ಬಿರುಗಾಳಿ ಮಳೆಗೆ ಭಾರಿ ನಷ್ಟ

7

ಬಿರುಗಾಳಿ ಮಳೆಗೆ ಭಾರಿ ನಷ್ಟ

Published:
Updated:
ಬಿರುಗಾಳಿ ಮಳೆಗೆ ಭಾರಿ ನಷ್ಟ

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ಬುಧವಾರ ಸಂಜೆ ಸುರಿದ ಭಾರಿ ಬಿರುಗಾಳಿ ಮಳೆಗೆ ನೂರಾರು ಅಡಿಕೆ ಹಾಗೂ ತೆಂಗಿನ ಮರಗಳು ಧರೆಗೆ ಉರುಳಿವೆ. ಮನೆಯ ಚಾವಣಿಗಳು ಹಾರಿಹೋಗಿವೆ. ಕೆಲ ಕಡೆ ಮನೆಯ ಗೋಡೆಗಳು ಕುಸಿದಿವೆ.

ತಾಲ್ಲೂಕಿನ ಕಂದಿಕೆರೆಯ ತಿಮ್ಮನಹಳ್ಳಿಯಲ್ಲಿ ರಾತ್ರಿಯಿಡೀ ಜನ ಜಾಗರಣೆ ಮಾಡಿದ್ದಾರೆ. ರಾತ್ರಿವೇಳೆ ಸುರಿದ ಭಾರಿ ಬಿರುಗಳಿ ಸಹಿತ ಮಳೆಗೆ ಕಂದಿಕೆರೆ ಹೋಬಳಿಯ ತಿಮ್ಮನಹಳ್ಳಿ ಗ್ರಾಮ ಅಕ್ಷರಶಃ ತತ್ತರಿಸಿದೆ. ವಿದ್ಯುತ್ ಕಂಬಗಳು, ಮರಗಳು, ಮನೆಯ ಚಾವಣಿ ಶೀಟ್‌ಗಳು ಹಾರಿಹೋಗಿ ಇಡೀ ರಾತ್ರಿ ಜನ ಜಾಗರಣೆ ಮಾಡುವಂತಾಯಿತು. ಗುಡುಗು, ಸಿಡಿಲಿನ ಆರ್ಭಟಕ್ಕೆ ಮಕ್ಕಳು, ಮಹಿಳೆಯರು ಬೆಚ್ಚಿಬಿದ್ದರು.

ಮಳೆಯಿಲ್ಲದೆ ಕಂಗಾಲಾಗಿದ್ದ ಜನ ಕಾರ್ಮೋಡ ಕಂಡು ಉತ್ತಮ ಮಳೆಯ ಕನಸು ಕಂಡಿದ್ದರು. ಕಪ್ಪಾಗಿರುವ ಮೋಡಗಳ ಫೋಟೊ ತೆಗೆದು ವಾಟ್ಸ ಆ್ಯಪ್‌ಗಳಲ್ಲಿ ಹಾಕಿ ಸಂಭ್ರಮಿಸಿದ್ದರು. ಆದರೆ ಈ ಕನಸು-ಸಂಭ್ರಮಕ್ಕೆ ಬಿರುಗಳಿ ತಣ್ಣಿರೆರಚಿತ್ತು. ಹಿಂದೆದೂ ಕಾಣದ ಬಿರುಗಾಳಿಯ ಆರ್ಭಟ ಇಲ್ಲಿನ ಜನರನ್ನು ನಲುಗಿಸಿತ್ತು. ಮಳೆಯ ಮುನ್ಸೂಚನೆ ಅರಿತ ಜನ ಮಳೆ ಬರುವುದರೊಳಗೆ ಮನೆ ಸೇರಿದ್ದರೂ ಯಾವ ಕಂಬ, ಯಾವ ಮರ ಮನೆ ಮೇಲೆ ಬೀಳುತ್ತದೆಯೋ ಎಂಬ ಆತಂಕದಲ್ಲಿ ರಾತ್ರಿ ಕಳೆಯುವಂತೆ ಮಾಡಿತ್ತು.

ಮಳೆಗಾಳಿಯ ರುದ್ರ ನರ್ತನಕ್ಕೆ ಗ್ರಾಮದ ಪ್ರಮುಖ ಬೀದಿಯಲ್ಲಿನ 9 ವಿದ್ಯುತ್ ಕಂಬಗಳು ಧರೆಗುರುಳಿದವು. ಇಡೀ ರಾತ್ರಿ ವಿದ್ಯುತ್ ಸಂಪರ್ಕ ಇಲ್ಲದೆ ಜನ ಕತ್ತಲೆಯಲ್ಲಿ ಕಾಲ ಕಳೆದರು. ಗ್ರಾಮದ ಅರಳಿ ಮರ ಸೇರಿದಂತೆ ವಿವಿಧ ಜಾತಿಯ 6 ಮರಗಳು ಮನೆ ಹಾಗೂ ನಿಲ್ಲಿಸಿದ್ದ ವಾಹನಗಳ ಮೇಲೆ ಬಿದ್ದವು. ತೆಂಗು ಹಾಗೂ ಅಡಕೆ ಮರಗಳು ಧರೆಗುರುಳಿ ರೈತರಿಗೆ ಅಪಾರ ನಷ್ಟ ಸಂಭವಿಸಿದೆ.

ದೊಡ್ಡ ಸಿಲ್ವರ್ ಮರವೊಂದು ನಿಂತಿದ್ದ ಬೈಕ್ ಮೇಲೆ ಬಿದ್ದಿದ್ದು ಬೈಕ್ ಜಖಂಗೊಂಡಿದೆ. ಬೈಕ್ ಮೈಲ್ಕೆಬೆ ರಂಗನಾಥ್ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಹಳೇ ಆಸ್ಪತ್ರೆ ಮುಂಭಾಗದ ಮರವೊಂದು ಬಿಲ್ಡಿಂಗ್ ಮೇಲೆ ಬಿದ್ದು ಚಾವಣಿ ಜಖಂಗೊಂಡಿದೆ. ಬಿ.ಆರ್.ಗಜೇಂದ್ರ, ಚಂದ್ರಕಲಾ, ಪುರದಯ್ಯ, ಬಿ.ಆರ್.ರಂಗನಾಥ್, ಬಿ.ಕೆ.ಪುರುಷೋತ್ತಮ್, ಟಿ.ಎಚ್.ರಮೇಶ್, ಮೂಡ್ಲಪ್ಪ, ಬಂಡಿಮನೆ ಲೋಕೇಶ್ ಅವರ ತೆಂಗು ಮತ್ತು ಅಡಿಕೆ ಮರಗಳು ಧರೆಗುರುಳಿವೆ.

ಅಲ್ಲದೆ ತೊಳಸಮ್ಮ, ನರಸಮ್ಮ, ತಿಮ್ಮಯ್ಯ ಅವರ ಮನೆಗಳ ಚಾವಣಿ ಶೀಟ್‌ಗಳು ಹಾರಿ ಹೋಗಿವೆ. ಒಟ್ಟಾರೆ ಬಿರುಗಾಳಿ ಮಳೆ ಗ್ರಾಮದಲ್ಲಿ ಇಡೀ ರಾತ್ರಿ ಆತಂಕದ ವಾತಾವಣ ನಿರ್ಮಿಸಿತ್ತು. ಅಪಾರ ನಷ್ಟ ತಂದಿತ್ತು. ಮುಂಜಾನೆ ಬೆಸ್ಕಾಂ ಸಿಬ್ಬಂದಿ ಕಂಬಗಳ ದುರಸ್ಥಿ ಕಾರ್ಯ ಮಾಡಿದರೆ ಅರಣ್ಯ ಮತ್ತು ಗ್ರಾಪಂ ಸಿಬ್ಬಂದಿ ಧರೆಗುರುಳಿದ ಮರಗಳ ತೆರವು ಕಾರ್ಯ ಮಾಡಿದರು. ಕಂದಾಯ ಹಾಗೂ ತೋಟಗಾರಿಗೆ ಇಲಾಖೆ ಸಿಬ್ಬಂದಿ ಭೇಟಿ ನೀಡಿ ನಷ್ಟದ ಅಂದಾಜು ವಿವರ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry