7
ನಿರ್ವಹಣಾ ಕೊರತೆ, ತುಕ್ಕು ಹಿಡಿಯುತ್ತಿವೆ ಯಂತ್ರಗಳು

ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಗ್ರಹಣ

Published:
Updated:
ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಗ್ರಹಣ

ಮಂಡ್ಯ: ಸರ್ಕಾರದ ಮಹತ್ವಾಕಾಂಕ್ಷಿ ‘ಶುದ್ಧ ಕುಡಿಯುವ ನೀರಿನ ಘಟಕ’ಗಳು ಪಾಳು ಬಿದ್ದಿವೆ. ಜಿಲ್ಲೆಯಾದ್ಯಂತ 434 ಘಟಕಗಳನ್ನು ನಿರ್ಮಿಸಿದ್ದು ಸೂಕ್ತ ನಿರ್ವಹಣೆಯ ಕೊರತೆಯಿಂದ ಅರ್ಧಕ್ಕೂ ಹೆಚ್ಚು ಘಟಕಗಳ ಯಂತ್ರಗಳು ತುಕ್ಕು ಹಿಡಿಯುತ್ತಿವೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಹಾಗೂ ಸಹಕಾರಿ ಸಂಘಗಳು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿವೆ. ಕೆಆರ್‌ಐಡಿಎಲ್‌ 211 ಘಟಕ ನಿರ್ಮಿಸಿದ್ದು ನಿರ್ವಹಣಾ ಜವಾಬ್ದಾರಿಯನ್ನೂ ಹೊತ್ತಿದೆ. ಈಗಲೂ ಜಿಲ್ಲೆಯಾದ್ಯಂತ ಹೊಸ ಘಟಕಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಆದರೆ ಹಳೆಯ ಘಟಕಗಳನ್ನು ನಿರ್ವಹಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಕೇವಲ ಹೆಸರಿಗೆ ಮಾತ್ರ ಶುದ್ಧ ನೀರಿನ ಘಟಕಗಳು. ಕೆಲವೆಡೆ ಉದ್ಘಾಟನೆಯಾದ ನಂತರ ಒಂದು ವಾರವೂ ಸರಿಯಾಗಿ ಕೆಲಸ ಮಾಡಿಲ್ಲ. ಹಾಳಾದ ಯಂತ್ರಗಳನ್ನು ದುರಸ್ತಿ ಮಾಡದ ಕಾರಣ ಅವು ತುಕ್ಕು ಹಿಡಿಯುತ್ತಿವೆ.

ಮಂಡ್ಯ ನಗರ ಸೇರಿ ತಾಲ್ಲೂಕಿನಲ್ಲಿ 160 ಘಟಕ ಸ್ಥಾಪನೆ ಮಾಡಲಾಗಿದೆ. ಆದರೆ ಅವುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಘಟಕಗಳು ಜನರಿಗೆ ನೀರು ಕೊಡುತ್ತಿಲ್ಲ. ಕೇವಲ ಪ್ರದರ್ಶನಕ್ಕೆ ಮಾತ್ರ ಇವೆ. ನಗರದ ಆಲಹಳ್ಳಿ ಬಡಾವಣೆಯಲ್ಲಿರುವ ಎರಡು ನೀರಿನ ಘಟಕಗಳು ಸ್ಥಗಿತಗೊಂಡು ವರ್ಷವಾಗಿದೆ. ಮುಸ್ಲಿಂ ಬಡಾವಣೆಯ ಘಟಕ ಸ್ಥಗಿತಗೊಂಡು ಆರು ತಿಂಗಳುಗಳಾಗಿವೆ. ಅಧಿಕಾರಿಗಳು ಇನ್ನೂ ದುರಸ್ತಿ ಮಾಡದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸಹಕಾರಿ ಸಂಘಗಳು ನಿರ್ಮಿಸಿ, ನಿರ್ವಹಣೆ ಮಾಡುತ್ತಿರುವ ಘಟಕಗಳಲ್ಲಿ ಅಷ್ಟೊಂದು ಸಮಸ್ಯೆ ಇಲ್ಲ. ಆದರೆ ಇತರ ಸರ್ಕಾರಿ ಇಲಾಖೆಗಳು ನಿರ್ವಹಿಸುತ್ತಿರುವ ಘಟಕಗಳು ಜನರಿಗೆ ಸೇವೆ ನೀಡುತ್ತಿಲ್ಲ.

‘ಆಲಹಳ್ಳಿ ಬಡಾವಣೆಯಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಿ ಒಂದು ವರ್ಷವಾದ ನಂತರ ಅಂಬರೀಷ್‌ ಉದ್ಘಾಟಿಸಿದರು. ಚುನಾವಣೆಗೆ ಮೂರು ತಿಂಗಳು ಇರುವಾಗ ನಾಮಕಾವಸ್ಥೆಗೆ ಚಾಲನೆ ನೀಡಿದರು. ಆದರೆ ಘಟಕದಲ್ಲಿ ಒಂದು ದಿನವೂ ನೀರು ಬಂದಿಲ್ಲ. ಈ ಬಗ್ಗೆ ನಗರಸಭೆ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ನೀಡಿದ್ದೆವು. ಆದರೂ ಸಮಸ್ಯೆ ಬಗೆಹರಿಯಲಿಲ್ಲ. ಯಂತ್ರಗಳು ಸರಿಯಾಗಿವೆಯೇ, ಹಾಳಾಗಿವೆಯೇ ಎಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಸುಮ್ಮನೆ ಕಟ್ಟಿ ಬಿಟ್ಟಿದ್ದಾರಷ್ಟೇ’ ಎಂದು ಆಲಹಳ್ಳಿ ನಿವಾಸಿ ಸಿ.ಮಹೇಶ್‌ ಹೇಳಿದರು.

ಮದ್ದೂರು ತಾಲ್ಲೂಕಿನ ಹಲವು ಘಟಕಗಳು ಸ್ಥಗಿತಗೊಂಡು ಹಲವು ತಿಂಗಳುಗಳೇ ಕಳೆದಿವೆ. ಕೆ.ಹೊನ್ನಲಗೆರೆ ಹಳ್ಳಿಕೆರೆ, ಕೊಪ್ಪ, ಬೆಸಗರಹಳ್ಳಿಯ ಘಟಕಗಳು ಸ್ಥಗಿತಗೊಂಡಿದ್ದು ದುರಸ್ತಿಗಾಗಿ ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಘಟಕಗಳು ಕೆಲಸ ಮಾಡುತ್ತಿಲ್ಲ. ಪಾಂಡವಪುರ ತಾಲ್ಲೂಕಿನ ಮಾಣಿಕ್ಯನಹಳ್ಳಿ, ಕೊಡಗಹಳ್ಳಿ, ಮೊಳ್ಳೇನಹಳ್ಳಿ, ಬನಘಟ್ಟ, ಗಿರಿಯಾರಹಳ್ಳಿ, ಹಳೇಬೀಡು, ಕಾಮನಾಯಕನಹಳ್ಳಿ, ಹುಲ್ಕೆರೆ ಕೊಪ್ಪಲು, ಲಕ್ಷ್ಮಿಸಾಗರ ಗ್ರಾಮಗಳಲ್ಲಿ ನಿರ್ಮಾಣ ಮಾಡಿರುವ ಘಟಕಗಳೂ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಮಳವಳ್ಳಿ ತಾಲ್ಲೂಕಿನಲ್ಲಿ ಹುಲ್ಲೇಗಾಲ ಸೇರಿ 10ಕ್ಕೂ ಹೆಚ್ಚು ಘಟಕಗಳು ಸ್ಥಗಿತಗೊಂಡಿವೆ.

ನಾಗಮಂಗಲ ತಾಲ್ಲೂಕಿನಲ್ಲಿ ಸದಾ ಕುಡಿಯುವ ನೀರಿನ ಸಮಸ್ಯೆ ಇರುತ್ತದೆ. ಈ ಕಾರಣ 72 ಘಟಕಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ 10ಕ್ಕೂ ಹೆಚ್ಚು ಕಾರ್ಯನಿರ್ವಹಿಸುತ್ತಿಲ್ಲ.‌ ಬಿಂಡಿಗನವಿಲೆ, ತುರುಬನಹಳ್ಳಿ, ಕೂಚಹಳ್ಳಿ, ಬೆಳ್ಳೂರು, ಬೆಳ್ಳೂರು ಕ್ರಾಸ್‌, ಆರಣಿ, ಕೆಂಬಾರೆ ಮುಂತಾದೆಡೆ ಘಟಕಗಳು ಸ್ಥಗಿತಗೊಂಡಿವೆ. ‘ಕುಡಿಯುವ ನೀರಿನ ಘಟಕಗಳು ಎಂದರೆ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಬರೀ ಸಂಖ್ಯೆಗಳಾಗಿವೆ. ನೂರಾರು ಘಟಕಗಳನ್ನು ನಿರ್ಮಾಣ ಮಾಡಿರುವುದಾಗಿ ಹೆಸರು ಪಡೆಯುತ್ತಾರೆ. ಆದರೆ ಅವುಗಳಲ್ಲಿ ನೀರು ಬರುತ್ತಿದೆಯೇ, ಅವುಗಳಿಂದ ಜನರಿಗೆ ಎಷ್ಟರ ಮಟ್ಟಿಗೆ ನೀರು ಸಿಗುತ್ತದೆ ಎಂಬ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ರೈತಮುಖಂಡ ಬೋರಯ್ಯ ಬೇಸರ ವ್ಯಕ್ತಪಡಿಸಿದರು.

‘ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆದ್ಯತೆಯ ಮೇರೆಗೆ ದುರಸ್ತಿ ಮಾಡಲಾಗುತ್ತಿದೆ. ಕೆಲವೆಡೆ ವಿದ್ಯುತ್‌ ಪೂರೈಕೆ ಸಮಸ್ಯೆಯುಂಟಾಗಿ ಸ್ಥಗಿತ ಗೊಳಿಸಲಾಗುತ್ತಿದೆ. ಕೆಆರ್‌ಐಡಿಎಲ್‌ ನಿರ್ವಹಣೆ ಮಾಡುತ್ತಿರುವ ಘಟಕಗಳನ್ನು ಅವರೇ ದುರಸ್ತಿ ಮಾಡುತ್ತಾರೆ. ಸ್ಥಳೀಯರು ನೀಡುವ ದೂರಿನ ಆಧಾರದ ಮೇಲೆ ನಮ್ಮ ಸಿಬ್ಬಂದಿ ದುರಸ್ತಿ ಮಾಡುತ್ತಿದ್ದಾರೆ. ದೀರ್ಘ ಕಾಲದಿಂದ ಸ್ಥಗಿತಗೊಂಡಿರುವ ಘಟಕಗಳನ್ನು ಗುರುತಿಸಿ ದುರಸ್ತಿ ಮಾಡಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ರಾಮಕೃಷ್ಣ ಹೇಳಿದರು.

ಜೂನ್‌ನಲ್ಲಿ ಹಸ್ತಾಂತರ

‘ಕೆಆರ್‌ಐಡಿಎಲ್‌ ವತಿಯಿಂದ 211 ಶುದ್ಧ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ನಮ್ಮ ಇಲಾಖೆಯಲ್ಲಿ ಘಟಕದ ನಿರ್ವಹಣೆ ಮಾಡಲು ಒಂದು ತಂಡ ರಚನೆ ಮಾಡಲಾಗಿದ್ದು ಸಿಬ್ಬಂದಿ ನಿಗಾ ವಹಿಸುತ್ತಾರೆ. ದುರಸ್ತಿಗೆ ಬಂದಿರುವ ಘಟಕಗಳನ್ನು ಪತ್ತೆ ಮಾಡಿ ಶೀಘ್ರ ದುರಸ್ತಿ ಮಾಡಲಾಗುವುದು. ನಮ್ಮ ನಿರ್ವಹಣಾ ಅವಧಿ ಮುಗಿಯುತ್ತ ಬಂದಿದ್ದು ಜೂನ್‌ ಅಂತ್ಯಕ್ಕೆ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆಗಳಿಗೆ ಶುದ್ಧ ನೀರಿನ ಘಟಕಗಳನ್ನು ಹಸ್ತಾಂತರ ಮಾಡುತ್ತೇವೆ. ಎಲ್ಲ ಘಟಕಗಳನ್ನು ಸುಸ್ಥಿತಿಯಲ್ಲಿಟ್ಟು ಹಸ್ತಾಂತರ ಮಾಡುತ್ತೇವೆ’ ಎಂದು ಕೆಆರ್‌ಐಡಿಎಲ್‌ ಕಾರ್ಯಪಾಲಕ ಎಂಜಿನಿಯರ್‌ ಡಿ.ಮಲ್ಲಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry