ಮೊದಲ ಸುತ್ತಿನಲ್ಲಿ 384 ಸೀಟು ಖಾಲಿ

7
ಆರ್‌ಟಿಇ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 4,370 ಸೀಟುಗಳು

ಮೊದಲ ಸುತ್ತಿನಲ್ಲಿ 384 ಸೀಟು ಖಾಲಿ

Published:
Updated:
ಮೊದಲ ಸುತ್ತಿನಲ್ಲಿ 384 ಸೀಟು ಖಾಲಿ

ಬೆಳಗಾವಿ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 432 ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಆರ್‌ಟಿಇ ಅಡಿ ಇರುವ 4,370 ಸೀಟುಗಳಿಗೆ ಪ್ರವೇಶ ಪಡೆಯಲು 6,337 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಮೊದಲ ಸುತ್ತಿನಲ್ಲಿ ಮಂಜೂರಾಗಿದ್ದ 3,022 ಸೀಟುಗಳ ಪೈಕಿ 2,634 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. 384 ಸೀಟುಗಳು ಖಾಲಿ ಉಳಿದಿವೆ.

ಸದ್ಯದಲ್ಲಿಯೇ ಎರಡು ಹಾಗೂ ಮೂರನೇ ಸುತ್ತಿನಲ್ಲಿ ಸೀಟುಗಳ ಮರು ಹಂಚಿಕೆ ನಡೆಯಲಿದೆ. ಇದರಲ್ಲಿ ಬಾಕಿ ಉಳಿದಿರುವ ಸೀಟುಗಳನ್ನು ಸೇರಿಸಿ ಹಂಚಿಕೆ ಮಾಡಲಿದ್ದಾರೆ.

ಅನುದಾನಿತ ಶಾಲೆಗಳೂ ಸೇರ್ಪಡೆ: ಪ್ರಸಕ್ತ ವರ್ಷದಿಂದ ಅನುದಾನಿತ ಖಾಸಗಿ ಶಾಲೆಗಳಲ್ಲೂ ಆರ್‌ಟಿಇ ಜಾರಿಗೊಳಿಸಲಾಗಿದೆ. ಇದಕ್ಕೂ ಮೊದಲು ಕೇವಲ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಮಾತ್ರ ಆರ್‌ಟಿಇ ಜಾರಿಗೊಳಿಸಲಾಗಿತ್ತು. ಇದರ ಜೊತೆಗೆ ಕೇಂದ್ರ ಸರ್ಕಾರದ ಸ್ವಾಮ್ಯದ ಕೇಂದ್ರೀಯ ವಿದ್ಯಾಲಯ ಹಾಗೂ ನವೋದಯ ವಿದ್ಯಾಲಯಗಳಲ್ಲೂ ಆರ್‌ಟಿಇ ಜಾರಿಯಲ್ಲಿತ್ತು.

ಹೊಸ ನಿಯಮದಿಂದಾಗಿ ಜಿಲ್ಲೆಯ 40 ಅನುದಾನಿತ ಶಾಲೆಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿವೆ. ಇದಲ್ಲದೇ, 392 ಅನುದಾನ ರಹಿತ ಶಾಲೆಗಳಿದ್ದು, ಒಟ್ಟು 432 ಶಾಲೆಗಳಲ್ಲಿ ಆರ್‌ಟಿಇ ಜಾರಿಯಲ್ಲಿದೆ. ಸುಮಾರು 4,337 ಸೀಟುಗಳು ಲಭ್ಯ ಇವೆ. ಇವುಗಳಿಗಾಗಿ ಸುಮಾರು 6,337 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.

ಬೆಳಗಾವಿಯಲ್ಲಿ ಅತಿ ಹೆಚ್ಚು: ಏಳು ವಲಯಗಳನ್ನು ಬೆಳಗಾವಿ ಶೈಕ್ಷಣಿಕ ಜಿಲ್ಲೆ ಹೊಂದಿದೆ. ಇವುಗಳ ಪೈಕಿ ಬೆಳಗಾವಿ ನಗರ ವಲಯದಲ್ಲಿ ಅತಿ ಹೆಚ್ಚು 1,413 ಸೀಟುಗಳಿವೆ. ಇವುಗಳನ್ನು ಪಡೆಯಲು 3,189 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇದು ಅತಿ ಹೆಚ್ಚು ಅರ್ಜಿ ಸಲ್ಲಿಕೆಯಾಗಿರುವ ಪ್ರದೇಶ ಕೂಡ ಆಗಿದೆ.

ಖಾನಾಪುರ ವಲಯದಲ್ಲಿ ಅತಿ ಕಡಿಮೆ 191 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. ಇಲ್ಲಿ 279 ಸೀಟುಗಳಿದ್ದರೂ ಕಡಿಮೆ ಅರ್ಜಿಗಳು ಸಲ್ಲಿಕೆಯಾಗಿವೆ. ಮೊದಲ ಸುತ್ತಿನಲ್ಲಿ 151 ಸೀಟುಗಳನ್ನು ಹಂಚಿಕೆ ಮಾಡಲಾಗಿದ್ದು, 142 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ.

ಖಾಲಿ ಸೀಟಿಗೆ ಕಾರಣವೇನು?: ‘ಪಾಲಕರು ವಾಸವಿರುವ ಪ್ರದೇಶಗಳಲ್ಲಿನ ಶಾಲೆಗಳಿಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಒಂದೊಂದು ಪ್ರದೇಶದಲ್ಲಿ 2– 3 ಶಾಲೆಗಳಿದ್ದಾಗ ಅವುಗಳಿಗೆಲ್ಲ ಅರ್ಜಿ ಸಲ್ಲಿಸಿರುತ್ತಾರೆ. ಮೊದಲ ಪಟ್ಟಿಯಲ್ಲಿ ತಾವು ಬಯಸಿದ ಶಾಲೆ ಸಿಗದೇ ಇದ್ದಾಗ ಎರಡನೇ ಅಥವಾ ಮೂರನೇ ಪಟ್ಟಿಯವರೆಗೆ ಕಾಯುತ್ತಾರೆ. ಹೀಗಾಗಿ ಮೊದಲ ಪಟ್ಟಿಯಲ್ಲಿ ಕೆಲವು ಸೀಟುಗಳು ಖಾಲಿ ಉಳಿದಿವೆ. ಇದಲ್ಲದೇ, ಪಾಲಕರು ಬೇರೆ ಕಡೆ ವರ್ಗಾವಣೆಯಾಗಿದ್ದರೆ, ಅಂತಹ ಕಾರಣಗಳಿಂದಲೂ ಸೀಟುಗಳು ಖಾಲಿ ಉಳಿದಿರುತ್ತವೆ’ ಎಂದು ಶಿಕ್ಷಣಾಧಿಕಾರಿ, ಆರ್‌ಟಿಇ ನೋಡಲ್‌ ಅಧಿಕಾರಿ

ಎ.ಎನ್‌. ಪ್ಯಾಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಏನಿದು ಆರ್‌ಟಿಇ?: ಖಾಸಗಿ ಶಾಲೆಗಳಲ್ಲೂ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅವಕಾಶ ದೊರೆಯಬೇಕು ಎನ್ನುವ ಉದ್ದೇಶದಿಂದ 2010ರಲ್ಲಿ ಕೇಂದ್ರ ಸರ್ಕಾರವು ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯನ್ನು ಜಾರಿಗೊಳಿಸಿತ್ತು. ಇದರ ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಆಡಳಿತ ಮಂಡಳಿಗಳು ನಡೆಸುವ ಶಾಲೆಗಳನ್ನು ಹೊರತುಪಡಿಸಿ ಇತರ ಎಲ್ಲ ಖಾಸಗಿ ಶಾಲೆಗಳು ಸೇರಿಕೊಂಡಿವೆ.

ಪ್ರತಿ ಶಿಕ್ಷಣ ಸಂಸ್ಥೆಯ ಆರಂಭಿಕ ತರಗತಿಗೆ (ಎಲ್‌ಕೆಜಿ ಅಥವಾ 1ನೇ ತರಗತಿ) ಆರ್‌ಟಿಇ ಅಡಿ ಪ್ರವೇಶ ನೀಡಲಾಗುತ್ತದೆ. ಆ ತರಗತಿಯ ದಾಖಲಾತಿ ಸಂಖ್ಯೆಯ ಶೇ 25ರಷ್ಟು ಸೀಟುಗಳನ್ನು ಆರ್‌ಟಿಇ ಅಡಿ ಕಾಯ್ದಿರಿಸಲಾಗುತ್ತದೆ. ಬೆಂಗಳೂರಿನ ಶಿಕ್ಷಣ ಇಲಾಖೆಯ ಕಚೇರಿಯಿಂದ ಆನ್‌ಲೈನ್‌ ವ್ಯವಸ್ಥೆಯಡಿ ಆರ್‌ಟಿಇಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಇದರಡಿ ಆಯ್ಕೆಯಾಗುವ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry