4
ರಾಮನಗರ ಸುತ್ತಮುತ್ತ ಭಾರಿ ಮಳೆ, ಬಿರುಗಾಳಿಗೆ ನೆಲಕಚ್ಚಿದ ಭತ್ತ, ಧರೆಗೆ ಉರುಳಿದ ಮರಗಳು

ಕೂಡಲೇ ಜಿಲ್ಲಾಡಳಿತ ರೈತರ ನೆರವಿಗೆ ಧಾವಿಸಲಿ

Published:
Updated:
ಕೂಡಲೇ ಜಿಲ್ಲಾಡಳಿತ ರೈತರ ನೆರವಿಗೆ ಧಾವಿಸಲಿ

ರಾಮನಗರ: ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಹಲವು ಗ್ರಾಮದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ.

ಮಳೆ ಹಾಗೂ ಬಿರುಗಾಳಿಯಿಂದಾಗಿ ಬಿಡದಿ ಹೋಬಳಿಯ ಎಂ.ಕರೇನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.

ವೆಂಕಟಮೂರ್ತಿ ಎಂಬುವರಿಗೆ ಸೇರಿದ ತೋಟದಲ್ಲಿ ಹತ್ತಕ್ಕೂ ಹೆಚ್ಚು ತೆಂಗಿನ ಮರ, ನಲವತ್ತಕ್ಕೂ ಹೆಚ್ಚು ಅಡಿಕೆ ಮರಗಳು ನೆಲಕ್ಕೆ ಬಿದ್ದಿವೆ. ಜತೆಗೆ 20ಕುಂಟೆ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಭತ್ತದ ಫಸಲು ಕೂಡ ನಾಶವಾಗಿದೆ.

ಇದೇ ಗ್ರಾಮದ ಬೈರಪ್ಪ, ಕೆ ಶ್ರೀನಿವಾಸ್, ತಮ್ಮಯ್ಯ, ರುದ್ರಪ್ಪ, ಗೋಪಾಲ್‌, ಶ್ರೀನಿವಾಸ್ ಎಂಬುವರ ತೋಟಗಳಲ್ಲಿಯೂ ತೆಂಗಿನ ಮರಗಳು ಉರುಳಿ ಬಿದ್ದಿವೆ.

ಬುಧವಾರ ಮಧ್ಯಾಹ್ನ ಬಿಸಿಲು ಹೆಚ್ಚಾಗಿತ್ತು. ಸಂಜೆ ವೇಳೆಗೆ ಮೋಡ ಕವಿದುಕೊಂಡಿತ್ತು. ರಾತ್ರಿ ಗಾಳಿ ಜತೆಗೆ ಮಳೆ ಸುರಿಯಿತು. ಗುರುವಾರ ಬೆಳಿಗ್ಗೆ ತೋಟಕ್ಕೆ ಹೋಗಿ ನೋಡಿದರೆ ಫಸಲು ಬಿಡುತ್ತಿದ್ದ ಮರಗಳೆಲ್ಲಾ ಉರುಳಿ ಬಿದ್ದಿವೆ. ಭತ್ತದ ಫಸಲಿಗೂ ನಷ್ಟವುಂಟಾಗಿದೆ. ಇದನ್ನು ನೋಡಿ ಜೀವ ಹಿಂಡಿದಂಗಾಯ್ತು ಎಂದು

ಅವರು ನಷ್ಟದ ನೋವು ವ್ಯಕ್ತಪಡಿಸಿದರು.

ರೈತರಿಗೆ ಅನಾನುಕೂಲ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆಯಿಂದಾಗಿ ಮಾವು ಬೆಳೆಗಾರರಿಗೆ ಅಗಾಧವಾದ ನಷ್ಟ ಸಂಭಸಿದೆ ಎಂದು ಮಾವು ಬೆಳೆಗಾರ ಜಾಲಮಂಗಲದ ಸಿ. ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆಯ ಜತೆಗೆ ಗಾಳಿಯೂ ಜೋರಾಗಿ ಬೀಸುತ್ತಿರುವುದರಿಂದ ಮಾವಿನ ಮರಗಳು ಬುಡಸಮೇತ ಉರುಳಿ ಹೋಗುತ್ತಿವೆ. ಮಾವಿನ ಕಾಯಿಗಳು ಉದುರಿ ಹೋಗುತ್ತಿವೆ. ಕಟಾವಿಗೆ ಬಂದ ಮಾವಿನ ಕಾಯಿ ಕೀಳಲು ಮಳೆ ಅಡ್ಡಿಯಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮಾವಿನ ಕಾಯಿಗಳಲ್ಲಿ ಹೂಜಿ ಹುಳುಗಳು ಕಾಣಿಸಿಕೊಂಡು ರೈತರಿಗೆ ಹೆಚ್ಚಿನ ನಷ್ಟ ಸಂಭವಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಾರಿ ಮಾವಿನ ಫಸಲು ಚೆನ್ನಾಗಿ ಬಂದಿತ್ತು. ಆದರೆ, ಅಕಾಲಿಕ ಮಳೆಯಿಂದ ಮಾರುಕಟ್ಟೆಯಲ್ಲಿಯೂ ಮಾವಿನ ಕಾಯಿ, ಹಣ್ಣಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕೂಡಲೇ ಸರ್ಕಾರ ಮಾವು ಬೆಳೆಗಾರರ ಸಹಾಯಕ್ಕೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಮಾವಿನ ಕಾಯಿ ಕೀಳಲು ಬರುವ ಒಬ್ಬ ಕಾರ್ಮಿಕನಿಗೆ ₹500 ಕೊಡಬೇಕು. ಮಳೆ ಹೀಗೆ ಸುರಿಯುತ್ತಿರುವುದರಿಂದ ಕಾಯಿಗಳು ಕೊಳೆಯ ತೊಡಗುತ್ತಿವೆ ಎಂದು ಪೇಟೆ ಕುರುಬರಹಳ್ಳಿ ತ್ಯಾಗರಾಜ್‌ ಆತಂಕ ವ್ಯಕ್ತಪಡಿಸಿದರು.

ಅಕಾಲಿಕ ಮಳೆಯಿಂದ ಕೊಯ್ಲಿನ ವೆಚ್ಚ ಹೆಚ್ಚಾಗುತ್ತಿದೆ.ಕಳೆದ ಐದಾರು ವರ್ಷಗಳಿಂದ ರೈತರಿಗೆ ಒಂದಲ್ಲಾ

ಒಂದು ಸಮಸ್ಯೆ ಕಾಡುತ್ತಲೇ ಇದೆ. ಕೂಡಲೇ ಜಿಲ್ಲಾಡಳಿತ ನೆರವಿಗೆ ಬರಬೇಕು ಎಂದು ಮನವಿ

ಮಾಡಿದರು.

ತೆಂಗು, ಅಡಿಕೆ, ಮಾವಿನ ಮರಗಳ ಜತೆಗೆ ಅರಳಿಮರ, ಸೀಬೆಮರ, ತುರುಪೇವಿನ ಮರಗಳು ಸಹ ಉರುಳಿ ಹೋಗಿರುವುದು ರೈತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.

ಮಳೆಗೆ ಭತ್ತದ ಫಸಲು ನಾಶ

ರಾಮನಗರ ತಾಲ್ಲೂಕಿನಲ್ಲಿ ಸರಾಸರಿ 15ಮಿ.ಮೀ.ಮಳೆಯಾಗಿದೆ. ಬಿಡದಿ ಭಾಗದಲ್ಲಿ 44ಮಿ.ಮೀ ಮಳೆ ಸುರಿದಿದೆ. ಚನ್ನಪಟ್ಟಣದಲ್ಲಿ 11‌ಮಿ.ಮೀ ಹಾಗೂ ಮಾಗಡಿ ತಾಲ್ಲೂಕಿನಲ್ಲಿ 17ಮಿ.ಮೀ. ಸರಾಸರಿ ಮಳೆಯಾಗಿದೆ.

ಮಳೆಯಿಂದ ₹2ಲಕ್ಷಕ್ಕೂ ಹೆಚ್ಚಿನ ನಷ್ಟ ಸಂಭವಿಸಿದೆ. ಮಳೆ ಜತೆಗೆ ಬೀಸಿದ ಬಿರುಗಾಳಿಗೆ ಕಷ್ಟಪಟ್ಟು ಬೆಳೆಸಿದ್ದ 30ವರ್ಷದ ತೆಂಗಿನ ಮರಗಳು, ಅಡಿಕೆ ಮರಗಳು ಉರುಳಿ ಹೋಗಿವೆ. ಕೊಯ್ಲಿಗೆ ಬಂದಿದ್ದ ಭತ್ತ ಕೂಡ ನಾಶವಾಗಿದೆ ಎಂದು ರೈತ ವೆಂಕಟಮೂರ್ತಿ ಅಳಲು ತೊಂಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry