ನಿಫಾ ಸೋಂಕು ತಡೆಗೆ ಮುನ್ನೆಚ್ಚರಿಕೆ ವಹಿಸಿ

7
ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನಿರುದ್ಧ ಸೂಚನೆ

ನಿಫಾ ಸೋಂಕು ತಡೆಗೆ ಮುನ್ನೆಚ್ಚರಿಕೆ ವಹಿಸಿ

Published:
Updated:

ಬೀದರ್‌: ‘ದೇಶದಾದ್ಯಂತ ಆತಂಕ ಮೂಡಿಸಿರುವ ನಿಫಾ ಸೋಂಕು ಜಿಲ್ಲೆಯಲ್ಲಿ ಹರಡದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ ಸೂಚನೆ ನೀಡಿದರು.

ನಗರದಲ್ಲಿ ಗುರುವಾರ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಅವರು, ನೆರೆಯ ರಾಜ್ಯಗಳಿಂದ ಬರುವ ರೋಗಿಗಳ ಮೇಲೆ ಹೆಚ್ಚು ನಿಗಾ ಇಡಬೇಕು. ಸೋಂಕು ಶಂಕಿತ ರೋಗಿ ಕಂಡು ಬಂದರೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ತೆರೆಯಬೇಕು. ಮುಂಜಾಗ್ರತಾ ಕ್ರಮವಾಗಿ ನುರಿತ ವೈದ್ಯರ ತಂಡ ರಚಿಸಬೇಕು. ಪಕ್ಷಿಗಳು ಹಾಗೂ ಪ್ರಾಣಿಗಳು ತಿಂದು ಬಿಟ್ಟ ಹಣ್ಣುಗಳನ್ನು ಸೇವಿಸದಂತೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಬಾವಲಿಗಳು ಇರುವ ಪ್ರದೇಶದ ಮಾಹಿತಿ ಪಡೆದು ಆ ಪರಿಸರದಲ್ಲಿನ ಜನರಿಗೆ ತಿಳಿವಳಿಕೆ ನೀಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್‌ ಮಾತನಾಡಿ,‘‘ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವುದು, ಪ್ರಜ್ಞಾ ಹೀನತೆಗೆ ಒಳಗಾಗುವುದು, ಜ್ವರ ಮೆದುಳಿಗೆ ವ್ಯಾಪಿಸುವುದು, ಮಾತುಗಳಲ್ಲಿ ತೊದಲುವಿಕೆ ಹಾಗೂ ಅಪಸ್ವರ ರೋಗದ ಲಕ್ಷಣಗಳಾಗಿವೆ’ ಎಂದು ಹೇಳಿದರು.

‘ಸೋಂಕಿತ ದಿನದಿಂದ 4 ರಿಂದ 18 ದಿನಗಳಲ್ಲಿ ನಿಫಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಬಾವಲಿಗಳು ತಿಂದು ಬಿಡುವ ಹಣ್ಣು ಸೇವಿಸುವ ಪಕ್ಷಿಗಳು ಹಾಗೂ ಪ್ರಾಣಿಗಳಿಗೆ ಸೋಂಕು ಹರಡುತ್ತದೆ. ಸೋಂಕಿತ ಬಾವಲಿ ಮತ್ತು ಪ್ರಾಣಿಗಳು ಸ್ರವಿಸುವ ದ್ರವಗಳು ನೇರ ಸಂಪರ್ಕ ಹೊಂದುವುದರಿಂದ ತೀವ್ರಗತಿಯಲ್ಲಿ ಹರಡುತ್ತದೆ’ ಎಂದು ತಿಳಿಸಿದರು.

‘ಸೋಂಕಿತ ವ್ಯಕ್ತಿಯ ಗಂಟಲು ಮತ್ತು ಮೂಗಿನ ದ್ರವಗಳ ಮಾದರಿಯನ್ನು ಪಡೆದು, ಪ್ರಯೋಗಾಲಯದಲ್ಲಿ ಪರೀಕ್ಷಿಸಿ ದೃಢಪಡಿಸಬಹುದು. ಪ್ರಸ್ತುತ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ. ರೋಗಿಗಳನ್ನು ಉಪಚರಿಸುವವರು ಮಾಸ್ಕ್, ಕೈಕವಚ ಧರಿಸಬೇಕು. ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಗಮನ ಕೊಡುವುದು ಅಗತ್ಯ’ ಎಂದು ಹೇಳಿದರು.

‘ಹಂದಿ ಸಾಕಾಣಿಕೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವವರು ಗಾಯ ಅಥವಾ ಸೋಂಕಿಗೆ ಒಳಗಾಗಿದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ಸಂಗ್ರಹಣೆ ಮಾಡುವ ಶೇಂದಿ ಮತ್ತು ಪಾನೀಯಗಳನ್ನು ಸೇವಿಸಬಾರದು. ತೆರೆದ ಬಾವಿಯ ನೀರನ್ನು ಶುದ್ಧೀಕರಿಸಿ ಬಾವಿಗಳನ್ನು ಬಲೆಗಳಿಂದ ಮುಚ್ಚಿ ಬಾವಲಿಗಳು ಒಳ ಪ್ರವೇಶಿಸದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

‘ಸೋಂಕಿಗೆ ಸಂಬಂಧಪಟ್ಟಂತೆ ವಿವರಗಳಿಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಿವಶಂಕರ ಬಿ. (ಮೊಬೈಲ್ ಸಂಖ್ಯೆ 9449843246) ಅವರನ್ನು ಸಂಪರ್ಕಿಸಬಹುದಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌, ಜಿಲ್ಲಾ ಪಂಚಾಯಿತಿ ಸಿಇಒ ಆರ್‌.ಸೆಲ್ವಮಣಿ, ಜಿಲ್ಲಾ ಮಲೇರಿಯಾ ಅಧಿಕಾರಿ ಅನಿಲ ಚಿಂತಾಮಣಿ, ತಾಯಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ರವೀಂದ್ರ ಸಿರಸಗಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಿವಶಂಕರ ಬಿ., ಜಿಲ್ಲಾ ಸರ್ಜನ್‌ ಡಾ.ಸಿ.ಎಸ್‌.ರಗಟೆ, ಔಷಧೀಯ ವಿಭಾಗದ ಮುಖ್ಯಸ್ಥ ವಿಜಯಕುಮಾರ ಅಂತಪ್ಪನವರ,  ಸೂಕ್ಷ್ಮ ರೋಗ ಶಾಸ್ತ್ರಜ್ಞ ಡಾ. ಸುಧೀಂದ್ರ ಕುಲಕರ್ಣಿ. ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ರಾಜಶೇಖರ ಪಾಟೀಲ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಇಂದುಮತಿ ಪಾಟೀಲ, ಜಿಲ್ಲಾ ಕ್ಷಯ ರೋಗ ಅಧಿಕಾರಿ ಡಾ.ದೀಪಾ ಖಂಡ್ರೆ, ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಶರಣಯ್ಯ ಸ್ವಾಮಿ, ಶರಣಪ್ಪ ಮುಡಬಿ,

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುಭಾಷ ಮುಧಾಳೆ, ನಗರಸಭೆ ಆಯುಕ್ತ ಮನೋಹರ, ಅರಣ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಇದ್ದರು.

ಅಪಾಯಕಾರಿ ಸೋಂಕು: ಜಬ್ಬಾರ್‌

ಬೀದರ್‌: ‘ನಿಫಾ ಮೊದಲ ಬಾರಿಗೆ 1998 ಮತ್ತು 1999ರಲ್ಲಿ ಮಲೇಷಿಯಾ ಮತ್ತು ಸಿಂಗಾಪುರದಲ್ಲಿ ಮನೆಯಲ್ಲಿ ಸಾಕಿದ ಹಂದಿಗಳಲ್ಲಿ ಕಂಡು ಬಂದಿತ್ತು. ಪ್ರಸ್ತುತ ಕೇರಳದಲ್ಲಿ ಕಾಣಿಸಿಕೊಂಡಿದೆ. ನಿಫಾ ಕಾರಣದಿಂದಾಗಿ 12 ಜನ ಸಾವಿಗೀಡಾಗಿರುವುದನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ ದೃಢಪಡಿಸಿದೆ’ ಎಂದು ಡಾ.ಎಂ.ಎ.ಜಬ್ಬಾರ್‌ ತಿಳಿಸಿದರು.

‘ಮಲೇಷಿಯಾದ ನಿಫಾ ಗ್ರಾಮದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕಾರಣ ಸೋಂಕನ್ನು ಅದೇ ಹೆಸರಿನಿಂದ ಗುರುತಿಸಲಾಗಿದೆ. 2001ರಲ್ಲಿ ದೇಶದ ಪಶ್ಚಿಮ ಬಂಗಾಳದ ಸಿಲಿಗುರಿ ಗ್ರಾಮದಲ್ಲಿ ಕಾಣಿಸಿಕೊಂಡಿತ್ತು. ಮಲೇಷಿಯಾ, ಸಿಂಗಾಪುರ, ಬಾಂಗ್ಲಾದೇಶ ಮತ್ತು ಭಾರತದಲ್ಲಿ ಈವರೆಗೆ 477 ಖಚಿತ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 248 ಜನ ಮೃತಪಟ್ಟಿದ್ದಾರೆ’ ಎಂದು ಹೇಳಿದರು.

**

ಶಂಕಿತ ರೋಗಿಗಳ ಗಂಟಲಿನ ಮತ್ತು ಮೂಗಿನ ದ್ರವಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ರವಾನಿಸುವ ವ್ಯವಸ್ಥೆ ಮಾಡಲಾಗಿದೆ

– ಡಾ.ಎಂ.ಎ.ಜಬ್ಬಾರ್, ಡಿಎಚ್‌ಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry