‘ಸಾಲ ಮನ್ನಾ ಮಾಡದಿದ್ದರೆ ಹೋರಾಟ’

7
ಕರಾಳ ದಿನ ಆಚರಿಸಿದ ಬಿಜೆಪಿ

‘ಸಾಲ ಮನ್ನಾ ಮಾಡದಿದ್ದರೆ ಹೋರಾಟ’

Published:
Updated:
‘ಸಾಲ ಮನ್ನಾ ಮಾಡದಿದ್ದರೆ ಹೋರಾಟ’

ಬೆಂಗಳೂರು: ‘ರೈತರ ₹ 53 ಸಾವಿರ ಕೋಟಿ ಸಾಲದ ಜತೆಗೆ ಖಾಸಗಿ ಸಾಲವನ್ನೂ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ವಾಗ್ದಾನ ಮಾಡಿದ್ದಾರೆ. ಈ ಭರವಸೆಯನ್ನು ಈಡೇರಿಸದಿದ್ದರೆ, ರೈತ ಸಮುದಾಯವನ್ನು ಬೀದಿಗಿಳಿಸಿ ನಿಮ್ಮನ್ನು ಬಟಾಬಯಲು ಮಾಡುತ್ತೇನೆ. ಈ ಕೆಲಸ ಮಾಡದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ...’

ಬೆಂಗಳೂರಿನ ಆನಂದ್‌ರಾವ್ ವೃತ್ತದಲ್ಲಿ ಬಿಜೆಪಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ ಪರಿ ಇದು.

‘ಮುಖ್ಯಮಂತ್ರಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುತ್ತಿರುವುದು ರಾಜ್ಯಕ್ಕೇ ಕರಾಳ ದಿನ. ಹಾಗಾಗಿಯೇ, ನಾವು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸುತ್ತಿದ್ದೇವೆ. ರೈತರ ಸಾಲ ಮನ್ನಾ ಮಾಡದಿದ್ದರೆ, ರಾಜ್ಯ ಬಂದ್ ಮಾಡುತ್ತೇವೆ’ ಎಂದು ಎಚ್ಚರಿಸಿದರು.

‘ಜನಾದೇಶ ಧಿಕ್ಕರಿಸಿ, ಅನುಕೂಲ ಸಿಂಧು ರಾಜಕಾರಣ ಮಾಡುತ್ತಿರುವ ಜೆಡಿಎಸ್– ಕಾಂಗ್ರೆಸ್ ಬಗ್ಗೆ ಜನ ಆಕ್ರೋಶಗೊಂಡಿದ್ದಾರೆ. ಈ ಅಪವಿತ್ರ ಮೈತ್ರಿಯನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಸೋನಿಯಾ ಹಾಗೂ ರಾಹುಲ್‌ ಅವರೇ, ಕಾಂಗ್ರೆಸ್ ನೆಲಕಚ್ಚಿರುವ ಈ ನಾಡಿನಲ್ಲಿ ನಿಮ್ಮ ಮುಂದಿನ ಸ್ಥಿತಿ ಏನು? ಜನ ನಿಮ್ಮನ್ನು ತಿರಸ್ಕಾರ ಮಾಡಿದ್ದಾರೆ ಎಂದು ಗೊತ್ತಿದ್ದರೂ, ಯಾರ ವಿಜಯೋತ್ಸವ ಆಚರಿಸೋಕೆ ಇಲ್ಲಿಗೆ ಬರುತ್ತಿದ್ದೀರಾ’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಅವರೇ ಅಧಿಕಾರದಲ್ಲಿದ್ದಾಗ ನಿಮಗೆ ರಾಜಮರ್ಯಾದೆ ಸಿಗುತ್ತಿತ್ತು. ಹೈಕಮಾಂಡ್‌ಗೆ ಹಣ ತಲುಪಿಸುತ್ತಿದ್ದಿರಿ ಎಂಬ ಕಾರಣಕ್ಕೆ, ರಾಹುಲ್‌ ಗಾಂಧಿ ನಿಮ್ಮನ್ನು ಅಪ್ಪಿ ಮುದ್ದಾಡುತ್ತಿದ್ದರು. ಆದರೆ, ಸರ್ಕಾರ ರಚಿಸುವ ಸಂದರ್ಭದಲ್ಲಿ ನಿಮ್ಮನ್ನೇ ಕಡೆಗಣಿಸಿ, ಕುಮಾರಸ್ವಾಮಿ ಅವರನ್ನು ಮಾತ್ರ ದೆಹಲಿಗೆ ಕರೆಸಿಕೊಂಡರು. ಈ ರೀತಿ ಅಪಮಾನ ಮಾಡಿದ ಆ ಪಕ್ಷದಲ್ಲಿ ಹೇಗೆ ಮುಂದುವರಿಯುತ್ತೀರಿ?. ನಿಮ್ಮನ್ನು ಆರಿಸಿ ಕಳುಹಿಸಿದ ಕುರುಬ ಸಮುದಾಯಕ್ಕೆ ಏನು ಉತ್ತರ ಕೊಡುತ್ತೀರಿ? ನಿಮ್ಮ ಅಸ್ತಿತ್ವಕ್ಕೇ ಧಕ್ಕೆ ತರುತ್ತಿರುವ ಹಾಗೂ ಕಾಂಗ್ರೆಸ್ಸನ್ನು ಮುಳುಗಿಸಲು ಹೊರಟಿರುವ ಜೆಡಿಎಸ್‌ ತೊರೆದು ಹೊರಬನ್ನಿ’ ಎಂದು ಆಗ್ರಹಿಸಿದರು.

‘ದೇವೇಗೌಡರೇ, ಬಹುಮತ ಸಿಗದಿದ್ದರೆ ವಿರೋಧ ಪಕ್ಷವಾಗಿ ಕೂರುವುದಾಗಿ ಚುನಾವಣಾ ಸಮಯದಲ್ಲಿ ತಾವು ಹೇಳಿದ್ದು ಮರೆತುಹೋಯಿತೆ?. ಈಗಲೂ ವಿಧಾನಸಭೆ ವಿಸರ್ಜನೆ ಮಾಡಿ, ಜನತೆ ಮುಂದೆ ಹೋಗೋಣ ಬನ್ನಿ. ಬಿಜೆಪಿ 150 ಸೀಟು ಗೆಲ್ಲದಿದ್ದರೆ, ನೀವು ಹೇಳಿದ ಹಾಗೆ ನಾನು ಕೇಳುತ್ತೇನೆ’ ಎಂದು ಪಂಥಾಹ್ವಾನ ನೀಡಿದರು.

‘ಅತೃಪ್ತ ಕಾಂಗ್ರೆಸ್ಸಿಗರು ಬಿಜೆಪಿಗೆ ಬನ್ನಿ’

‘ಪ್ರಧಾನಿ ಮೋದಿ ಅವರಿಗೆ ಲೋಕಸಭೆಯ 28 ಕ್ಷೇತ್ರಗಳನ್ನೂ ಗೆಲ್ಲಿಸಿಕೊಡುವುದೇ ನನ್ನ ಗುರಿ. ದೇವೇಗೌಡ ಅಂಡ್ ಕಂಪನಿ ಹಾಗೂ ಕುಮಾರಸ್ವಾಮಿ ಅಂಡ್ ಕಂಪನಿಗೆ ರಾಜ್ಯದಲ್ಲಿ ‘ವ್ಯವಹಾರ’ ನಡೆಸಲು ಬಿಡುವುದಿಲ್ಲ. ಅವರಿಗೆ ಆಡಳಿತ ನೀಡಿರುವುದಕ್ಕೆ ಕಾಂಗ್ರೆಸ್ ಶಾಸಕರು ಹಾಗೂ ಕಾರ್ಯಕರ್ತರು ಅತೃಪ್ತರಾಗಿದ್ದಾರೆ. ಬೇಸರವಾಗಿರುವ ಕಾಂಗ್ರೆಸ್ಸಿಗರನ್ನು ಬಿಜೆಪಿಗೆ ಬರುವಂತೆ ಮುಕ್ತವಾಗಿ ಸ್ವಾಗತಿಸುತ್ತೇನೆ’ ಎಂದೂ ಯಡಿಯೂರಪ್ಪ ಹೇಳಿದರು.

* ಜೆಡಿಎಸ್‌ ಮೊದಲು ಆನೆಯನ್ನು (ಬಿಎಸ್‌ಪಿ ಚಿಹ್ನೆ) ಪ್ರೀತಿಸಿತು. ಆನಂತರ ಒವೈಸಿ ಜತೆ ಡೇಟಿಂಗ್ ಮಾಡಿತು. ಕೊನೆಗೆ, ಕಾಂಗ್ರೆಸ್ ಜತೆ ಮದುವೆ ಆಯಿತು. ಅಂದರೆ, ಜೆಡಿಎಸ್‌ನವರು ಯಾವಾಗ ಯಾರ ಜತೆ ಇರುತ್ತಾರೋ ಗೊತ್ತಾಗಲ್ಲ.

- ಆರ್.ಅಶೋಕ, ಬಿಜೆಪಿ ಶಾಸಕ

ರಾಜ್ಯದಲ್ಲಿ ಕಾಂಗ್ರೆಸ್ ಎಂಬ ಕಸವನ್ನು ಜನ ಕಿತ್ತು ಹಾಕಿದರು. ಆದರೆ, ಆ ಕಸವನ್ನು ಜೆಡಿಎಸ್‌ನ ಮಹಿಳೆ ಹೊತ್ತುಕೊಂಡು ತಿರುಗಾಡುತ್ತಿದ್ದಾಳೆ. ನೋಡುವುದಕ್ಕೆ ಎಷ್ಟು ಹಾಸ್ಯಾಸ್ಪದ ಎನಿಸುತ್ತದೆ

-ಅರವಿಂದ ಲಿಂಬಾವಳಿ, ಬಿಜೆಪಿ ಶಾಸಕ

ಜನಾದೇಶ ನಮ್ಮ ಪರವಾಗಿದೆ. ಆದರೆ, ತಲೆಗಳ ಲೆಕ್ಕ ಇಟ್ಟಿದ್ದರಿಂದ ಅಧಿಕಾರ ಕಳೆದುಕೊಂಡಿದ್ದೇವೆ. ನಮ್ಮ ಹೋರಾಟದ ದಿನಗಳು ಈಗ ಶುರುವಾಗಿವೆ.

-ಶೋಭಾ ಕರಂದ್ಲಾಜೆ, ಸಂಸದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry