ನಮ್ಮವರು ಖರೀದಿಗಿಲ್ಲ; ಆಮಿಷಕ್ಕೂ ಬಗ್ಗಲ್ಲ

7
ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ವಿಶ್ವಾಸ

ನಮ್ಮವರು ಖರೀದಿಗಿಲ್ಲ; ಆಮಿಷಕ್ಕೂ ಬಗ್ಗಲ್ಲ

Published:
Updated:
ನಮ್ಮವರು ಖರೀದಿಗಿಲ್ಲ; ಆಮಿಷಕ್ಕೂ ಬಗ್ಗಲ್ಲ

ಬೆಂಗಳೂರು: ‘ನಮ್ಮ ಶಾಸಕರು ಖರೀದಿಗೂ ಇಲ್ಲ. ಆಮಿಷಕ್ಕೂ ಬಗ್ಗಲ್ಲ. ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ವಿಶ್ವಾಸ ಮತ ಸಾಬೀತುಪಡಿಸುವ ಬಗ್ಗೆ ಯಾರಿಗೂ ಅನುಮಾನ ಬೇಡ’ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಹೇಳಿದರು.

‘ಸಮ್ಮಿಶ್ರ ಸರ್ಕಾರ ರಚಿಸಲು ಕಾನೂನಿನಲ್ಲೂ ಅವಕಾಶ ಇದೆ. ಉತ್ತಮ ಆಡಳಿತ ನೀಡಬೇಕೆಂಬ ಕಾರಣಕ್ಕೆ ಮೈತ್ರಿ ಮಾಡಿಕೊಂಡಿದ್ದೇವೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಸಮರ್ಥಿಸಿಕೊಂಡರು.

‘ಬಿಜೆಪಿಯ ಭ್ರಷ್ಟ ಆಡಳಿತದ ವಿರುದ್ಧ ಕೆಲಸ ಮಾಡಲು ನಾವು ಒಂದಾಗಿದ್ದೇವೆ. ನಮ್ಮಲ್ಲಿ ಕೆಲವು ವ್ಯತ್ಯಾಸ ಇರಬಹುದು. ಅದನ್ನು ಮಾತುಕತೆ‌ ಮೂಲಕ ಬಗೆಹರಿಸಿಕೊಳ್ಳುತ್ತೇವೆ’ ಎಂದರು.

‘ಯಡಿಯೂರಪ್ಪ ಬಹಿರಂಗವಾಗಿ ನಮ್ಮ ಶಾಸಕರ ಕುದುರೆ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಒಬ್ಬ ರಾಜಕೀಯ ನಾಯಕ ಈ ಮಟ್ಟಕ್ಕೆ ಇಳಿದದ್ದನ್ನು ನಾನು ನೋಡಿರಲಿಲ್ಲ’ ಎಂದು ಟೀಕಿಸಿದರು.

‘ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಕಡಿಮೆ ಸ್ಥಾನಗಳನ್ನು ಗೆದ್ದಿರಬಹುದು. ಆದರೆ, ಶೇಕಡಾವಾರು ಮತ ಗಳಿಕೆ ಪ್ರಮಾಣದಲ್ಲಿ ನಾವೇ ಮೊದಲಿಗರು. ನಾವು ಶೇ 38.4ರಷ್ಟು ಮತ ಗಳಿಸಿದ್ದೇವೆ. ಬಿಜೆಪಿ ಗಳಿಸಿದ್ದು ಶೇ 36.2ರಷ್ಟು ಮಾತ್ರ’ ಎಂದರು.

‘ಮೈತ್ರಿ ಸರ್ಕಾರದ ನೀತಿಗೆ ಸಂಬಂಧಿಸಿದಂತೆ ಸಮನ್ವಯ ಸಮಿತಿ ನಿರ್ಧಾರ ತೆಗೆದುಕೊಳ್ಳಲಿದೆ. ಎರಡೂ ಪಕ್ಷಗಳ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಕ್ರೋಡೀಕರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತೇವೆ. ಈ ಕಾರ್ಯಕ್ರಮಗಳನ್ನು ರೂಪಿಸಲು ಸಮಿತಿ ರಚಿಸುತ್ತೇವೆ. ಐದು ವರ್ಷಗಳ ಆಡಳಿತದ ರೂಪುರೇಷೆ ಇನ್ನೂ ಅಂತಿಮವಾಗಿಲ್ಲ’ ಎಂದು ತಿಳಿಸಿದರು.

‘ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನನಗೆ ಯಾವುದೇ ಸೂಚನೆ ಬಂದಿಲ್ಲ. ಗೃಹ ಸಚಿವ ಅಥವಾ ಕೆಪಿಸಿಸಿ ಅಧ್ಯಕ್ಷ ಎಂಬ ಆಯ್ಕೆ ಬಂದಾಗ ನಾನು ಈ ಹಿಂದೆ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದೆ. ಈಗಲೂ ವರಿಷ್ಠರ ನಿರ್ಧಾರಕ್ಕೆ ಬದ್ಧವಾಗಿದ್ದೇನೆ’ ಎಂದರು.

‘ನಮ್ಮ ಮುಂದೆ ಸವಾಲುಗಳಿವೆ ನಿಜ. ಆದರೆ, ಕೆಲವರು ಈ ಸರ್ಕಾರ ನಾಳೆ ಬೀಳುತ್ತದೆ, ಇನ್ನೊಂದು ವರ್ಷ ಎಂದು ಶಾಸ್ತ್ರ ಹೇಳುತ್ತಿದ್ದಾರೆ. ಆದರೆ, ನಮಗೆ ವಿಶ್ವಾಸವಿದೆ. ನಾವು ಸಂಪೂರ್ಣ ಐದು ವರ್ಷ ಆಡಳಿತ ನಡೆಸಲಿದ್ದೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದರು.

‘ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣವೇನೆಂದು ತಿಳಿಯಲು ಆಂತರಿಕ ಸಮಿತಿ ರಚಿಸುತ್ತೇವೆ. ಈ ಸಮಿತಿ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ವೈಜ್ಞಾನಿಕ ಕಾರಣ ಪತ್ತೆ ಮಾಡಲಿದೆ. ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯ ಕೆಲವು ಕಡೆ ಹಿನ್ನಡೆಗೆ ಕಾರಣ ಎಂಬ ಮಾತಿದೆ. ಹಾಗೇನಾದರೂ ಇದ್ದರೆ ಕಾರಣರಾದವರ ವಿರುದ್ಧ ಪಕ್ಷ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ’ ಎಂದು ಹೇಳಿದರು.

ಭದ್ರತಾ ಲೋಪ ಆಗಿಲ್ಲ: ಪ್ರಮಾಣ ವಚನ ಸಮಾರಂಭಕ್ಕೆ ಬಂದಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನೀಡಿದ್ದ ಭದ್ರತೆಯಲ್ಲಿ ಯಾವುದೇ ಲೋಪ ಆಗಿಲ್ಲ. ಅವರು ಅಸಮಾಧಾನಗೊಳ್ಳಲು ಸಂಚಾರ ದಟ್ಟಣೆ ಕಾರಣ. ಮಳೆ ಬಂದಿದ್ದರಿಂದ ಸಮಸ್ಯೆ ಆಗಿತ್ತು. ಒಂದಿಷ್ಟು ದೂರ ನಡೆದು ಸಾಗಿದ್ದ ಅವರನ್ನು ಮತ್ತೆ ಕಾರಿನಲ್ಲಿ ಕರೆದೊಯ್ಯಲಾಗಿದೆ. ಎಸ್‌ಪಿಜಿ ಭದ್ರತೆ ಅವರಿಗೆ ಇರಲಿಲ್ಲ. ತಡೆದಿದ್ದಕ್ಕೆ ಸಹಜವಾಗಿ ಬೇಸರವಾಗಿದೆ. ಅದನ್ನು ತೋಡಿಕೊಂಡಿದ್ದಾರೆ’ ಎಂದು ವಿವರಿಸಿದರು.‌

‘ಇವಿಎಂ ಬೇಡ, ಮತ ಪತ್ರ ಬೇಕು’

‘ಲೋಕಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಬೇಡ. ಮತ ಪತ್ರ ಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ’ ಎಂದೂ ಪರಮೇಶ್ವರ ಹೇಳಿದರು.

‘ಮತ ಯಂತ್ರಗಳ ಬಗ್ಗೆ ಇನ್ನೂ ಅನುಮಾನ ಇದೆ. ನಮ್ಮ ಪಕ್ಷದ ಮತದಾರರು ಹೆಚ್ಚಿರುವ ಕೆಲವು ಸ್ಥಳಗಳಲ್ಲಿ ನಮಗೆ ಕಡಿಮೆ ಮತಗಳು ಬಂದಿರುವುದು ಈ ಸಂಶಯಕ್ಕೆ ಕಾರಣವಾಗಿದೆ. ಚುನಾವಣೆಗೆ ಮೊದಲೇ ನಾವು ಇವಿಎಂ ವಿರೋಧಿಸಿದ್ದೆವು. ಈಗಲೂ ವಿರೋಧಿಸುತ್ತೇವೆ. ನಮ್ಮ ಹೋರಾಟ ಮುಂದುವರಿಯಲಿದೆ’ ಎಂದರು.

‘ದಲಿತ ಕೋಟಾದಲ್ಲಿ ಡಿಸಿಎಂ ಹುದ್ದೆ ಪಡೆದಿಲ್ಲ’

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪರಮೇಶ್ವರ, ‘ನಾನು ದಲಿತ ಕೋಟಾದಲ್ಲಿ ಡಿಸಿಎಂ ಹುದ್ದೆ ಪಡೆದಿಲ್ಲ. ಯಾವುದೇ ಹುದ್ದೆಗೆ ಕೋಟಾ ವ್ಯವಸ್ಥೆ ಕಾಂಗ್ರೆಸ್‌ನಲ್ಲಿ ಇಲ್ಲ. ನನಗೂ ಕೆಲವು ಅರ್ಹತೆಗಳಿವೆ’ ಎಂದರು.

‘ಬೇರೆಯವರು ಈ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಅರ್ಹತೆ ಇರುವವರು ಅನೇಕರು ಇದ್ದಾರೆ. ಆದರೆ ಯಾರೂ ನನ್ನ ಬಳಿ ಅಥವಾ ರಾಹುಲ್‌ ಅವರ ಬಳಿ ಕೇಳಿಲ್ಲ’ ಎಂದರು.

* ಡಿ.ಕೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾದರೆ ಖುಷಿಯ ವಿಷಯ. ಸಿದ್ದರಾಮಯ್ಯ ಅವರಿಗೆ ಹುದ್ದೆ ಯಾವುದೆಂದು ತೀರ್ಮಾನ ಆಗಿಲ್ಲ.

-ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry