ಹಣೆಯಲಿ ಮೂಡಿದೆ ಚುಕ್ಕಿ, ಚಂದ್ರಮ...

7

ಹಣೆಯಲಿ ಮೂಡಿದೆ ಚುಕ್ಕಿ, ಚಂದ್ರಮ...

Published:
Updated:
ಹಣೆಯಲಿ ಮೂಡಿದೆ ಚುಕ್ಕಿ, ಚಂದ್ರಮ...

‘ತೇರಿ ಬಿಂದಿಯಾ ರೇ... ಸಜನ್‌ ಬಿಂದಿಯಾ ಲೇ ಲೇಗಿ ತೇರಿ ನಿಂದಿಯಾ ರೇ

ತೇರಿ ಮಾತೆ ಲಗೇ ಹೈ ಯೂ ಜೈಸೆ ಚಂದಾ, ತಾರೇ...’

70ರ ದಶಕದಲ್ಲಿ ಅಮಿತಾಭ್‌ ಬಚ್ಚನ್, ಜಯಾ ಬಾಧುರಿ ಅಭಿನಯದ ‘ಅಭಿಮಾನ್’ ಸಿನಿಮಾದ ಈ ಹಾಡಿನ ರೊಮ್ಯಾಂಟಿಕ್ ಗುಂಗಿಗೆ ಮರುಳಾಗದವರುಂಟೇ?

ನಲ್ಲನ ನಿದ್ದೆಯನ್ನು ಕದಿಯುವ ಶಕ್ತಿ ಹಣೆಬೊಟ್ಟಿಗಿದೆ. ಹಣೆಗೆ ಭೂಷಣವೆನ್ನುವಂತಿರುವ ಅವಳ ಬಿಂದಿಗೆ ಮನಸೋಲದವರಾರು? ಬೈತಲೆಯ ಹಾದಿಯಲ್ಲಿ ಕಂಪು ಸೂಸುವ ಕುಂಕುಮ ಮುತ್ತೈದೆಯರ ದ್ಯೋತಕವಷ್ಟೇ ಅಲ್ಲ ಮದುವೆಯಾಗದ ಹರೆಯದ ಹುಡುಗಿಯರ ಬೈತಲೆಗೂ ಅಲಂಕಾರಿಕವೇ. ಕುಂಕುಮದ ಆಧುನಿಕ ರೂಪಾಂತರವೇ ಆಗಿರುವ ಬಿಂದಿಗಳಲ್ಲಂತೂ ಈಗ ನೂರಾರು ವಿನ್ಯಾಸಗಳಿವೆ.

ಮದುವೆಯಾದ ಮಹಿಳೆಗೆ ಕೆಂಪು ಕುಂಕುಮವೇ ಸಾಂಪ್ರದಾಯಿಕ ಅಲಂಕಾರವಾಗಿದ್ದರೂ, ಈಗ ಮುಖಾರವಿಂದಕ್ಕೆ ಶೋಭೆ ತರುವ ಬಿಂದಿಗಳಲ್ಲಿ ಬೇರೆ, ಬೇರೆ ಥರಗಳದ್ದನ್ನೇ ಮಹಿಳೆಯರು, ಯುವತಿಯರು ಈಗ ಬಯಸುತ್ತಾರೆ. ಡ್ರೆಸ್‌ಗೆ ತಕ್ಕಂತೆ ಆಯ್ಕೆಯೂ ಬದಲಾಗುತ್ತದೆ. ಒಂದೇ ಬಣ್ಣದ, ಮಿನುಗುವ ಹರಳು ಇರುವಂಥವು ಕೆಲವರ ಆಯ್ಕೆಯಾದರೆ, ಝಗಮಗಿಸುವ ಝರಿ ವಿನ್ಯಾಸ, ಮಣಿಗಳ ಅಲಂಕಾರ ಇರುವ, ಉದ್ದನೆಯ, ಮೊಟ್ಟೆಯಾಕಾರದವು, ಸೂಕ್ಷ್ಮ ಚಿತ್ತಾರಗಳಿರುವ ವಿವಿಧ ಬಗೆಯ ಬಿಂದಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಬಣ್ಣ, ಗಾತ್ರ, ಆಕಾರ, ಕಚ್ಚಾ ವಸ್ತುಗಳ ಆಧಾರದಲ್ಲಿ ಹಲವು ವಿಧದ ಬಿಂದಿಗಳನ್ನು ತಯಾರಿಸುವ ಕಾರ್ಯ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ವಿನ್ಯಾಸಮಯ ಕುಂಕುಮ ಹಚ್ಚಿಕೊಳ್ಳುವ ಹಿನ್ನೆಲೆಯಲ್ಲಿ ಈಗ ಯಾವ ಸಾಂಪ್ರದಾಯಿಕ ಭಾವನೆಯೂ ಇರುವುದಿಲ್ಲ. ಚಂದ ಕಾಣಲಿ ಎಂಬ ಉದ್ದೇಶದಿಂದಷ್ಟೇ ನವನವೀನ ಬಿಂದಿಗಳು ಯುವತಿಯರ ಮುಖದಲ್ಲಿ ಮಿಂಚುತ್ತಿವೆ.

ಕೆಲವು ಬಿಂದಿಗಳು ಟ್ರೆಂಡ್ ಸೆಟ್ ಮಾಡಲು ಯಶಸ್ವಿಯಾಗಿವೆ. ಕೆಂಪು ವೃತ್ತಾಕಾರದ ಬಿಂದಿ ಬೆಂಗಾಲಿ ಸ್ಟೈಲ್ ಎಂದೇ ಪರಿಚಿತ. ದೊಡ್ಡ ಹಣೆಯವರಿಗೆ ಹಾಗೂ ಮೊಟ್ಟೆಯಾಕಾರದ ಮುಖದವರಿಗೆ ಉದ್ದನೆಯ ಬಿಂದಿ ಹೆಚ್ಚು ಚಂದ ಕಾಣುತ್ತದೆ ಎನ್ನಲಾಗಿದೆ. ಕಪ್ಪು ವೃತ್ತಾಕಾರದ ಬಿಂದಿ ದಕ್ಷಿಣ ಭಾರತೀಯರಿಗೆ ಹೆಚ್ಚು ಪ್ರಿಯ. ಈ ಭಾಗದ ಸಾಂಪ್ರದಾಯಿಕ ಉಡುಪಿಗೂ ಇದು ಸುಂದರವಾಗಿ ಕಾಣುತ್ತದೆ.

ಮಹಾರಾಷ್ಟ್ರದಲ್ಲಿ ಅರ್ಧಚಂದ್ರಾಕಾರದ ಬಿಂದಿ ಹೆಚ್ಚು ಪ್ರಚಲಿತ. ಹೂಗಳ ವಿನ್ಯಾಸದವುಗಳನ್ನು ಬೇರೆ, ಬೇರೆ ಬಣ್ಣಗಳಲ್ಲಿ ಮಾಡಲಾಗುತ್ತಿದೆ. ಹರಳುಗಳನ್ನೂ ಬಳಸಿ ಬಹಳ ವಿಧಗಳನ್ನು ಇದರಲ್ಲಿ ಹುಟ್ಟು ಹಾಕಲಾಗಿದೆ. ಹಣೆಯ ಮೇಲ್ಭಾಗದಲ್ಲಿ ಬೈತಲೆಯ ಬಳಿ ಹಚ್ಚುವ ಮಾಂಗ್ ಟೀಕಾ ಸಹ ಹಲವು ಕಡೆ ಹೆಸರು ಮಾಡಿದೆ.

ಬಣ್ಣಬಣ್ಣದ ಸ್ಟೋನ್‌ಗಳನ್ನು ಬಳಸಿ ಮಾಡಿರುವ ಬಿಂದಿಗಳು ಈಗ ಎಲ್ಲ ವಯೋಮಾನದವರನ್ನೂ ಸೆಳೆದಿವೆ. ಎರಡು-ಮೂರು ಬಿಂದಿಗಳನ್ನು ಸೇರಿಸಿ ಮಾಡಿದ ಪದರುಪದರಾಗಿರುವ ಬಿಂದಿಗಳು, ಮದುಮಗಳಿಗಾಗಿಯೇ ಸಿದ್ಧಪಡಿಸಲಾದ ಬಿಂದಿಗಳು ಬೇಕಾದಷ್ಟು ಮಾದರಿಯಲ್ಲಿ ಲಭ್ಯವಿವೆ.

ಮಹಿಳೆಯರ ಮನಮೆಚ್ಚಿನ ಧಾರಾವಾಹಿಗಳ ಮೂಲಕ ಅತ್ಯಾಧುನಿಕ ವಿನ್ಯಾಸಗಳ ಬಿಂದಿಗಳು ಬಳಕೆಗೆ ಬರುತ್ತಿವೆ. ಬಹಳಷ್ಟು ಹರಳುಗಳನ್ನು ಬಳಸಿ ಮಾಡಿದ ಬಿಂದಿಗಳು, ಸ್ಟಾರ್ ಬಿಂದಿಗಳು ಈಚೆಗೆ ಪ್ರಚಲಿತದಲ್ಲಿವೆ. ಬಾಣದ ಗುರುತಿನವು, ಹಾವಿನ ಆಕಾರದವು ಸಹ ಸಿನಿಮಾ ಹಾಗೂ ಕಿರುತೆರೆಯಿಂದ ಬಳುವಳಿ ಬಂದಂಥವು.

ಮನೆಗೆ ಬಂದವರಿಗೆ ಅರಿಸಿನ-ಕುಂಕುಮ ಕೊಟ್ಟು ಒಳ್ಳೆಯದನ್ನು ಬಯಸುವ ಭಾರತೀಯ ಸಂಪ್ರದಾಯ ಒಂದೆಡೆಯಾದರೆ, ಹಣೆಗೆ ಹಚ್ಚುವುದರಲ್ಲೂ ಕ್ರಿಯೇಟಿವಿಟಿ ಹುಡುಕುವುದು ಈಗಿನ ಹುಡುಗಿಯರ ಜಾಯಮಾನ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry