ವಾಣಿಜ್ಯ ಕಟ್ಟಡಗಳಿಗೆ ಗೃಹಬಳಕೆ ವಿದ್ಯುತ್‌ ಸಂಪರ್ಕ: ಆಕ್ಷೇಪ

7

ವಾಣಿಜ್ಯ ಕಟ್ಟಡಗಳಿಗೆ ಗೃಹಬಳಕೆ ವಿದ್ಯುತ್‌ ಸಂಪರ್ಕ: ಆಕ್ಷೇಪ

Published:
Updated:

ಬೆಂಗಳೂರು: ವಸತಿ ಪ್ರದೇಶಗಳ ವಾಣಿಜ್ಯ ಕಟ್ಟಡಗಳಿಗೆ ನೀಡಲಾದ ಗೃಹಬಳಕೆ ದರದ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿ ‘ಐ ಚೇಂಜ್‌ ಇಂದಿರಾನಗರ’ ವೇದಿಕೆ ಅಡಿ 8 ನಿವಾಸಿ ಕಲ್ಯಾಣ ಸಂಘಗಳ ಪ್ರತಿನಿಧಿಗಳು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ಗುರುವಾರ ಮನವಿ ಸಲ್ಲಿಸಿದರು.

‘ಇಂದಿರಾನಗರ ಪ್ರದೇಶದಲ್ಲಿ ಹಲವರು ಗೃಹಬಳಕೆಯ ಮೀಟರನ್ನು ವಾಣಿಜ್ಯ ಬಳಕೆಯ ಮೀಟರನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ವಾಣಿಜ್ಯ ಕಟ್ಟಡದ ವ್ಯವಹಾರ ಸಂಬಂಧಿಸಿ ವ್ಯಾಪಾರ ಪರವಾನಗಿಯನ್ನೂ ಪಡೆದಿಲ್ಲ. ಕೆಲವರು ಗೃಹಬಳಕೆ ಮೀಟರ್‌ನಲ್ಲೇ ವಾಣಿಜ್ಯ ಮಳಿಗೆಗಳಿಗೆ ಸಂಪರ್ಕ ಕಲ್ಪಿಸಿದ್ದಾರೆ. ಇದು ಕಾನೂನುಬಾಹಿರ. ಇಂಧನ ಇಲಾಖೆ ಈ ಸಂಬಂಧಿಸಿ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಪ್ರತಿನಿಧಿಗಳು ದೂರಿದರು.

ವೇದಿಕೆಯ ಸದಸ್ಯೆ, ಬಿ.ಎಂ.ಕಾವಲ್‌ ನಿವಾಸಿಗಳ ಸಂಘದ ಅಧ್ಯಕ್ಷೆ ಸ್ನೇಹಾ ನಂದಿಹಾಳ್‌ ಮಾತನಾಡಿ, ‘ಈ ವಿಚಾರದ ಕುರಿತು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೂ ಮನವಿ ಸಲ್ಲಿಸಿದ್ದೇವೆ. ಆದರೆ, ಯಾವುದೇ ಕ್ರಮ ಜರುಗಿಲ್ಲ. ಇಂದು ಮೂರನೇ ಬಾರಿಗೆ ಬೆಸ್ಕಾಂ ಅಧಿಕಾರಿಗಳನ್ನು ಭೇಟಿಯಾಗಿದ್ದೇವೆ. ಬೆಸ್ಕಾಂ ಪರಿಶೀಲನಾ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕು. ಅದರಲ್ಲೂ ಪರಿಷ್ಕೃತ ಮಾಸ್ಟರ್‌ ಪ್ಲಾನ್‌ – 2015ರ ಪ್ರಕಾರ ಗುರುತಿಸಲಾಗಿರುವ ರೆಸಿಡೆನ್ಷಿಯಲ್‌ ಮೈನ್‌ ಪ್ರದೇಶಗಳ ವಾಣಿಜ್ಯ ಕಟ್ಟಡಗಳನ್ನು ವಿಶೇಷವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದೇವೆ’ ಎಂದರು.

ಈ ಪ್ರದೇಶದಲ್ಲಿರುವ ಒಟ್ಟಾರೆ ಮಳಿಗೆಗಳ ಪೈಕಿ ಶೇ 90ಕ್ಕೂ ಹೆಚ್ಚು ಕಟ್ಟಡಗಳು ಯಾವುದೇ ವ್ಯಾಪಾರ ಪರವಾನಗಿಯನ್ನು ಹೊಂದಿಲ್ಲ ಎಂದು ವೇದಿಕೆ ಸದಸ್ಯರು ಮನವಿಯಲ್ಲಿ ಹೇಳಿದ್ದಾರೆ.

ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌ ಪ್ರತಿಕ್ರಿಯಿಸಿ, ‘ಈ ಪ್ರದೇಶದ ನಿವಾಸಿಗಳು ಮೊದಲ ಬಾರಿ ನನ್ನ ಬಳಿ ಬಂದಿದ್ದಾರೆ. ಇದರ ಬದಲಾಗಿ ಅವರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಯನ್ನು ಸಂಪರ್ಕಿಸಬೇಕಿತ್ತು. ಮೀಟರ್‌ ಬಳಕೆ, ವಿದ್ಯುತ್‌ ದರ ಸಂಬಂಧಿಸಿ ಕಾನೂನು ತಜ್ಞರು ಮತ್ತು ಮೇಲಧಿಕಾರಿಗಳ ಜತೆ ಚರ್ಚಿಸಿ ನಿರ್ಧರಿಸಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry