ಗೋಲಿಬಾರ್‌: ವರದಿ ಕೇಳಿದ ಕೇಂದ್ರ

4

ಗೋಲಿಬಾರ್‌: ವರದಿ ಕೇಳಿದ ಕೇಂದ್ರ

Published:
Updated:
ಗೋಲಿಬಾರ್‌: ವರದಿ ಕೇಳಿದ ಕೇಂದ್ರ

ನವದೆಹಲಿ/ಚೆನ್ನೈ: ತೂತ್ತುಕುಡಿಯಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ಗೋಲಿಬಾರ್‌ ಕುರಿತು ಕೇಂದ್ರ ಗೃಹ ಸಚಿವಾಲಯ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ) ತಮಿಳುನಾಡು ಸರ್ಕಾರ ಮತ್ತು ಪೊಲೀಸರಿಂದ ಸಮಗ್ರ ವರದಿ ಕೇಳಿವೆ.

ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಎನ್‌ಎಚ್‌ಆರ್‌ಸಿ, ಪರಿಸ್ಥಿತಿ ನಿರ್ವಹಿಸಲು ಸ್ಥಳೀಯ ಆಡಳಿತ ಮತ್ತು ಪೊಲೀಸರು ವಿಫಲರಾಗಿದ್ದಾರೆ ಎಂದು ಹೇಳಿದೆ.

ತನಿಖೆಗೆ ಆಯೋಗ: ಈ ನಡುವೆ ಗೋಲಿಬಾರ್‌ ತನಿಖೆಗೆ ತಮಿಳುನಾಡು ಸರ್ಕಾರ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿದೆ.

ಮದ್ರಾಸ್‌ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಶನ್‌ ಅವರಿಗೆ ಪ್ರಕರಣದ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ. ವರದಿ ಸಲ್ಲಿಸಲು ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ.

ಕಾರ್ಖಾನೆ ಮುಚ್ಚಲು ಒತ್ತಾಯ

ತೂತ್ತುಕುಡಿಯಲ್ಲಿರುವ ಸ್ಟೆರಲೈಟ್‌ ತಾಮ್ರ ಸಂಸ್ಕರಣಾ ಘಟವನ್ನು ಕೂಡಲೇ ಮುಚ್ಚುವಂತೆ ಸಿಪಿಎಂ ಒತ್ತಾಯಿಸಿದೆ.

ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿರುವುದು ಪೊಲೀಸರ ಕ್ರೌರ್ಯವನ್ನು ತೋರಿಸುತ್ತದೆ ಎಂದು ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ. ಗೋಲಿಬಾರ್‌ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪಕ್ಷ ಒತ್ತಾಯಿಸಿದೆ.

ಮೂರು ರಾಜ್ಯ ಒಪ್ಪಿಗೆ ನೀಡಿರಲಿಲ್ಲ:ಸಿಎಸ್‌ಇ

ತಮಿಳುನಾಡಿನಲ್ಲಿ ತಾಮ್ರ ಸಂಸ್ಕರಣಾ ಕಾರ್ಖಾನೆ ಸ್ಥಾಪಿಸುವ ಮುನ್ನ ವೇದಾಂತ ಕಂಪನಿ ಮೂರು ರಾಜ್ಯಗಳಲ್ಲಿ ಕಾರ್ಖಾನೆ ಸ್ಥಾಪಿಸಲು ಮುಂದಾಗಿತ್ತು ಎಂದು ದೆಹಲಿಯ ಸ್ವಯಂಸೇವಾ ಸಂಸ್ಥೆ ಸೆಂಟರ್ ಫಾರ್‌ ಸೈನ್ಸ್‌ ಅಂಡ್‌ ಎನ್ವಿರಾನ್‌ಮೆಂಟ್‌(ಸಿಎಸ್‌ಇ) ಹೇಳಿದೆ.

ಪರಿಸರದ ಮೇಲಾಗುವ ದುಷ್ಪರಿಣಾಮ ಮತ್ತು ಭಾರಿ ವಾಯುಮಾಲಿನ್ಯದ ಕಾರಣಕ್ಕಾಗಿ ಗುಜರಾತ್‌, ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ಕಾರ್ಖಾನೆ ಸ್ಥಾಪನೆಗೆ ಒಪ್ಪಿಗೆ ನೀಡಿರಲಿಲ್ಲ ಎಂದು ಸಿಎಸ್‌ಇಯ ಮಹಾನಿರ್ದೇಶಕಿ ಸುನಿತಾ ನಾರಾಯಣ್‌ ತಿಳಿಸಿದ್ದಾರೆ.

ಮೂರು ರಾಜ್ಯಗಳು ಒಪ್ಪಿಗೆ ನಿರಾಕರಿಸಿದ ನಂತರ ವೇದಾಂತ ಕಂಪನಿಯು ತಮಿಳುನಾಡು ಸರ್ಕಾರದ ಮನವೊಲಿಸಿ ಕಾರ್ಖಾನೆ ಸ್ಥಾಪಿಸಿದೆ ಎಂದು ಅವರು ಹೇಳಿದ್ದಾರೆ.

ತಾಮ್ರ ಸಂಸ್ಕರಣಾ ಘಟಕ 20 ವರ್ಷದಿಂದ ಪರಿಸರವನ್ನು ಸಾಕಷ್ಟು ಮಲಿನಗೊಳಿಸಿದೆ. ಘಟಕದ ವಿರುದ್ಧ ನಡೆಯುತ್ತಿರುವ ಹೋರಾಟ ನ್ಯಾಯಯುತವಾಗಿದೆ. ಅಮಾಯಕರ ಮೇಲೆ ನಡೆದ ಗೋಲಿಬಾರ್‌ ಖಂಡನಾರ್ಹ ಎಂದು ಸುನಿತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಖಾನೆಯ ಬಾಗಿಲನ್ನು ಶಾಶ್ವತವಾಗಿ ಮುಚ್ಚಿಸಿ ಪರಿಸರ ರಕ್ಷಿಸಬೇಕು ಎಂದು ಅವರು ಕೋರಿದ್ದಾರೆ.

ತೂತ್ತುಕುಡಿ: ಪೊಲೀಸರ ಗುಂಡಿಗೆ ಮತ್ತೊಬ್ಬ ಬಲಿ

ತಮಿಳುನಾಡಿನ ತೂತ್ತುಕುಡಿಯಲ್ಲಿ ಬುಧವಾರ ಮತ್ತೆ ಭುಗಿಲೆದ್ದ ಹಿಂಸಾಚಾರದಲ್ಲಿ ಮತ್ತೊಬ್ಬ ಪ್ರತಿಭಟನಾಕಾರ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

ಇದರೊಂದಿಗೆ ಪೊಲೀಸರ ಗುಂಡಿಗೆ ಬಲಿಯಾದವರ ಸಂಖ್ಯೆ 12ಕ್ಕೆ ಏರಿದಂತಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಹಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ನಡೆದ ಗೋಲಿಬಾರ್‌ ವಿರುದ್ಧ ಬೀದಿಗಿಳಿದ ಜನರು ಪೊಲೀಸರತ್ತ ಕಲ್ಲು ಮತ್ತು ಇಟ್ಟಿಗೆ ತೂರಾಟ ನಡೆಸಿದಾಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದರು. ‌ಸದ್ಯ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು ಸಿಆರ್‌ಪಿಸಿಯ ಸೆಕ್ಷನ್‌ 144 ಅಡಿ ನಿಷೇಧಾಜ್ಞೆ ಜಾರಿಯಲ್ಲಿದೆ.

ವೇದಾಂತ ಸಮೂಹದ ತಾಮ್ರ ಸಂಸ್ಕರಣ ಘಟಕ ವಿರೋಧಿಸಿ ನೂರು ದಿನಗಳಿಂದ ಶಾಂತಯುತವಾಗಿ ನಡೆಯುತ್ತಿದ್ದ ಹೋರಾಟ ಮಂಗಳವಾರ ಹಿಂಸಾಚಾರಕ್ಕೆ ತಿರುಗಿತ್ತು. ಪೊಲೀಸರು ನಡೆಸಿದ ಗೋಲಿಬಾರ್‌ಗೆ 11 ಜನರು ಬಲಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry