ಬೇಡಿಕೆ ಈಡೇರಿಸದೆ ಕಾಮಗಾರಿ: ಸ್ಥಳೀಯರ ವಿರೋಧ

7
ಹೆಜಮಾಡಿಯಲ್ಲಿ ಒಳರಸ್ತೆಗೂ ಟೋಲ್‌ ಗೇಟ್

ಬೇಡಿಕೆ ಈಡೇರಿಸದೆ ಕಾಮಗಾರಿ: ಸ್ಥಳೀಯರ ವಿರೋಧ

Published:
Updated:
ಬೇಡಿಕೆ ಈಡೇರಿಸದೆ ಕಾಮಗಾರಿ: ಸ್ಥಳೀಯರ ವಿರೋಧ

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿಯಲ್ಲಿ ಇರುವ ಟೋಲ್‌ ಗೇಟ್ ತಪ್ಪಿಸಲು ಒಳರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಟೋಲ್‌ ಸಂಗ್ರಹಿಸಲು ನವಯುಗ್ ಕಂಪೆನಿ ಮುಂದಾಗಿದೆ.

ಆದರೆ ಸ್ಥಳೀಯ ಗ್ರಾಮಸ್ಥರು ಈ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದು, ಗ್ರಾಮದ ಬೇಡಿಕೆಗಳನ್ನು ಈಡೇರಿಸದೆ ಹೆಜಮಾಡಿ ಗುಡ್ಡೆಯಂಗಡಿ ಬಳಿ ಟೋಲ್‌ ಗೇಟ್ ಅಳವಡಿಸುವ ಕಾಮಗಾರಿಯನ್ನು ಮುಂದುವರೆಸಬಾರದು ಎಂದು ಒತ್ತಾಯಿಸಿದ್ದಾರೆ.

ಸುರತ್ಕಲ್-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆಜಮಾಡಿಯಲ್ಲಿ ಟೋಲ್‌ ಗೇಟ್ ನಿರ್ಮಿಸಿತ್ತು.  ಆದರೆ ಟೋಲ್‌ ಗೇಟ್ ತಪ್ಪಿಸಲು ಘನ ವಾಹನಗಳು ಸೇರಿದಂತೆ ಹೆಚ್ಚಿನ ವಾಹನಗಳು ಹೆಜಮಾಡಿ ಗುಡ್ಡೆಯಂಗಡಿ ಹಾಗೂ ಕನ್ನಂಗಾರಿ ಬಳಿ ಸಂಚರಿಸುತ್ತಿವೆ. ಇದನ್ನು ಮನಗಂಡು ನವಯುಗ ಕಂಪೆನಿಯು ಟೋಲ್ ತಪ್ಪಿಸಿ ಸಂಚರಿಸುವ ವಾಹನಗಳಿಗೂ ಟೋಲ್ ಸಂಗ್ರಹಿಸಲು ಕಿರು ಟೋಲ್‌ ಗೇಟ್ ನಿರ್ಮಾಣಕ್ಕೆ 2 ವರ್ಷದ ಹಿಂದೆ ಮುಂದಾಗಿತ್ತು. ಇದಕ್ಕಾಗಿ ಗುಡ್ಡೆಯಂಗಡಿ ಬಳಿ ಲೋಕೋಪಯೋಗಿ ರಸ್ತೆಯನ್ನು ಅಗೆದು ಟೋಲ್‌ ಗೇಟ್ ಕಾಮಗಾರಿಗೆ ಮುಂದಾದಾಗ ಗ್ರಾಮ ಪಂಚಾಯಿತಿ ವಿರೋಧ ವ್ಯಕ್ತಪಡಿಸಿತ್ತು. ಗ್ರಾಮಕ್ಕೆ ಅಗತ್ಯವಿರುವ ಕೆಲ ಮೂಲ ಸೌಕರ್ಯವನ್ನು ಗುತ್ತಿಗೆದಾರ ಕಂಪೆನಿ ಮಾಡಿಕೊಡಬೇಕು ಎಂದು ಆಗ್ರಹಿಸಲಾಗಿತ್ತು. ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ಅಂದು ಕಾಮಗಾರಿಯನ್ನು ಸ್ಥಗಿತಗೊಳಿಸಿತ್ತು. ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ಕಂಪೆನಿಯಿಂದ ಕೊಡಿಸಿತ್ತು.

ಈವರೆಗೆ ಯಾವುದೇ ಬೇಡಿಕೆಯನ್ನು ಈಡೇರಿಸದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದೇಶದಂತೆ ಹೆದ್ದಾರಿಗೆ ಸೇರಿದ ಜಾಗದಲ್ಲಿ ಕಳೆದೆರಡು ದಿನಗಳಿಂದ ಟೋಲ್‌ ಗೇಟ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ.

ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ತೆರಳಿ  ಕಾಮಗಾರಿ ಸ್ಥಗಿತಗೊಳಿಸುವಂತೆ ಗುರುವಾರ ಆಗ್ರಹಿಸಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪಡುಬಿದ್ರಿ ಠಾಣಾಧಿಕಾರಿ ಸತೀಶ್ ‘ಕಾಮಗಾರಿ ಸ್ಥಗಿತಗೊಳಿಸಲಾಗುವುದಿಲ್ಲ. ಅವರು ಜಿಲ್ಲಾಡಳಿತದ ಆದೇಶದಂತೆ ಕಾಮಗಾರಿ ನಡೆಸುತ್ತಿದ್ದಾರೆ. ನೀವು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ತಾಕೀತು ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧಾಕರ ಕರ್ಕೇರ, ನಾವು ಈ ಹಿಂದೆ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಿಳಿಸಿದ್ದೆವು. ಜಿಲ್ಲಾಧಿಕಾರಿ ಕಂಪೆನಿಗೆ ಮೌಖಿಕವಾಗಿ ಸೂಚಿಸಿದ್ದರು. ಆದರೆ ಕಂಪೆನಿ ಇದುವರೆಗೂ ನಮ್ಮ ಯಾವುದೇ ಬೇಡಿಕೆಯನ್ನು ಈಡೇರಿಸಿಲ್ಲ. ಗ್ರಾಮದ ಕುಡಿಯುವ ನೀರು ಪೂರೈಕೆ, ಬೀದಿ ದೀಪ ಹಾಗೂ ಮೂರು ಬಸ್ ತಂಗುದಾಣಗಳನ್ನು ನಿರ್ಮಿಸಿ

ಕೊಡಬೇಕು ಎಂದು ಒತ್ತಾಯಿಸಿದರು.

ಅಲ್ಲದೆ 2017 ಅಕ್ಟೋಬರ್ 23 ರಂದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಾಗುವ ಸಮಸ್ಯೆಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗದ ಯೋಜನಾ ನಿರ್ದೇಶಕ ವಿಜಯಕುಮಾರ್ ಸ್ಯಾಮ್ಸನ್, ಶಂಕರ್ ರಾವ್‌  ಮತ್ತಿತರ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ದಾಖಲು ಮಾಡಿದ ನಡಾವಳಿ ಪಡೆದ ಪೊಲೀಸರು ಮಾತುಕತೆ ನಡೆಸುವುದಾಗಿ ತಿಳಿಸಿ ಗ್ರಾಮಸ್ಥರನ್ನು ಹಿಂದಕ್ಕೆ ಕಳುಹಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ರೇಣುಕಾ ಪುತ್ರನ್, ಮಾಜಿ ಸದಸ್ಯ ಸಚಿನ್ ಜಿ ನಾಯಕ್, ಗ್ರಾಮ ಪಂಚಾಯಿತಿ ಸದಸ್ಯರಾದ ವಾಮನ ಕೋಟ್ಯಾನ್ ನಡಿಕುದ್ರು, ಪ್ರಾಣೇಶ್ ಹೆಜಮಾಡಿ, ವಾಸು ಪೂಜಾರಿ, ಕುಮಾರ್ ಕಾಂಚನ್, ಪಾಂಡುರಂಗ ಕರ್ಕೇರ ಉಪಸ್ಥಿತರಿದ್ದರು.

ರಾಷ್ಟ್ರಧ್ವಜ ವಶಕ್ಕೆ

ಟೋಲ್‌ ಗೇಟ್ ಕಾಮಗಾರಿಯ ವೇಳೆ ಅಲ್ಲಿ ಜೆಸಿಬಿಯಲ್ಲಿ ಕೆಲಸ ಅಗೆಯಲಾಗುತಿತ್ತು. ಈ ಜೆಸಿಬಿಯಲ್ಲಿ ರಾಷ್ಟ್ರಧ್ವಜ ಅಳವಡಿಸಲಾಗಿತ್ತು. ಟೋಲ್ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದ ಸ್ಥಳೀಯ ಗ್ರಾಮಸ್ಥರು ಜೆಸಿಬಿಯಲ್ಲಿ ರಾಷ್ಟ್ರಧ್ವಜ ಗಮನಿಸಿದರು. ಇದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಜಿಸಿಬಿ ಚಾಲಕನಿಂದ ರಾಷ್ಟ್ರಧ್ವಜವನ್ನು ವಶಪಡಿಸಿಕೊಂಡರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry