ವಿರೋಧಿಗಳ ಒಗ್ಗಟ್ಟಿಗೆ ಬಲ

7
2019ರವರೆಗೆ ಕಾವು ಕಾಯ್ದುಕೊಳ್ಳಲು ಬಿಜೆಪಿ ವಿರೋಧಿ ಪಕ್ಷಗಳ ಸಭೆ ತೀರ್ಮಾನ

ವಿರೋಧಿಗಳ ಒಗ್ಗಟ್ಟಿಗೆ ಬಲ

Published:
Updated:
ವಿರೋಧಿಗಳ ಒಗ್ಗಟ್ಟಿಗೆ ಬಲ

ಬೆಂಗಳೂರು: ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಕರ್ನಾಟಕ ಸೂಕ್ತ ವೇದಿಕೆ ಒದಗಿಸಿ ಕೊಟ್ಟಿದೆ. ಮೋದಿ ವಿರೋಧಿ ಕಾವನ್ನು 2019ರವರೆಗೆ ಕಾಯ್ದುಕೊಂಡು ಹೋಗಬೇಕು’ ಎಂದು ಬಿಜೆಪಿ ವಿರೋಧಿ ಪಕ್ಷಗಳ ಮುಖಂಡರು ನಿರ್ಧರಿಸಿದ್ದಾರೆ.

ಎಚ್‌.ಡಿ.ಕುಮಾರಸ್ವಾಮಿ ಪ್ರಮಾಣ ವಚನದ ಬಳಿಕ ಬುಧವಾರ ರಾತ್ರಿ ನಗರದ ತಾಜ್‌ ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ಸಭೆ ಸೇರಿ ಈ ತೀರ್ಮಾನಕ್ಕೆ ಬಂದಿ

ದ್ದಾರೆ ಎಂದು ಮೂಲಗಳು ಹೇಳಿವೆ. ಸಭೆಯಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಎಡ ಪಕ್ಷಗಳ ಮುಖಂಡರಾದ ಸೀತಾರಾಂ ಯೆಚೂರಿ, ಡಿ.ರಾಜಾ ಮುಂತಾದವರು ಹಾಜರಿದ್ದರು.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದನ್ನು ತಪ್ಪಿಸುವಲ್ಲಿ ಕಾಂಗ್ರೆಸ್‌ ಪಾತ್ರ ಮಹತ್ವದ್ದಾಗಿದೆ. ಬಿಗುಮಾನ ಬದಿಗಿಟ್ಟು, ಅತಿ ಕಡಿಮೆ ಸಂಖ್ಯೆ ಹೊಂದಿರುವ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದೆ. ಈ ಮೂಲಕ, ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್‌ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಇದರಿಂದ ಬಿಜೆಪಿ ವಿರೋಧಿ ಕೂಟಕ್ಕೆ ಇನ್ನಷ್ಟು ಶಕ್ತಿ ಸಂಚಯವಾದಂತಾಗಿದೆ ಎಂದೂ ಅವರು ಅಭಿಪ್ರಾಯವ್ಯಕ್ತಪಡಿಸಿದರು.

ಬಿಜೆಪಿ ಮತ್ತು ಆರ್‌ಎಸ್ಎಸ್‌ ವಿರುದ್ಧ ದೇಶವ್ಯಾಪಿ ಹೋರಾಟಗಳನ್ನು ಹಮ್ಮಿಕೊಳ್ಳಬೇಕು. ಕೇಂದ್ರ ಸರ್ಕಾರದ ಜನ ವಿರೋಧಿ, ರೈತ ಮತ್ತು ಕಾರ್ಮಿಕ ವಿರೋಧಿ ಕ್ರಮಗಳ ಬಗ್ಗೆ ಹೋರಾಟವನ್ನು ಇನ್ನಷ್ಟು ಪ್ರಬಲಗೊಳಿಸಬೇಕು. ಇಂತಹ ಜನಾಂದೋಲನಗಳಿಗೆ ಎಲ್ಲ ಪಕ್ಷಗಳೂ ಕೈಜೋಡಿಸಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು ಎಂದು ಮೂಲಗಳು ಹೇಳಿವೆ.

ಬಿಜೆಪಿ ಸೋಲಿಸಲು ಒಗ್ಗಟ್ಟಾಗಿದ್ದೇವೆ: ಮಮತಾ

ಬೆಂಗಳೂರು: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಬಿಜೆಪಿ ವಿರೋಧಿ ಪಕ್ಷಗಳು ಒಗ್ಗಟ್ಟಾಗಿವೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಎಚ್‌.ಡಿ.ಕುಮಾರಸ್ವಾಮಿ ಅವರ ಪ್ರಮಾಣ ವಚನಕ್ಕೆ ಮುನ್ನ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣ ಸ್ವೀಕರಿಸುತ್ತಿರುವುದರಿಂದ ಸಂತಸವಾಗಿದೆ. ಇದಕ್ಕಾಗಿ ನಾವು ಕರ್ನಾಟಕದ ಸಹೋದರ– ಸಹೋದರಿಯರನ್ನು ಅಭಿನಂದಿಸುತ್ತೇವೆ’ ಎಂದರು.

‘ದೇಶದ ಎಲ್ಲ ಪ್ರಾದೇಶಿಕ ಪಕ್ಷಗಳ ಪ್ರಮುಖರು ಕುಮಾರಸ್ವಾಮಿಯವರನ್ನು ಬೆಂಬಲಿಸಲು ಬಂದಿದ್ದೇವೆ. ಜನರ ಅಭಿವೃದ್ಧಿಯ ಹಿತದೃಷ್ಟಿಯಿಂದ ಪ್ರಾದೇಶಿಕ ಪಕ್ಷಗಳ ಮುಖಂಡರು ನಿರಂತರವಾಗಿ ಸಂಪರ್ಕದಲ್ಲಿರುತ್ತೇವೆ. ನಮ್ಮ ಉದ್ದೇಶ ಮತ್ತು ದೂರದೃಷ್ಟಿ ಸ್ಪಷ್ಟವಾಗಿದೆ. ನಾವು ಪರಸ್ಪರ ಭೇಟಿಯಾಗುತ್ತೇವೆ. ಮಾತುಕತೆ ನಡೆಸುತ್ತಲೇ ಇರುತ್ತೇವೆ’ ಎಂದು ಮಮತಾ ಹೇಳಿದರು.

ಚಂದ್ರಬಾಬು ನಾಯ್ಡು ಮಾತನಾಡಿ, ‘ಪ್ರಾದೇಶಿಕ ಪಕ್ಷಗಳು ಕುಮಾರಸ್ವಾಮಿಯವರಿಗೆ ಬೆಂಬಲ ವ್ಯಕ್ತಪಡಿಸಿವೆ. ಮುಂಬರುವ ದಿನಗಳಲ್ಲಿ ನಮ್ಮ ಪಕ್ಷಗಳ ಹಿತಾಸಕ್ತಿಯನ್ನು ಕಾಪಾಡಲು ಒಂದಾಗಿ ಕೆಲಸ ಮಾಡಲಿದ್ದೇವೆ’ ಎಂದು ಹೇಳಿದರು.

2019ಕ್ಕೆ ಮೊದಲು ಬಿಜೆಪಿ ವಿರೋಧಿ ಒಕ್ಕೂಟ ರಚನೆಯಾಗಲಿದೆಯೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಮಮತಾ, ‘ನಾವೇನು ಮಾಡುತ್ತಿದ್ದೇವೆ ಎಂಬುದನ್ನು ನೀವು ಗಮನಿಸುತ್ತಾ ಇದ್ದೀರಿ. ಪ್ರಾದೇಶಿಕ ಪಕ್ಷಗಳನ್ನು ಉತ್ತೇಜಿಸುವುದರ ಜತೆಗೆ ಅವುಗಳನ್ನು ಬಲಪಡಿಸುವ ಕಾರ್ಯಕ್ಕೂ ಕೈ ಹಾಕಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry