ವ್ಯೋಮ ನೌಕೆ ಮೇಲೆ 11ಲಕ್ಷ ಹೆಸರು

7
ಸೂರ್ಯನ ಅಧ್ಯಯನಕ್ಕೆ ನಾಸಾದ ಹೊಸ ಯೋಜನೆ

ವ್ಯೋಮ ನೌಕೆ ಮೇಲೆ 11ಲಕ್ಷ ಹೆಸರು

Published:
Updated:
ವ್ಯೋಮ ನೌಕೆ ಮೇಲೆ 11ಲಕ್ಷ ಹೆಸರು

ವಾಷಿಂಗ್ಟನ್‌: ಸೂರ್ಯನ ಅಧ್ಯಯನಕ್ಕಾಗಿ ನಾಸಾ ಕಳಿಸಲಿರುವ ಪಾರ್ಕರ್‌ ಸೋಲಾರ್‌ ಪ್ರೋಬ್‌ ವ್ಯೋಮನೌಕೆ ಹನ್ನೊಂದು ಲಕ್ಷಕ್ಕೂ ಅಧಿಕ ಜನರ ಹೆಸರುಗಳನ್ನು ಹೊತ್ತು ಇದೇ ಜುಲೈನಲ್ಲಿ ನೇಸರನತ್ತ ಯಾನ ಆರಂಭಿಸಲಿದೆ.

ಸೂರ್ಯನ ಸಮೀಪ ಹೋಗುವ ತನ್ನ ಏಳು ವರ್ಷದ ಯಾನದಲ್ಲಿ ಈ ವ್ಯೋಮನೌಕೆ ಸೂರ್ಯನ ವಾತಾವರಣದ ಮೂಲಕ 24 ಬಾರಿ ಹಾದು ಹೋಗಲಿದೆ.

‘ನಮಗೆ ಹತ್ತಿರ ಇರುವ ಏಕಮಾತ್ರ ನಕ್ಷತ್ರವೂ ಆಗಿರುವ ಸೂರ್ಯನ ಬಗೆಗಿನ ತಮ್ಮ ಅರಿವಿನ ಹರವನ್ನು ಈ ಯಾನ ವಿಸ್ತರಿಸಲಿದೆ’ ಎಂದು ಪಾರ್ಕರ್‌ ಸೋಲಾರ್‌ ಪ್ರೋಬ್‌ ಯೋಜನೆ ಕೈಗೆತ್ತಿಕೊಂಡಿರುವ ಅಮೆರಿಕದ ಜಾನ್ಸ್‌ ಹಾಪ್‌ಕಿನ್ಸ್‌ ಅನ್ವಯಿಕ ಭೌತವಿಜ್ಞಾನ ಪ್ರಯೋಗಾಲಯದ ವಿಜ್ಞಾನಿ ನಿಕೊಲಾ ಫಾಕ್ಸ್‌ ಹೇಳಿದ್ದಾರೆ.

ಸೂರ್ಯನ ಅಧ್ಯಯನಕ್ಕಾಗಿ ಉಡ್ಡಯನ ಮಾಡಲಿರುವ ವ್ಯೋಮನೌಕೆ ಮೇಲೆ ಬರೆಯುವ ಸಂಬಂಧ ಮಾರ್ಚ್‌ನಲ್ಲಿ ಸಾರ್ವಜನಿಕರಿಂದ ಹೆಸರುಗಳನ್ನು ಆಹ್ವಾನಿಸಲಾಗಿತ್ತು. ನಾಸಾದ ಈ ಆಹ್ವಾನಕ್ಕೆ ಪ್ರತಿಕ್ರಿಯಿಸಿ ಒಟ್ಟು 11,37,202 ಜನರು ತಮ್ಮ ಹೆಸರುಗಳನ್ನು ನೋಂದಾಯಿಸಿದ್ದರು.

ಜನರ ಹೆಸರನ್ನು ಒಳಗೊಂಡ ಮೆಮೊರಿ ಕಾರ್ಡ್‌ವೊಂದನ್ನು ಮೇ 18ರಂದು ವ್ಯೋಮನೌಕೆಯಲ್ಲಿಅಳವಡಿಸಲಾಗಿದೆ.

ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಯುಗೇನ್‌ ಪಾರ್ಕರ್‌ ಸೂರ್ಯನ ಸುತ್ತ ಸೌರ ಮಾರುತದ ಅಸ್ತಿತ್ವದ ಬಗ್ಗೆ ಪ್ರತಿಪಾದನೆ ಮಾಡಿದ್ದರು. ಈ ಯಾನಕ್ಕೆ ಪಾರ್ಕರ್‌ ಅವರ ಸಂಶೋಧನೆಯೇ ಪ್ರೇರಣೆಯಾಗಿರುವ ಕಾರಣ, ಪಾರ್ಕರ್‌ ಅವರ ಹೆಸರು ಹಾಗೂ ಅವರ ಹೇಳಿಕೆಗಳನ್ನು ಒಳಗೊಂಡ ಫಲಕವೊಂದನ್ನು ಸಹ ವ್ಯೋಮನೌಕೆ ಮೇಲೆ ಅಳವಡಿಸಲಾಗಿದೆ.

ಅಲ್ಲದೇ, ಆಕಾಶಕಾಯವೊಂದರ ಅಧ್ಯಯನಕ್ಕಾಗಿ ಕೈಗೊಂಡಿರುವ ಯೋಜನೆಗೆ ನಾಸಾ ಜೀವಂತ ವಿಜ್ಞಾನಿಯೊಬ್ಬರ ಹೆಸರನ್ನು ಇಟ್ಟಿರುವುದು ಸಹ ಇದೇ ಮೊದಲು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry