ಶಾಸಕರ ಕಾಯುವುದು ಈಗ ಬಿಜೆಪಿಗೆ ಸವಾಲು

7
ಆತಂಕ ಹುಟ್ಟಿಸಿರುವ ‘ಸೇರಿಗೆ ಸವ್ವಾಸೇರು’ ಧೋರಣೆ

ಶಾಸಕರ ಕಾಯುವುದು ಈಗ ಬಿಜೆಪಿಗೆ ಸವಾಲು

Published:
Updated:
ಶಾಸಕರ ಕಾಯುವುದು ಈಗ ಬಿಜೆಪಿಗೆ ಸವಾಲು

ನವದೆಹಲಿ: ‘ಜನಾದೇಶ ನಮ್ಮ ಪಕ್ಷದ ಪರವಾಗಿಯೇ ಬಂದಿದೆ’ ಎಂದು ಭಾವಿಸಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಕೆಲವು ಶಾಸಕರನ್ನು ಸುಲಭದಲ್ಲಿ ಸೆಳೆಯಬಹುದು ಎಂಬ ನಂಬಿಕೆಯೊಂದಿಗೆ ಸರ್ಕಾರ ರಚನೆಗೆ ವಿಫಲ ಯತ್ನ ನಡೆಸಿದ್ದ ಬಿಜೆಪಿಗೆ, ಈಗ ತನ್ನ ಶಾಸಕರನ್ನು ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ.

‘ಆರು ತಿಂಗಳಲ್ಲೇ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಬಿಕ್ಕಟ್ಟು ತಲೆದೋರಲಿ’ ಎಂದೇ ಬಯಸುತ್ತಿರುವ ಕಮಲ ಪಕ್ಷವು, ಸಚಿವ ಸ್ಥಾನ, ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ದೊರೆಯದೆ ನಿರಾಸೆಗೆ ಒಳಗಾಗುವ ಲಿಂಗಾಯತ ಸಮುದಾಯದ ಶಾಸಕರು ತನ್ನೆಡೆ ಬಂದಾರು ಎಂಬ ದೂರದ ಆಸೆ ಇರಿಸಿಕೊಂಡಿದೆ.

‘ನಮ್ಮ 10 ಶಾಸಕರನ್ನು ಅವರು ಸೆಳೆದರೆ, ಅವರ 20 ಶಾಸಕರನ್ನು ಸೆಳೆಯುವ ಸಾಮರ್ಥ್ಯ ನಮಗೂ ಇದೆ’ ಎಂದು ಸ್ವತಃ ಎಚ್‌.ಡಿ. ಕುಮಾರಸ್ವಾಮಿ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದರಿಂದ, ತನ್ನ 104 ಸದಸ್ಯ ಬಲ ಕುಗ್ಗದಂತೆ ನೋಡಿಕೊಳ್ಳುವ ಆತಂಕವನ್ನು ಬಿಜೆಪಿ ಸಹಜವಾಗಿಯೇ ಎದುರಿಸುತ್ತಿದೆ.

‘ಆರು ತಿಂಗಳು ಅಥವಾ ಒಂದು ವರ್ಷದ ಅವಧಿಯಲ್ಲೇ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಯಲ್ಲಿ ಬಿರುಕು ಮೂಡೇಮೂಡುತ್ತದೆ. ಮತ್ತೆ ನಾವು ಸರ್ಕಾರ ರಚಿಸಬಹುದು ಎಂಬ ಆಸೆ ಪಕ್ಷದ ರಾಜ್ಯ ಮುಖಂಡರಲ್ಲಿದೆ. ಆದರೆ, ನಮ್ಮ ಶಾಸಕರು ಅಧಿಕಾರದಲ್ಲಿ ಇರುವವರ ಆಮಿಷಕ್ಕೆ ಒಳಗಾಗಿ ಹೋಗಲಾರರು ಎಂಬ ಖಾತರಿ ಇಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮವರೂ ಮನುಷ್ಯರೆ. ಆಸೆ– ಆಮಿಷಗಳಿಗೆ ಒಳಗಾಗದಂಥವರೇನೂ ಅಲ್ಲ. ನಾವು ಒಡ್ಡುವ ಆಮಿಷವನ್ನು ಅವರೂ ಒಡ್ಡುವ ಮೂಲಕ ತಮ್ಮ ಸಂಖ್ಯೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು’ ಎಂದು ಅವರು ಅಭಿಪ್ರಾಯ

ಪಟ್ಟರು.

‘ವರ್ಷಾಂತ್ಯಕ್ಕೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆಯ ಫಲಿತಾಂಶ ನೇರವಾಗಿ ಲೋಕಸಭೆ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ. ದಕ್ಷಿಣ ಭಾರತದಲ್ಲಿ ನಮ್ಮ ಕಡೆ ಇದ್ದ ಚಂದ್ರಬಾಬು ನಾಯ್ಡು ಈಗ ದೂರವಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನಾ ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ. ಎನ್‌ಡಿಎ ಮೈತ್ರಿಕೂಟದಲ್ಲಿ ಹೇಳಿಕೊಳ್ಳುವಂಥ ಪಕ್ಷಗಳು ಇಲ್ಲ. ಬಿಹಾರ, ಉತ್ತರ ಪ್ರದೇಶ, ಹರಿಯಾಣ, ಗುಜರಾತ್‌, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ 2014ರಲ್ಲಿ ಸಿಕ್ಕಷ್ಟು ಸ್ಥಾನಗಳು ಸಿಗದೇ ಹೋದರೆ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ದುಸ್ತರ’ ಎಂದು ಅವರು ಪಕ್ಷ ಎದುರಿಸುತ್ತಿರುವ ಆತಂಕ ಬಿಚ್ಚಿಟ್ಟರು.

ಆದರೆ, ಪಕ್ಷದ ಹಿರಿಯ ಶಾಸಕರೊಬ್ಬರು ಈ ಅಭಿಪ್ರಾಯಕ್ಕೆ ತದ್ವಿರುದ್ಧವಾದ ಅಭಿಪ್ರಾಯವನ್ನೇ ಹೊಂದಿದ್ದಾರೆ. ‘ಪಕ್ಷವು ಕರ್ನಾಟಕದಲ್ಲಿ ಸರ್ಕಾರ ರಚನೆಯ ಆಸೆಯನ್ನು ಕೈಬಿಟ್ಟಿಲ್ಲ. ಆರು ತಿಂಗಳು ಅಥವಾ ಅದರೊಳಗೇ ನಮಗೆ ಅಧಿಕಾರ ಪ್ರಾಪ್ತಿಯಾಗುವ ಸಾಧ್ಯತೆ ಇದೆ’ ಎಂಬ ವಿಶ್ವಾಸ ಅವರದ್ದು.

‘ರಾಜ್ಯ ಬಿಜೆಪಿ ಶಾಸಕರಲ್ಲಿ ಒಗ್ಗಟ್ಟಿಗೆ ಕೊರತೆ ಇಲ್ಲ. ಎಲ್ಲ ಶಾಸಕರು ಪಕ್ಷದೊಂದಿಗೇ ಇರಲಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಇರುವವರು ಬಂಡೆದ್ದು ನಮ್ಮತ್ತ ಬರಲಿದ್ದಾರೆ. ಮತ್ತೆ ಸರ್ಕಾರ ರಚನೆಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲೇ ನಾವಂತೂ ಇದ್ದೇವೆ’ ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry