ತೃತೀಯ ರಂಗದ ಪಕ್ಷಗಳು ಅಣಬೆಗಳಂತೆ: ಶ್ರೀರಾಮುಲು

7
ರೈತರ ಸಾಲ ಮನ್ನಾ ಮಾಡದಿದ್ದರೆ ಕುಮಾರಸ್ವಾಮಿ ಕುರ್ಚಿ ಬಿಟ್ಟು ತೊಲಗಲಿ

ತೃತೀಯ ರಂಗದ ಪಕ್ಷಗಳು ಅಣಬೆಗಳಂತೆ: ಶ್ರೀರಾಮುಲು

Published:
Updated:
ತೃತೀಯ ರಂಗದ ಪಕ್ಷಗಳು ಅಣಬೆಗಳಂತೆ: ಶ್ರೀರಾಮುಲು

ಬಳ್ಳಾರಿ: ‘ಚುನಾವಣೆಗಳ ಸಂದರ್ಭದಲ್ಲಿ ಹುಟ್ಟಿಕೊಳ್ಳುವ ತೃತೀಯ ರಂಗದ ಪಕ್ಷಗಳು ಅಣಬೆಗಳಂತೆ. ಹೆಚ್ಚು ಕಾಲ ಬಾಳುವುದಿಲ್ಲ. ಚುನಾವಣೆ ಮುಗಿದ ಕೂಡಲೇ ದಿಕ್ಕಾಪಾಲಾಗುತ್ತವೆ’ ಎಂದು ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು ಪ್ರತಿಪಾದಿಸಿದರು.

‘ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾಗ ಕಾಂಗ್ರೆಸ್‌ ಏಕೆ ಬೀಗುತ್ತಿತ್ತು ಎಂದೇ ತಿಳಿಯುತ್ತಿಲ್ಲ. ಏಕೆಂದರೆ ಅದು ಜೊತೆ ಸೇರಿಸಿಕೊಂಡಿರುವ ತೃತೀಯ ರಂಗ ಸದಾ ಕಾಲ ಕಾಂಗ್ರೆಸ್‌ ವಿರುದ್ಧವೇ ಹೋರಾಟ ಮಾಡುತ್ತಾ ಬೆಳೆದಿದೆ’ ಎಂದು ನಗರದ ತಮ್ಮ ಮನೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ತೃತೀಯ ರಂಗದಲ್ಲಿ ಕಾಂಗ್ರೆಸ್‌ ಇಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇವರೆಲ್ಲರೂ ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಪ್ರಧಾನಿ ಮೋದಿಯನ್ನು ಮಣಿಸಬೇಕೆಂದುಕೊಂಡಿದ್ದಾರೆ. ಆದರೆ ಅದು ಆಗದು’ ಎಂದರು.

‘ತೃತೀಯ ರಂಗದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಇಲ್ಲ. ಅದೇನಿದ್ದರೂ ಪ್ರಾದೇಶಿಕಕ್ಕೆ ಮಾತ್ರ ಸೀಮಿತ.  ಈ ರಂಗದ ಪಕ್ಷಗಳಿಗೆ ಬದ್ಧತೆ ಇಲ್ಲ. ಈ ಪಕ್ಷಗಳ ಮುಖಂಡರೆಲ್ಲರೂ ಮೋದಿಯಿಂದ ಸೋತು ಸುಣ್ಣವಾದವರು’ ಎಂದು ವ್ಯಂಗ್ಯವಾಡಿದರು.

‘ಜೆಡಿಎಸ್‌ಗೆ ಬಹುಮತ ದೊರೆತಿಲ್ಲ. ಹೀಗಾಗಿ ರೈತರ ಸಾಲ ಮನ್ನಾ ಅಸಾಧ್ಯ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ಸರಿಯಲ್ಲ. ಮುಖ್ಯಮಂತ್ರಿಯಾದ ಬಳಿಕ ಬಹುಮತದ ಮಾತು ಬರುವುದಿಲ್ಲ. ಅವರಿಗೆ ಸಾಲ ಮನ್ನಾ ಮಾಡಲು ಆಗದಿದ್ದರೆ, ಬಹುಮತ ದೊರಕದೇ ಇದ್ದರೆ ಕೂಡಲೇ ಕುರ್ಚಿ ಬಿಟ್ಟು ತೊಲಗಲಿ’ ಎಂದು ಆಗ್ರಹಿಸಿದರು.

‘ಕಪ್ಪು ಹಣವನ್ನು ವಶಪಡಿಸಿಕೊಂಡು ದೇಶದ ಪ್ರತಿ ನಾಗರಿಕನ ಬ್ಯಾಂಕ್‌ ಖಾತೆಗೆ ₹15 ಲಕ್ಷ ಜಮಾ ಮಾಡುವ ಮೋದಿ ಭರವಸೆಯನ್ನು, ರಾಜ್ಯದ ರೈತರ ಸಾಲ ಮನ್ನಾ ಭರವಸೆಯೊಂದಿಗೆ ಹೋಲಿಸಬೇಡಿ’ ಎಂದರು.

‘ಮತ್ತೆ ಆಪರೇಷನ್‌ ಕಮಲದ ಪ್ರಸ್ತಾಪ ಇಲ್ಲ. 104 ಸ್ಥಾನ ಗೆದ್ದರೂ ನಮಗೆ ಅಧಿಕಾರ ಸಿಗಲಿಲ್ಲ. ಆದರೂ ಅಧಿಕಾರಕ್ಕಾಗಿ ಬೇರೆ ಪಕ್ಷಗಳ ಶಾಸಕರನ್ನು ಕರೆತರುವಲ್ಲಿ ನಮಗೆ ಆಸಕ್ತಿ ಇಲ್ಲ. ಅದು ಬೇಕಾಗೂ ಇಲ್ಲ’ ಎಂದರು.

‘ಬಳ್ಳಾರಿ ಲೋಕಸಭೆ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಅಂಗೀಕಾರಗೊಂಡಿದೆ. ಉಪಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವಂತೆ ವರಿಷ್ಠರು ಹೇಳಿದರೆ ಸ್ಪರ್ಧಿಸಲೇಬೇಕಾಗುತ್ತದೆ. ಉಪಚುನಾವಣೆಗಳನ್ನು ಎದುರಿಸಬೇಕೆಂದು ನನ್ನ ಹಣೆಯಲ್ಲಿ ಬರೆದಿದ್ದರೆ ಏನು ಮಾಡಲು ಸಾಧ್ಯ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry