ಹಾಲುಮತ ಸಮುದಾಯಕ್ಕೆ ಮೀಸಲಾತಿ ನೀಡಲು ಆಗ್ರಹ

7
ಮನಸೂರಿನ ಬಸವರಾಜ ದೇವರು

ಹಾಲುಮತ ಸಮುದಾಯಕ್ಕೆ ಮೀಸಲಾತಿ ನೀಡಲು ಆಗ್ರಹ

Published:
Updated:

ಬಾಗಲಕೋಟೆ: ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಐದು ವರ್ಷ ಯಾವುದೇ ರೀತಿಯ ಅಡೆತಡೆಗಳಿಲ್ಲದೇ ಉಳಿಯಬೇಕಾದರೆ, ಕುರುಬ (ಹಾಲುಮತ) ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮುಂದಾಗಬೇಕು ಎಂದು ಧಾರವಾಡದ ಮನಸೂರ ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು ಆಗ್ರಹಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಮೀಸಲಾತಿಗಾಗಿ ಶಿಫಾರಸು ಮಾಡಬೇಕಿತ್ತು. ಆದರೆ ಅವರು ನಿರ್ಲಕ್ಷ್ಯ ಮಾಡಿದ್ದಾರೆ’ ಎಂದು ದೂರಿದರು.

‘ಸಮುದಾಯಕ್ಕೆ ಯಾರು ಅನ್ಯಾಯ ಮಾಡಿದ್ದಾರೋ ಅವರಿಗೆ ಜನ ಸರಿಯಾದ ಪಾಠ ಕಲಿಸಿದ್ದಾರೆ’ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ ಬಸವರಾಜ ದೇವರು, ‘ಅದೇ ಪರಿಸ್ಥಿತಿ ಈಗಿನ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಬರುವುದು ಬೇಡ’ ಎಂದು ಎಚ್ಚರಿಕೆ ನೀಡಿದರು.

‘ನಮಗೆ ಕುಮಾರಸ್ವಾಮಿ ಅವರ ಮೇಲೆ ಭರವಸೆ ಇದೆ. ಅವರು ಎಲ್ಲ ಸಮುದಾಯಗಳ ಪರವಾಗಿ ನಿಲ್ಲುತ್ತಾರೆ ಎನ್ನುವ ನಂಬಿಕೆ ಇದೆ. ಹೀಗಾಗಿ, ತಮ್ಮ ಅಧಿಕಾರದ ಅವಧಿಯಲ್ಲಿ ಕುರುಬ ಸಮುದಾಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ, ಮೀಸಲಾತಿಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಲು ಮುಂದಾಗಬೇಕು. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ಸರಿಯಾದ ನಿರ್ಧಾರ ಪ್ರಕಟಿಸಬೇಕು. ಮೀಸಲಾತಿ ಜಾರಿಯಾದರೆ ಸಮುದಾಯವು ಅವರಿಗೆ ಹೆಚ್ಚಿನ ಗೌರವ ನೀಡುತ್ತದೆ’ ಎಂದರು.

‘ನಾವು ಎಲ್ಲ ಪಕ್ಷಗಳಿಗೂ ಬೆಂಬಲ ನೀಡಿದ್ದೇವೆ. ಮೀಸಲಾತಿಗಾಗಿ ನಮ್ಮ ಹೋರಾಟ ನಿರಂತರವಾಗಿರಲಿದ್ದು, ಅದು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ವಿರುದ್ಧ ಅಲ್ಲ. ನಮ್ಮ ಹಕ್ಕಿಗಾಗಿ ಮಾತ್ರ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry