ಕನಸುಗಳ ಬೆನ್ನಟ್ಟಿ ಬಂದ ರಾಜೇಶ್

4

ಕನಸುಗಳ ಬೆನ್ನಟ್ಟಿ ಬಂದ ರಾಜೇಶ್

Published:
Updated:
ಕನಸುಗಳ ಬೆನ್ನಟ್ಟಿ ಬಂದ ರಾಜೇಶ್

ನನ್ನ ಹೆಸರು ರಾಜೇಶ್ ಬಿ ಪಿ. ಮೂಲತಃ ಶಿರಸಿಯವನು. ಓದಿದ್ದು ಪದವಿ. ನನಗೆ ಜನರು ಕೊಟ್ಟ ಹೆಸರು ರಾಜೇಶ್ ಧ್ರುವ. ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರಾವಾಹಿಯ ಅಖಿಲ್‌ ಆಗಿ ಎಲ್ಲರಿಗೂ ಚಿರಪರಿಚಿತ.

ನನಗೆ ಬಾಲ್ಯದಿಂದಲೂ ಡಾನ್ಸ್ ಮತ್ತು ನಟನೆ ಕಡೆಗೆ ತುಂಬಾ ಒಲವು. ಅದು ಎಷ್ಟರ ಮಟ್ಟಿಗೆ ಎಂದರೆ, ನಾನು ದ್ವಿತೀಯ ಪಿಯುಸಿ ಓದುತ್ತಿರುವಾಗಲೇ ನಮ್ಮೂರು ಶಿರಸಿಯಲ್ಲಿ ಧ್ರುವ ಸ್ಕೂಲ್ ಆಫ್ ಡಾನ್ಸ್ ಅನ್ನುವ ನೃತ್ಯಶಾಲೆಯನ್ನು ಪ್ರಾರಂಭಿಸಿದೆ. ಆಗ ಜನ ನನ್ನನ್ನು ಧ್ರುವ ಎನ್ನುವ ಹೆಸರಿಂದಲೇ ಕರೆಯೋಕೆ ಪ್ರಾರಂಭಿಸಿದರು. ಬರಬರುತ್ತಾ ರಾಜೇಶ್ ಧ್ರುವ ಎನ್ನುವ ಹೊಸ ಅಂಕಿತವನ್ನು ಉಡುಗೊರೆಯಾಗಿ ನೀಡಿದರು. ಈಗ ಚಂದನವನದಲ್ಲೂ ನಾನು ರಾಜೇಶ್ ಧ್ರುವ ಅಂತಾನೇ ಚಿರಪರಿಚಿತ. ನನ್ನ ಈ ಹೊಸ ಅಂಕಿತಕ್ಕೆ ಕಾರಣರಾದ ನನ್ನೂರಿನ ಜನಕ್ಕೆ ನಾನು ಕೃತಜ್ಞ.

ಕಸ್ತೂರಿ ಚಾನೆಲ್‌ನ ಹೀರೊ ನಂಬರ್ ಒನ್ ರಿಯಾಲಿಟಿ ಷೋಗೆ ಆಡಿಷನ್ ಕೊಟ್ಟೆ. ಅದರಲ್ಲಿ ನಟಿ ಪೂಜಾ ಗಾಂಧಿ ನಿರ್ಣಾಯಕಿ ಆಗಿದ್ದರು. ಆ ಸ್ಪರ್ಧೆಯ ವಿಜೇತನಿಗೆ ಪೂಜಾ ಗಾಂಧಿ ಅವರೊಡನೆ ಒಂದು ಸಿನಿಮಾದಲ್ಲಿ ಅಭಿನಯಿಸುವ ಅವಕಾಶವಿತ್ತು. ಆಡಿಷನ್‌ನಲ್ಲಿ ಆಯ್ಕೆಯಾಗಿ ಮೂರು ತಿಂಗಳ ನಂತರ ಎಲಿಮಿನೆಟ್ ಆದೆ. ಹೇಗೋ ಡಾನ್ಸ್ ಎಂಬ ದೇವರನ್ನು ಬಾಲ್ಯದಲ್ಲಿ ಒಲಿಸಿಕೊಂಡಿದ್ದೆ ಅಲ್ವಾ.. ಹಾಗಾಗಿ ಮತ್ತೆ ಹಿಂದಕ್ಕೆ ಹೆಜ್ಜೆ ಹಾಕಲು ಮನಸ್ಸಾಗಲಿಲ್ಲ.

ಹೀರೊ ನಂಬರ್ ಒನ್ ರಿಯಾಲಿಟಿ ಷೋನಿಂದ ಹೊರಗೆ ಬಂದ ಮೇಲೆ ನನ್ನೂರಿನ ಗೆಳೆಯರ ಜೊತೆ ಸೇರಿ ಫ್ರೆಂಡ್ಸ್ ಸರ್ಕಲ್ ಎನ್ನುವ ಒಂದು ಕಿರುಚಿತ್ರ ನಿರ್ದೇಶಿಸಿದೆ. ಜೊತೆಗೆ ಅವಕಾಶಕ್ಕಾಗಿ ಎಲ್ಲ ಕಡೆ ತಡಕಾಡಿದೆ. ಅವಾಗೋ, ಇವಾಗೋ ಎಂಬಂತೆ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶಗಳು ಸಿಕ್ಕವು. ಈ-ಟಿವಿಯ ‘ಬದುಕು’ ಧಾರಾವಾಹಿ ನಾನು ಅಭಿನಯಿಸಿದ ಮೊದಲ ಧಾರಾವಾಹಿ. ನಂತರ ಆಕಾಶದೀಪ, ಮಿಲನದಲ್ಲಿ ಕಾಣಿಸಿಕೊಂಡೆ. ಆದರೆ ಯಾವೊಂದು ಧಾರಾವಾಹಿ ಅಷ್ಟೊಂದು ಹೆಸರು ತಂದುಕೊಡಲಿಲ್ಲ. ಅಕ್ಟೋಬರ್ 2013ರಲ್ಲಿ ‘ಅಗ್ನಿಸಾಕ್ಷಿ’ಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ನಂತರ ನನ್ನ ಅದೃಷ್ಟ ಖುಲಾಯಿಸಿತು. ‘ಅಗ್ನಿಸಾಕ್ಷಿ’ಯ ಜೊತೆ ಜೊತೆಗೆ ಜೀ ಕನ್ನಡದ ‘ಒಂದೇ ಗೂಡಿನ ಹಕ್ಕಿಗಳು’ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರ ಮಾಡಿದೆ. ಕಲ್ಕಿ ವಾಹಿನಿಯ ‘ನೀನಿರದೆ ಜೊತೆಯಲಿ’, ಕೆ.ಎಂ.ಚೈತನ್ಯ ಅವರ ‘ಪ್ರೀತಿ ಎಂದರೇನು’, ಉದಯ ಟಿವಿಯ ‘ಸರಯೂ’ ಧಾರಾವಾಹಿಗಳಲ್ಲೂ ಅಭಿನಯಿಸಿದೆ. ಒಟ್ಟಿನಲ್ಲಿ ಮುಖ್ಯ ಪಾತ್ರಗಳಲ್ಲಿ ಐದು ಮತ್ತು ಆರ್ಟಿಸ್ಟ್ ರೋಲ್‌ನಲ್ಲಿ ಮೂರು ಧಾರಾವಾಹಿಗಳಲ್ಲಿ ನಟಿಸಿದೆ.

ನನಗೆ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳೋಕೆ ಇಷ್ಟ. ಯಾಕೆಂದರೆ ಅಲ್ಲಿ ಅಭಿನಯಿಸೋಕೆ ತುಂಬಾ ಅವಕಾಶ ಸಿಗುತ್ತೆ. ಯಾವುದಾದರೂ ಧಾರಾವಾಹಿಗಳಲ್ಲಿ ನೆಗೆಟಿವ್ ಪಾತ್ರಕ್ಕೆ ಕರೆದರೆ ಖಂಡಿತವಾಗಿ ಇಲ್ಲ ಎಂದು ಮಾತ್ರ ಹೇಳಲಾರೆ.

ಅಗ್ನಿಸಾಕ್ಷಿಯಲ್ಲಿ ಅಖಿಲ್‌ನದ್ದು ಅಣ್ಣನ ಮಾತು ಮೀರದ ತಮ್ಮ, ಚೂಟಿಯಾಗಿ ಓಡಾಡಿಕೊಂಡು ಇರುವ ಪಾತ್ರ. ಆದರೆ ಸದ್ಯಕ್ಕೆ ಬದಲಾದ ಸನ್ನಿವೇಶದಲ್ಲಿ ಅಖಿಲ್, ಸಿಡಕ್ ಮೂತಿ ಸಿದ್ದಪ್ಪನಾಗಿದ್ದಾನೆ. ಕೆಲಸ ಮತ್ತು ಮನೆಯ ಜವಾಬ್ದಾರಿ ನಿಭಾಯಿಸುವಲ್ಲಿ ಸ್ವಲ್ಪ ಸೊರಗಿದ್ದಾನೆ ಅಷ್ಟೇ. ನಾನು ನಿಜ ಜೀವನದಲ್ಲಿ ಹೇಗಿದೀನೋ ಧಾರಾವಾಹಿಯಲ್ಲೂ ಹಾಗೆ ಇರೋದು. ಇನ್‌ಫ್ಯಾಕ್ಟ್ ಕೆಲವೊಂದು ಸಾರಿ ಅನ್ನಿಸುತ್ತೆ ನನಗಾಗಿ ಹೇಳಿ ಮಾಡಿಸಿದ ಪಾತ್ರ ಇದು ಅಂತ.

ಹವ್ಯಾಸ ಅಂತ ಹೇಳಿಕೊಳ್ಳಲು ಏನೂ ಇಲ್ಲ. ನಾನೊಬ್ಬ ನೃತ್ಯಗಾರ. ನಟನೆ, ನಿರ್ದೇಶನ, ನೃತ್ಯ ನನ್ನ ಹವ್ಯಾಸ. ಬಿಡುವಿದ್ದಾಗಲೆಲ್ಲಾ ಅಮ್ಮನ ಜೊತೆ ಶಾಪಿಂಗ್, ಲಾಂಗ್ ಡ್ರೈವಿಂಗ್. ಬಿಟ್ಟರೆ ಮನೆಯಲ್ಲಿರೋಕೆ ಇಷ್ಟ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry