ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪ್ತಿ ಮಾಡಿದ್ದ ಗುರುತಿನ ಚೀಟಿ ಮತದಾರರಿಗೆ ವಾಪಸ್‌

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣ : ಕಳೆದಿರುವುದಾಗಿ ಹೇಳಿಕೆ ಪಡೆದು ಚೀಟಿ ವಿತರಣೆ
Last Updated 23 ಮೇ 2018, 19:32 IST
ಅಕ್ಷರ ಗಾತ್ರ

ಬೆಂಗಳೂರು: ಜಾಲಹಳ್ಳಿಯ ‘ಎಸ್‌ಎಲ್‌ವಿ ಪಾರ್ಕ್‌ ವ್ಯೂ’ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಜಪ್ತಿ ಮಾಡಲಾಗಿದ್ದ ಚುನಾವಣಾ ಗುರುತಿನ ಚೀಟಿಗಳನ್ನು ಅಧಿಕಾರಿಗಳು, ಮತದಾರರಿಗೆ ವಾಪಸ್‌ ವಿತರಿಸುತ್ತಿದ್ದಾರೆ.

ಚೀಟಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಚುನಾವಣಾ ಅಧಿಕಾರಿಗಳು, ಮೇ 8ರಂದು ಅಪಾರ್ಟ್‌ಮೆಂಟ್‌ ಸಮುಚ್ಚಯದ ಪ್ಲ್ಯಾಟ್‌ ನಂ. 115ರ ಮೇಲೆ ದಾಳಿ ಮಾಡಿದ್ದರು. ಈ ವೇಳೆಯಲ್ಲೇ 9,746 ಚೀಟಿಗಳು ಪತ್ತೆ ಆಗಿದ್ದವು. ಆ ಸಂಬಂಧ ಚುನಾವಣಾ ಅಧಿಕಾರಿಗಳು ನೀಡಿದ್ದ ದೂರಿನನ್ವಯ ಮಾಜಿ ಶಾಸಕ ಮುನಿರತ್ನ ಸೇರಿದಂತೆ 14 ಮಂದಿ ವಿರುದ್ಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಮುನಿರತ್ನ ಜಾಮೀನು ಸಹ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಪ್ರಕರಣದ ತನಿಖೆಯನ್ನೇ ಪೊಲೀಸರು ಸ್ಥಗಿತಗೊಳಿಸಿದ್ದಾರೆ ಎಂದು ದೂರುದಾರರು ಆರೋಪಿಸುತ್ತಿದ್ದಾರೆ.

ಚೀಟಿಗಳನ್ನು ಜಪ್ತಿ ಮಾಡಿ ಕೆಲದಿನಗಳವರೆಗೆ ತಮ್ಮ ಬಳಿಯೇ ಅಧಿಕಾರಿಗಳು ಇಟ್ಟುಕೊಂಡಿದ್ದರು. ‘ಚೀಟಿಗಳು ಕಳೆದಿವೆ’ ಎಂದು ಮತದಾರರಿಂದಲೇ ಹೇಳಿಕೆ ಪಡೆದು ಮರಳಿಸುತ್ತಿದ್ದಾರೆ ಎಂದರು.

ಚುನಾವಣಾ ಅಧಿಕಾರಿಯೊಬ್ಬರು, ‘ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಚುನಾವಣೆ ಇದೇ 28ರಂದು ನಡೆಯಲಿದೆ. ಪ್ರತಿಯೊಬ್ಬ ಮತದಾರರು ತಮ್ಮ ಹಕ್ಕು ಚಲಾಯಿಸಬೇಕು. ಹೀಗಾಗಿ, ಚೀಟಿಗಳನ್ನು ಮತದಾರರ ವಿಳಾಸಕ್ಕೆ ಹೋಗಿ ಕೊಡುತ್ತಿದ್ದೇವೆ. ವಿಳಾಸದ ಬಗ್ಗೆ ಅನುಮಾನ ಬಂದರೆ, ಅಂಥ ಚೀಟಿಗಳನ್ನು ನಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದೇವೆ’ ಎಂದು ತಿಳಿಸಿದರು.

‘ಪ್ಲ್ಯಾಟ್‌ನಲ್ಲಿ ಸಿಕ್ಕಿರುವ ಚೀಟಿಗಳೆಲ್ಲ ಅಸಲಿ. ಮತದಾರರಿಂದ ಅವುಗಳನ್ನು ಯಾರು ಸಂಗ್ರಹಿಸಿದ್ದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ’ ಎಂದು ಅವರು ಹೇಳಿದರು.

ಕ್ರಮಕ್ಕೆ ಆಗ್ರಹ: ’ಗುರುತಿನ ಚೀಟಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ಜಾಲಹಳ್ಳಿ ಘಟಕದ ಕಾರ್ಯಕರ್ತರು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.

‘ದಾಳಿ ವೇಳೆ ಪ್ಲ್ಯಾಟ್‌ನಲ್ಲಿ ಕೆಲವೇ ಚೀಟಿಗಳು ಸಿಕ್ಕಿವೆ. ಸಾವಿರಾರು ಚೀಟಿಗಳನ್ನು ಸುಟ್ಟು ಹಾಕಲಾಗಿದೆ. ಮೋರಿಗೂ ಎಸೆಯಲಾಗಿದೆ. ಅಂಥ ಚೀಟಿಗಳ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ಸಂಗ್ರಹಿಸುತ್ತಿಲ್ಲ’ ಎಂದು ಮನವಿಯಲ್ಲಿ ಕಾರ್ಯಕರ್ತರು ದೂರಿದ್ದಾರೆ.

ಕ್ರಮಕ್ಕೆ ಆಗ್ರಹ: ಮನವಿ ಸಲ್ಲಿಕೆ

’ಗುರುತಿನ ಚೀಟಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ಜಾಲಹಳ್ಳಿ ಘಟಕದ ಕಾರ್ಯಕರ್ತರು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.

‘ದಾಳಿ ವೇಳೆ ಪ್ಲ್ಯಾಟ್‌ನಲ್ಲಿ ಕೆಲವೇ ಚೀಟಿಗಳು ಸಿಕ್ಕಿವೆ. ಸಾವಿರಾರು ಚೀಟಿಗಳನ್ನು ಸುಟ್ಟು ಹಾಕಲಾಗಿದೆ. ಮೋರಿಗೂ ಎಸೆಯಲಾಗಿದೆ. ಅಂಥ ಚೀಟಿಗಳ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ಸಂಗ್ರಹಿಸುತ್ತಿಲ್ಲ’ ಎಂದು ಮನವಿಯಲ್ಲಿ ಕಾರ್ಯಕರ್ತರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT