ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣನ ಆರ್ಭಟಕ್ಕೆ ಧರೆಗುರುಳಿದ ಬಾಳೆ

ಬಳ್ಳಾರಿ ಜಿಲ್ಲೆಯಲ್ಲಿ ಭಾರಿ ಮಳೆ, ಗಾಳಿ, ಲಕ್ಷಾಂತರ ರೂಪಾಯಿ ನಷ್ಟ, ಭತ್ತದ ಬೆಳೆಯೂ ಹಾನಿ, ಜನಜೀವನಕ್ಕೆ ಸಂಕಷ್ಟ
Last Updated 25 ಮೇ 2018, 6:10 IST
ಅಕ್ಷರ ಗಾತ್ರ

ಹೊಸಪೇಟೆ: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಗೆ ಸಾಕಷ್ಟು ಹಾನಿಯಾಗಿದೆ. ಕೆಲವೆಡೆ ವಿದ್ಯುತ್ ಸಂಚಾರ ಸ್ಥಗಿತಗೊಂಡಿದ್ದು, ಜನ ಪರದಾಡುವಂತಾಗಿದೆ.

ಹೊಸಪೇಟೆ ತಾಲ್ಲೂಕಿನ ಕಂಪ್ಲಿ ಸಮೀಪದ ಬುಕ್ಕಸಾಗರ ಗ್ರಾಮದಲ್ಲಿ ಮಳೆಗೆ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ.

ಗ್ರಾಮದ ಕಿನ್ನೂರೇಶ್ವರ ದೇವಸ್ಥಾನ ರಸ್ತೆಯ ಕೆರೆ ಮಾಗಾಣಿ ಪ್ರದೇಶದಲ್ಲಿ ರೈತ ಎಂ.ವಾಜೀದ್ ಭಾಷಾ ಮೂರು ಎಕರೆಯಲ್ಲಿ ಬಾಳೆ ಬೆಳೆದಿದ್ದರು. ಮಳೆ ಸುರಿದ ಕಾರಣ ₹ 3.90 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಹೊಸಪೇಟೆ ತಾಲ್ಲೂಕಿನ ಕಮಲಾಪುರ, ಕಡ್ಡಿರಾಂಪುರ, ಹಂಪಿ, ವೆಂಕಟಾಪುರ , ಬುಕ್ಕಸಾಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಭತ್ತ ಮತ್ತು ಬಾಳೆ ಬೆಳೆ ಗಾಳಿ, ಮಳೆಗೆ ನಾಶವಾಗಿದೆ.

ನಾಶವಾದ ಬಾಳೆ ತೋಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಜೆ. ಕಾರ್ತಿಕ್ ಭೇಟಿ ನೀಡಿದರು.

‘ಸತತ ಎರಡನೇ ವರ್ಷ ಕೂಡ ಮಳೆಯಿಂದ ಬೆಳೆ ಹಾಳಾಗಿದೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟವಾದರೂ, ಪರಿಹಾರ ಕೊಡಲು ಸರ್ಕಾರ ಹಿಂದೇಟು ಹಾಕುತ್ತಿದೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.  ರೈತರಾದ ರುದ್ರಪ್ಪ, ಫಕೀರ್ ಸಾಹೇಬ್‌, ಜಿ.ಸಿದ್ದಪ್ಪ, ಹುಸೇನಿ, ಜಿ.ಕರಿಸಿದ್ದಪ್ಪ ಇದ್ದರು.

ನೆಲಕಚ್ಚಿದ ವಿದ್ಯುತ್‌ ಕಂಬ

ಕಂಪ್ಲಿ: ಗಂಗಾವತಿ ನಗರದ ಹೊಸಳ್ಳಿ ಕ್ರಾಸ್‌ ಬಳಿ ಬುಧವಾರ ಸಂಜೆ ಬೀಸಿದ ಬಿರುಗಾಳಿ, ಮಳೆಗೆ ವಿದ್ಯುತ್‌ ಕಂಬ ನೆಲಕ್ಕುರುಳಿದೆ. ಇದರಿಂದ ಒಂದು ದಿನ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು.

ಇದರಿಂದ ಶುದ್ಧ ಕುಡಿಯುವ ನೀರಿನ ಘಟಕ, ಹಿಟ್ಟಿನ ಗಿರಣಿ, ತಂಪು ಪಾನಿಯ ಅಂಗಡಿ, ಕೆಲ ಹೋಟೆಲ್, ವಾಣಿಜ್ಯ ವ್ಯಾಪಾರ ಗುರುವಾರ ಮಧ್ಯಾಹ್ನದವರೆಗೆ ಸ್ಥಗಿತಗೊಂಡಿದ್ದವು. ಮಧ್ಯಾಹ್ಮ 3.30ರ ಸುಮಾರಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಯಿತು.

‘ಬಿರುಗಾಳಿಗೆ ನೆಲಕ್ಕೆ ಉರುಳಿದ ವಿದ್ಯುತ್‌ ಕಂಬ ದುರಸ್ತಿಯಾಗುವ ತನಕ ಪಟ್ಟಣದ 110ಕೆ.ವಿ ಮತ್ತು 33ಕೆ.ವಿ, ಇಟಗಿ ಗ್ರಾಮದ 33ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಗಳಿಗೆ ವಿದ್ಯುತ್‌ ಪೂರೈಕೆಗೆ ತಾತ್ಕಾ ಲಿಕ ವ್ಯವಸ್ಥೆ ಮಾಡಲಾಗಿದೆ. ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸರಬರಾಜು ಸ್ಥಗಿತಗೊಳಿಸಲಾಗಿದೆ’ ಎಂದು ಜೆಸ್ಕಾಂ ಎಂಜಿನಿಯರ್‌ ಶ್ರೀನಿವಾಸರಾಜ್‌ ತಿಳಿಸಿದರು.

ಸಂಡೂರಿನಲ್ಲಿ ಉತ್ತಮ ಮಳೆ

ಸಂಡೂರು: ತಾಲ್ಲೂಕಿನ ವಿವಿಧೆಡೆ ಬುಧವಾರ ರಾತ್ರಿ ಗುಡುಗು, ಮಿಂಚು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಗುರುವಾರ ಸಂಡೂರು ಮಳೆ ಮಾಪನ ಕೇಂದ್ರದಲ್ಲಿ 36.2 ಮಿ.ಮೀ, ಕುರೆಕುಪ್ಪ ಮಳೆಮಾಪನ ಕೇಂದ್ರದಲ್ಲಿ 7.3 ಮಿ.ಮೀ ಹಾಗೂ ಚೋರುನೂರು ಮಳೆ ಮಾಪನ ಕೇಂದ್ರದಲ್ಲಿ 2.3 ಮಿ.ಮೀ ಮಳೆ ದಾಖಲಾಗಿದೆ.

ದೌಲತ್‌ಪುರ ಗ್ರಾಮದ ಬಳಿಯ ಜಯಕುಮಾರ್ ಎಂಬ ರೈತರು ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ತೋಟದಲ್ಲಿ ಸುಮಾರು 400 ಬಾಳೆ ಗಿಡಗಳು ಧರೆಗುರುಳಿವೆ. ವೆಂಕಟಗಿರಿ ಗ್ರಾಮದ ಮಂಜುನಾಯ್ಕ ಎಂಬ ರೈತರ ಬಾಳೆ ತೋಟದಲ್ಲಿ ಸುಮಾರು 200 ಬಾಳೆ ಗಿಡಗಳು ನೆಲಕ್ಕುರುಳಿವೆ. ತೋಟಗಾರಿಕಾ ಸಹಾಯಕ ಅಧಿಕಾರಿ ಸುನಿಲ್ ಕುಮಾರ್ ಗುರುವಾರ ಹಾನಿಗೀಡಾದ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ಬುಧವಾರ ಬೀಸಿದ ಗಾಳಿ, ಮಳೆ ಮತ್ತು ಸಿಡಿದ ಸಿಡಿಲಿನಿಂದಾಗಿ ಸುಶೀಲಾನಗರ, ಜೈಸಿಂಗ್‌ಪುರ ಹಾಗೂ ಪಟ್ಟಣದ ಅರಣ್ಯ ಇಲಾಖೆ ವಸತಿಗೃಹಗಳ ಬಳಿ ಹಾಕಲಾಗಿದ್ದ ವಿದ್ಯುತ್ ಪರಿವರ್ತಕಗಳು (ಟಿ.ಸಿ) ಸುಟ್ಟಿವೆ. ಕೃಷ್ಣಾನಗರದಲ್ಲಿ 1, ಭುಜಂಗನಗರದಲ್ಲಿ 2, ಬಾಬಯ್ಯ ಕ್ರಾಸ್ ಬಳಿಯಲ್ಲಿ 3 ಹಾಗೂ ಸುಶೀಲಾನಗರದಲ್ಲಿ ಒಂದು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ನೆಲಕ್ಕುರುಳಿದ ಮರಗಳು

ಹೂವಿನಹಡಗಲಿ: ತಾಲ್ಲೂಕಿನಲ್ಲಿ ವಿದ್ಯುತ್ ಕಂಬ ಮತ್ತು ಮರಗಳು ನೆಲಕ್ಕೆ ಉರುಳಿವೆ. ರಾತ್ರಿ 6.6. ಮಿ.ಮೀ. ಸರಾಸರಿ ಮಳೆಯಾಗಿದೆ.

ತಾಲ್ಲೂಕಿನ ನಂದಿಹಳ್ಳಿ–ಹೊಳಗುಂದಿ ರಸ್ತೆ ಮಾರ್ಗದಲ್ಲಿ ಮರವೊಂದು ವಿದ್ಯುತ್ ಲೈನ್‌ ಮೇಲೆ ಬಿದ್ದು ರಸ್ತೆ ಸಂಚಾರ ಸ್ಥಗಿತವಾಗಿತ್ತು. ಬೆಳಿಗ್ಗೆ ಜೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮರ ಹಾಗೂ ಲೈನ್‌ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಹೂವಿನಹಡಗಲಿ ಮತ್ತು ಇಟ್ಟಿಗಿ ಹೋಬಳಿ ವ್ಯಾಪ್ತಿಯಲ್ಲಿ 19 ಕಚ್ಚಾ ಮನೆಗಳು ಭಾಗಶಃ ಕುಸಿದಿವೆ ಎಂದು ತಹಶೀಲ್ದಾರ್ ಮೇಘರಾಜ ನಾಯಕ ತಿಳಿಸಿದರು.

‘ಬಿರುಗಾಳಿ ಸಹಿತ ಮಳೆ ಸುರಿದಿದ್ದರಿಂದ 23 ತಾಲ್ಲೂಕಿನ ಗ್ರಾಮಗಳಲ್ಲಿ 23 ವಿದ್ಯುತ್ ಕಂಬಗಳು ಬಿದ್ದಿವೆ. ಒಂದು ವಾರದ ಅವಧಿಯಲ್ಲಿ ಒಟ್ಟು 51 ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಎಲ್ಲ ಕಡೆ ಹೊಸ ಕಂಬಗಳನ್ನು ಅಳವಡಿಸಲಾಗಿದೆ’ ಎಂದು ಜೆಸ್ಕಾಂ ಸಹಾಯಕ ಕಾಋ್ಯನಿರ್ವಾಹಕ ಎಂಜಿನಿಯರ್ ಶ್ರೀನಿವಾಸ ಮಂತ್ರೋಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನ ಬ್ಯಾಲಹುಣ್ಸಿ ಗ್ರಾಮದಲ್ಲಿ ಮಳೆಯ ನೀರು ಭತ್ತದ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ.

ಜನಜೀವನ ಅಸ್ತವ್ಯಸ್ತ

ಮರಿಯಮ್ಮನಹಳ್ಳಿ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಪಟ್ಟಣದಲ್ಲಿ ಸುಮಾರು 10 ವಿದ್ಯುತ್‌ ಕಂಬಗಳು ನೆಲಕ್ಕೊರಗಿವೆ. ಅಂಬೇಡ್ಕರ್‌ ಕಾಲೊನಿಯಲ್ಲಿನ ಪಟ್ಟಣ ಪಂಚಾಯ್ತಿಯ ಕುಡಿಯುವ ನೀರಿನ ಶುದ್ದೀಕರಣ ಘಟಕದ ಚಾವಣಿ ಹಾರಿ ಹೋಗಿದೆ. ಹೊರವಲಯದ ಇಂದಿರಾ ನಗರದಲ್ಲಿ ಮೂರು ಮನೆಗಳ ಸಿಮೆಂಟ್‌ ಶೀಟುಗಳು ಭಾರಿಗಾಳಿಗೆ ಹಾರಿಹೋಗಿದ್ದರೆ, ಜಾಮಿಯಾ ಮಸೀದಿಯ ಹಿಂಭಾಗದಲ್ಲಿನ ಎರಡು ಮನೆಗಳ ಚಾವಣಿ ಕುಸಿದಿವೆ.

ಹೋಬಳಿ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಲ್ಲಿ 35 ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ಒಟ್ಟು 15ಮನೆಗಳಿಗೆ ಹಾನಿಯಾಗಿದೆ.  ಬಹುತೇಕ ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕವಿಲ್ಲದೆ ಕುಡಿಯುವ ನೀರಿನ ಅಭಾವ ಎದುರಿಸುವಂತಾಗಿದೆ.

ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 5 ಎಕರೆ ಮಾವು, ಸಪೋಟ, ಸೌತೆ ಬೆಳೆಗಳಿಗೆ ಹಾನಿಯಾಗಿದೆ. ಇನ್ನು ಸಮೀಪದ ವೆಂಕಟಾಪುರ ಗ್ರಾಮದ ರೈತ ಎ.ಕೃಷ್ಣಪ್ಪ ಅವರ ಸಪೋಟ ತೋಟದಲ್ಲಿ ಸುಮಾರು 20ಕ್ಕೂ ಹೆಚ್ಚು ಮರಗಳು ಉರುಳಿವೆ. ಗುಂಡಾ ಗ್ರಾಮದಲ್ಲಿ ಅರ್ಧ ಎಕರೆ ವೀಳ್ಯದೆಲೆ ನೆಲಕ್ಕಚ್ಚಿದೆ.

ವಿದ್ಯುತ್ ತಂತಿ ಮೇಲೆ ಬಿದ್ದ ಮರ

ಕೂಡ್ಲಿಗಿ: ತಾಲ್ಲೂಕಿನಾದ್ಯಂತ ಸುರಿದ ಮಳೆಯಿಂದ ಹಿರೇಹೆಗ್ಡಾಳ್ ಗ್ರಾಮದಲ್ಲಿ ವಿದ್ಯುತ್‌ ತಂತಿ ಮರದ ಮೇಲೆ ಬಿದ್ದಿದೆ.  ಇದರಿಂದ ಗ್ರಾಮಕ್ಕೆ ವಿದ್ಯುತ್ ಪೂರೈಕೆ ಮಾಡುವ 10 ಕ್ಕೂ ಹೆಚ್ಚು ಕಂಬಗಳು ಮುರಿದು ಬಿದ್ದಿವೆ.

ಕೂಡ್ಲಿಗಿಯಿಂದ ಹನಸಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲಿ ನಾಲ್ಕು ಮರಗಳು ವಿದ್ಯುತ್ ತಂತಿ ಮೇಲೆ ಬಿದ್ದಿವೆ. ಇದರಿಂದ ಸಾಸಲವಾಡ ಹಾಗೂ ಹಿರೇಹೆಗ್ಡಾಳ್ ಹಾಗೂ ಸಾಣೆಹಳ್ಳಿ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.

ಪಟ್ಟಣದ ಪೊಲೀಸ್ ಇಲಾಖೆಯ ವಸತಿ ಗೃಹಗಳ ಕಾಂಪೌಂಡ್‌ನಲ್ಲಿ ನೀಲಗಿರಿ ಮರ ಉರುಳಿ ಬಿದ್ದಿದೆ. ಇದರಿಂದ ರಸ್ತೆ ಬದಿಯ ಎರಡು ತಳ್ಳು ಗಾಡಿಗಳು ಜಖಂಗೊಂಡಿದೆ.

ತಾಲ್ಲೂಕಿನಲ್ಲಿ 20ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿ ಯಾಗಿವೆ. ಆದರೆ, ಯಾವುದೇ ಪ್ರಾಣಾಪಾಯ ವಾಗಿಲ್ಲ ಎಂದು ತಹಶೀಲ್ದಾರ್ ಟಿ. ಸುರೇಶ್ ಕುಮಾರ್ ತಿಳಿಸಿದ್ದಾರೆ.

ರೈತರ ಮೊಗದಲ್ಲಿ ಸಂತಸ

ಕೊಟ್ಟೂರು: ತಾಲ್ಲೂಕಿನದ್ಯಾಂತ ವಾರ ಪೂರ್ತಿ ಮಳೆ ಬಂದಿದ್ದು, ಹಳ್ಳ,ಕೆರೆ,ಕಟ್ಟೆಗಳಿಗೆ ನೀರು ತುಂಬಿವೆ. ಇದರಿಂದ ರೈತರ ಮೊಗದಲ್ಲಿ ಸಂತಸ ಅರಳಿದೆ.

ಮೂರ್ತಿನಾಯಕನಹಳ್ಳಿ, ವಡ್ಡರಹಳ್ಳಿ ಕೆರಗಳಿಗೆ ಆರ್ಧಕ್ಕೂ ಹೆಚ್ಚು ನೀರು ಹರಿದು ಬಂದಿದೆ. ರಾಂಪುರದ ಹಳ್ಳದಿಂದ ಕೊಟ್ಟೂರು ಕೆರೆಗೂ ಅಲ್ಪ ಪ್ರಮಾಣದ ನೀರು ಹರಿದು ಬಂದಿದೆ.

ಗಾಳಿಗೆ ನಾಶವಾದ ಮರ-ಮನೆಗಳು: ಸುತ್ತಲಿನ ಹಳ್ಳಿಗಳಲ್ಲಿ ಬುಡ ಸಮೇತ ಮರಗಳು ಉರುಳಿವೆ. ಕಾಳಪುರದಲ್ಲಿ ನಾಲ್ಕು, ಚಿನ್ನೆನಹಳ್ಳಿಯ ಮೂರು ಮನೆಗಳ ಚಾವಣಿಯ ಸಿಮೆಂಟ್ ಹೆಂಚುಗಳು ಹಾರಿ ಹೋಗಿವೆ. ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಕಂದಾಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT