7
ನೂಕುನುಗ್ಗಲು: ಸೋನಿಯಾ, ರಾಹುಲ್‌ ಗಾಂಧಿಗೂ ತಟ್ಟಿದ ಟ್ರಾಫಿಕ್‌ ಬಿಸಿ

ದಟ್ಟಣೆಯಲ್ಲಿ ಸಿ.ಎಂ ಕಾರು

Published:
Updated:
ದಟ್ಟಣೆಯಲ್ಲಿ ಸಿ.ಎಂ ಕಾರು

ಬೆಂಗಳೂರು: ವಿಧಾನಸೌಧದಲ್ಲಿ ಬುಧವಾರ ಆಯೋಜಿಸಿದ್ದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಿಂದಾಗಿ, ವಿಧಾನಸೌಧ ಸುತ್ತಮುತ್ತ ದಟ್ಟಣೆ ಉಂಟಾಯಿತು. ಸ್ವತಃ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೇ ಅದರ ಬಿಸಿ ತಟ್ಟಿತು. ಅವರು ಪ್ರಯಾಣಿಸುತ್ತಿದ್ದ ಕಾರು ದಟ್ಟಣೆಯ ಮಧ್ಯೆಯೇ ಸಿಲುಕಿತ್ತು.

ಮೈಸೂರಿಗೆ ಹೋಗಿದ್ದ ಕುಮಾರಸ್ವಾಮಿ, ಸಂಜೆ 4 ಗಂಟೆ ಸುಮಾರಿಗೆ ಜೆ.ಪಿ.ನಗರದಲ್ಲಿರುವ ತಮ್ಮ ಮನೆಗೆ ಬಂದರು. ಕೆಲ ನಿಮಿಷಗಳ ನಂತರ, ಅಲ್ಲಿಂದ ವಿಧಾನಸೌಧದತ್ತ ಹೊರಟರು.

ಮೈಸೂರು ಬ್ಯಾಂಕ್ ವೃತ್ತಕ್ಕೆ ಬಂದು, ಅರಮನೆ ರಸ್ತೆಯಲ್ಲಿ ಸಾಗಿದರು. ಮಹಾರಾಣಿ ಕಾಲೇಜು ಬಳಿಯ ಕೆಳ ಸೇತುವೆ ಬಳಿ ಕಾರು ಹೋಗುತ್ತಿದ್ದಂತೆ, ವಾಹನಗಳ ದಟ್ಟಣೆಯಲ್ಲಿ ಸಿಲುಕಿಕೊಂಡಿತು. ಚಾಲುಕ್ಯ ವೃತ್ತದಿಂದ ಕೆಳಸೇತುವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ, ಕುಮಾರಸ್ವಾಮಿ ಅವರಿದ್ದ ಕಾರು 4 ನಿಮಿಷಗಳವರೆಗೆ ಮುಂದಕ್ಕೆ ಹೋಗಲೇ ಇಲ್ಲ.

ಸ್ಥಳದಲ್ಲಿದ್ದ ಸಂಚಾರ ಪೊಲೀಸರು, ಸಾರ್ವಜನಿಕರ ವಾಹನಗಳು ಸಾಗಲು ತ್ವರಿತವಾಗಿ ದಾರಿ ಮಾಡಿಕೊಟ್ಟರು. ಬಳಿಕ, ನಿಧಾನವಾಗಿ ಸಾಗಿದ ಕುಮಾರ

ಸ್ವಾಮಿಯವರ ಕಾರು, ಸಿಐಡಿ ಕಚೇರಿ ಎದುರಿನ ಸಿಗ್ನಲ್‌ನಲ್ಲಿ ಬಲ ತಿರುವು ಪಡೆದು ವಿಧಾನಸೌಧದೊಳಗೆ ಪ್ರವೇಶಿಸಿತು. ನಂತರವೂ ಅರಮನೆ ರಸ್ತೆಯಲ್ಲಿ ದಟ್ಟಣೆ ಮುಂದುವರಿಯಿತು.

ಸೋನಿಯಾ, ರಾಹುಲ್‌ಗೂ ತಟ್ಟಿದ ಬಿಸಿ: ಚಾಲುಕ್ಯ ವೃತ್ತದ ಮೂಲಕ ವಿಧಾನಸೌಧದತ್ತ ಹೊರಟಿದ್ದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೂ ದಟ್ಟಣೆಯ ಬಿಸಿ ತಟ್ಟಿತು.

ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ ಬಂದಿಳಿದಿದ್ದ ಅವರಿಬ್ಬರು, ಕಾಂಗ್ರೆಸ್ ಶಾಸಕರು ತಂಗಿದ್ದ ದೊಮ್ಮಲೂರಿನಲ್ಲಿರುವ ಹಿಲ್ಟನ್ ಹೋಟೆಲ್‌ಗೆ ಹೋಗಿದ್ದರು.

ಅಲ್ಲಿಂದ, ಸಂಜೆ ವಿಧಾನಸೌಧದತ್ತ ಕಾರಿನಲ್ಲಿ ಹೊರಟಿದ್ದರು. ಚಾಲುಕ್ಯ ವೃತ್ತಕ್ಕೆ ಹೋಗುತ್ತಿದ್ದಂತೆ, ಕಾರು ದಟ್ಟಣೆಯಲ್ಲಿ ಸಿಲುಕಿತು. ನಿಧಾನಗತಿಯಲ್ಲೇ ಸಾಗಿತು. ಸ್ಥಳದಲ್ಲಿದ್ದ ಪೊಲೀಸರು, ಮುಂದಿದ್ದ ವಾಹನಗಳನ್ನು ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಬಳಿಕ, ನಿಗದಿತ ಸಮಯಕ್ಕೆ ಅವರಿಬ್ಬರು ವಿಧಾನಸೌಧ ತಲುಪಿದರು. ಹೊರ ರಾಜ್ಯಗಳಿಂದ ಬಂದಿದ್ದ ಮುಖ್ಯಮಂತ್ರಿಗಳು ಹಾಗೂ ಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಯಾವುದೇ ಅಡ್ಡಿ ಉಂಟಾಗಲಿಲ್ಲ. ಅವರು ಬರುವ ರಸ್ತೆಯುದ್ದಕ್ಕೂ ಸಂಚಾರ ಪೊಲೀಸರು ದಾರಿ ಮಾಡಿಕೊಟ್ಟರು.

ವಿಧಾನಸೌಧ ಸುತ್ತಮುತ್ತ ದಟ್ಟಣೆ: ಹೊರ ನಗರ ಹಾಗೂ ಜಿಲ್ಲೆಗಳ ಜನ, ನಗರದತ್ತ ಬಂದಿದ್ದರು. ಅದರಿಂದಾಗಿ ಮಧ್ಯಾಹ್ನದಿಂದಲೇ ವಾಹನಗಳ ದಟ್ಟಣೆ ಕಂಡುಬಂತು.

ದಟ್ಟಣೆಯಲ್ಲಿ ಸಿಲುಕಿದ್ದ ಆಂಬುಲೆನ್ಸ್‌: ರಾಜಭವನ ರಸ್ತೆಯಲ್ಲಿ ಉಂಟಾಗಿದ್ದ ದಟ್ಟಣೆಯಲ್ಲಿ ಆಂಬುಲೆನ್ಸ್‌ ಸಿಲುಕಿತ್ತು.

ಮಿನ್ಸ್ಕ್‌ ಸ್ಕ್ವೇರ್‌ ವೃತ್ತದಿಂದ ಚಿನ್ನಸ್ವಾಮಿ ಕ್ರೀಡಾಂಗಣ ಬಳಿಯ ಮಹಾತ್ಮಗಾಂಧಿ ವೃತ್ತದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಧ್ಯಾಹ್ನ 4.42 ಗಂಟೆಗೆ ಮಲ್ಯ ಆಸ್ಪತ್ರೆಯತ್ತ ಹೊರಟಿದ್ದ ಆಂಬುಲೆನ್ಸ್‌, ವಾಹನಗಳ ಮಧ್ಯೆ ಸಿಲುಕಿಕೊಂಡಿತ್ತು. ಸೈರನ್‌ ಜೋರಾಗಿದ್ದರೂ ಮುಂದಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಐದು ನಿಮಿಷ ನಿಂತಲ್ಲೇ ನಿಲ್ಲಬೇಕಾಯಿತು. ಆಂಬುಲೆನ್ಸ್‌ ಗಮನಿಸಿದ ಪೊಲೀಸರು, ಸಿಗ್ನಲ್ ಮುಕ್ತಗೊಳಿಸಿ ವಾಹನಗಳನ್ನು ಬಿಟ್ಟರು. ನಂತರವೇ ಆಂಬುಲೆನ್ಸ್‌ ಮುಂದಕ್ಕೆ ಹೋಯಿತು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯನ್ನು ಸಾಗಿಸಲಾಗುತ್ತಿತ್ತು.

ನಡೆದುಕೊಂಡು ಹೋದ ಭದ್ರತಾ ಸಿಬ್ಬಂದಿ

ಮುಖ್ಯಮಂತ್ರಿಗಳು ಹಾಗೂ ಪಾಸ್‌ ಇದ್ದ ಗಣ್ಯ ವ್ಯಕ್ತಿಗಳ ವಾಹನಗಳಿಗೆ ಮಾತ್ರ ವಿಧಾನಸೌಧದ ಒಳಗೆ ಪ್ರವೇಶವಿತ್ತು. ಭದ್ರತಾ ಸಿಬ್ಬಂದಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಭದ್ರತಾ ಸಿಬ್ಬಂದಿಯಿದ್ದ ವಾಹನಗಳನ್ನು ಗೇಟ್‌ನಲ್ಲೇ ಪೊಲೀಸರು ತಡೆದರು. ಸಿಬ್ಬಂದಿಯ ಗುರುತಿನ ಚೀಟಿ ಪರಿಶೀಲಿಸಿ ಒಳಗೆ ಬಿಟ್ಟರು. ಗೇಟಿನ ಹೊರಗಡೆಯೇ ವಾಹನಗಳನ್ನು ನಿಲ್ಲಿಸಿದ ಭದ್ರತಾ ಸಿಬ್ಬಂದಿ, ನಡೆದುಕೊಂಡೇ ವಿಧಾನಸೌಧದ ಒಳಗೆ ಹೋದರು.

(ಪ್ರಯಾಣಿಕರ ನೂಕುನುಗ್ಗಲು ನಿಯಂತ್ರಿಸುವುದಕ್ಕಾಗಿ ಬಂದ್‌ ಮಾಡಲಾಗಿದ್ದ ಮೆಟ್ರೊ ನಿಲ್ದಾಣದ ಬಾಗಿಲು ಎದುರು ಸಾಲುಗಟ್ಟಿ ನಿಂತಿದ್ದ ಜನ)

ಮೆಟ್ರೊ ನಿಲ್ದಾಣದಲ್ಲಿ ನೂಕುನುಗ್ಗಲು

ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿದ್ದ ಜನ,  ಏಕಾಏಕಿ ಮೆಟ್ರೊ ನಿಲ್ದಾಣದೊಳಗೆ ಹೋಗಿದ್ದರಿಂದ ನೂಕುನುಗ್ಗಲು ಉಂಟಾಯಿತು.

ವಿಧಾನಸೌಧದ ಡಾ. ಬಿ.ಆರ್.ಅಂಬೇಡ್ಕರ್‌ ನಿಲ್ದಾಣದ ನಾಲ್ಕೂ ಪ್ರವೇಶ ದ್ವಾರಗಳಿಂದ ಜನರು ಒಳಗೆ ಹೋದರು. ಟೋಕನ್‌ ಪಡೆದುಕೊಳ್ಳಲು ಕೌಂಟರ್ ಎದುರು ಸಾಲುಗಟ್ಟಿ ನಿಂತಿದ್ದರು. ಅವಾಗಲೂ ತಳ್ಳಾಟ– ನೂಕಾಟ ಉಂಟಾಯಿತು.

ಟೋಕನ್‌ ನೀಡುವುದು ತಡವಾಗಿದ್ದರಿಂದ ಪ್ರಯಾಣಿಕರು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಮಾತಿನ ಚಕಮಕಿಯೂ ನಡೆಯಿತು. ನಂತರ, ಪ್ರವೇಶ ದ್ವಾರಗಳನ್ನೆಲ್ಲ ತೆರೆದು ಪ್ರಯಾಣಿಕರನ್ನು ರೈಲಿನತ್ತ ಬಿಡಲಾಯಿತು. ‘ನೀವು ಇಳಿಯುವ ನಿಲ್ದಾಣದಲ್ಲೇ ಟಿಕೆಟ್‌ ಪಡೆದು ಹೊರಗೆ ಹೋಗಿ’ ಎಂದು ಸಿಬ್ಬಂದಿ ಹೇಳಿ ಕಳುಹಿಸಿದರು.

ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದರಿಂದ, ನಿಲ್ದಾಣದ ನಾಲ್ಕೂ ಕಡೆಗಿನ ಬಾಗಿಲುಗಳ ಶೆಟರ್‌ಗಳನ್ನು ಕೆಲ ನಿಮಿಷ ಬಂದ್‌ ಮಾಡಲಾಗಿತ್ತು. ಅಷ್ಟಾದರೂ ದಟ್ಟಣೆ ನಿಯಂತ್ರಣಕ್ಕೆ ಬರಲಿಲ್ಲ. ಆಗಾಗ ಶೆಟರ್‌ ತೆರೆದು ಪ್ರಯಾಣಿಕರನ್ನು ಗುಂಪು ಗುಂಪಾಗಿ ಒಳಗೆ ಬಿಡಲಾಯಿತು.  ಪ್ರಯಾಣಿಕರ ಅನುಕೂಲಕ್ಕಾಗಿ 10 ನಿಮಿಷಗಳ ಬದಲು 4 ನಿಮಿಷಕ್ಕೊಂದರಂತೆ ರೈಲು ಓಡಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry