ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಾಗಿ ಕಾಡತಾವ..

Last Updated 24 ಮೇ 2018, 19:30 IST
ಅಕ್ಷರ ಗಾತ್ರ

ನಾಗಾಲೋಟದಲ್ಲಿ ಬೆಳೆಯುತ್ತಿರುವ ಆಧುನಿಕತೆಗೆ ಬದುಕನ್ನು ಒಗ್ಗಿಸಿಕೊಂಡು ಜಂಜಡದ ನಡುವೆಯೇ ಬದುಕಿನ ಬಂಡಿಯನ್ನು ತಳ್ಳುವ ಸಿಟಿ ಜನರಿಗೆ ಹಳ್ಳಿ ಸೊಗಡಿನ ಪರಿಚಯ ಅಷ್ಟೊಂದಿಲ್ಲ.

ಇಂದಿನ ಮಕ್ಕಳಿಗೂ ಅದು ಹೊರತಾಗಿಲ್ಲ. ಪೂರ್ವಜರ ಕಾಯಕ, ನಿಸರ್ಗ ಕಾಳಜಿ, ಬದುಕನ್ನು ಪ್ರೀತಿಸುವ ಬಗೆ, ನೆರೆಹೊರೆಯವರ ಇಷ್ಟ- ಕಷ್ಟಗಳಿಗೆ ಓಗೊಡುವ ವಿಶಾಲ ಹೃದಯದ ಅರಿವಿನ ದೃಶ್ಯಗಳನ್ನು ಇಂದಿನ ಪೀಳಿಗೆಗೆ ಬದುಕಿನ ಪಾಠವಾಗಿಸುವಲ್ಲಿ ಅವನ್ನು ಚಿತ್ರಗಳ ಮೂಲಕ ಕಟ್ಟಿಕೊಡುವ ಕಲಾವಿದ ಶರಣಪ್ಪ ಅವರ ಕುಂಚದ ಕೈಚಳಕ ಯಶಸ್ವಿಯಾಗಿದೆ.

ಕುರಿ, ಕೋಳಿ ಸಾಕಾಣಿಕೆ, ಹಳ್ಳಿ ಜೀವನ, ಏಡ್ಸ್, ಬಾಲ್ಯ ವಿವಾಹ, ವರದಕ್ಷಿಣೆಯಂತಹ ಸಾಮಾಜಿಕ ಪಿಡುಗಗಳ ಕುರಿತ ಅರಿವು, ಜಾಗೃತಿ ಕಾರ್ಯಕ್ರಮಗಳು, ಹೆಣ್ಣಿನ ಮೇಲಾಗುವ ದೌರ್ಜನ್ಯ, ಹೆಣ್ಣಿನ ಮಹತ್ವ, ತಾಯಿ, ಸಹೋದರಿ, ಮಡದಿ, ಮಗಳಾಗಿ ಆಕೆ ನಿರ್ವವಹಿಸುವ ಪಾತ್ರಗಳ ಕುರಿತು ಮಹಿಳಾ ಪರ ಆಲೋಚನೆಗಳನ್ನು,  ಕಲಾವಿದ ತನ್ನ ಜೀವನದಲ್ಲಿ ಕಂಡುಂಡ ಬದುಕಿನ ಅನುಭವಗಳನ್ನು ಕಲಾಪ್ರಿಯರಿಗೆ ಚಿತ್ರಕಲೆಯ ಮೂಲಕ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.

ಜಲವರ್ಣ, ಅಕ್ರೆಲಿಕ್, ಆಯಿಲ್ ಬಣ್ಣಗಳನ್ನೇ ಹೆಚ್ಚಾಗಿ ಬಳಸಿಕೊಂಡು, ಮನದಲ್ಲಿ ಮೂಡಿದ ಕಲ್ಪನೆಗಳಿಗೆ ತಕ್ಕಂತೆ ಬಣ್ಣಗಳನ್ನು ಬಳಸಿ ಸ್ಥಿರ ಚಿತ್ರ, ನೈಸರ್ಗಿಕ ಚಿತ್ರಗಳನ್ನು ಬಿಡಿಸಿದ್ದಾರೆ.  ಅಕ್ರೆಲಿಕ್ ಬಣ್ಣಗಳಿಂದ ಚಿತ್ರಿಸಿದ ಕಲಾಕೃತಿ ಗಾಳಿಗೆ ಮೈಯೊಡ್ಡಲು ಬಹಳಷ್ಟು ಸಮಯ ಬೇಕಿಲ್ಲ. ಹಾಗಾಗಿ ಇತ್ತೀಚೆಗೆ ಇದರ ಬಳಕೆ ಹೆಚ್ಚಾಗಿದೆ ಎನ್ನುವ ಅಭಿಪ್ರಾಯ ಅವರದ್ದು.

‘ನಿಸರ್ಗದ ಹೊರತು ನಮಗೆ ಬದುಕಿಲ್ಲ, ವ್ಯಕ್ತಿ-ವ್ಯಕ್ತಿತ್ವವನ್ನು ಕ್ರಿಯಾಶೀಲನನ್ನಾಗಿ ಮಾಡ್ತದ, ಅದರೊಂದಿಗಿನ ಒಡನಾಟ ನಮ್ಮ ಎಲ್ಲ ನೋವುಗಳನ್ನ ಮರೆ ಮಾಡ್ತದ, ನಿಸರ್ಗದ ಹೊರತು ಮನುಷ್ಯ ಏನೂ ಮಾಡ್ಲಿಕೆ ಆಗಲ್ಲ. ನಾವೇಷ್ಟೇ ವೈಜ್ಞಾನಿಕತೆ, ತಾಂತ್ರಿಕತೆ, ಆಧುನಿಕತೆಯತ್ತ ಮುಖಮಾಡಿ ನಿಂತಿದ್ರೂ ಸಹ ಪರಿಸರ ನಮ್ಮಕ್ಕಿಂತ ಒಂದು ಹೆಜ್ಜೆ ಮುಂದ ಇರ್ತದ.

ನಿಸರ್ಗ ಕಲಿಸುವ ಬದುಕಿನ ಪಾಠ ಅದ್ಭುತ, ಅದನ್ನ ಆನಂದಿಸುವವನೇ ನಿಜವಾದ ಸುಖಿ. ‘ಕೈಬೀಸಿ ಕರೀತಾವ, ಕಥೆ ಹೇಳತಾವ, ನೆನಪಾಗಿ ಕಾಡತಾವ.. ಹಳ್ಳಿ ಸೊಗಡಿನ ಸಿರಿ’ ಎನ್ನುವ ಕಲಾವಿದರ ಮಾತು ಅವರ ಚಿತ್ರಕಲೆಗೆ ಹಿಡಿದ ಕೈಗನ್ನಡಿಯಂತಿತ್ತು.

ಚಿತ್ರಕಲೆ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿ ಮಾಡುವ, ನೋವ ಮರೆಸಿ ಮನಸ್ಸನ್ನು ಸಂತೋಷದಿಂಡುವ, ಜಗಮರೆವ ಸ್ವರ್ಗಸುಖದ ತನ್ಮಯತೆಯಲ್ಲಿ ತೇಲಿಸುವ, ಮನಶಾಂತಿ ನೀಡುವ ಏಕೈಕ ಕಲೆ. ಸೃಜನಾತ್ಮಕತೆ, ಸೂಕ್ಷ್ಮ ಸಂವೇದನೆ, ಸಹನೆಯನ್ನು ಕಲಿಸುವಂತಹ ಮಾರ್ಗ ಎನ್ನುವುದನ್ನು ಅವರ ಚಿತ್ರಗಳಲ್ಲಿ ಕಾಣಬಹುದು.

ಮನದಲ್ಲಿ ಮೂಡಿದ ಚಿತ್ರ ಪರದೆಯ ಮೇಲೆ ಪರಿಪೂರ್ಣವಾಗಿ ಮೂಡುವವರೆಗೂ ಕಲಾವಿದರನಿಗೆ ನೆಮ್ಮದಿ ಇರಲ್ಲ, ಕೊಂಚ ಏರುಪೇರಾದರೂ ಚಿತ್ರ ಅಪೂರ್ಣವಾಗಿ ಅಂದಗೆಟ್ಟಂತಾಗುತ್ತದೆ. ಪ್ರತಿಯೊಬ್ಬ ಕಲಾವಿದನಿಗೂ ಅವನದ್ದೇ ಆದ ಕಲ್ಪನೆ, ಶೈಲಿ, ಬಣ್ಣಗಳ ಪರಿಕಲ್ಪನೆ, ವೇಗ, ಗುಣಮಟ್ಟ ಇರುತ್ತದೆ. ಬಿಡಿಸಿದ ಚಿತ್ರಕಲೆಗಳು ಮಾರಾಟವಾಗದಿದ್ದಲ್ಲಿ ಬೇಸರಿಸುವ ಅಗತ್ಯವಿಲ್ಲ. ಕಲೆಗೆ ಬೆಲೆ ಕಟ್ಟಲಾಗದು.

ಕಲಾವಿದ ತನ್ನ ಪರಿಶ್ರಮ, ಕೌಶಲವನ್ನು ಇಮ್ಮಡಿಗೊಳಿಸಿಕೊಂಡು ಬೆಳೆಯುತ್ತಲೆ ಇರಬೇಕು. ಒಂದಲ್ಲ ಒಂದು ದಿನ ಪಟ್ಟ ಪರಿಶ್ರಮಕ್ಕೆ ಬೆಲೆ, ನೆಲೆ ಎರಡೂ ಸಿಗುವುದು ಎನ್ನುವ ಭಾವ ಶರಣಪ್ಪ ಅವರ ಕಲಾಕೃತಿಗಳಲ್ಲಿ ಎದ್ದು ಕಾಣುತ್ತದೆ. ಹಳ್ಳಿಸೊಗಡಿನಲ್ಲಿ ಹುಟ್ಟಿ ಬೆಳೆದ ಪ್ರತಿಭಾವಂತ ಚಿತ್ರಕಲಾವಿದ ಶರಣಪ್ಪ ಬಿ.ಎಚ್. ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯವರು.

ಸದ್ಯ ಗದಗ ಜಿಲ್ಲೆಯ ವಿಜಯ್‌ ಕಲಾ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕಂದಿನಿಂದೆಲೇ ಒಡಮೂಡಿದ ಚಿತ್ರಕಲಾಸಕ್ತಿ ಬಡತನದ ಪರಿಸ್ಥಿತಿಗೆ ನೆರವಾಗಿದ್ದಲ್ಲದೆ, ಇಂದು ದೊಡ್ಡ ಕಲಾವಿದನಾಗುವತ್ತ ಬದುಕಿಗೆ ದಾರಿ ತೋರಿಸಿ ಕೊಟ್ಟಿದೆ. ಸುಮಾರು 20 ವರ್ಷಗಳ ಜೀವನಾನುಭವವನ್ನು ಬಣ್ಣಗಳ ಬದುಕಿನೊಂದಿಗೆ ಕಟ್ಟಿಕೊಂಡಿದ್ದಾರೆ.

ಬೀದರ್‌, ಬೆಳಗಾವಿ, ಬೆಂಗಳೂರು, ಮಣಿಪುರ, ಮೌಂಟ್‍ಅಬು, ರಾಜಸ್ಥಾನ, ಉತ್ತರ ಪ್ರದೇಶ, ಹೈದರಾಬಾದ್, ಗೋವಾ, ಮುಂಬೈ ಸೇರಿದಂತೆ ರಾಜ್ಯ, ರಾಷ್ಟ್ರದಾದ್ಯಂತ ಶಿಬಿರ, ಪ್ರದರ್ಶನ ಮೇಳಗಳಲ್ಲಿ ಭಾಗವಹಿಸಿದ ಹೆಮ್ಮೆ ಇವರದ್ದು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಚಿತ್ರ ಕಲಾವಿದ ಶರಣಪ್ಪ ಬಿ.ಎಚ್‌ ಅವರ ಕಲಾಕೃತಿಗಳ ಪ್ರದರ್ಶನ ನಗರದ ಬಿಟಿಎಂ ಲೇಔಟ್ ಮೊದಲ ಹಂತದ ಐಆರ್‌ಎ ಆರ್ಟ್‌ಗ್ಯಾಲರಿಯಲ್ಲಿ ಮೇ 23ರಿಂದ ಆರಂಭವಾಗಿದ್ದು,  25ರವರೆಗೆ ನಡೆಯಲಿದೆ. ಈ ಪ್ರದರ್ಶನದಲ್ಲಿ ಚಿತ್ರಗಳನ್ನು ಖರೀದಿಸುವ ಅವಕಾಶವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT