ಸಿ.ಎಸ್‌ ಮನೆ ‘ವಾಸ್ತು’ ಪರಿಶೀಲನೆ ನಡೆಸಿದ ದೇವೇಗೌಡರ ಕುಟುಂಬ

7

ಸಿ.ಎಸ್‌ ಮನೆ ‘ವಾಸ್ತು’ ಪರಿಶೀಲನೆ ನಡೆಸಿದ ದೇವೇಗೌಡರ ಕುಟುಂಬ

Published:
Updated:
ಸಿ.ಎಸ್‌ ಮನೆ ‘ವಾಸ್ತು’ ಪರಿಶೀಲನೆ ನಡೆಸಿದ ದೇವೇಗೌಡರ ಕುಟುಂಬ

ಬೆಂಗಳೂರು: ಮುಖ್ಯಮಂತ್ರಿ ಅಧಿಕೃತ ನಿವಾಸ ‘ಅನುಗ್ರಹ’ದ ವಾಸ್ತು ಸರಿ ಇಲ್ಲ ಎಂಬ ಕಾರಣಕ್ಕೆ, ಮುಖ್ಯ ಕಾರ್ಯದರ್ಶಿಗೆ ನಿಗದಿಯಾಗಿರುವ ನಿವಾಸದಲ್ಲಿ ಬೀಡು ಬಿಡಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ.

ಬಸವೇಶ್ವರ ವೃತ್ತದ ಸಮೀಪ ಬಾಲಬ್ರೂಯಿಯಲ್ಲಿರುವ ಮುಖ್ಯ ಕಾರ್ಯದರ್ಶಿಯವರ ನಿವಾಸಕ್ಕೆ ದೇವೇಗೌಡರ ಕುಟುಂಬದ ಸದಸ್ಯರು ಗುರುವಾರ ವಾಸ್ತು ತಜ್ಞರೊಂದಿಗೆ ಭೇಟಿ ನೀಡಿ, ವಾಸ್ತುವಿಗೆ ಅನುಗುಣವಾಗಿ ಮನೆ ಇದೆಯೇ ಎಂಬುದರ ಪರಿಶೀಲನೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

‘ಅನುಗ್ರಹ’ದಲ್ಲಿ ವಾಸ ಮಾಡಿದರೆ ಅಧಿಕಾರ ಹೊರಟು ಹೋಗುತ್ತದೆ ಎಂಬ ನಂಬಿಕೆಯ ಕಾರಣ, ದೇವೇಗೌಡರ ಕುಟುಂಬ ಈ ತೀರ್ಮಾನ ತೆಗೆದುಕೊಂಡಿದೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಕಾವೇರಿ’ಯನ್ನು ಅಧಿಕೃತ ನಿವಾಸವಾಗಿಸಿಕೊಂಡಿದ್ದರು. ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ‘ಅನುಗ್ರಹ’ದಲ್ಲೇ ವಾಸವಿದ್ದರು. ವಾಸ್ತುವಿನಲ್ಲಿ ಅಪಾರ ನಂಬಿಕೆ ಹೊಂದಿರುವ ದೇವೇಗೌಡರ ಕುಟುಂಬವು‌, ಕಾವೇರಿ, ಕೃಷ್ಣಾವನ್ನು ಮುಖ್ಯಮಂತ್ರಿಯವರ ಅಧಿಕೃತ ನಿವಾಸವನ್ನಾಗಿಸಿಕೊಳ್ಳಲು ಒಪ್ಪಿಕೊಂಡಿಲ್ಲ. ಆದ್ದರಿಂದ ಮುಖ್ಯ ಕಾರ್ಯದರ್ಶಿ ನಿವಾಸದ ಮೇಲೆ ಕಣ್ಣು ಹಾಕಿದೆ. ವಾಸ್ತು ಸರಿ ಹೋದರೆ ಅದನ್ನೇ ಅಧಿಕೃತ ನಿವಾಸವಾಗಿ ಪಡೆಯಲಿದೆ.

ಕೆ.ರತ್ನಪ್ರಭಾ ಅವರ ಅಧಿಕಾರದ ಅವಧಿ ಸದ್ಯ ಮುಗಿಯಲಿದೆ. ಆದ್ದರಿಂದ ಈ ಮನೆ ಪಡೆಯಲು ಕುಟುಂಬ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಭೇಟಿಗೆ ಅವಕಾಶ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬೆಂಗಳೂರಿನಲ್ಲಿ ಇರುವ ದಿನಗಳಲ್ಲಿ ಪ್ರತಿ ನಿತ್ಯ ಬೆಳಿಗ್ಗೆ 10ರಿಂದ 11ರವರೆಗೆ ಸಾರ್ವಜನಿಕರನ್ನು ಭೇಟಿ ಮಾಡಲಿದ್ದಾರೆ.

ಜೆ.ಪಿ. ನಗರದಲ್ಲಿರುವ ಖಾಸಗಿ ನಿವಾಸಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಬಂದರೆ ಇತರ ನಿವಾಸಿಗಳಿಗೆ ತೊಂದರೆ ಆಗುತ್ತದೆ. ಆದ್ದರಿಂದ ಸಾರ್ವಜನಿಕರು ಮತ್ತು ಗಣ್ಯರು ಗೃಹ ಕಚೇರಿ ಕೃಷ್ಣಾಗೆ ಬಂದು ಭೇಟಿ ಮಾಡುವುದು ಸೂಕ್ತ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry