ಯಡಿಯೂರಪ್ಪ ವಿರುದ್ಧ ಎಸಿಬಿಗೆ ದೂರು

7
ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿಗೆ ಆಮಿಷವೊಡ್ಡಿದ ಆರೋಪ

ಯಡಿಯೂರಪ್ಪ ವಿರುದ್ಧ ಎಸಿಬಿಗೆ ದೂರು

Published:
Updated:
ಯಡಿಯೂರಪ್ಪ ವಿರುದ್ಧ ಎಸಿಬಿಗೆ ದೂರು

ಬೆಂಗಳೂರು: ಬಿಜೆಪಿಗೆ ಅಗತ್ಯ ಸಂಖ್ಯೆಯ ಶಾಸಕರಿಲ್ಲದಿದ್ದರೂ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿ, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರಿಗೆ ಹಣದ ಆಮಿಷವೊಡ್ಡಿದ್ದರು ಎಂದು ಆರೋಪಿಸಿ ‘ಭ್ರಷ್ಟಾಚಾರ ನಿಗ್ರಹ ದಳ’ಕ್ಕೆ (ಎಸಿಬಿ) ದೂರು ಕೊಡಲಾಗಿದೆ.

ರಾಜ್ಯ ಕಾಂಗ್ರೆಸ್‌ ಕಾನೂನು ವಿಭಾಗದ ಕಾರ್ಯದರ್ಶಿ ಸೂರ್ಯ ಮುಕುಂದರಾಜ್‌ ಅವರು ಎಸಿಬಿಗೆ ಕೊಟ್ಟಿರುವ ಮೂರು ಪುಟಗಳ ದೂರಿನಲ್ಲಿ, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ, ಬಿ.ವೈ. ವಿಜಯೇಂದ್ರ,  ಶಾಸಕರಾದ ಶ್ರೀರಾಮುಲು, ಬಿ.ಜೆ. ಪುಟ್ಟಸ್ವಾಮಿ ಅವರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ.

ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ನಡೆದ ರಾಜಕೀಯ ಬೆಳವಣಿಗೆಯನ್ನು ದೂರಿನಲ್ಲಿ ವಿವರಿಸಲಾಗಿದೆ. ಈ ಆರೋಪಕ್ಕೆ ಪೂರಕವಾಗಿ ಬಿಜೆಪಿ ನಾಯಕರು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾದ ಧ್ವನಿಮುದ್ರಿಕೆಗಳನ್ನು ಲಗತ್ತಿಸಲಾಗಿದೆ.

ಯಡಿಯೂರಪ್ಪ ವಿಧಾನಸಭೆಯಲ್ಲಿ ಮೇ 19ರಂದು ಬಹುಮತ ಸಾಬೀತುಪಡಿಸುವ ಉದ್ದೇಶದಿಂದ ಶಾಸಕರಿಗೆ ಕೊಡುವುದಕ್ಕಾಗಿ ಭಾರಿ ಪ್ರಮಾಣದ ಹಣವನ್ನು ತಮ್ಮ ಪಕ್ಷದ ಮುಖಂಡರಿಗೆ ನೀಡಿದ್ದರು ಎಂದೂ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

‘ವಿಧಾನಸಭೆಯಲ್ಲಿ ವಿಶ್ವಾಸ ಮತದ ನಿರ್ಣಯ ಮಂಡಿಸಿ ಮಾತನಾಡಿದ ಸಮಯದಲ್ಲಿ, ಕೆಲವು ಶಾಸಕರ ಜೊತೆ ತಾವು ಮಾತನಾಡಿದ್ದು ನಿಜ ಎಂದು ಸ್ವತಃ ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರೆ. ಅವರ ಹೇಳಿಕೆಯೇ ನಮ್ಮ ಆರೋಪಕ್ಕೆ ಸಾಂದರ್ಭಿಕ ಸಾಕ್ಷ್ಯ ಒದಗಿಸಿದೆ’ ಎಂದು ಸೂರ್ಯ ಮುಕುಂದರಾಜ್‌ ವಿವರಿಸಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಪಿತೂರಿ ಹಾಗೂ ಏಕ ಉದ್ದೇಶದಿಂದ ಕೂಟ ಕಟ್ಟಿದ ಆರೋಪದ ಮೇಲೆ ಇವರೆಲ್ಲರ ವಿರುದ್ಧ ಪ್ರಕರಣ ದಾಖಲಿಸುವಂತೆ ಹೇಳಲಾಗಿದೆ.

ಮೇ 17ರಂದು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ಮೇ 19ರಂದು ವಿಶ್ವಾಸ ಮತ ಯಾಚಿಸಿ ನಿರ್ಣಯ ಮಂಡಿಸಿದ್ದರು. ಆದರೆ, ಈ ನಿರ್ಣಯವನ್ನು ಮತಕ್ಕೆ ಹಾಕುವ ಮೊದಲೇ ರಾಜೀನಾಮೆ ಪ್ರಕಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry