ತೊರವಿಯಲ್ಲಿ ನೀರಿಗೆ ಹಾಹಾಕಾರ

7
ಎರಡು ದಶಕಗಳಿಂದ ಪರಿಹಾರವಾಗದ ಸಮಸ್ಯೆ; ವಾರಕ್ಕೊಮ್ಮೆ ನೀರು

ತೊರವಿಯಲ್ಲಿ ನೀರಿಗೆ ಹಾಹಾಕಾರ

Published:
Updated:
ತೊರವಿಯಲ್ಲಿ ನೀರಿಗೆ ಹಾಹಾಕಾರ

ವಿಜಯಪುರ: ನಗರದಿಂದ ಕೂಗಳತೆ ದೂರದಲ್ಲಿರುವ ತೊರವಿ ಗ್ರಾಮದಲ್ಲಿ, ಕಡು ಬೇಸಿಗೆಯ ಅಂತ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಇದೇನು ಹೊಸತಲ್ಲ. ಪ್ರತಿ ಬೇಸಿಗೆ ಆರಂಭದಿಂದಲೂ ಮುಕ್ತಾಯದವರೆಗೂ ನೀರಿನ ಸಮಸ್ಯೆ ನಿರಂತರವಾಗಿ ಸ್ಥಳೀಯರನ್ನು ಬಾಧಿಸಲಿದೆ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೊಳಪಟ್ಟಿದ್ದರೂ; ಮಹಾನಗರ ಪಾಲಿಕೆ ಆಡಳಿತಕ್ಕೆ ಕೆಲ ಕಾರಣದಿಂದ ಗ್ರಾಮ ಇಂದಿಗೂ ಸೇರ್ಪಡೆಯಾಗಿಲ್ಲ. ಎರಡು ದಶಕದಿಂದ ನೀರಿನ ಸಮಸ್ಯೆ ಬಾಧಿಸುತ್ತಿದ್ದು, ಇತಿಶ್ರೀ ಬಿದ್ದಿಲ್ಲ. ನೀರಿಗಾಗಿ ತೊರವಿ ಗ್ರಾಮಸ್ಥರು ಪರಿತಪಿಸುವುದು ತಪ್ಪಿಲ್ಲ.

‘ದಿನದಿಂದ ದಿನಕ್ಕೆ ನೀರಿಗಾಗಿ ಗ್ರಾಮಸ್ಥರ ಹಾಹಾಕಾರ ಹೆಚ್ಚಿದರೂ; ಸ್ಥಳೀಯ ಗ್ರಾಮ ಪಂಚಾಯ್ತಿ ಆಡಳಿತ ಸಕಾರಾತ್ಮಕವಾಗಿ ಎಂದೆಂದೂ ಸ್ಪಂದಿಸಿಲ್ಲ. ಕೊಳವೆಬಾವಿಯ ಮೋಟರ್‌ ಕೆಟ್ಟರೆ ದುರಸ್ತಿಗೆ 15 ದಿನ ಬೇಕು. ಸಮಸ್ಯೆಯನ್ನು ಅಧಿಕಾರಿಗಳು, ಸದಸ್ಯರ ಬಳಿ ಹೇಳಿಕೊಂಡರೂ ಪರಿಹಾರ ಸಿಗದಾಗಿದೆ’ ಎನ್ನುತ್ತಾರೆ ಗ್ರಾಮಸ್ಥ ವಸಂತ ಭೋಸಲೆ.

‘ಗ್ರಾಮ ಪಂಚಾಯ್ತಿ ಆಡಳಿತದ ನಿಷ್ಕ್ರಿಯತೆಯಿಂದ ಗ್ರಾಮಸ್ಥರು ಇದೀಗ ನಿತ್ಯ 2–3 ಕಿ.ಮೀ. ದೂರ ಅಲೆದಾಡಿ ಕುಡಿಯುವ ನೀರು ಸಂಗ್ರಹಿಸಬೇಕಿದೆ. ಸಬೂಬಿನ ಉತ್ತರ ಕೇಳಿ ಸಾಕಾಗಿದೆ. ಇನ್ನಾದರೂ ಸಮಸ್ಯೆ ಪರಿಹರಿಸಲು ಸ್ಥಳೀಯ ಸಂಸ್ಥೆಯ ಆಡಳಿತ ಮುಂದಾಗಬೇಕಿದೆ’ ಎಂದು ಅವರು ಆಗ್ರಹಿಸಿದರು.

ಮಹಿಳೆಯರ ಅಳಲು...: ‘ಬೇಸಿಗೆ ಆರಂಭವಾಯ್ತು ಅಂದ್ರೇ ಊರಲ್ಲಿ ಒಂದಲ್ಲಾ ಒಂದು ಕಡೆ ಜಗಳ ಆರಂಭವಾಗುತ್ತೆ. ಮಹಿಳೆಯರ ನಡುವೆ ಮನಸ್ತಾಪ ಹೆಚ್ಚಾಗುತ್ತೆ. ಇದಕ್ಕೆ ಮೂಲ ಕಾರಣ ನೀರಿನ ಸಮಸ್ಯೆ. ಇದು ಒಂದು ದಿನದಲ್ಲ. ಇಪ್ಪತ್ತು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ನಮ್ಮನ್ನೂ ಬಾಧಿಸುತ್ತಿದೆ. ಪರಿಹಾರ ಮಾತ್ರ ಇಂದಿಗೂ ಸಿಗದಾಗಿದೆ’ ಎನ್ನುತ್ತಾರೆ ತೊರವಿಯ ಆರತಿ ತಳವಾರ.

‘ಎಂಟು ದಿನಕ್ಕೊಮ್ಮೆ ನೀರು ಬಿಡ್ತಾರೆ. ಮುಂಜಾನೆಯಿಂದ ಪಾಳಿ ಹಚ್ಚಿ ಕಾಯಬೇಕು. ಅರ್ಧ ದಿನ ಇದರಲ್ಲೇ ಹಾಳಾಗುತ್ತೆ. ನೀರು ಪೂರೈಕೆಗೆ ಪೈಪ್‌ಲೈನ್‌ ಮಾಡಿದ್ದರೂ ಒಂದು ಹನಿ ನೀರು ಬರಲ್ಲ. ಬೇಸಿಗೆಯಲ್ಲಿ ನಿತ್ಯ ತ್ರಾಸು ತಪ್ಪದು. ಅನಿವಾರ್ಯವಾಗಿ ಖಾಸಗಿ ಕೊಳವೆಬಾವಿಗಳ ಬಳಿ ತೆರಳಿ ಕುಡಿಯುವ ನೀರು ತರಬೇಕಾದ ಪರಿಸ್ಥಿತಿ ನಮ್ಮೂರಲ್ಲಿದೆ’ ಎಂದು ಲಕ್ಕವ್ವ ದಳವಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೀರಿನ ಸಮಸ್ಯೆ ಊರಲ್ಲಿ ನೂರೆಂಟು ಸಮಸ್ಯೆಗೆ ಮೂಲವಾಗಿದೆ. ಬೇಸಿಗೆಯ ಮೂರು ತಿಂಗಳು ನಮ್ಮೂರಲ್ಲಿ ಈ ತ್ರಾಸು ತಪ್ಪದು. ಕೃಷ್ಣೆಯ ನೀರು ಪೂರೈಸಿ ಎಂಬ ಕೂಗು ಆಡಳಿತಾರೂಢರಿಗೆ ಕೇಳಿಸದಾಗಿದೆ. ನೀರಿಗಾಗಿ ಪಾಳಿ ಹಚ್ಚಿದರೂ ಜಗಳ ನಿಲ್ಲದಾಗಿದೆ’ ಎಂದು ರಿಯಾನ್‌ ಶಾನವಾಲೆ ಹೇಳಿದರು.

‘ಗ್ರಾಮ ಪಂಚಾಯ್ತಿ ಆಡಳಿತ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿದೆ. ಆದರೆ ಇದರಿಂದ ಸಮರ್ಪಕವಾಗಿ ಶುದ್ಧ ನೀರು ದೊರೆಯದಾಗಿದೆ. ಈ ಘಟಕಕ್ಕೆ ನೀರು ಪೂರೈಸುವ ಕೊಳವೆಬಾವಿಯಲ್ಲೂ ನೀರಿಲ್ಲ. ಪರ್ಯಾಯಕ್ಕೆ ಅಧಿಕಾರಿಗಳು, ಸದಸ್ಯರು ಮುಂದಾಗದಿದ್ದರಿಂದ ಶುದ್ಧ ನೀರು ನಮಗೆ ಮರೀಚಿಕೆಯಾಗಿದೆ’ ಎನ್ನುತ್ತಾರೆ ದೀಪಾ ತಳವಾರ.

**

ಗ್ರಾಮ ಪಂಚಾಯ್ತಿ ನೀರು ಪೂರೈಸುವಲ್ಲಿ ವಿಫಲವಾಗಿದೆ. ಜನಪ್ರತಿನಿಧಿಗಳು, ಸದಸ್ಯರ ಸ್ಪಂದನೆಯೇ ಸಿಗದಾಗಿದೆ. 2–3 ಕಿ.ಮೀ.ನಿಂದ ನೀರು ಹೊತ್ತು ತರಬೇಕಿದೆ

– ವಸಂತ ಭೋಸಲೆ, ತೊರವಿ ಗ್ರಾಮಸ್ಥ 

**

ಗ್ರಾಮದಲ್ಲಿ ಎಲ್ಲಿಯೂ ನೀರಿನ ಸಮಸ್ಯೆಯಿಲ್ಲ. ಪಾಳಿ ಪ್ರಕಾರ ಪೂರೈಸುತ್ತಿದ್ದೇವೆ. ಸಾಕಷ್ಟು ಪ್ರಮಾಣದಲ್ಲಿ ಜನರು ಮನೆಗಳಲ್ಲಿ ನೀರು ಸಂಗ್ರಹಿಸಿಕೊಳ್ಳುತ್ತಾರೆ

ರಾಜೇಶ್ವರಿ ತುಂಗಳ, ತೊರವಿ ಗ್ರಾಮ ಪಂಚಾಯ್ತಿ ಪಿಡಿಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry