ಗಲ್ಲಿ ಕ್ರಿಕೆಟ್‌: ಐಸಿಸಿ ತೀರ್ಪು

7

ಗಲ್ಲಿ ಕ್ರಿಕೆಟ್‌: ಐಸಿಸಿ ತೀರ್ಪು

Published:
Updated:
ಗಲ್ಲಿ ಕ್ರಿಕೆಟ್‌: ಐಸಿಸಿ ತೀರ್ಪು

ಬೆಂಗಳೂರು: ಬೀಸಿ ಹೊಡೆದ ಚೆಂಡು ಮುಂದೆ ಸಾಗಿ ಪಿಚ್‌ನಲ್ಲಿ ಸ್ಕಿಡ್‌ ಆಗಿ ವಾಪಸ್‌ ಬಂದು ಸ್ಟಂಪ್‌ಗೆ ಬಡಿದರೆ ಔಟಾ...ನಾಟ್ ಔಟಾ...?

ಅಂತರರಾಷ್ಟ್ರೀಯ ಕ್ರಿಕೆಟ್ ಅಥವಾ ದೇಶಿ ಮಟ್ಟದ ಮಹತ್ವದ ಪಂದ್ಯದಲ್ಲಾದರೆ ಈ ಪ್ರಶ್ನೆಗೆ ಉತ್ತರಿಸಲು ಮತ್ತು ತೀರ್ಪು ನೀಡಲು ಅಂಪೈರ್ ಮತ್ತು ಮೂರನೇ ಅಂಪೈರ್ ಇರುತ್ತಾರೆ. ಗಲ್ಲಿ ಕ್ರಿಕೆಟ್‌ನಲ್ಲಾದರೆ...?

ಪಾಕಿಸ್ತಾನದ ಸಿಂಧ್‌ ಪ್ರಾಂತದ ಪ್ರದೇಶವೊಂದರ ಮಣ್ಣಿನ ಅಂಗಣದಲ್ಲಿ ಯುವಕರು ಆಡಿದ ಪಂದ್ಯದಲ್ಲಿ ಈ ಪರಿಸ್ಥಿತಿ ನಿರ್ಮಾಣ ಆಗಿತ್ತು.

ಬೌಲರ್‌ನ ಒತ್ತಾಯಕ್ಕೆ ಮಣಿದು ಬ್ಯಾಟ್ಸ್‌ಮನ್‌ ಕ್ರೀಸ್ ತೊರೆದಿದ್ದರೂ ಇದನ್ನು ವಿಡಿಯೊ ಮಾಡಿದ್ದ ಅವರ ಗೆಳೆಯ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ನೆರವು ಕೋರಿದರು.

ಐಸಿಸಿ ತಕ್ಷಣ ಸ್ಪಂದಿಸಿ ತೀರ್ಪು ನೀಡಿದೆ. ಈ ವಿಷಯವನ್ನು ಮತ್ತು ಬ್ಯಾಟ್ಸ್‌ಮನ್ ಔಟಾದ ವಿಡಿಯೊವನ್ನು ಐಸಿಸಿ ಟ್ವಿಟರ್‌ನಲ್ಲಿ ಹರಿಯಬಿಟ್ಟಿದ್ದು ಇದು ಬುಧವಾರ ವೈರಲ್ ಆಗಿತ್ತು.

ಗುಡ್ಡ ಪ್ರದೇಶವೊಂದರಲ್ಲಿ ನಡೆದ ಪಂದ್ಯದಲ್ಲಿ ಜುಬ್ಬಾದಾರಿ ಬ್ಯಾಟ್ಸ್‌ಮನ್‌ ಅಂಥಹುದೇ ಪೋಷಾಕು ಧರಿಸಿದ್ದ ಬೌಲರ್‌ ಹಾಕಿದ ಎಸೆತವನ್ನು ಬೀಸಿ ಹೊಡೆಯುತ್ತಾನೆ. ಮುಂದಕ್ಕೆ ಹೋದ ಚೆಂಡು ನೆಲದಲ್ಲಿ ದಿಢೀರ್ ತಿರುವು ಪಡೆದು ವಾಪಸ್‌ ಬರುತ್ತದೆ. ಬ್ಯಾಟ್ಸ್‌ಮನ್‌ನ ಕಾಲಿನ ಅಡಿಯಿಂದ ನುಗ್ಗಿ ‘ಕಲ್ಲಿನ ಸ್ಟಂಪ್‌’ಗೆ ಬಡಿಯುತ್ತದೆ.

‘ಹಂಸ ಎಂಬುವರು ಈ ವಿಡಿಯೊವನ್ನು ಕಳುಹಿಸಿದ್ದು ತೀರ್ಪು ನೀಡುವಂತೆ ಕೋರಿದ್ದರು. ಐಸಿಸಿಯ ನಿಯಮ 32.1ರ ಪ್ರಕಾರ ನೋಬಾಲ್ ಆಗಿರದ ಎಸೆತವೊಂದು ಬ್ಯಾಟ್ ಅಥವಾ ಬ್ಯಾಟ್ಸ್‌ಮನ್‌ನ ದೇಹಕ್ಕೆ ತಾಗಿ ಸ್ಟಂಪ್‌ಗೆ ಬಡಿದರೂ ಔಟ್‌ ತೀರ್ಪು ನೀಡಲಾಗುತ್ತದೆ. ಆದ್ದರಿಂದ ಇದು ಔಟ್ ಎಂದು ಘೋಷಿಸಿದ್ದೇವೆ’ ಎಂದು ಐಸಿಸಿ ಟ್ವೀಟ್ ಮಾಡಿದೆ.

ಈ ಟ್ವೀಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದನ್ನು ಔಟ್ ಎಂದು ಘೋಷಿಸಿದ್ದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry