ಶುಕ್ರವಾರ, ಏಪ್ರಿಲ್ 3, 2020
19 °C

ಮೊಸರು ಪ್ರಿಯೆ ‘ಚಿನ್ನು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಸರು ಪ್ರಿಯೆ ‘ಚಿನ್ನು’

ಸದಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವುದರಿಂದ ಅಡುಗೆ ಬಗ್ಗೆ ಆಸಕ್ತಿ ಇದ್ದರೂ, ನನ್ನ ಪಾಕ ಪ್ರಾವೀಣ್ಯವನ್ನು ಪ್ರಯೋಗಿಸಲು ಸಮಯ ಸಿಗುವುದು ವಿರಳ. ಹಾಗಾಗಿ ಅಡುಗೆ ಮಾಡುವುದು ಅಪರೂಪ. ಬಿಡುವಾದಾಗ ಚಪಾತಿ, ಅನ್ನ, ರಸಂ ಮಾಡುತ್ತೇನೆ. ಗೂಗಲ್‌, ಯೂಟ್ಯೂಬ್‌ನಲ್ಲಿ ನೋಡಿ ಹೊಸ ರುಚಿಗಳನ್ನು ಪ್ರಯತ್ನಿಸುತ್ತಿರುತ್ತೇನೆ. ಸಾಮಾನ್ಯವಾಗಿ ಅಪ್ಪ, ಅಮ್ಮನ ಮೇಲೆಯೇ ನನ್ನ ಪ್ರಯೋಗ.

ನಾನು ಮಾಡಿದ ಮೊದಲ ಅಡುಗೆ ಚಪಾತಿ. ಅಪ್ಪ, ಅಮ್ಮನಿಗೆ ಮಾಡಿ ಬಡಿಸಿದ್ದೆ. ಅಪ್ಪ ಅಮ್ಮ ಅದನ್ನು ತಿಂದು ಚೆನ್ನಾಗಿದೆ ಎಂದಿದ್ದರು. ನಂತರ ನಾನು ರುಚಿ ನೋಡಿದಾಗಲೇ ತಿಳಿದಿದ್ದು, ಅದು ತುಂಬಾ ಉಪ್ಪಾಗಿತ್ತು ಎಂದು. ಮಾತ್ರವಲ್ಲ ತುಂಬಾ ಗಟ್ಟಿಯಾಗಿ ಚಪಾತಿ ರೊಟ್ಟಿಯಾಗಿತ್ತು.

ಸಸ್ಯಾಹಾರದ ಎಲ್ಲ ಆಹಾರಗಳು ನನಗೆ ಪ್ರಿಯವಾಗುತ್ತವೆ. ಆದರೆ, ಜೊತೆಗೆ ಮೊಸರು ಇರಲೇಬೇಕು. ದಕ್ಷಿಣ ಭಾರತದ ಅಡುಗೆಗಳು ಅಚ್ಚುಮೆಚ್ಚು. ಅದರಲ್ಲೂ ತರಕಾರಿ ಪಲಾವ್‌ ಹಾಗೂ ಪುಳಿಯೋಗರೆ ಹೆಚ್ಚು ಇಷ್ಟಪಟ್ಟು ಸೇವಿಸುತ್ತೇನೆ. ಯಾವುದೇ ಖಾದ್ಯ ಚೆನ್ನಾಗಿರದಿದ್ದರೂ ಮೊಸರಿನೊಂದಿಗೆ ಕೊಟ್ಟರೆ ತಿನ್ನುತ್ತೇನೆ.

ಮನೆ ಅಡುಗೆಗಳೇ ನನ್ನ ಆದ್ಯತೆ. ಸ್ನೇಹಿತರು, ಆಪ್ತರ ಜೊತೆ ಹೊರಗಡೆ ಹೋದಾಗ ಅನಿವಾರ್ಯ ಎಂದರೆ ಮಾತ್ರ ಹೋಟೆಲ್‌ ಊಟ ಮಾಡುತ್ತೇನೆ. ಚಿತ್ರೀಕರಣದ ಸಮಯದಲ್ಲಿ ಮನೆಯಿಂದಲೇ ಊಟ ತೆಗೆದುಕೊಂಡು ಹೋಗುತ್ತೇನೆ. ನಿತ್ಯ ಓಟ್ಸ್‌ ತಿನ್ನುತ್ತೇನೆ. ಓಟ್ಸ್‌ ಅನ್ನು ಹಾಲಿನಲ್ಲಿ ಬೇಯಿಸಿ, ಸ್ಟ್ರಾಬೆರಿ, ಮಾವಿನ ಹಣ್ಣು, ಡ್ರೈಫ್ರೂಟ್ಸ್‌ ಹಾಕಿ ಫ್ರಿಜ್‌ನಲ್ಲಿಟ್ಟು ಬೆಳಗ್ಗಿನ ತಿಂಡಿಗೆ ಸೇವಿಸುತ್ತೇನೆ.

ಮಧ್ಯಾಹ್ನದ ಊಟಕ್ಕೂ ಮನೆಯಿಂದಲೇ ಚಪಾತಿ, ಅನ್ನ ತೆಗೆದುಕೊಂಡು ಹೋಗುತ್ತೇನೆ. ನಡುವಿನಲ್ಲಿ ರಾಗಿಗಂಜಿ ಸೇವಿಸುತ್ತೇನೆ. ಸೌತೆಕಾಯಿ, ಕಲ್ಲಂಗಡಿಯನ್ನು ಆಗಾಗ್ಗೆ ತಿನ್ನುತ್ತೇನೆ. ದೇಹವನ್ನು ತಂಪಾಗಿಡುವ ಆಹಾರ ತಿನ್ನುತ್ತೇನೆ. ಅಮ್ಮ ಮಾಡುವ ಎಲ್ಲ ಅಡುಗೆಗಳು ಇಷ್ಟ. ಅದರಲ್ಲೂ ರಸಂ, ಗೊಜ್ಜವಲಕ್ಕಿ, ತರಾವರಿ ತಂಬುಳಿ, ಗೊಜ್ಜುಗಳೆಂದರೆ ಬಹುಪ್ರೀತಿ.

ಮದುವೆಯಾಗುವ ಹುಡುಗನಿಗೆ ಸ್ಪಲ್ಪ ಮಟ್ಟಿಗಾದರೂ ಅಡುಗೆಯ ಪರಿಚಯವಿರಬೇಕು. ಜೀವನ ಸಾಗಿಸಲು ಎಲ್ಲರೂ ಎಲ್ಲವನ್ನು ಕಲಿತಿರಬೇಕಾದ್ದು ಅನಿವಾರ್ಯ. ಕನಿಷ್ಠ ಅಡುಗೆ ಜ್ಞಾನವಿರಬೇಕು. ನಾನು ಮನೆಯಲ್ಲಿ ಇಲ್ಲದಾಗ ನನ್ನ ಮಕ್ಕಳು, ಕುಟುಂಬ ಸದಸ್ಯರು ಹೋಟೆಲ್‌ ಊಟದ ಮೊರೆಹೋಗುವುದನ್ನು ತಪ್ಪಿಸುವಷ್ಟಾದರೂ ಅಡುಗೆ ಕಲಿತಿರುವುದು ಒಳ್ಳೆಯದು. ಅಡುಗೆ ಆತನಿಂದ ಸಾಧ್ಯವೇ ಇಲ್ಲ ಎಂದಾದರೆ ನಾನೇ ಅನಿವಾರ್ಯವಾಗಿ ನಿರ್ವಹಿಸಬಲ್ಲೆ.

ಗೊಜ್ಜವಲಕ್ಕಿ

ಬೇಕಾಗುವ ಸಾಮಗ್ರಿಗಳು: ಅವಲಕ್ಕಿ 1 1/2 ಕಪ್, ಹುಣಸೆ ಹಣ್ಣು, ರಸಂ ಪೌಡರ್ 2 ಚಮಚ, ತುರಿದ ಕೊಬ್ಬರಿ 1 ಕಪ್‌, ಕರಿಬೇವು, ಸಾಸಿವೆ, ಹುರಿದು ಸಿಪ್ಪೆ ತೆಗೆದ ಶೇಂಗಾ, ಎಳ್ಳು, ಕಡಲೆ ಬೇಳೆ, ಉದ್ದಿನ ಬೇಳೆ, ಅರಿಶಿನ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಹುಣಸೆ ಹಣ್ಣನ್ನು ನೀರಲ್ಲಿ ನೆನಸಿ ನಂತರ ಅದನ್ನು ಕಿವುಚಿ ಹುಣಸೆ ರಸ ತಯಾರಿಸಿಕೊಳ್ಳಬೇಕು. ಒಂದು ಬೌಲ್‌ಗೆ ರಸಂ ಪುಡಿ, ಎಳ್ಳಿನಪುಡಿ, ಇಂಗು, ಬೆಲ್ಲ ಹಾಕಿ ಮಿಶ್ರಣಮಾಡಬೇಕು. ನಂತರ ಒಗ್ಗರಣೆಗೆ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಅರಿಶಿನ, ಕರಿಬೇವು ಹಾಕಿ ಒಗ್ಗರಣೆ ತಯಾರಿಸಿಟ್ಟುಕೊಳ್ಳಬೇಕು. ನಂತರ ಕಿವುಚಿಟ್ಟ ಹುಣಸೆ ನೀರಿಗೆ ಉಪ್ಪು ಬೆರೆಸಿ ಅವಲಕ್ಕಿಯನ್ನು ಅದರಲ್ಲಿ ನೆನೆಸಬೇಕು. ನಂತರ ಒಗ್ಗರಣೆ, ತಯಾರಿಸಿಟ್ಟ ಮಿಶ್ರಣ ಹಾಕಿ ಬೆರೆಸಿದರೆ ಗೊಜ್ಜವಲಕ್ಕಿ ಸವಿಯಲು ಸಿದ್ಧ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)