‘ಅಲೆಮಾರಿಗಳನ್ನು ಮಕ್ಕಳ ಕಳ್ಳರೆಂದು ಭಾವಿಸದಿರಿ’

7
ಮಾಗಡಿ: ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದಿರಲು ರಾಜ್ಯ ಅಲೆಮಾರಿ ಮಹಾಸಭಾ ಮನವಿ

‘ಅಲೆಮಾರಿಗಳನ್ನು ಮಕ್ಕಳ ಕಳ್ಳರೆಂದು ಭಾವಿಸದಿರಿ’

Published:
Updated:
‘ಅಲೆಮಾರಿಗಳನ್ನು ಮಕ್ಕಳ ಕಳ್ಳರೆಂದು ಭಾವಿಸದಿರಿ’

ಮಾಗಡಿ: ಹೊಟ್ಟೆಪಾಡಿಗಾಗಿ ಊರೂರು ಅಲೆಯುವ ಅಲೆಮಾರಿ ಸಮುದಾಯದವರ ಮೇಲೆ ಸುಳ್ಳು ವದಂತಿ ಹಬ್ಬಿಸಿ ಹಲ್ಲೆ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಂಡು ಅವರಿಗೆ ರಕ್ಷಣೆ ನೀಡಲು ಸರ್ಕಾರ ಮುಂದಾಗಬೇಕು ಎಂದು ರಾಜ್ಯ ಅಲೆಮಾರಿ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಮಾರಪ್ಪ ದೊಂಬಿ ದಾಸರ್‌ ಮನವಿ ಮಾಡಿದರು.

ಅಲೆಮಾರಿ ಮಹಾ ಸಭಾ ತಾಲ್ಲೂಕು ಘಟಕದಿಂದ ನಡೆದ ಅಲೆಮಾರಿಗಳಲ್ಲಿ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.

ತುಮಕೂರು ಜಿಲ್ಲೆಯ ಪಾವಗಡ, ಮಾಗಡಿ ತಾಲ್ಲೂಕಿನ ಸುಗ್ಗನಹಳ್ಳಿ ಹಾಗೂ ಬೆಂಗಳೂರಿನಲ್ಲಿ ಅಲೆಮಾರಿಗಳನ್ನು ಮಕ್ಕಳ ಕಳ್ಳರು ಎಂದು ಸುಳ್ಳು ಸುದ್ದಿ ಹಬ್ಬಿಸಿ ಅವರ ಮೇಲೆ ಹಲ್ಲೆ ನಡೆಸಿ, ಬಡಿದು ಕೊಂದಿರುವುದು ನಾಗರಿಕ ಸಮಾಜ ತಲೆ ತಗ್ಗಿಸಬೇಕಿದೆ ಎಂದು ಅಸಮಾಧಾನ ವ್ಯಕ್ತಪ‍ಡಿಸಿದರು.

ಅಕ್ಷರ ವಂಚಿತ ತಳಸಮುದಾಯಗಳನ್ನು ಕಳ್ಳರು ಎಂದು ಬಿಂಬಿಸಿ ಅವಮಾನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಜತೆಗೆ ಮಾನವ ಹಕ್ಕುಗಳ ಉಲ್ಲಂಘನೆ. ಭಿಕ್ಷೆ ಬೇಡಿ, ಕೂದಲು ಸಂಗ್ರಹಿಸಿ, ಏರುಪಿನ್‌ ಮಾರುತ್ತಾ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿರುವ ಅಲೆಮಾರಿಗಳ ಬಗ್ಗೆ ಸುಶಿಕ್ಷಿತ ಸಮುದಾಯ ಸದಾಭಿಪ್ರಾಯ ಬೆಳೆಸಿಕೊಳ್ಳಬೇಕಿದೆ ಎಂದರು.

ಅಲೆಮಾರಿಗಳಾದ ಸುಡುಗಾಡು ಸಿದ್ಧ, ಬುಡಬುಡಿಕೆ, ದೊಂಬಿದಾಸ, ಶೇಖ್‌, ಕೊರಮ, ಕೊರಚ, ಶಿಳ್ಳೇಕ್ಯಾತ, ಕಾಡುಗೊಲ್ಲ, ಖಂಜಿರಬಾಟ್‌, ದಕ್ಕಲಿಗ ಇತರೆ ಜಾತಿಯವರು ಭಿಕ್ಷೆ ಬೇಡಲು ಅಥವಾ ಕೂದಲು ಸಂಗ್ರಹಿಸಲು ಒಬ್ಬೊಬ್ಬರೇ ಹೋಗದಿರಲು ಮೈಸೂರಿನ ಶ್ಯಾದನಹಳ್ಳಿ ಅಲೆಮಾರಿ ಸಭಾದ ಮುಖಂಡ ಗೋವಿಂದಪ್ಪ ಮನವಿ ಮಾಡಿದರು.

ಹಳೆಪಾತ್ರೆಗಳನ್ನು ಕರಗಿಸಿ ದೇವರ ವಿಗ್ರಹ ತಯಾರು ಮಾಡುತ್ತಿರುವ ಶೇಖ್‌, ಸೈಯದ್‌ ಗ್ರಾಮೀಣ ಭಾಗದಲ್ಲಿ ಜನರು ನಮ್ಮನ್ನು ಅನುಮಾನದಿಂದ ನೋಡುತ್ತಾರೆ. ಕುಡಿಯಲು ನೀರು ಸಹ ನೀಡುವುದಿಲ್ಲ ಎಂದು ಸಂಕಟ ತೋಡಿಕೊಂಡರು.

ಅಲೆಮಾರಿ ಸಮುದಾಯದ ಮುಖಂಡ ರಾಮಣ್ಣ, ವೆಂಕಟೇಶ್, ಮಂಗಳ, ಭಾಗ್ಯಮ್ಮ, ರಾಜಮ್ಮ, ಗಣೇಶ್‌, ಮಂಜುಳ, ವೆಂಕಟೇಶ್‌, ಅಲೆಮಾರಿ ಮಹಾಸಭಾ ತಾಲ್ಲೂಕು ಘಟಕದ ವೆಂಕಟೇಶ್‌, ರಂಗಸ್ವಾಮಿ, ಶಿವಣ್ಣ ಅಲೆಮಾರಿ ಸಮುದಾಯದವರು ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ಕಲ್ಬುರ್ಗಿ ಜಿಲ್ಲೆಯಿಂದ ಬಂದಿರುವ ಸೈಯದ್‌ ಮುಸ್ತಕ್‌, ಮೈಸೂರಿನಿಂದ ಬಂದು ಮಾಗಡಿಯಲ್ಲಿ ವಾಸಿಸುತ್ತಿರುವ ಮಂಜುಳಾ ವೆಂಕಟೇಶ್‌, ಸುಡುಗಾಡು ಸಿದ್ಧ ಅಲೆಮಾರಿಗಳು ಅನುಭವಿಸುತ್ತಿರುವ ಸಂಕಟ ಎಳೆ ಎಳೆಯಾಗಿ ಬಿಡಿಸಿಟ್ಟರು.

ತುಮಕೂರಿನಿಂದ ಬಂದಿರುವ ರಾಜಮ್ಮ ಗಣೇಶ್‌ ಜನಜೀವನದ ಬಗ್ಗೆ ತಿಳಿಸಿ ಕಂಬನಿ ಮಿಡಿದರು. ಹೊಸಪೇಟೆ ಸರ್ಕಲ್‌, ರಾಮನಗರ ರಸ್ತೆ ಹೊರವಲಯ, ಸೋಮೇಶ್ವರ ಕಾಲೊನಿಯ ಹೊರವಲಯ, ತಿರುಮಲೆ ಐಡಿಎಸ್‌ ಎಂಟಿ ಬಡಾವಣೆಯ ಖಾಲಿ ನಿವೇಶನಗಳಲ್ಲಿ, ಅಗಲಕೋಟೆ ಹ್ಯಾಂಡ್‌ ಪೋಸ್ಟ್‌, ನೇತೇನಹಳ್ಳಿಗಳಲ್ಲಿ ನೂರಾರು ಡೇರೆಗಳಲ್ಲಿ 245 ಅಲೆಮಾರಿ ಕುಟುಂಬದವರು ಬಯಲಿನಲ್ಲಿಯೇ ಅಡುಗೆ ಮಾಡಿಕೊಂಡು, ಭಿಕ್ಷೆ ಬೇಡುತ್ತಾ ಬದುಕು ಸಾಗಿಸಿದ್ದಾರೆ.

‌‘ಕಳೆದ 20ವರ್ಷಗಳಿಂದಲೂ ಅಗಲಕೋಟೆ ಹ್ಯಾಂಡ್‌ ಪೋಸ್ಟ್‌ ಬಳಿ ಡೇರೆ, ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದೇವೆ. ಸರ್ಕಾರಿ ನಮಗೆ ಯಾವುದೇ ಸವಲತ್ತು ನೀಡಿಲ್ಲ. ಚಿಂತೆ ಇಲ್ಲ. ಈಗ ವದಂತಿ ಹಬ್ಬಿಸಿ ಅಲೆಮಾರಿಗಳು ಮಕ್ಕಳನ್ನು ಅಪಹರಿಸುತ್ತಿದ್ದಾರೆ ಎಂದು ಸುಳ್ಳು ಹೇಳಿಕೊಂಡು ಬಡಿದು ಕೊಲ್ಲುವುದು ನಿಲ್ಲಲೇಬೇಕು’ ಎಂದು ಅಲೆಮಾರಿ ಶಿಳ್ಳೇಕ್ಯಾತ ಸಮುದಾಯದ ಮಂಗಳಮ್ಮ ಮನವಿ ಮಾಡಿದರು.

ಮುಖ್ಯಮಂತ್ರಿಗೆ ಮನವಿ

ಅಲೆಮಾರಿ ಮಹಾಸಭಾದ ಪದಾಧಿಕಾರಿಗಳು ಅಲೆಮಾರಿಗಳಲ್ಲಿ ಜಾಗೃತಿ ಮೂಡಿಸಿದರು. ಸಮಸ್ಯೆಗಳು ಎದುರಾದಲ್ಲಿ ತಕ್ಷಣ ಮಹಾಸಭಾಕ್ಕೆ ತಿಳಿಸುವಂತೆ ಮನವಿ ಮಾಡಿದರು. ಅಲೆಮಾರಿಗಳ ಅತಂತ್ರ ಬದುಕು ಬದಲಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡುವುದಾಗಿ ಅಲೆಮಾರಿ ಮಹಾಸಭಾ ತಿಳಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry