂ ಎಂಟು ರಾಜ್ಯಗಳನ್ನು ಸುತ್ತಿದ್ದಾರೆ. ಇದು ಬರಿ ಸೈಕಲ್‌ ಪಯಣವಾಗಿದ್ದರೆ ಅದು ಹೆಚ್ಚು ಆಸಕ್ತಿದಾಯಕ ಆಗುತ್ತಿರಲಿಲ್ಲ. ಹಾಗಾದರೆ ಅದಕ್ಕಿಂತ ಹೆಚ್ಚಿನದು ಏನಿದೆ? ಅವರ ಪಯಣದ ಕಥೆಯನ್ನು ಅವರಿಂದಲೇ ಕೇಳಿ.

ಚಿಕ್ಕ ವಯಸ್ಸಿನಿಂದ ಕಥೆ ಕೇಳುವುದೆಂದರೆ ನನಗೆ ತುಂಬಾ ಇಷ್ಟ. ನನ್ನ ಮುತ್ತಜ್ಜ ಕೂರಿಸಿಕೊಂಡು ಕಥೆ ಹೇಳುತ್ತಿದ್ದರು. ಹಾಸ್ಟೆಲ್‌ನಲ್ಲಿಯೂ ನಾನು ಕಥೆ ಕೇಳುತ್ತಲೆ ಬೆಳೆದವನು. ಕಲೆ, ನಾಟಕ ಮತ್ತು  ಗೋಡೆಚಿತ್ರ ಬರೆಯುವುದರಲ್ಲಿ ತೊಡಗಿಸಿಕೊಳ್ಳುತ್ತಿದ್ದಂತೆ ನನಗೆ ಮಕ್ಕಳೊಂದಿಗೆ ಬೆರೆಯಬೇಕು ಎನಿಸಿ ಕಥೆ ಹೇಳುವ ಕಾಯಕವನ್ನೇ ಆಯ್ಕೆ ಮಾಡಿಕೊಂಡೆ.

2007ರಲ್ಲಿ ಅರಂ ಎನ್ನುವ ಫೌಂಡೇಷನ್‌ ಸ್ಥಾಪಿಸಿದೆ. 2013ನಲ್ಲಿ (ಕದೆ ಸೊಲ್ಲರೆವಾಂಗ್‌) ‘ಕಥೆ ಹೇಳ್ತೀನಿ’ ಬನ್ನಿ ಎನ್ನುವ ಗುಂಪು ಪ್ರಾರಂಭಿಸಿದೆ. ಕಳೆದ ಹತ್ತು ವರ್ಷಗಳಿಂದ ನಾನು ಏನು ಮಾಡುತ್ತಿದ್ದೇನೆ ಎಂಬುದನ್ನು ನಮ್ಮ ತಂದೆ–ತಾಯಿ ನೋಡುತ್ತಲೇ ಇದ್ದಾರೆ. ಪೂರ್ಣ ಮನಸ್ಸಿಲ್ಲದಿದ್ದರೂ ನನ್ನನ್ನು ಬೆಂಬಲಿಸುತ್ತಿದ್ದಾರೆ. ಆ ಪ್ರೀತಿಯನ್ನು ನಾನು ಗೌರವಿಸುತ್ತೇನೆ.

ನಾನು ಹೇಳುವ ಕಥೆಗಳಲ್ಲಿ ಅದಿ ಮತ್ತು ಅಂತ್ಯ ಎನ್ನುವುದು ಇರುವುದಿಲ್ಲ. ಹೋಗಲಿ ಒಂದು‌‌‌‌‌‌ ಸಾರಾಂಶವಾದರೂ ಇದೆಯೇ ಎಂದು ನೀವು ಕೇಳಿದರೆ ಅದು ಸಹ ಇರುವುದಿಲ್ಲ ಎನ್ನುವ ಉತ್ತರವನ್ನು ನಾನು ನೀಡುತ್ತೇನೆ. ಆದರೆ, ನನ್ನ ಕಥೆಗಳಲ್ಲಿ ಸತ್ಯವಿದೆ. ಯಾಕೆಂದರೆ ನಾನು ಹೇಳುವ ಎಲ್ಲಾ ಕಥೆಗಳು ನಾನು ಸೃಷ್ಟಿಸಿದಂಥವಲ್ಲ. ಅದು ಕಾಗಕ್ಕ–ಗುಬ್ಬಕ್ಕನಂತಹ ಕಥೆಗಳಂತೂ ಅಲ್ಲವೇ ಅಲ್ಲ. ಎಲ್ಲವನ್ನೂ ನಾನು ಸಂಗ್ರಹಿಸಿರುವುದು ನಮ್ಮ ಹಿರಿಯರಿಂದ. ನಮ್ಮ ಹಳೆಯ ತಲೆಮಾರಿನವರು ಅನುಭವಿಸಿದ, ನೋಡಿದ ನೈಜ ಕಥನಗಳವು.

ಮಕ್ಕಳಿಗೆ ಕಥೆಗಳನ್ನು ಹೇಳುವಾಗ ಅವರೊಳಗೆ ಉಂಟಾಗುವ ಉನ್ಮಾದವನ್ನು ನಾನು ಎಂಜಾಯ್‌ ಮಾಡುತ್ತೇನೆ. ನಾನು ಇಲ್ಲಿಯವರೆಗೂ ಸಾವಿರಾರು ಮಕ್ಕಳಿಗೆ ಕತೆ ಹೇಳಿದ್ದೇನೆ. ಬಹಳಷ್ಟು ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಏಕೆಂದರೆ ಸರ್ಕಾರಿ ಶಾಲೆಯ ಮಕ್ಕಳಿಗೆ ಮನರಂಜನಾ ಮಾಧ್ಯಮಗಳ ಕೊರತೆ ಹೆಚ್ಚಾಗಿದೆ.

ಒಂದು ಹಳ್ಳಿಯಲ್ಲಿ ಒಂದು ಸ್ಟೋರಿ ಕ್ರೀಯೆಟ್‌ ಮಾಡಿಕೊಳ್ಳುತ್ತಿದ್ದೆ. ಅದನ್ನು ಒಂದು ಶಾಲೆಯ ಮೂರು ತರಗತಿಗಳ (6,7 ಮತ್ತು 8) ವಿದ್ಯಾರ್ಥಿಗಳಿಗೆ ಹೇಳುತ್ತಿದ್ದೆ. ಒಬ್ಬರಿಗೆ ಹಳೆಯ ಕಥೆ, ಇನ್ನೊಬ್ಬರಿಗೆ ಪ್ರಸಕ್ತ ಸ್ಥಿತಿ, ಮೂರನೆಯವರಿಗೆ ಮುಂದಿನ ದಿನಗಳಲ್ಲಿ ಏನಾಗಬಹುದು ಎಂದು ಚಿತ್ರಿಸುವಂತೆ ಹೇಳಲಾಗುತ್ತಿತ್ತು. ಅವರು ಅವರದೇ ದೃಷ್ಟಿಕೋನದಲ್ಲಿ ಕಥೆಗಳನ್ನು ಸೃಷ್ಟಿಸುತ್ತಿದ್ದರು. ಆ ಮೂಲಕ ಮಕ್ಕಳ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ನಾನು ಮಾಡುತ್ತಿದ್ದೆ.

ಭೇಟಿ ನೀಡಿದ ಪ್ರತಿ ಪ್ರದೇಶದ ಹಳೆ ಕಥೆಗಳನ್ನು ಸಂಗ್ರಹಸಿಸುತ್ತಿದ್ದೆನೆ. ನಾವು ಇಂದು ಮಲಗುವ ಮನೆ. ಹಿಂದೆ ಕಾಡಾಗಿದ್ದು, ಬಸ್‌ ನಿಲ್ದಾಣಗಳು ಕೆರೆಯಾಗಿದ್ದನ್ನು ನಾನು ಕೇಳಿದ್ದೇನೆ.

ತಮಿಳುನಾಡಿನಲ್ಲಿ ಶಾಲೆ ಮಕ್ಕಳಿಗೆ ಕತೆ ಹೇಳುವಾಗ ನನಗೆ ಭಾಷಾ ಸಮಸ್ಯೆಯಾಗಲಿಲ್ಲ. ಆದರೆ ನಾನು ಕೇರಳ, ಕರ್ನಾಟಕ ಎಂದು ಹತ್ತಾರು ರಾಜ್ಯಗಳನ್ನು ಸುತ್ತುವಾಗ ಅಲ್ಲಿನ ಭಾಷೆಯಲ್ಲಿ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಆಗ ನಾನು ತೊಗಲು ಗೊಂಬೆಯಾಟದ ಮೂಲಕ ಕಥೆ ಹೇಳುವುದನ್ನು ಶುರು ಮಾಡಿಕೊಂಡೆ. ಲ್ಯಾಂಡ್‌ಸ್ಕೇಪ್‌ ಸ್ಟೋರಿಗಳನ್ನು ಸಂಗ್ರಹಿಸಿದೆ.

ಕಥೆ ಹೇಳುತ್ತಲೇ ಇನ್ನಷ್ಟು ಕಥೆಯನ್ನು ಹುಡುಕಬೇಕು. ಬೇರೆ ಬೇರೆ ರಾಜ್ಯದ ಕಥೆಗಳನ್ನು ಸಂಗ್ರಹಿಸಬೇಕು ಅನಿಸಿತು. ಕಳೆದ ವರ್ಷ ಜುಲೈ 7ರಂದು ಸೈಕಲ್‌ ಪಯಾಣವನ್ನು ತಮಿಳುನಾಡಿನ ಪೊಳ್ಳಚ್ಚಿಯಿಂದ ಪ್ರಾರಂಭಿಸಿದೆ ಎಂದು ಮಾತಿಗೊಂದು ಅಲ್ಪ ವಿರಾಮ ಹಾಕಿದರು.

‘ಆಧುನಿಕ ಜಗತ್ತು ಎಷ್ಟೊಂದು ಬದಲಾಗಿದೆ. ರೈಲು, ವಿಮಾನ ಎಂದು ಜನ ಮುಂದೆ ಹೋಗುತ್ತಿದ್ದಾರೆ. ನೀವ್ಯಾಕೆ ಸೈಕಲ್‌ ತುಳಿಯುತ್ತಿದ್ದೀರಾ’ ಎಂದು ಪ್ರಶ್ನಿಸಿದರೆ, ಅವರು ಸುದೀರ್ಘ ಉತ್ತರವನ್ನೇ ನೀಡಿದರು: ನಾನು ಸೈಕಲ್‌ನಲ್ಲಿ ಹೋಗುವುದರಿಂದ ಜನರನ್ನು ಮಾತನಾಡಿಸಲು ಸಾಧ್ಯವಾಗುತ್ತದೆ. ಮುಖಾಮುಖಿ ಪರಿಚಯ ಮಾಡಿಕೊಂಡು ಮಾತನಾಡಲು ಸಾಧ್ಯ. ನಾನು ಯಾರು, ಎಲ್ಲಿಂದ ಬಂದೆ, ನನ್ನ ಕಥೆ ಏನು, ನಾನು ಕಂಡುಕೊಂಡದ್ದು ಏನು ಎನ್ನುವುದನ್ನು ಇತರರಿಗೆ ತಿಳಿಸುತ್ತೇನೆ. ಅವರಿಂದಲೂ ತಿಳಿದುಕೊಳ್ಳುತ್ತೇನೆ. ನೀವು ಹೇಳಿದ ಅಧುನಿಕತೆಯಿಂದ ಇದು ಸಾಧ್ಯವೇ? 

ನೀವೇಕೆ ಪಯಣ ಮಾಡುತ್ತಿದ್ದೀರ ಎಂದು ಜನ ಪ್ರಶ್ನೆ ಮಾಡಲು ಪ್ರಾರಂಭಿಸಿದರು. ಸೈಕಲ್‌ ಮೂಲಕ ಜಾಗೃತಿ ಮೂಡಿಸುತ್ತಿದ್ದೀರಾ ಎಂದು ಸಹ ಕೇಳಿದರು. ಇಲ್ಲ ಹೀಗೆ ಕಥೆ ಕೇಳುತ್ತ, ಹೇಳುತ್ತ ಸಾಗುತ್ತಿದ್ದೇನೆ ಎಂದಾಗ ನಕ್ಕವರೂ ಉಂಟು. ತಲೆ ಸರಿ ಇದೆಯಾ, ಹುಚ್ಚೇನಾದರೂ ಹಿಡಿದಿದೆಯಾ ಎಂದು ಕೇಳಿದವರೂ ಇದ್ದಾರೆ. ಅದೆಲ್ಲದಕ್ಕೂ ನಾನು ಎಂದೂ ತಲೆ ಕೆಡಿಸಿಕೊಂಡಿಲ್ಲ. ಇದರಿಂದಾಚೆಗೂ ನಾನು ಜನರ ಅಪಾರ ಪ್ರೀತಿ ಜೊತೆಗೆ ಅಲ್ಲಿನ ವೈವಿಧ್ಯತೆಗಳನ್ನು ತಿಳಿದುಕೊಂಡಿದ್ದೇನೆ. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಭಾಷೆ, ಸಂಸ್ಕೃತಿ ಭಿನ್ನ. ಪ್ರತಿ ಊರಿಗೂ ತನ್ನದೇ ಆದ ಕಥೆಗಳಿವೆ. ಇದು ನಿಜಕ್ಕೂ ಸ್ವಾರಸ್ಯಕರ. ಆ ಕಥೆಗಳು ಮುಂದಕ್ಕೆ ಹೋಗದೆ ಅಲ್ಲೇ ಉಳಿದು ಬಿಡುತ್ತಿವೆ. ಅವುಗಳನ್ನು ಉಳಿಸಿಕೊಳ್ಳಬೇಕಿದೆ.

ಭಾಷೆಗಳನ್ನು ದಾಟಿ ಮಕ್ಕಳಿಗೆ ಕಥೆ ಹೇಳಲು ಸಾಧ್ಯವಾ ಎನ್ನುವುದನ್ನು ಅಹ್ಮದಾಬಾದ್‌ನಲ್ಲಿ ಪ್ರಯತ್ನ ಮಾಡಿದೆ. ಭಾಷೆಯನ್ನು ದಾಟಿಯೂ ಕಥೆಯನ್ನು ಮಕ್ಕಳಿಗೆ ತಲುಪಿಸಬಹುದು ಎಂದು ಮೊದಲಬಾರಿಗೆ ಕಂಡುಕೊಂಡೆ.

ತಮಿಳುನಾಡಿನಲ್ಲಿ ಬಹಳಷ್ಟು ಮಂದಿಗೆ ಕರ್ನಾಟಕದ ಬಗ್ಗೆ ಒಂದು ಇಮೇಜ್‌ ಇದೆ. ಕಾವೇರಿ ವಿಷಯವಾಗಿ ಕನ್ನಡಿಗರು ತಮಿಳುನಾಡಿನವರನ್ನು ದ್ವೇಷಿಸುತ್ತಾರೆ ಎಂದಾದರೆ, ಅದು ಆ ವಿಷಯಕ್ಕಷ್ಟೇ ಸೀಮಿತ ಎಂದೆನಿಸಿತು. ಏಕೆಂದರೆ, ಕರ್ನಾಟಕದಲ್ಲಿ ಯಾರೂ ನನ್ನನ್ನು ಕೀಳಾಗಿ ನೋಡಲಿಲ್ಲ. ಬಹಳಷ್ಟು ಜನ ಸಹಾಯ ಮಾಡಿದರು. ತಮಿಳುನಾಡಿನ ಬಗ್ಗೆಯೂ ಕರ್ನಾಟಕದ ಜನತೆಗೆ ಒಂದು ಇಮೇಜ್‌ ಇದೆ. ಕರ್ನಾಟಕದ ಗಡಿ ಭಾಗದಲ್ಲಿನ ಶಾಲೆಗಳಲ್ಲೂ ನಾನು ಗೊಂಬೆ ಕಥೆ ಹೇಳಿದ್ದೇನೆ.

ಸರ್ಕಾರಿ ಶಾಲೆಗಳನ್ನು ಕಲರ್‌ಪುಲ್‌ ಮಾಡುವ ಕೆಲಸ: ತಮಿಳುನಾಡಿನ ಕಾರಮಡೆ, ಕೊಯಮತ್ತೂರು, ಕೊಲೂರು, ಚಮನಾಮುತ್ತುರು, ತೀರ್ಥಹಳ್ಳಿ ಮತ್ತು ಚಿದಂಬರಂ ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯುವ ಕೆಲಸವನ್ನು ಪ್ರಾರಂಭಿಸಿದ್ದೇನೆ. ಇದಕ್ಕೆ ಅಲ್ಲಿನ ಶಾಲೆಯ ಶಿಕ್ಷಕರು ಹಣ ಒದಗಿಸಲು ಪ್ರಾರಂಭಿಸಿದ್ದಾರೆ.

ಕಥೆಯ ಒಳಹೊಕ್ಕು ಹಲವು ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಈ ಪಯಣದಲ್ಲಿ ನಾನು ಪ್ರತಿದಿನವೂ ಹೊಸ ಅನುಭವಗಳನ್ನು ಪಡೆಯುತ್ತಿದ್ದೇನೆ. ಅವು ಮುಂದಿನ ಪಯಣಕ್ಕೆ ನನ್ನನ್ನು ಅಣಿಗೊಳಿಸುತ್ತಿವೆ ಎಂದು ಮಾತಿಗೆ ಪೂರ್ಣ ವಿರಾಮ ಹಾಕಿದರು ಕುಮಾರ್‌.

ಇದು ಜಾಲಿ ರೈಡ್‌ ಅಲ್ಲ !
ನಾನು ಸೈಕಲ್‌ನಲ್ಲಿ ಪ್ರವಾಸ ಮಾಡಿದ ಎಲ್ಲಾ ದಿನಗಳೂ ನಾನು ಊಹಿಸಿಕೊಂಡಂತೆ ಸುಗಮವಾಗಿರಲಿಲ್ಲ. ಸೈಕಲ್‌ ಪದೇ ಪದೇ ಪಂಚರ್‌ ಆಗುತ್ತಿತ್ತು. ಎಲ್ಲಿ ಪಂಚರ್‌ ಆಗಿದೆ ಎಂದು ನಾಲಿಗೆಯಿಂದಲೇ ಸೈಕಲ್‌ ಟ್ಯೂಬ್ ನೆಕ್ಕಿ ನೋಡುತ್ತಿದ್ದೆ! ಕೆಲವು ರಾತ್ರಿಗಳು ಉಳಿದುಕೊಳ್ಳಲು ಜಾಗವೇ ಸಿಗುತ್ತಿರಲಿಲ್ಲ. ರಸ್ತೆ ಬದಿಯಲ್ಲಿ, ಹೈವೆಗಳಲ್ಲಿ ಮಲಗಿದ್ದೇನೆ. ದುರ್ಗಮ ಹಾದಿಯಲ್ಲಿ ಹಲವು ಬಾರಿ ಎಡವಿ ಬಿದ್ದು ಗಾಯ ಮಾಡಿಕೊಂಡಿದ್ದುಂಟು. ತೀವ್ರ ಜ್ವರದಿಂದ ಬಳಲಿದ್ದೂ ಇದೆ. ಗಾಯಗೊಂಡು ಬಸವಳಿದಾಗ ಈ ಪ್ರಯಾಣವನ್ನು ಅರ್ಧಕ್ಕೆ ಮುಗಿಸಿಬಿಡಬೇಕು ಎನಿಸಿದ್ದಿದೆ. ಆದರೆ, ಹಾಗೆ ಅನ್ನಿಸಿದಾಗಲೆಲ್ಲ ನಾನು ಇಷ್ಟು ದೂರ ಬಂದದ್ದು ಯಾಕೆ ಎಂಬ ಪ್ರಶ್ನೆ ನನ್ನಲ್ಲಿ ಮೂಡುತ್ತಿತ್ತು. ಪ್ರಶ್ನೆ ಮೂಡಿದ ಕೂಡಲೇ ನಾನು ಮತ್ತೆ ಮುಂದುವರೆಯುತ್ತಿದ್ದೆ. ನನ್ನ ಸಾಮರ್ಥ್ಯವನ್ನು ನಾನು ಕಂಡುಕೊಳ್ಳಬೇಕಾಗಿತ್ತು. ಅಮ್ಮ ಆನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನುವ ಕರೆ ಬಂದಾಗ ವಿಚಲಿತನಾಗಿದ್ದೆ. ಮತ್ತೆ ಅವರೇ ಕರೆ ಮಾಡಿ ಆತಂಕಪಡುವ ಅಗತ್ಯ ಇಲ್ಲ ಎಂದು ವೈದ್ಯರು ಹೇಳಿದ್ದಾರೆ ಎಂದಾಗ ನನಗೆ ಸಮಾಧಾನ ಆಯಿತು.

8 ರಾಜ್ಯಗಳು; ಕೈಯಲ್ಲಿ ₹ 200!
ನಾನು ತಮಿಳುನಾಡು ಬಿಟ್ಟಾಗ ನನ್ನ ಕೈಯಲ್ಲಿ ಇದ್ದದ್ದು ₹ 200 ಮಾತ್ರ. ಈ ಜಗತ್ತಿನಲ್ಲಿ ಎಲ್ಲಿಯೂ ಉಳಿದುಕೊಳ್ಳಲು, ಊಟ ಮಾಡಲು ಮೋಸವಾಗುವುದಿಲ್ಲ. ಯಾರಾದರೂ ಒಬ್ಬರು ಸಹಾಯಮಾಡುತ್ತಾರೆ. 

ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗೋವಾ, ಗುಜರಾತ್‌, ಹರಿಯಾಣ, ರಾಜಸ್ಥಾನ, ದೆಹಲಿ ವರೆಗೂ ಸೈಕಲ್‌ನಲ್ಲಿ ಪ್ರಯಾಣವನ್ನು ಬೆಳೆಸಿದೆ. ಅಲ್ಲಿಂದ ಉತ್ತರಾಖಂಡ್‌ಗೆ ನಡೆದುಕೊಂಡೇ ಪ್ರಯಾಣ ಮುಂದುವರಿಸುತ್ತಿದ್ದೇನೆ. ಇಲ್ಲಿಂದ ಮತ್ತೆ ದೆಹಲಿಗೆ ಹೋಗಲಿದ್ದು, ಸೈಕಲ್‌ನಲ್ಲಿ ಈಶಾನ್ಯ ರಾಜ್ಯಗಳನ್ನು ಸುತ್ತಿಕೊಂಡು ತಮಿಳುನಾಡಿಗೆ ಹೋಗಲಿದ್ದೇನೆ ಎನ್ನುತ್ತಾರೆ ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT