ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೋಧದಿಂದ ಪಾರಾಗುವ ಉಪಾಯ

Last Updated 24 ಮೇ 2018, 19:30 IST
ಅಕ್ಷರ ಗಾತ್ರ

ತೀರ್ಥಂಕರರಾದ ಶಾಂತಿನಾಥರನ್ನು ವಿಶೇಷವಾಗಿ ಶಾಂತಿಗಾಗಿ ಪ್ರಾರ್ಥಿಸುವುದುಂಟು. "ಯಾರು ತಮ್ಮೊಳಗಿನ ದೋಷಗಳನ್ನು ಉಪಶಮನಗೊಳಿಸುವರೋ ಅವರು ಶಾಂತಿಯನ್ನು ಹೊಂದುವರು. ಅವರನ್ನು ಆಶ್ರಯಿಸಿದವರಿಗೂ ಶಾಂತಿ ಲಭಿಸುವುದು. ಹೇ ಶಾಂತಿನಾಥ, ನಮ್ಮ ದುಃಖವನ್ನು ಹೋಗಲಾಡಿಸಿ, ಶಾಂತಿಯನ್ನು ದಯಪಾಲಿಸು" ಎಂಬ ಭಾವಾರ್ಥದ ಸ್ತುತಿ ಪದ್ಯವೊಂದು ಪ್ರಸಿದ್ಧವಾಗಿದೆ.

ನಮ್ಮೊಳಗಿನ ದೋಷಗಳೇ ನಮ್ಮ ಬದುಕಿನಲ್ಲಿ ಅಶಾಂತಿ ಉಂಟಾಗಲು ಕಾರಣ. ನಮ್ಮೊಳಗೆ ಒಂದೆರಡಲ್ಲ ಅನೇಕ ಪ್ರಕಾರದ ದೋಷಗಳಿವೆ. ಅವುಗಳು ಇಪ್ಪತ್ತನಾಲ್ಕು ಗಂಟೆಯೂ ನಮ್ಮನ್ನು ಉದ್ವಿಗ್ನಗೊಳಿಸುತ್ತವೆ. ನಾವು ಎಷ್ಟೇ ಪೂಜೆ ಪುನಸ್ಕಾರ ಮಾಡಿದರೂ ನಮ್ಮ ಆಂತರ್ಯದ ದೋಷಗಳನ್ನು ಅರಿತು, ಪರಿಹರಿಸಿಕೊಳ್ಳದಿದ್ದರೆ, ಶಾಂತಿ ದೊರೆಯುವುದಿಲ್ಲ. ಅಂಥ ದೋಷಗಳ ಗುಂಪಿನಲ್ಲಿ ಅತಿ ಪ್ರಮುಖವಾದುದೂ, ಪ್ರಚಂಡವಾದುದೂ ಯಾವುದೆಂದರೆ- ಕ್ರೋಧ.

ಕ್ರೋಧವಿಲ್ಲದವರು ಯಾರಾದರೂ ಇರುವರೇ? ಇನ್ನೊಬ್ಬರ ಕ್ರೋಧಕ್ಕೆ ಬಲಿಯಾಗದವರು ಯಾರಾದರೂ ಇರುವರೇ? ಕ್ರೋಧ ಒಂದು ನಕಾರಾತ್ಮಕ ಆವೇಶ. ಅದರ ಆರಂಭ ಅವಿವೇಕದಲ್ಲಿ. ಕೊನೆ ಪಶ್ಚಾತ್ತಾಪದಲ್ಲಿ. ಕ್ರೋಧದಿಂದ ನಮಗೆ ಶಾಂತಿ ಸಿಗುವುದು ಎಂದು ಹೇಳುವ ವ್ಯಕ್ತಿ ಎಲ್ಲೂ ಸಿಗುವುದಿಲ್ಲ. ನಕಾರಾತ್ಮಕ ಆವೇಶದಿಂದ ಸಂಬಂಧ ಹಾಳಾಗುವುದು, ಶಾಂತಿ ಕದಡುವುದು.

ಕ್ರೋಧಕ್ಕೆ ಕಾರಣವೇನು? ಅದರ ಹುಟ್ಟು ಹೇಗೆ? ಎಂದು ವಿಚಾರಮಾಡುವುದು ಒಂದು ಭಾಗವಾದರೆ, ಅದರ ದುಷ್ಪರಿಣಾಮಗಳಿಂದ ಪಾರಾಗಲು ಉಪಾಯ ಕಂಡುಕೊಳ್ಳುವುದು ಮತ್ತೊಂದು ಭಾಗವಾಗಿದೆ. ಅಂಥ ನಾಲ್ಕು ಉಪಾಯಗಳು ಹೀಗಿವೆ- ಚಿಕ್ಕ ಚಿಕ್ಕ ವಿಷಯಕ್ಕೆಲ್ಲ ನಮಗೆ ಕೋಪ ಬರುವುದು. ಇಂಥ ಕೋಪದಿಂದ ಪಾರಾಗಬೇಕಾದರೆ, ನಮ್ಮ ಯೋಚನೆ ಹಾಗೂ ಬಳಸುವ ಭಾಷೆ ಬೇರಾಗಬೇಕಾಗುತ್ತದೆ. "ಅವನು ಏಕೆ ನಾನು ಹೇಳಿದಂತೆ ಕೆಲಸ ಮಾಡಲಿಲ್ಲ?" ಎಂದು ಯೋಚಿಸಿ, ಪ್ರಶ್ನಿಸುವುದು ಆರೋಪದ ಭಾಷೆ.

ಆದರೆ "ಅವನಿಗೆ ಏಕೆ ಕೆಲಸ ಮಾಡಲಾಗಲಿಲ್ಲ?" ಎಂದು ಯೋಚಿಸಿ, ಕೇಳುವುದು ಪೂರ್ವಪರ ಚಿಂತನೆಯ ಭಾಷೆ. ಏನಾದರು ಮಾಡುವ ಮೊದಲು, ನಾನು ಸ್ವಲ್ಪ ಪೂರ್ವಪರ ವಿಚಾರ ಮಾಡುತ್ತೇನೆ ಎಂದು ನಿರ್ಧರಿಸುವುದರಿಂದ ಕ್ರೋಧದಿಂದ ಪಾರಾಗಬಹುದಾಗಿದೆ. ಎರಡನೆಯದಾಗಿ ನಮ್ಮ ಸಕಾರಾತ್ಮಕ ಚಿಂತನೆ ನಮ್ಮನ್ನು ಕ್ರೋಧದಿಂದ ಕಾಪಾಡಬಲ್ಲುದು. ಮೂರನೆಯದಾಗಿ ಗ್ರಾಹಕರ ಕಿರಿಕಿರಿ ಸಹಿಸುವ ವ್ಯಾಪಾರಿಯಂತೆ ಸ್ವಂತ ಹಿತದ (ಲಾಭದ) ವಿಚಾರ ಮಾಡುವುದರಿಂದ ಕೋಪವನ್ನು ನಿಯಂತ್ರಿಸಬಹುದು.

ನಾಲ್ಕನೆಯದು ಮನಸ್ಸಿಗೆ ಸ್ವಯಂ ಪ್ರೇರಣೆ ನೀಡುವುದು. "ನಾನು.. ಕೋಪವನ್ನು.. ಮಾಡಿ ಕೊಳ್ಳಬಾರದು. ನಾನು ಶಾಂತ ಚಿತ್ತ ನಾಗಿರ ಬೇಕು" - ಎಂಬಂಥ ವಾಕ್ಯಗಳನ್ನು ದೀರ್ಘವಾಗಿ ಹಾಗೂ ಲಯಬದ್ಧವಾಗಿ ಸಾವಿರಾರು ಬಾರಿ ಹೇಳಿಕೊಳ್ಳುವುದರಿಂದ ಈ ಭಾವನೆ ಸುಪ್ತ ಮನಸ್ಸಿನಲ್ಲಿ ಸ್ಥಿರವಾಗಿರುವುದು. ಇದರಿಂದ ಅಪ್ರಜ್ಞಾಪೂರ್ವಕವಾಗಿ, ಸರಕ್ಕನೆ ಸ್ಫೋಟಗೊಳ್ಳುವ ಕ್ರೋಧವನ್ನು ತಡೆಯಬಹುದು. ಈ ಸ್ವಯಂ ಪ್ರೇರಣೆ ನೀಡುವ ಪ್ರಯೋಗದಿಂದ ಪ್ರಖರವಾದ ಕ್ರೋಧದಿಂದ ಪಾರಾಗಬಹುದು ಹಾಗೂ ನಮ್ಮ ಒರಟು ಸ್ವಭಾವಗಳನ್ನು ತಿದ್ದಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT