ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯದ ಬೇಸಾಯ, ಕಾಲೂರಾಮರ ಸಂಕಟ

Last Updated 24 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕಾಲೂರಾಮ್ ಎಂಬಾತನನ್ನು ಸಾರ್ವಜನಿಕರು ಬುಧವಾರ ಹೊಡೆದು ಸಾಯಿಸಿದರು. ನಗರದ ತುಂಬ ಹರಡಿರುವ ‘ಮಕ್ಕಳ ಕಳ್ಳರ ಹಾವಳಿ’ ವದಂತಿ ಇದಕ್ಕೆ ಕಾರಣವಾಗಿತ್ತು. ಈ ಎರಡು– ಮೂರು ದಿನಗಳ ಸುದ್ದಿಯನ್ನೇ ನೋಡಿದರೆ ಕುಷ್ಟಗಿ ಹಾಗೂ ಸೇಡಂಗಳಲ್ಲಿಯೂ ಇಬ್ಬರು ವ್ಯಕ್ತಿಗಳನ್ನು ‘ಮಕ್ಕಳ ಕಳ್ಳ’ ಎಂದು ಬೆನ್ನಟ್ಟಿ ಥಳಿಸಿರುವುದು ವರದಿಯಾಗಿದೆ.

ಒಂದು ಅಪರಾಧವಾಗಿ ಮಕ್ಕಳ ಕಳ್ಳತನ ಯಾವಾಗಿನಿಂದಲೂ ನಮ್ಮ ಸಮಾಜದಲ್ಲಿದೆ. ಸಾವಿರಾರು ತಾಯ್ತಂದೆಯರು ತಮ್ಮ ಮಕ್ಕಳನ್ನು ಕಳೆದುಕೊಂಡು ಜೀವ ಸವೆಸಿದ್ದಾರೆ. ಅದು ಬೇರೆಯದೇ ಚರ್ಚೆ. ಆದರೆ ಸಾರ್ವಜನಿಕರ ನಡುವೆ ಅದು ಕ್ರೌರ್ಯವನ್ನು ಉದ್ದೀಪಿಸುವುದು ಭಯಭೀತ ವದಂತಿಯಾಗಿ ಹರಡಿದಾಗ ಮಾತ್ರ. ಇಂತಹ ವದಂತಿಯ ಕಾರಣದಿಂದಲೇ ಸಮುದಾಯದಲ್ಲಿ ಹುಟ್ಟಿಕೊಂಡ ಭಯ, ಕ್ರೌರ್ಯವಾಗಿ ಮಾರ್ಪಟ್ಟು ಅಮಾಯಕ ಮನುಷ್ಯನೊಬ್ಬನನ್ನು ಹೊಡೆದು ಸಾಯಿಸಿಯೇ ಬಿಡುವಂತಾಯ್ತು.

***

ಕಳೆದ ಕೆಲವು ದಿನಗಳಿಂದ ವಾಟ್ಸ್‌ ಆ್ಯಪ್‌ನಲ್ಲಿ ಒಂದು ಲೇಖನ ಹರಿದಾಡುತ್ತಿದೆ. 2019ರ ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ಗೆಲ್ಲಿಸದಿದ್ದರೆ ಏನಾಗಲಿದೆ ಅನ್ನುವ ಒಕ್ಕಣೆ ಇರುವ ಲೇಖನವದು. ಸುಮಾರು 25 ಅಂಶಗಳನ್ನು ಈ ಲೇಖನದಲ್ಲಿ ಪಟ್ಟಿ ಮಾಡಲಾಗಿದ್ದು, ಮೋದಿ ಪ್ರಧಾನಿಯಾಗದೆ ಹೋದರೆ ಹಿಂದೂಗಳ ಪ್ರಾಣಕ್ಕೆ ಸಂಚಕಾರ ಬರಲಿದೆ ಎಂದು ಬಗೆಬಗೆಯಾಗಿ ಹೇಳಲಾಗಿದೆ. ಹಾದಿಬೀದಿಗಳಲ್ಲಿ ಗೋಹತ್ಯೆ ನಡೆಯುತ್ತದೆ, ಒವೈಸಿ ಹದಿನೈದು ನಿಮಿಷದಲ್ಲಿ ಹಿಂದೂಗಳನ್ನು ಕೊಲ್ಲುತ್ತಾನೆ, ಮಮತಾ ಬ್ಯಾನರ್ಜಿ ಬಂಗಾಳವನ್ನು ಮುಸ್ಲಿಮರಿಗೆ ಬರೆದುಕೊಡುತ್ತಾಳೆ, ರಾಷ್ಟ್ರೀಯ ಸಂಪನ್ಮೂಲದ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು ನೀಡಲಾಗುತ್ತದೆ, ಲವ್ ಜಿಹಾದ್ ಮಿತಿಮೀರುತ್ತದೆ– ಇತ್ಯಾದಿಯಾಗಿ ಭಯದ ಬೀಜಗಳನ್ನು ಬಿತ್ತಲಾಗಿದೆ. ಒಟ್ಟಾರೆಯಾಗಿ ಮೋದಿಯನ್ನು ಗೆಲ್ಲಿಸದೆ ಹೋದರೆ ಮುಸ್ಲಿಮರು ಹಿಂದೂಗಳನ್ನು ಹೇಳಹೆಸರಿಲ್ಲವಾಗಿ ಮಾಡುತ್ತಾರೆ ಎಂದು ಬಿಂಬಿಸುವುದು ಲೇಖನದ ಒಟ್ಟು ಆಶಯ.

ಮೊನ್ನೆ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ತೃತೀಯ ರಂಗವನ್ನು ಸೃಷ್ಟಿಸಬಹುದಾದ ರಾಜಕೀಯ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರು
ವುದು ಬಲಪಂಥೀಯರ ನಿದ್ದೆಗೆಡಿಸಿದೆ. ಮೇಲೆ ಉಲ್ಲೇಖಿಸಿರುವ ಲೇಖನದಲ್ಲಿ ಇದು ಸ್ಪಷ್ಟವಾಗಿ ತೋರುತ್ತದೆ. ಈ ಲೇಖನದಲ್ಲಿ ತೃತೀಯ ರಂಗ ಅಸ್ತಿತ್ವಕ್ಕೆ ಬಂದರೆ ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟವಿದೆ, ಆದ್ದರಿಂದ ‘ಹಿಂದೂಗಳು ಪಕ್ಷೇತರವಾಗಿ ಒಗ್ಗೂಡಿ ಮೋದಿಯನ್ನು ಗೆಲ್ಲಿಸಬೇಕು’ ಎಂದು ಕರೆ ಕೊಡಲಾಗಿದೆ.

ಈ ಹಿಂದೂಗಳನ್ನು ಒಗ್ಗೂಡಿಸುವುದು ಹೇಗೆ? ನಾಲ್ಕು ವರ್ಷಗಳ ಕಾಲ ವಿಫಲ ಆಡಳಿತದ ಬರೆ ಹಾಕಿಸಿಕೊಂಡವರು ಮತ್ತೆ ಮೋದಿಯನ್ನು ಚುನಾಯಿಸುತ್ತಾರೆಯೇ? ಇಲ್ಲವೆಂದು ಕರೆ ನೀಡುವವರಿಗೂ ಗೊತ್ತಿದೆ. ಜನರು ಭಯದಲ್ಲಿ, ಕ್ರೌರ್ಯದಲ್ಲಿ ಒಗ್ಗೂಡುವಷ್ಟು ಸ್ನೇಹದಲ್ಲಿ ಮತ್ತು ಸಂತೋಷದಲ್ಲಿ ಸೇರುವುದಿಲ್ಲ. ಹಾಗೆಂದೇ ಮುಸ್ಲಿಂ ಗುಮ್ಮವನ್ನು ತೋರಿಸಿ ಅವರಲ್ಲಿ ಭಯವನ್ನು ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಈ ಲೇಖನ ಅಂಥ ನೂರಾರು ಪ್ರಯತ್ನಗಳಲ್ಲಿ ಒಂದು ಉದಾಹರಣೆ ಮಾತ್ರ.

***

ಕರ್ನಾಟಕ ಚುನಾವಣಾ ಫಲಿತಾಂಶ ಹೊರಬೀಳುವ ಮುನ್ನಾ ದಿನ ಬಿಜೆಪಿ ಸಮರ್ಥಕ ಪೋಸ್ಟ್ ಕಾರ್ಡ್ ನ್ಯೂಸ್, ನಕಲಿ ದಾಖಲೆಯೊಂದನ್ನು ಪ್ರಕಟಿಸಿತ್ತು. ‘ಎಂ.ಬಿ.ಪಾಟೀಲ್ ಅವರು ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ಕ್ರಿಶ್ಚಿಯನ್ ಕೌನ್ಸಿಲ್ ಹಾಗೂ ಮುಸ್ಲಿಂ ಆರ್ಗನೈಸೇಶನ್’ಗಳು ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಯ ಹಿಂದೆ ಕೆಲಸ ಮಾಡಿರುವ ಸಂಗತಿ ಬಹಿರಂಗಗೊಂಡಿದೆ’ ಎಂದು ಅದರಲ್ಲಿ ಬರೆಯಲಾಗಿತ್ತು. ಈ ಸುದ್ದಿ ದಿನಾರ್ಧದಲ್ಲಿ ಸಾವಿರಾರು ಫೇಸ್ ಬುಕ್ ಗೋಡೆಗಳಿಗೆ ಅಂಟಿಕೊಂಡಿತು. ಸುಳ್ಳುಸುದ್ದಿಗಳ ಕಾವಲುನಾಯಿಗಳಂತಿರುವ ವೆಬ್‌ಸೈಟ್‌ಗಳು ಅಸಲು ವಿಷಯ ಕಂಡುಹಿಡಿದು, ಇದು ಫೇಕ್ ನ್ಯೂಸ್ ಎಂದು ಘೋಷಿಸಿದವು. ತಕ್ಷಣ ಪೋಸ್ಟ್ ಕಾರ್ಡ್ ನ್ಯೂಸ್ ತನ್ನ ಸುದ್ದಿಯನ್ನು ಅಳಿಸಿಹಾಕಿತು. ವೆಬ್ ಸೈಟಿನಿಂದ ಸುದ್ದಿ ಅಳಿದರೂ ಅಮಾಯಕರ ತಲೆಹೊಕ್ಕು ನಿಂತಿದ್ದ ಸುಳ್ಳಿನ ಬೀಜ ಹಾಗೆಯೇ ಉಳಿದುಹೋಗಿದೆ. ಈಗಲೂ ಅದು ವಾಟ್ಸ್‌ಆ್ಯಪ್‌ ಮೂಲಕ ವೈರಸ್‌ನಂತೆ ಹರಡಿಕೊಳ್ಳುತ್ತಲೇ ಇದೆ.

ಅದಕ್ಕೂ ಮುಂಚೆ, ಲಿಂಗಾಯತ ಧರ್ಮ ಅಸ್ತಿತ್ವ ಪಡೆದ ಮರುದಿನವೇ ಬಿಜೆಪಿ ಫೇಕ್ ಫ್ಯಾಕ್ಟರಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿತ್ತು. ಚರ್ಚ್ ಒಂದರ ಬೋರ್ಡ್ ಮೇಲೆ ‘ಲಿಂಗಾಯತ ಕ್ರಿಶ್ಚಿಯನ್ನರ ಪ್ರಾರ್ಥನಾ ಮಂದಿರ’ ಅನ್ನುವ ಹೆಸರು ಫೋಟೊಶಾಪ್ ಬಳಸಿ ರಿಪ್ಲೇಸ್ ಮಾಡಿ ಹರಿಬಿಡಲಾಗಿತ್ತು. ಫೇಕ್ ನ್ಯೂಸ್ ಕಾವಲುನಾಯಿಗಳು ಅದರ ಅಸಲಿಯತ್ತನ್ನು ಕಂಡುಹಿಡಿದು, ಒರಿಜಿನಲ್ ಫೋಟೊ ಜೊತೆ ವ್ಯಾಪಕವಾಗಿ ಪ್ರಚುರ
ಪಡಿಸಿದವು. ಆದರೆ ಸತ್ಯಕ್ಕಿಂತ ಸುಳ್ಳಿನ ಕಾಲಿಗೇ ಹೆಚ್ಚು ವೇಗ. ಈಗಲೂ ವಿವಿಧ ಭಂಗಿಯ ಆತಂಕದ ಎಮೋಜಿಗಳೊಡನೆ ಆ ಫೋಟೊಶಾಪ್ ಮಾಡಿದ ಚರ್ಚ್ ಚಿತ್ರ ಪ್ರಸಾರವಾಗುತ್ತಲೇ ಇದೆ.

ಭಾರತದ ಕೇವಲ ಶೇ 2ರಷ್ಟಿರುವ ಕ್ರೈಸ್ತ ಸಮುದಾಯದ ಮೇಲೆ ಬಲಪಂಥೀಯರ ಅಸಹನೆ ಇಂದು ನೆನ್ನೆಯದಲ್ಲ. ಸೋನಿಯಾ ಗಾಂಧಿ ವಿದೇಶಿಯರು ಅನ್ನುವುದಕ್ಕಿಂತ ಹೆಚ್ಚು ಆಕೆ ಕ್ರಿಶ್ಚಿಯನ್ ಅನ್ನುವುದು ಅವರ ದ್ವೇಷಕ್ಕೆ ಮೂಲ ಕಾರಣ. ಬಾಬ್ರಿ ಮಸೀದಿ ಉರುಳಿಸುವ ಮೊದಲು ಅವರು ಹೆಚ್ಚು ಬಹಿರಂಗವಾಗಿ ಹರಿಹಾಯುತ್ತಿದ್ದುದು ಕ್ರಿಶ್ಚಿಯನ್ನರ ಮೇಲಾಗಿತ್ತು. ಆನಂತರದಲ್ಲೂ ದೇಶದ ಪ್ರತಿಷ್ಠಿತ ಪತ್ರಿಕೆಗಳ ಮಾಲೀಕರ ಪಟ್ಟಿ ಹಿಡಿದುಕೊಂಡು ಇವರಲ್ಲಿ ಬಹುಪಾಲು ಕ್ರಿಶ್ಚಿಯನ್ನರು ಎಂದು ಜನಸಾಮಾನ್ಯರ ಮೆದುಳು ತೊಳೆಯುತ್ತಿದ್ದರು. ಈಗ ಮುಸ್ಲಿಮರಲ್ಲಿ ಅಭದ್ರತೆ ಮತ್ತು ಅಂಜಿಕೆಯನ್ನು ಯಶಸ್ವಿಯಾಗಿ ನೆಲೆಯೂರಿಸಿದ ನಂತರ, ಅವರು ಮತ್ತೆ ಕ್ರೈಸ್ತ ಸಮುದಾಯದತ್ತ ತಿರುಗಿದ್ದಾರೆ.

ಹೀಗೆ ಬಿಜೆಪಿ, ಕ್ರಿಶ್ಚಿಯನ್ನರನ್ನು ರಾಜಕೀಯಕ್ಕೆ ಎಳೆದು ತಂದು ಜನರನ್ನು ಒಡೆಯಲು ಹರಸಾಹಸ ಮಾಡುತ್ತಿರುವ ಹೊತ್ತಲ್ಲೇ ದೆಹಲಿಯ ಆರ್ಚ್ ಬಿಶಪ್ ಅನಿಲ್ ಕೌಟೊ ಬರೆದ ಪತ್ರ ಅವರಿಗೆ ಆಯುಧವಾಗಿ ಒದಗಿದೆ. ‘ದೇಶದಲ್ಲಿ ಪ್ರಕ್ಷುಬ್ಧ ರಾಜಕೀಯ ವಾತಾವರಣ ಉಂಟಾಗಿದ್ದು, ಸಾಂವಿಧಾನಿಕ ತತ್ವಗಳು ಹಾಗೂ ಜಾತ್ಯತೀತತೆಗೆ ಧಕ್ಕೆ ಒದಗಿದೆ. ಈ ಹಿನ್ನೆಲೆಯಲ್ಲಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಜಾತ್ಯತೀತ ಶಕ್ತಿಗಳ ಉಳಿವಿಗಾಗಿ ನಾವೆಲ್ಲರೂ ಪ್ರಾರ್ಥನೆ ಅಭಿಯಾನ ಆರಂಭಿಸಬೇಕು’ ಎಂದು ಅನಿಲ್ ಕೌಟೊ ಇತರ ಕ್ರೈಸ್ತ ಧರ್ಮಗುರುಗಳಿಗೆ ಪತ್ರ ಬರೆದಿದ್ದರು. ಆಹಾರ ಸಂಸ್ಕೃತಿಯ ಮೇಲಿನ ಹಲ್ಲೆ ಹಾಗೂ ನೈತಿಕ ಗೂಂಡಾಗಿರಿಗಳಿಂದಾಗಿ ಇತ್ತೀಚೆಗೆ ಅಲ್ಪಸಂಖ್ಯಾತರಲ್ಲಿ ಅಭದ್ರತಾ ಭಾವನೆ ಬೆಳೆದಿರುವುದು ಸಹಜ. ಈ ಹಿನ್ನೆಲೆಯಲ್ಲಿ ಅವರು ಜಾತ್ಯತೀತ ಶಕ್ತಿಗಳ ಗೆಲುವಿಗೆ ಪ್ರಾರ್ಥಿಸೋಣ ಎಂದು ಕರೆ ನೀಡಿರುವುದೂ ಸಹಜವೇ. ಆದರೆ ಬಿಜೆಪಿ ಮತ್ತು ಅದರ ಸಮರ್ಥಕರು ಇದು ದೇಶವನ್ನು ಧರ್ಮದ ಆಧಾರದಲ್ಲಿ ಒಡೆಯುವ ಹುನ್ನಾರವೆಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಕ್ರಿಶ್ಚಿಯನ್ನರು ದೇಶದ್ರೋಹಿಗಳೆಂದು ಪುಕಾರು ಹಬ್ಬಿಸುತ್ತಿದ್ದಾರೆ.

ಬಹುಸಂಖ್ಯಾತ ಸಮುದಾಯಗಳ ಮಠಮಾನ್ಯಗಳು, ಕಾವಿಧಾರಿಗಳು ನೇರಾನೇರ ರಾಜಕಾರಣದಲ್ಲಿದ್ದಾರೆ. ಖುದ್ದು ಬಿಜೆಪಿ ತನ್ನ ಮಹತ್ವದ ಚರ್ಚೆಗಳನ್ನು ಕಾವಿಧಾರಿಗಳ ಸಮ್ಮುಖದಲ್ಲಿ ನಡೆಸುತ್ತದೆ. ಹೀಗಿರುವಾಗ, ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ಮುಖಂಡರು ತಮ್ಮ ರಾಜಕೀಯ ಆಯ್ಕೆಯನ್ನು ವ್ಯಕ್ತಪಡಿಸಿದರೆ ಪ್ರಮಾದವೇನು? ಅದರಲ್ಲೂ ಅವರು ಕರೆ ನೀಡಿರುವುದು ಜಾತ್ಯತೀತ ರಾಷ್ಟ್ರನಿರ್ಮಾಣಕ್ಕೆ ಪೂರಕವಾದ ಪಕ್ಷದ ಗೆಲುವಿಗೆ ಪ್ರಾರ್ಥನೆ ಮಾಡೋಣವೆಂದು. ಆದರೂ ಅವರನ್ನು, ಚರ್ಚ್ ಹಾಗೂ ಇಡಿಯ ಕ್ರೈಸ್ತ ಸಮುದಾಯವನ್ನು ದೇಶದ್ರೋಹಿಗಳಂತೆ, ಹಿಂದೂ ವಿರೋಧಿಗಳಂತೆ ಬಿಂಬಿಸುವ ಪ್ರಯತ್ನ ಬಿಜೆಪಿ ಸಮರ್ಥಕರಿಂದ ನಡೆಯುತ್ತಿದೆ. 

***

ಸಾರ್ವಜನಿಕರ ಕ್ರೌರ್ಯ ಮತ್ತು ಕಾಲೂರಾಮನ ಸಾವಿನ ಹಿನ್ನೆಲೆಯಲ್ಲಿ ಯೋಚಿಸಿದರೆ, ಮೇಲಿನ ಎಲ್ಲ ಚಿತ್ರಣಗಳ ಕಾರ್ಯಕಾರಣಗಳು ಸ್ಪಷ್ಟವಾಗಿಬಿಡುತ್ತವೆ. ನಾವು ನಮ್ಮ ಕಾಲೂರಾಮರನ್ನು
ಉಳಿಸಿಕೊಳ್ಳಬಲ್ಲೆವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT