ನಗರ, ಹೆದ್ದಾರಿಗಳಲ್ಲಿ ಚಾರ್ಜಿಂಗ್‌ ಕೇಂದ್ರ ಸ್ಥಾಪನೆ

7
ಕೇಂದ್ರದ ಅನುದಾನ ಕೇಳಲು ಸಿದ್ಧತೆ

ನಗರ, ಹೆದ್ದಾರಿಗಳಲ್ಲಿ ಚಾರ್ಜಿಂಗ್‌ ಕೇಂದ್ರ ಸ್ಥಾಪನೆ

Published:
Updated:
ನಗರ, ಹೆದ್ದಾರಿಗಳಲ್ಲಿ ಚಾರ್ಜಿಂಗ್‌ ಕೇಂದ್ರ ಸ್ಥಾಪನೆ

ಬೆಂಗಳೂರು: ವಿದ್ಯುತ್‌ ವಾಹನಗಳ ಚಾರ್ಜಿಂಗ್‌ ಕೇಂದ್ರಗಳನ್ನು ನಗರ ಹಾಗೂ ಹೆದ್ದಾರಿಗಳಲ್ಲಿ ಸ್ಥಾಪಿಸಲು ಇಂಧನ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ ಕೇಂದ್ರದ ಅನುದಾನ ಕೇಳಲು ಮುಂದಾಗಿದೆ.

ಇಲ್ಲಿನ ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಚಾರ್ಜಿಂಗ್‌ ಕೇಂದ್ರ ಸ್ಥಾಪಿಸಲಾಗಿದೆ. ಅದಕ್ಕೆ ನಿಧಾನಗತಿಯ ಪ್ರತಿಕ್ರಿಯೆ ಬರುತ್ತಿರುವುದನ್ನು ಗಮನಿಸಿದ ಇಲಾಖೆ ಈ ಕೇಂದ್ರಗಳನ್ನು ಹೆಚ್ಚಿಸಲು ಚಿಂತನೆ ನಡೆಸಿದೆ. 

‘ವಿದ್ಯುತ್‌ ವಾಹನಗಳ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆಗೆ ಸೀಮಿತ ಮೂಲಸೌಲಭ್ಯ ನೀಡುವ ಕೇಂದ್ರದ ಯೋಜನೆಗೆ ಬೆಸ್ಕಾಂ ಸಮ್ಮತಿಸಿದೆ. ಮೇ ಎರಡನೇ ವಾರದಲ್ಲಿ ಇಂಧನ ಇಲಾಖೆಯಿಂದ ಈ ಪ್ರಸ್ತಾವ ಬಂದಿದೆ. ನಾವು ಈ ಕೇಂದ್ರಗಳಿಗೆ ಅಗತ್ಯವಿರುವ ವಿದ್ಯುತ್‌ ಪೂರೈಕೆಗೆ ಬೇಕಾದ ಸಲಕರಣೆಗಳನ್ನು ಹೊಂದಿದ್ದೇವೆ. ನಾವು ಸಕಾರಾತ್ಮಕವಾಗಿ ಸ್ಪಂದಿಸಿದ್ದೇವೆ’ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದರು.

‘ಕಂಪನಿಯು ನಗರದಾದ್ಯಂತ 11 ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಚುನಾವಣಾ ನೀತಿ ಸಂಹಿತೆ ಹಾಗೂ ಇತರ ಇಲಾಖೆಗಳ ಅಡಚಣೆಯಿಂದಾಗಿ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಪ್ರತಿ ಚಾರ್ಜಿಂಗ್‌ ಕೇಂದ್ರ ಸ್ಥಾಪನೆಗೆ ₹ 25 ಲಕ್ಷ ವೆಚ್ಚವಾಗಲಿದೆ. ಕೇಂದ್ರ ಸ್ಥಾಪಿಸಲು ಟೆಂಡರು ಕರೆಯಲಾಗುವುದು. ಈ ಎಲ್ಲ ಪ್ರಕ್ರಿಯೆಗಳಿಗೆ ಸುಮಾರು ಎರಡು ತಿಂಗಳು ಬೇಕಾಗಲಿದೆ. ಕೆಲವು ನವೋದ್ಯಮಿಗಳೂ ಈ ಕೇಂದ್ರಗಳ ಸ್ಥಾಪನೆಗೆ ಆಸಕ್ತಿ ತೋರಿ ಸಂಪರ್ಕಿಸಿದ್ದಾರೆ’ ಎಂದು  ಅಧಿಕಾರಿಯೊಬ್ಬರು ಹೇಳಿದರು.

ಇದುವರೆಗೆ ಚಾಲ್ತಿಯಲ್ಲಿರುವ ಚಾರ್ಜಿಂಗ್‌ ಕೇಂದ್ರಕ್ಕೆ ಭೇಟಿ ನೀಡಿದವರ ದಾಖಲೆಯೂ ಬೆಸ್ಕಾಂ ಬಳಿ ಇಲ್ಲ. ಯಾವ ವಿದ್ಯುತ್‌ ವಾಹನವೂ ಕೇಂದ್ರಕ್ಕೆ ಬಂದಿಲ್ಲ. ಹಾಗಿದ್ದರೂ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು ಚಾರ್ಜಿಂಗ್‌ ಕೇಂದ್ರಗಳಲ್ಲಿ ಪೂರೈಸುವ ವಿದ್ಯುತ್‌ ಪ್ರತಿ ಯೂನಿಟ್‌ಗೆ ₹ 4.50 ದರ ನಿಗದಿಪಡಿಸಿದೆ. ಮಾತ್ರವಲ್ಲ, ಚಾರ್ಜಿಂಗ್‌ ಕೇಂದ್ರ ಸ್ಥಾಪನೆಗೆ ಯಾವುದೇ ಪರವಾನಗಿ ಪಡೆಯಬೇಕಾಗಿಯೂ ಇಲ್ಲ ಎಂದು ಕೆಇಆರ್‌ಸಿ ಹೇಳಿದೆ. ಇದಾದ ಬಳಿಕ ಕೇಂದ್ರ ಸ್ಥಾಪನೆ ಸಂಬಂಧಿಸಿದಂತೆ 10 ಏಜೆನ್ಸಿಗಳಿಂದ ವಿಚಾರಣೆ ಸಂಬಂಧಿಸಿ ಕರೆ ಬಂದಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

₹ 25 ಕೋಟಿ

ನಗರ ಮತ್ತು ಹೆದ್ದಾರಿಯಲ್ಲಿ ವಾಹನ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯ ವೆಚ್ಚ

ಇ– ವಾಹನ ಚಾರ್ಜಿಂಗ್‌ ಕೇಂದ್ರಗಳು

ಬೆಂಗಳೂರು ನಗರ;  83

ಬೆಂಗಳೂರು– ಮೈಸೂರು ಹೆದ್ದಾರಿ; 20

ಬೆಂಗಳೂರು – ಚೆನ್ನೈ ಹೆದ್ದಾರಿ; 10

3ರಿಂದ 5 ಕಿಲೋಮೀಟರ್‌ – ನಗರದೊಳಗೆ ಚಾರ್ಜಿಂಗ್‌ ಕೇಂದ್ರಗಳ ನಡುವಿನ ಅಂತರ

25 ಕಿಲೋಮಿಟರ್‌– ಹೆದ್ದಾರಿಯಲ್ಲಿ ಇರುವ ಚಾರ್ಜಿಂಗ್‌ ಕೇಂದ್ರಗಳ ಅಂತರ

(* ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಬೆಸ್ಕಾಂ ಮಂಡ್ಯದವರೆಗೆ ಮಾತ್ರ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಿದೆ. ಮುಂದಿನ ಕೇಂದ್ರಗಳನ್ನು ಕಲ್ಕತ್ತಾ ಎಲೆಕ್ಟ್ರಿಕ್‌ ಸಪ್ಲೈ ಕಾರ್ಪೊರೇಷನ್‌ ನೋಡಿಕೊಳ್ಳಲಿದೆ. ಚೆನ್ನೈ ಹೆದ್ದಾರಿಯಲ್ಲಿ ಕರ್ನಾಟಕದ ಗಡಿಯವರೆಗೆ ಚಾರ್ಜಿಂಗ್‌ ಕೇಂದ್ರಗಳನ್ನು ಬೆಸ್ಕಾಂ ಸ್ಥಾಪಿಸಲಿದೆ.)

ಈಗಿರುವ ಸಮಸ್ಯೆ

ಸದ್ಯದ ಚಾರ್ಜಿಂಗ್‌ ಕೇಂದ್ರ ಬಹಳ ದೂರ ಇರುವುದರಿಂದ ವಿದ್ಯುತ್‌ ವಾಹನವುಳ್ಳವರು ಬೆಸ್ಕಾಂ ಕಚೇರಿಗೆ ಬರುತ್ತಿಲ್ಲ. ಹೊಸ ಯೋಜನೆ ನಮಗೆ ನೆರವಾಗಲಿದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ಆಶಯ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry