ರಸಗೊಬ್ಬರ ಪೂರೈಸದಿದ್ದರೆ ಕ್ರಿಮಿನಲ್‌ ದಾವೆ

7
ರಸಗೊಬ್ಬರ ಡೀಲರ್‌, ಸರಬರಾಜು ಗುತ್ತಿಗೆದಾರರು, ಲಾರಿ ಮಾಲೀಕರಿಗೆ ಜಿಲ್ಲಾಧಿಕಾರಿ ಎಚ್ಚರಿಕೆ

ರಸಗೊಬ್ಬರ ಪೂರೈಸದಿದ್ದರೆ ಕ್ರಿಮಿನಲ್‌ ದಾವೆ

Published:
Updated:

ಬಳ್ಳಾರಿ: ‘ರಸಗೊಬ್ಬರವು ಅಗತ್ಯ ವಸ್ತುಗಳ ಪಟ್ಟಿಯಲ್ಲಿದೆ. ತಾವೇ ಒಂದು ದರ ನಿಗದಿಪಡಿಸಿ ಸಮರ್ಪಕವಾಗಿ ಸರಬರಾಜು ಮಾಡಲು ಹಿಂಜರಿದರೆ ಅಗತ್ಯ ವಸ್ತುಗಳ ನಿಯಮದಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಾರಣರಾದ ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾದ್‌ ಮನೋಹರ್ ಎಚ್ಚರಿಕೆ ನೀಡಿದರು.

ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ರಸಗೊಬ್ಬರ ಡೀಲರ್‌ಗಳು, ರಸಗೊಬ್ಬರ ಸರಬರಾಜು ಗುತ್ತಿಗೆದಾರರು ಮತ್ತು ಲಾರಿ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರಸಗೊಬ್ಬರವನ್ನು ಅತಿಹೆಚ್ಚು ಪ್ರಮಾಣದಲ್ಲಿ ರೈತರು ಬಳಸುತ್ತಿದ್ದು, ಅವರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಈ ಹೊತ್ತಿಗೆ ಜಿಲ್ಲೆಯಲ್ಲಿ ಅಗತ್ಯವಿರುವ ಪ್ರಮಾಣದಲ್ಲಿ ಶೇ 90ರಷ್ಟು ರಸಗೊಬ್ಬರ ದಾಸ್ತಾನು ಇರಬೇಕಿತ್ತು. ಆದರೇ ಶೇ 10ರಷ್ಟು ಮಾತ್ರ ಸಂಗ್ರಹವಿರುವುದು ಕಳವಳಕಾರಿ ಸಂಗತಿ’ ಎಂದರು.

‘ರಸಗೊಬ್ಬರ ಸರಬರಾಜು ಮಾಡಲು ಲಾರಿಗಳಿಗೆ ನಿಗದಿ ಮಾಡಬೇಕಾದ ಬಾಡಿಗೆದರದ ಕುರಿತು ರಸಗೊಬ್ಬರ ಡೀಲರ್‌ಗಳು, ಸರಬರಾಜು ಗುತ್ತಿಗೆದಾರರು ಮತ್ತು ಲಾರಿ ಮಾಲೀಕ ರಲ್ಲಿರುವ ಗೊಂದಲದಿಂದಾಗಿ ದಾಸ್ತಾನು ಪ್ರಮಾಣ ಕಡಿಮೆಯಾಗಿದೆ’ ಎಂದರು.

‘ಜಿಲ್ಲೆಯಾದ್ಯಂತ ಮಳೆ ಸುರಿದಿದ್ದು, ರೈತರು ಮುಂಗಾರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಸರಿಯಾದ ಸಮಯಕ್ಕೆ ಅಗತ್ಯವಿರುವಷ್ಟು ರಸಗೊಬ್ಬರವನ್ನು ಒದಗಿಸಬೇಕು. ಸಣ್ಣ ಲೋಪವಾದರೂ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಇಂಧನ ಸೇರಿದಂತೆ ವಿವಿಧ ಸಾಮಗ್ರಿಗಳ ಬೆಲೆ ಏರಿಕೆಯಾಗಿರುವ ಕಾರಣ ರಸಗೊಬ್ಬರ ಪೂರೈಕೆಗೂ ಶೇ 40ರಷ್ಟು ದರ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಲಾರಿ ಮಾಲಿಕರು ರಸಗೊಬ್ಬರ ಸರಬರಾಜಿನಿಂದ ಹಿಂದೆ ಸರಿದಿರುವುದ ಕುರಿತು ಮಾಹಿತಿ ಬಂದಿದೆ. ಶೇ 12ರಷ್ಟು ಮಾತ್ರ ದರ ಹೆಚ್ಚಳ ಮಾಡಲಾಗುವುದು ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಆದರೆ ಇದಕ್ಕೆ ಸಂಬಂಧವೇ ಇಲ್ಲವೆಂಬಂತೆ ಡೀಲರ್‌ಗಳು ಇದ್ದಾರೆ’ ಎಂದು ಡಿ.ಸಿ. ಅಸಮಾಧಾನ ವ್ಯಕ್ತಪಡಿಸಿದರು.

‘ಇದುವರೆಗೆ ಯಾವ ರಸಗೊಬ್ಬರ ಕಂಪನಿಯೂ ಕೂಡ ಈ ಸಮಸ್ಯೆ ಕುರಿತು ಗಮನಕ್ಕೆ ತಂದಿಲ್ಲ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಂ.ಎಸ್‌.ದಿವಾಕರ್ ತಿಳಿಸಿದರು.

‘ನಮ್ಮ ಜಿಲ್ಲೆಗೆ ನಿಗದಿಪಡಿಸಲಾದ ರಸಗೊಬ್ಬರ ಪ್ರಮಾಣವನ್ನು ನಮ್ಮ ಗಮನಕ್ಕೆ ತರದೇ ಬೇರೆ ಕಡೆ ವರ್ಗಾಯಿಸುವಂತಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ರಸಗೊಬ್ಬರ ಸರಬರಾಜು ಮಾಡುವುದಕ್ಕೆ ಲಾರಿಗಳಿಗೆ 2014ರ ದರಕ್ಕೆ ಹೋಲಿಸಿ ಶೇ.19ರಷ್ಟು ಹೆಚ್ಚಳ ಮಾಡಲಾಗುವುದು. ಇದು ಈ ಅವಧಿಗೆ ಮಾತ್ರ. ಮುಂದಿನ ದಿನಗಳಲ್ಲಿ ಇದನ್ನು ನಮ್ಮ ಹಂತದಲ್ಲಿಯೇ ಬಗೆಹರಿಸಿಕೊಳ್ಳಬೇಕು’ ಎಂದು ಗುತ್ತಿಗೆದಾರರು ಮತ್ತು ಲಾರಿ ಮಾಲೀಕರಿಗೆ ಸೂಚಿಸಿದರು.

‘ರಸಗೊಬ್ಬರ ಕಂಪನಿಗಳು ನಿಗದಿಪಡಿಸಿದ ಅವಧಿಯೊಳಗೆ ಗುತ್ತಿಗೆದಾರರಿಗೆ ಹಣ ಪಾವತಿಸಬೇಕು’ ಎಂದು ಡೀಲರ್‌ಗಳಿಗೆ ಸೂಚಿಸಿದರು.

**

ರಸಗೊಬ್ಬರವನ್ನು ಅತಿಹೆಚ್ಚು ಪ್ರಮಾಣದಲ್ಲಿ ರೈತರು ಬಳಸುತ್ತಿದ್ದು, ಅವರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು 

ಡಾ.ವಿ.ರಾಮ್ ಪ್ರಸಾದ್‌, ಜಿಲ್ಲಾಧಿಕಾರಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry