ಬೆಳ್ಳುಬ್ಬಿಯಲ್ಲಿ ಮಹಿಳೆ ಮುಖಕ್ಕೆ ಮಸಿ ಬಳಿದ ಚಿತ್ರ ವೈರಲ್‌

7
ಎಂ.ಬಿ.ಪಾಟೀಲ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ

ಬೆಳ್ಳುಬ್ಬಿಯಲ್ಲಿ ಮಹಿಳೆ ಮುಖಕ್ಕೆ ಮಸಿ ಬಳಿದ ಚಿತ್ರ ವೈರಲ್‌

Published:
Updated:
ಬೆಳ್ಳುಬ್ಬಿಯಲ್ಲಿ ಮಹಿಳೆ ಮುಖಕ್ಕೆ ಮಸಿ ಬಳಿದ ಚಿತ್ರ ವೈರಲ್‌

ವಿಜಯಪುರ: ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಅವರನ್ನು ಅವಾಚ್ಯವಾಗಿ ನಿಂದಿಸಿದ್ದರು ಎನ್ನಲಾದ ಮಹಿಳೆಯ ಮುಖಕ್ಕೆ ಮಸಿ ಬಳಿದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬೆಳ್ಳುಬ್ಬಿ ಗ್ರಾಮದ ಚಂದ್ರವ್ವ ಮಳೆಪ್ಪ ಬೆಳ್ಳುಬ್ಬಿ ಎಂಬುವವರ ಮುಖಕ್ಕೆ ಮಸಿ ಹಚ್ಚಲಾಗಿದ್ದು, ಕಾಂಗ್ರೆಸ್‌ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ದೂರು ದಾಖಲಾಗಿಲ್ಲ.

ಮನಗೂಳಿ ಪಟ್ಟಣದಲ್ಲಿ ವಿ.ವಿ. ಪ್ಯಾಟ್‌ಗಳು ಪತ್ತೆಯಾಗಿದ್ದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ, ಬಿಜೆಪಿ ಕಾರ್ಯಕರ್ತರು ವಿಜುಗೌಡ ಪಾಟೀಲ ನೇತೃತ್ವದಲ್ಲಿ ಮೇ 21ರಂದು ವಿಜಯಪುರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಚಂದ್ರವ್ವ ಅವರು, ಎಂ.ಬಿ.ಪಾಟೀಲ ವಿರುದ್ಧ ಅಶ್ಲೀಲವಾಗಿ ಮಾತನಾಡಿದ್ದರು ಎಂದು ತಿಳಿದುಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ 51 ಸೆಕೆಂಡ್‌ಗಳ ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಪಾಟೀಲ ಬೆಂಬಲಿಗ ಮಹಿಳೆಯರು ಚಂದ್ರವ್ವನನ್ನು ಹುಡುಕಿ, ವಿಜಯಪುರದ ನರಸಿಂಹ ದೇಗುಲದ ಬಳಿ ಆಕೆಯ ಮುಖಕ್ಕೆ ಮಸಿ ಹಚ್ಚಿದ್ದಾರೆ ಎನ್ನಲಾಗಿದೆ.

‘ಎಂ.ಬಿ.ಪಾಟೀಲ ವಿರುದ್ಧ ಅವಾಚ್ಯ ಶಬ್ದ ಬಳಸಿ ಮಾತನಾಡಿದ ಮಹಿಳೆ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತೆಯೊಬ್ಬರು ದೂರು ದಾಖಲಿಸಿದ್ದಾರೆ. ನಾವು ಎಫ್‌ಐಆರ್‌ ಮಾಡಿದ್ದೇವೆ. ಆದರೆ ಮುಖಕ್ಕೆ ಮಸಿ ಬಳಿದ ಪ್ರಕರಣ ಗಮನಕ್ಕೆ ಬಂದಿಲ್ಲ. ಆ ಮಹಿಳೆ ದೂರು ನೀಡಿದರೆ, ಪ್ರಕರಣ ದಾಖಲಿಸುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್‌ ಅಮೃತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry